Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
ವರ್ಣಾಶ್ರಮ ಪದ್ಧತಿ ಜಾರಿಗೊಳಿಸುವ ಪ್ರಯತ್ನ... ಬದಲಿಸುತ್ತೇನೆ ಎಂದು ಬೊಗಳಿದರೆ...
Team Udayavani, Apr 27, 2024, 9:18 PM IST
ವಾಡಿ: ಕಷ್ಟಗಳನ್ನು ಸಹಿಸಿ, ಅವಮಾನಗಳನ್ನುಂಡು, ತನಗಾದದ್ದನ್ನು ಇತರರಿಗೆ ಆಗಬಾರದು ಎಂಬ ಕಾಳಜಿ ಮತ್ತು ಪ್ರೀತಿಯಿಂದ ಅಂಬೇಡ್ಕರ್ ಬರೆದ ಸಂವಿಧಾನ ಬದಲಿಸುತ್ತೇನೆ ಎಂದು ಬೊಗಳಿದರೆ, ನಾವು ಅಷ್ಟು ಸರಳವಾಗಿ ಬಿಡುತ್ತೇವಾ ಎಂದು ಬಹುಭಾಷಾ ನಟ ಪ್ರಕಾಶ ರಾಜ್ ಪ್ರಶ್ನಿಸಿದರು.
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಶನಿವಾರ ಸಂಜೆ ಬೌದ್ಧ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 133 ನೇ ಜಯಂತಿಯ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ‘ಅತ್ತ ಕೆಲ ಮಹಾನ್ ಚಾಣಕ್ಯರು ಸಂವಿಧಾನ ಬದಲಿಸುತ್ತೇವೆ ಎಂದು ಮಾತನಾಡುತ್ತಿದ್ದಾರೆ. ಇತ್ತ ಮಹಾಪ್ರಭು ಸಂವಿಧಾನ ಬದಲಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಏನು ನಡೆಯುತ್ತಿದೆ ದೇಶದಲ್ಲಿ? ಮತ್ತೆ ವರ್ಣಾಶ್ರಮ ಪದ್ಧತಿ ಜಾರಿಗೊಳಿಸುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ ಎಂಬುದು ನಮಗೆ ಗೊತ್ತಿದೆ ಕಣ್ರಿ. ಪ್ರಾಣ ಕೊಟ್ಟಾದರೂ ಸರಿ ಸಂವಿಧಾನ ಉಳಿಸಿಕೊಳ್ಳುತ್ತೇವೆ’ ಎಂದರು.
‘ಇದು ಅಂಬೇಡ್ಕರ್ ಬಗ್ಗೆ ಮಾತನಾಡುವ ಕಾಲವಲ್ಲ. ಪ್ರತಿಯೊಬ್ಬರಿಗೂ ಹಕ್ಕುಗಳನ್ನು ಕೊಟ್ಟ ಅಂಬೇಡ್ಕರ್ ಸಂವಿಧಾನ ಉಳಿಸಿಕೊಳ್ಳುವ ಕಾಲ. ಹೋರಾಡುವ ಮತ್ತು ಪ್ರಶ್ನಿಸುವ ಕಾಲವಿದು. ಜನರನ್ನು ಬೇಲಿಯೊಳಗಿಟ್ಟು ದರ್ಶನ ನೀಡಲು ರ‍್ಯಾಲಿಯೊಳಗೆ ಬರುವ ಮಹಾಪ್ರಭುವಿಗೆ 400 ದಾಟುತ್ತೇವೆ ಎಂಬ ಅಹಂಕಾರ ತಲೆಗೇರಿದೆ. ಮತ್ತೆ ತಮ್ಮ ಆಸ್ಥಾನಕ್ಕೆ ಹೊಗಳುಭಟ್ಟರನ್ನೇ ಕರೆಯಿಸಿಕೊಳ್ಳಲು ಮತ ಸಾಹಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನ ರಚನೆಯಾಗಿದ್ದು ರಾಜರು ಹುಟ್ಟಲು ಅಲ್ಲ. ಜನರ ಧ್ವನಿ ಎತ್ತಿ ಹಿಡಿಯುವ ಜನಪ್ರತಿನಿಧಿಗಳು ಆಯ್ಕೆಯಾಗಲು. ಪ್ರಧಾನಿಯ ಮುಂದೆ ತಲೆತಗ್ಗಿಸಿ ನಿಲ್ಲುವವರನ್ನು ಈ ಬಾರಿ ಜನ ಗೆಲ್ಲಿಸುವುದಿಲ್ಲ’ಎಂದರು.
ಬೌದ್ಧ ಭಿಕ್ಷುಣಿ ಮಾತಾ ಅರ್ಚಸ್ಮತಿ, ಭಂತೆ ಜ್ಞಾನ ಸಾಗರ ಬೀದರ ಸಾನಿಧ್ಯ ವಹಿಸಿದ್ದರು. ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್ಪಿ ಶಂಕರಗೌಡ ಪಾಟೀಲ, ಕೆಎಸ್ ಡಿಎಸ್ ಎಸ್ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ, ಮುಖಂಡರಾದ ಸೈಯದ್ ಮಹೆಮೂದ್ ಸಾಹೇಬ, ಸಿದ್ದಣ್ಣ ಕಲಶೆಟ್ಟಿ, ಸುರೇಶ ಮೇಂಗನ್, ಸುರೇಶ ಹಾದಿಮನಿ, ರಮೇಶ ಮರಗೋಳ, ಮಲ್ಲೇಶಿ ಸಜ್ಜನ್, ಸುನೀಲ ದೊಡ್ಡಮನಿ, ದೇವಿಂದ್ರ ನಿಂಬರ್ಗಾ, ಮಲ್ಲೇಶಪ್ಪ ಚುಕ್ಕೇರ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ವಿಜಯಕುಮಾರ ಸಿಂಗೆ ಸ್ವಾಗತಿಸಿದರು. ಶರಣಬಸು ಸಿರೂರಕರ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ಕೋಮಟೆ ನಿರೂಪಿಸಿದರು. ರವಿ ಕೋಳಕೂರ ವಂದಿಸಿದರು. ಶೋಭಾ ನಿಂಬರ್ಗಾ ತಂಡದವರು ಸಂವಿಧಾನ ಪೀಠಿಕೆ ಹಾಡಿದರು. ಸಿದ್ಧಾರ್ಥ ಚಿಮ್ಮಾಯಿದ್ಲಾಯಿ ಭೀಮ ಗೀತೆಗಳನ್ನು ಪ್ರಸ್ತುತಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.