Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Team Udayavani, Apr 27, 2024, 10:15 AM IST
ಶಿವಮೊಗ್ಗ: ಬಿಜೆಪಿ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಶುಕ್ರವಾರ ನಗರದ ನೆಹರು ಕ್ರೀಡಾಂಗಣ, ಅಲ್ಲಮಪ್ರಭು ಮೈದಾನ ಹಾಗೂ ಕುಂಬಾರಗುಂಡಿ ಸಿನಿಮಾ ರಸ್ತೆ, ಬಟ್ಟೆ ಮಾರುಕಟ್ಟೆಗೆ ತೆರಳಿ ಅಲ್ಲಿರುವವರನ್ನು ಸಂಪರ್ಕಿಸಿ ಮತ ಯಾಚಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದ ನೆಹರೂ ಕ್ರೀಡಾಂಗಣ ಸಾಕಷ್ಟು ಅಭಿವೃದ್ಧಿಯಾಗಿದೆ. ಆ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದೆ ಎಂದರು.
ಗೋಪಾಳ ಬಡಾವಣೆಯಲ್ಲಿ ಒಳಾಂಗಣ ಕ್ರೀಡಾಂಗಣ, ಟೆನ್ನಿಸ್ ಕೋರ್ಟ್, ಈಜುಕೊಳ ಮುಂತಾದವುದನ್ನು ನಿರ್ಮಿಸುವ ಮೂಲಕ ಆ ಭಾಗದ ಜನತೆಗೆ ಅನುಕೂಲ ಮಾಡಿಕೊಡಲಾಗಿದೆ. ವಾಜಪೇಯಿ ಬಡಾವಣೆಯಲ್ಲಿ ಹಾಕಿ ಸ್ಟೇಡಿಯಂ ಸೇರಿದಂತೆ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವಂತಹ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಕೂಡ ಸಾಕಷ್ಟು ಅಭಿವೃದ್ಧಿಪಡಿಸಲಾಯಿತು. ಇದು ಈ ಹಿಂದೆ ಇದ್ದ ಬಿಜೆಪಿ ಸರ್ಕಾರಕ್ಕೆ ಕ್ರೀಡೆಯ ಬಗ್ಗೆ ಇರುವ ಆಸಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಕೇವಲ ಜಿಲ್ಲಾ ಕೇಂದ್ರಕ್ಕೆ ಮಾತ್ರ ನಮ್ಮ ಸರ್ಕಾರ ಕ್ರೀಡಾಂಗಣ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿಲ್ಲ, ಶಿಕಾರಿಪುರ, ಶಿರಾಳಕೊಪ್ಪ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿಯೂ ಕೂಡ ಕ್ರೀಡಾಪಟುಗಳಿಗೆ ಉತ್ತೇಜನ ಕೊಡುವಂತಹ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ ಎಂದ ಅವರು, ನೆಹರೂ ಕ್ರೀಡಾಂಗಣವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್ಲರೊಂದಿಗೆ ಚರ್ಚಿಸಿ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಈ ಬಾರಿಯ ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಚಾರವನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಚುನಾವಣೆಯಾಗಿದೆ. ಪ್ರತಿಯೊಬ್ಬ ಕೂಲಿ ಕಾರ್ಮಿಕ, ಆಟೋಚಾಲಕ, ಪಾನಿಪೂರಿ ಅಂಗಡಿಯವರು ಹೀಗೆ ಎಲ್ಲಾ ಸಮುದಾಯದವರು ಈ ರಾಷ್ಟ್ರಕ್ಕೆ ಮೋದಿ ಬೇಕು ಎಂದು ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಬಾ ಕ್ಷೇತ್ರ ಮೋದಿಯವರಿಗೆ ದೊಡ್ಡ ಮಟ್ಟದ ಬೆಂಬಲವನ್ನು ಈ ಚುನಾವಣೆಯಲ್ಲಿ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುಂಬಾರಗುಂಡಿ, ಸಿನಿಮಾರಸ್ತೆ, ಬಟ್ಟೆ ಮಾರುಕಟ್ಟೆ, ನೆಹರು ಕ್ರೀಡಾಂಗಣ, ಅಲ್ಲಮಪ್ರಭು ಮೈದಾನ ಈ ಭಾಗದಲ್ಲಿ ಮತಯಾಚನೆಗೆ ತೆರಳಿದಾಗ ಅಲ್ಲಿ ನೆರೆದಿದ್ದವರು ರಾಘವೇಂದ್ರ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರಲ್ಲದೆ “ಮತ್ತೂಮ್ಮೆ ರಾಘಣ್ಣ, ಮತ್ತೂಮ್ಮೆ ಮೋದಿ’ ಎಂಬ ಘೋಷಣೆಗಳನ್ನು ಕೂಗಿದರು. ಅಲ್ಲದೇ ಸಂಸದರೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ, ಎಸ್.ಎಸ್. ಜ್ಯೋತಿಪ್ರಕಾಶ್, ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್, ಬಾಳೆಕಾಯಿ ಮೋಹನ್, ಮಹೇಶ್‌ಮೂರ್ತಿ, ವಿನೋದ್ ಕುಮಾರ್, ದೀನ್ ದಯಾಳ್, ಮಾಲತೇಶ್, ಸೋಮೇಶ್, ಭಾನುಮತಿ ಮುಂತಾದವರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.