IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
Team Udayavani, Apr 28, 2024, 11:31 AM IST
ಐಪಿಎಲ್ ಕ್ರಿಕೆಟ್‌ನ ಅಬ್ಬರ ನಿರೀಕ್ಷೆಗಿಂತ ಜೋರಾಗಿಯೇ ನಡೆಯುತ್ತಿದೆ. ಪಿಚ್ ಮೇಲೆ ಬಿದ್ದ ಬಳಿಕ ಕೊಂಚವೇ ಎಡಕ್ಕೋ, ಬಲಕ್ಕೋ ಚಲಿಸಿ ಬ್ಯಾಟ್‌ಗೆ ಮುತ್ತಿಕ್ಕಿ ವಿಕೆಟ್ ಕೀಪರ್ ಗ್ಲೌಸ್ ಒಳಗೆ ಬೆಚ್ಚಗೆ ಕೂರುತ್ತಿದ್ದ ಬಾಲ್ ನೋಡುವ ಖುಷಿಯೇ ತಪ್ಪಿ ಹೋಗಿದೆ. ಈಗೇನಿದ್ದರೂ, ಪಿಚ್ ಮೇಲೆ ಬಿದ್ದ ಚೆಂಡು ನಂತರ ಸೀದಾ ಬೌಂಡರಿ ಗೆರೆ ದಾಟುತ್ತದೆ. ಇಲ್ಲವೇ ಮುಗಿಲಿಗೆ ಚಿಮ್ಮಿ ಪ್ರೇಕ್ಷಕರ ನಡುವೆ ಬಿದ್ದು ಸಿಕ್ಸರ್ ಆಗಿಬಿಡುತ್ತದೆ. ಪ್ರೇಕ್ಷಕರನ್ನು ರಂಜಿಸುವುದಕ್ಕಾಗಿಯೇ ಹುಟ್ಟಿಕೊಂಡ ಐಪಿಎಲ್ ತಂದುಕೊಟ್ಟಿರುವ ಮನರಂಜನೆಯ ಸ್ಯಾಂಪಲ್ ಇದು. ಈ ಆವೃತ್ತಿಯಲ್ಲಂತೂ ಚೆಂಡಿರುವುದೇ ಚಚ್ಚುವುದಕ್ಕೆ ಎಂಬಂತಾಗಿದೆ. ಮೊನ್ನೆ ಶನಿವಾರ ಕೋಲ್ಕತ್ತಾ ತಂಡ ಮೊದಲು 261 ರನ್ ಹೊಡೆದು ಬೀಗುತ್ತಿದ್ದರೆ, ಎದುರಾಳಿಯಾದ ಪಂಜಾಬ್ ಕಿಂಗ್ಸ್ ತಂಡದವರು, ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ಆ ಟಾರ್ಗೆಟ್ ತಲುಪಿ ಗೆಲುವಿನ ಕೇಕೆ ಹಾಕಿದ್ದಾರೆ. ಸುಳ್ಳಲ್ಲ, ಎಲ್ಲಾ ಪಂದ್ಯಗಳಲ್ಲೂ ಕೊಹ್ಲಿ, ಕಾರ್ತಿಕ್ ಮುಂತಾದ ಬ್ಯಾಟರ್‌ಗಳು ಆರ್ಭಟಿಸುತ್ತಿದ್ದಾರೆ. ಬೌಲರ್‌ಗಳು ಹೈರಾಣಾಗುತ್ತಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಅರ್ಧದಷ್ಟು ಪಂದ್ಯಗಳು ಈಗಾಗಲೇ ಮುಕ್ತಾಯವಾಗಿವೆ. ಪ್ರತಿ ಪಂದ್ಯದಲ್ಲೂ ಒಂದಲ್ಲ ಒಂದು ದಾಖಲೆಗಳು ಸೃಷ್ಟಿಯಾಗುತ್ತಲೇ ಇವೆ. ಆದರೆ ಇದರಲ್ಲಿ ಬೌಲರ್‌ಗಳ ದಾಖಲೆಗಳು ಸೇರಿಲ್ಲ ಎಂಬುದು ನೋವಿನ ಸಂಗತಿ. 17 ವರ್ಷಗಳ ಐಪಿಎಲ್‌ನಲ್ಲಿ ಮೊದಲ 6 ಗರಿಷ್ಠ ಮೊತ್ತಗಳು ಈ ಆವೃತ್ತಿಯಲ್ಲೇ ದಾಖಲಾಗಿವೆ.
ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?:
ಕ್ರಿಕೆಟ್ ಎಂಬುದು ಬರೀ ಬ್ಯಾಟರ್‌ಗಳ ಆಟವಾಗುತ್ತಿದೆಯಾ ಎಂಬ ಅನುಮಾನ ಈ ಐಪಿಎಲ್‌ನ ಮ್ಯಾಚ್‌ಗಳನ್ನು ನೋಡಿದಾಗ ಅನ್ನಿಸದಿರದು. ಪ್ರತಿ ಪಂದ್ಯದಲ್ಲೂ ರನ್‌ಗಳ ಸುರಿಮಳೆಯಾಗುತ್ತಿದೆ. ಬ್ಯಾಟರ್‌ಗಳು ಆವೇಶದಿಂದ ಆಡುತ್ತಿದ್ದಾರೆ. ರನ್‌ಗಳು ಸುಲಭವಾಗಿ ಹರಿದು ಬರುತ್ತಿವೆ. ಕಾರಣವಿಷ್ಟೆ: ಬ್ಯಾಟಿಂಗ್ ಸ್ನೇಹಿ ಪಿಚ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಪರಿಣಾಮವಾಗಿಯೇ ಬ್ಯಾಟರ್‌ಗಳಿಗೆ ಸವಾಲು ಒಡ್ಡುತ್ತಿದ್ದ ಚೆನ್ನೈ, ಡೆಲ್ಲಿ, ಜೈಪುರದ ಪಿಚ್‌ಗಳಲ್ಲೂ ಸಹ ಈ ಬಾರಿ ರನ್ ಹೊಳೆ ಹರಿಯುತ್ತಿದೆ. ಇಂತಹ ಫ್ಲಾಟ್ ಪಿಚ್‌ಗಳಲ್ಲಿ ತಮ್ಮ ಕೌಶಲ್ಯ ತೋರಲಾಗದೇ ಬೌಲರ್‌ಗಳು ಒದ್ದಾಡುತ್ತಿದ್ದಾರೆ. 4 ಓವರ್‌ಗೆ 50ಕ್ಕಿಂತಲೂ ಹೆಚ್ಚು ರನ್ ಬಿಟ್ಟುಕೊಟ್ಟು ಅಪಹಾಸ್ಯಕ್ಕೀಡಾಗುತ್ತಿದ್ದಾರೆ.
ಕ್ರಿಕೆಟ್‌ನಲ್ಲಿ ಈ ಮೊದಲು ಬ್ಯಾಟರ್ ಹಾಗೂ ಬೌಲರ್‌ಗಳಿಬ್ಬರಿಗೂ ಸಮಾನ ಅವಕಾಶ ಸಿಗುತ್ತಿತ್ತು. 50 ಓವರ್‌ಗಳ ಪಂದ್ಯದಲ್ಲಂತೂ ಬ್ಯಾಟರ್‌ಗಳು 250+ ರನ್ ಗಳಿಸಲು ಕಷ್ಟಪಡುವಂತೆ ಬೌಲರ್‌ಗಳು ಪಂದ್ಯದ ಮೇಲೆ ನಿಯಂತ್ರಣ ಸಾಧಿಸುತ್ತಿದ್ದರು. ಆದರೆ ಈಗ ಟಿ20 ಪಂದ್ಯಗಳಲ್ಲಿ 200+ ರನ್ ಎನ್ನುವುದು ಸಾಮಾನ್ಯ ಮೊತ್ತ ಎನ್ನುವಂತಾಗಿದೆ. ಪ್ರತಿ ಓವರ್‌ನಲ್ಲೂ ಬೌಂಡರಿ, ಸಿಕ್ಸರ್ ಹೊಡೆಯಲು ಸಾಧ್ಯವಾಗುತ್ತಿದೆ.
50 ಓವರ್ ಮ್ಯಾಚ್‌ನಲ್ಲೇಕೆ ತಿಣುಕು?:
ಐಪಿಎಲ್‌ನಲ್ಲಿ ಓವರ್‌ಗೆ 15 ರನ್‌ಗಳ ಸರಾಸರಿಯಲ್ಲಿ ರನ್ ಕಲೆಹಾಕುವ ಬ್ಯಾಟರ್‌ಗಳು 50 ಓವರ್‌ನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಓವರ್‌ಗೆ 8 ರನ್ ಕಲೆ ಹಾಕಲು ತಿಣುಕಾಡುವುದನ್ನು ನೋಡಿದರೆ ಆಶ್ಚರ್ಯವಾಗುವುದು ಸಹಜ. ಅದೇ ಬಾಲ್, ಅದೇ ಬ್ಯಾಟ್, ಅದೇ ಬೌಲರ್, ಅದೇ ಮೈದಾನ… ಆದರೂ ಯಾಕೆ ತಿಣುಕಾಟ ಎಂದು 50 ಓವರ್‌ನ ಪಂದ್ಯ ನೋಡುವ ಹಲವರು ಕೇಳುವುದುಂಟು. ಎಷ್ಟೋ ಆಟಗಾರರನ್ನು ಐಪಿಎಲ್‌ನಲ್ಲಿ ಹೀರೋ, ಬಾಕಿ ಮ್ಯಾಚ್‌ಗಳಲ್ಲಿ ಝೀರೋ ಎಂದು ಕಿಚಾಯಿಸುವುದುಂಟು. ಇಲ್ಲಿ ಒಂದು ಮುಖ್ಯ ಸಂಗತಿಯಿದೆ, ಏನೆಂದರೆ, ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳನ್ನು, ಅಂದರೆ ಒನ್ ಡೇ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಂತ್ರಿಸುತ್ತದೆ. ಇದರೊಂದಿಗೆ ಅಂಡರ್-19 ಪಂದ್ಯಾವಳಿಗಳನ್ನು ಆಯೋಜಿಸುತ್ತದೆ. ಹೀಗಾಗಿ ಈ ಪಂದ್ಯಗಳಲ್ಲಿ ಐಸಿಸಿಯ ನಿಯಮದಂತೆ ಪಿಚ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಐಪಿಎಲ್ ಪಂದ್ಯಾವಳಿಯಲ್ಲಿ ನಿರ್ಮಾಣವಾಗುವ ಪಿಚ್‌ಗಳಿಗೆ ಸಂಬಂಧಿಸಿದಂತೆ ಐಸಿಸಿಗೆ ನೇರವಾಗಿ ಸಂಬಂಧವಿಲ್ಲದಿದ್ದರೂ ಕ್ರಿಕೆಟ್‌ನ ಉಳಿವಿಗಾಗಿ ಸಲಹೆ, ಸೂಚನೆಗಳನ್ನು ನೀಡುತ್ತದೆ. ಆದರೂ ಬ್ಯಾಟರ್‌ಗಳಿಗೆ ಅನುಕೂಲವಾಗುವಂತೆ ಇಲ್ಲಿ ಪಿಚ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಹೀಗಾಗಿ ಐಪಿಎಲ್‌ನಲ್ಲಿ ಬ್ಯಾಟರ್‌ಗಳು ಅಬ್ಬರಿಸುತ್ತಾರೆ.
ವರವೂ ಹೌದು, ಶಾಪವೂ ಹೌದು:
2008ರಲ್ಲಿ ಆರಂಭವಾದ ಐಪಿಎಲ್ ಪಂದ್ಯಾವಳಿ ಒಂದಷ್ಟು ಉತ್ತಮ ಆಟಗಾರರನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದೆ. ಐಪಿಎಲ್‌ನಲ್ಲಿ ಮಿಂಚಿದ ಒಂದಷ್ಟು ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಟಿ20 ಮಾದರಿಯ ಕ್ರಿಕೆಟ್ ಆಡಲು ಹೆಚ್ಚಿನ ಆಟಗಾರಿಗೆ ಐಪಿಎಲ್ ಅವಕಾಶವನ್ನು ಒದಗಿಸಿಕೊಟ್ಟಿದೆ. ಆದರೆ, ಕ್ರಿಕೆಟ್ ಎಂದರೆ ಕೇವಲ ಬ್ಯಾಟರ್‌ಗಳ ಆಟ ಎನ್ನುವ ಭಾವನೆಯನ್ನು ಭವಿಷ್ಯದ ಪೀಳಿಗೆಯಲ್ಲಿ ಮೂಡಿಸಿದೆ. ಈ ಮೊದಲು ಸ್ಪರ್ಧಾತ್ಮಕ ಕ್ರಿಕೆಟ್ ನೀಡುತ್ತಿದ್ದ ಆನಂದವನ್ನು ಐಪಿಎಲ್ ಹಾಳು ಮಾಡಿದೆ. ಹೀಗೇ ಮುಂದುವರಿದರೆ, ಮುಂದೊಂದು ದಿನ ಕ್ರಿಕೆಟ್ ಮೇಲಿನ ಆಕರ್ಷಣೆಯೇ ಕಳೆದುಹೋದರೆ ಅಚ್ಚರಿಯಿಲ್ಲ.
ದಾಖಲೆಗಳು… ದಾಖಲೆಗಳು :
17ನೇ ಆವೃತ್ತಿಯ ಐಪಿಎಲ್ ದಾಖಲೆಗಳಿಂದ ತುಂಬಿಹೋಗಿದೆ. ಬಹುತೇಕ ತಂಡಗಳ ಬ್ಯಾಟರ್‌ಗಳು ಸ್ಫೋಟಕ ಆಟವಾಡಿ ತಂಡಗಳು ಗರಿಷ್ಠ ಮೊತ್ತ ಕಲೆ ಹಾಕುವಂತೆ ಮಾಡಿದ್ದಾರೆ. ಈವರೆಗೂ, 2013ರಲ್ಲಿ ಆರ್‌ಸಿಬಿ ಗಳಿಸಿದ್ದ 263 ರನ್ ಐಪಿಎಲ್‌ನ ಗರಿಷ್ಠ ಸ್ಕೋರ್ ಆಗಿತ್ತು. ಆದರೆ ಈ ವರ್ಷ ಇದು 5ನೇ ಸ್ಥಾನಕ್ಕೆ ಕುಸಿದಿದೆ. ಹೈದ್ರಾಬಾದ್ ತಂಡ 4 ಸಲ 250ಕ್ಕಿಂತ ಹೆಚ್ಚು ರನ್‌ಗಳನ್ನು ಇದೊಂದೇ ಸೀಸನ್‌ನಲ್ಲಿ ಕಲೆ ಹಾಕಿದೆ. ಆರ್‌ಸಿಬಿ ಮತ್ತು ಹೈದ್ರಾಬಾದ್ ನಡುವಿನ ಪಂದ್ಯದಲ್ಲಿ ಬರೋಬ್ಬರಿ 38 ಸಿಕ್ಸರ್ ದಾಖಲಾದವು. ಇದು ಐಪಿಎಲ್ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ಸಿಕ್ಸರ್ ಎನ್ನಲಾಗಿತ್ತು. ಆದರೆ ಆ ದಾಖಲೆ ಕೂಡ ಮೊನ್ನೆ ಶನಿವಾರ ಪತನವಾಗಿದೆ. ಪಂದ್ಯದಲ್ಲಿ 42 ಸಿಕ್ಸರ್ ಬಂದಿರುವುದು ಹೊಸ ದಾಖಲೆಯಾಗಿದೆ. ತಂಡವೊಂದು (ಪಂಜಾಬ್ ಕಿಂಗ್ಸ್) ಚೇಸಿಂಗ್ ವೇಳೆ 262 ರನ್ ಗಳಿಸಿ ಗೆದ್ದದ್ದು, ಇನ್ನಿಂಗ್ಸ್ ವೊಂದರಲ್ಲಿ ಮೊದಲ 10 ಓವರ್‌ನಲ್ಲಿ 148 ರನ್ ದಾಖಲಾಗಿದ್ದು… ಇವೆಲ್ಲವೂ ಹೊಸ ದಾಖಲೆಗಳೇ.
ಕೋಟಿ ಕೋಟಿ ಪಡೆದವರೆಲ್ಲ ಏನಾದರು?:
ಈ ಬಾರಿಯ ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್‌ರನ್ನು ಪ್ರಶಸ್ತಿ ಮೊತ್ತಕ್ಕಿಂತ ಹೆಚ್ಚು ಹಣ ನೀಡಿ ಖರೀದಿಸಲಾಯಿತು. (ಮಿಚೆಲ್ ಸ್ಟಾರ್ಕ್- 24.75 ಕೋಟಿ ರೂ,. ಪ್ಯಾಟ್ ಕಮಿನ್ಸ್‌ಗೆ 20.5 ಕೋಟಿ ರು.) ಈ ವರ್ಷ 7 ಪಂದ್ಯ ಆಡಿರುವ ಸ್ಟಾರ್ಕ್ 25 ಓವರ್ ಬೌಲಿಂಗ್ ಮಾಡಿದ್ದು 287 ರನ್ ನೀಡಿ 6 ವಿಕೆಟ್ ಕಿತ್ತಿದ್ದಾರೆ. ವಿಶ್ವಕಪ್ ವಿಜೇತ ನಾಯಕ ಅನ್ನಿಸಿಕೊಂಡಿರುವ ಕಮಿನ್ಸ್ 8 ಪಂದ್ಯ ಆಡಿ 10 ವಿಕೆಟ್ ಪಡೆದುಕೊಂಡಿದ್ದಾರೆ. ಇವರಲ್ಲದೆ 18.5 ಕೋಟಿ ರೂಗಳಿಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾದ ಇಂಗ್ಲೆಂಡ್‌ನ ಸ್ಯಾಮ್ ಕರನ್, 9 ಪಂದ್ಯ ಆಡಿ 271 ರನ್ ನೀಡಿ 12 ವಿಕೆಟ್ ಪಡೆದುಕೊಂಡಿದ್ದಾರೆ. ನಾಯಕನಾಗಿಯೂ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಕೊಟ್ಟ ಹಣಕ್ಕೆ ನ್ಯಾಯ ಸಲ್ಲಿಸುತ್ತಿರುವುದು ಇವರೊಬ್ಬರೇ ಅನ್ನಬಹುದು. ಇನ್ನು 17.5 ಕೋಟಿ ರೂ.ಗಳಿಗೆ ಆರ್‌ಸಿಬಿ ಪಾಲಾಗಿರುವ ಕ್ಯಾಮರೂನ್ ಗ್ರೀನ್, 7 ಪಂದ್ಯಗಳಲ್ಲಿ 6 ವಿಕೆಟ್ ಪಡೆದು, 111ರನ್ ಮಾತ್ರ ಗಳಿಸಿ ದುಬಾರಿಯಾಗಿ ಪರಿಣಮಿಸಿದ್ದಾರೆ.
ಎಲ್ಲೆಡೆಯೂ ಸಲ್ಲುವ ವಿದೇಶಿ ಆಟಗಾರರು:
ಐಪಿಎಲ್ ಪಂದ್ಯಗಳಲ್ಲಿ ದೇಶೀ ಆಟಗಾರರು ವಿಫಲರಾಗಬಹುದು. ಆದರೆ ಹೆಚ್ಚಿನ ಸಂದರ್ಭದಲ್ಲಿ ವಿದೇಶಿ ಆಟಗಾರರು ವಿಫಲರಾಗುವುದಿಲ್ಲ. ಡೇವಿಡ್ ಮಿಲ್ಲರ್, ಮಾರ್ಕಸ್ ಸ್ಟೋಯಿನಸ್, ಜಾನಿ ಬೆಸ್ಟೋ, ಸುನೀಲ್ ನಾರಾಯಣ್, ಆಂಡ್ರೆ ರಸೆಲ್, ನಿಕೋಲಸ್ ಪೂರನ್, ಡೇವಿಡ್ ವಾರ್ನರ್, ಕ್ಲಾಸೆನ್ ಮುಂತಾದವರು ಯಾವುದೇ ಪಿಚ್‌ನಲ್ಲಾದರೂ ಸರಿ, ಅಂಜದೇ ಬ್ಯಾಟ್ ಬೀಸುತ್ತಾರೆ. ಮಹೇಶ್ ಪತಿರಾಣ, ಮುಸ್ತಫಿರ್, ಕಮಿನ್ಸ್, ಸ್ಯಾಮ್ ಕರನ್ ಮುಂತಾದವರು ಆರಾಮವಾಗಿ ವಿಕೆಟ್ ಕೀಳುತ್ತಾರೆ.
-ಗಣೇಶ್ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.