Brahmavara-ಉಡುಪಿ ಟ್ರಾಫಿಕ್ ಜಾಮ್ ಸಮಸ್ಯೆ: ಸವಾರರು ಸುಸ್ತೋ ಸುಸ್ತು
Team Udayavani, May 2, 2024, 2:46 PM IST
ಉಡುಪಿ: ಕಳೆದ ಹಲವು ದಿನಗಳಿಂದ ಉಪ್ಪೂರು-ಸಂತೆಕಟ್ಟೆ (ರಾಷ್ಟ್ರೀಯ ಹೆದ್ದಾರಿ 66) ಟ್ರಾಫಿಕ್ ದಟ್ಟಣೆ ಸಮಸ್ಯೆ ನಿಯಂತ್ರಣಕ್ಕೆ ಬಾರದಾಗಿದ್ದು, ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಉಪ್ಪೂರು-ಕೆಜಿ ರೋಡ್ ಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಪರಿಣಾಮ ಟ್ರಾಫಿಕ್ ಸಮಸ್ಯೆ ಹೆಚ್ಚಳವಾಗಿದ್ದು, ಬ್ರಹ್ಮಾವರದಿಂದ ಉಡುಪಿವರೆಗೂ ಇದರ ಪರಿಣಾಮ ವ್ಯಾಪಿಸಿದೆ.
ಉಡುಪಿಯಿಂದ ಬ್ರಹ್ಮಾವರೆಗೆ ಕೆಲವು ಹದಗೆಟ್ಟ ರಸ್ತೆ ಭಾಗಗಳನ್ನು ದುರಸ್ತಿಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ರಸ್ತೆಯ ಪೇವರ್ ಫಿನಿಶಿಂಗ್ ಹಿನ್ನೆಲೆಯಲ್ಲಿ ಒಂದು ಬದಿಯ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಇಕ್ಕಟ್ಟಿನ ಸಂಚಾರ ವ್ಯವಸ್ಥೆ ಇಲ್ಲಿದೆ. ಒಂದು ಸಣ್ಣ ಅಪಘಾತ ಸಂಭವಿಸಿದರೂ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ.
ಬುಧವಾರ ಇಡೀ ದಿನ ಟ್ರಾಫಿಕ್ ದಟ್ಟಣೆಯಿಂದ ಜನರು ಹೈರಾಣಾದರು. ಕಚೇರಿ ಕೆಲಸ ಕಾರ್ಯ, ಶುಭ ಸಮಾರಂಭಗಳಿಗೆ ತುರ್ತಾಗಿ ತೆರಳಬೇಕಿರುವ ಸವಾರರು ಹಿಡಿಶಾಪ ಹಾಕುವಂತಾಗಿದೆ. ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರು ಗಂಟೆಗಟ್ಟಲೇ ಬಿಸಿಲಲ್ಲಿ ರೋಸಿ ಹೋಗಿದ್ದಾರೆ.
ಶುಭಕಾರ್ಯಗಳ ಎಫೆಕ್ಟ್
ಒಂದೆಡೇ ನಿಧಾನಗತಿಯ ಕಾಮಗಾರಿಯಾದರೆ ಇನ್ನೊಂದೆಡೇ ಕಳೆದ ಎರಡುಮೂರು ದಿನಗಳಿಂದ ಶುಭ ಕಾರ್ಯಗಳ
ಸಂಖ್ಯೆ ಹೆಚ್ಚಿರುವುದರಿಂದ ವಾಹನ ದಟ್ಟಣೆ ಹೆಚ್ಚಿದೆ. ಬ್ರಹ್ಮಾವರ-ಉಡುಪಿ ಮಾರ್ಗದ ಈ ಹೆದ್ದಾರಿ ರಸ್ತೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಘನ ಮತ್ತು ಲಘು ವಾಹನ ಸಹಿತ ಸಮೂಹ ಸಾರಿಗೆ, ಸರಕು ಸಾಗಣೆ ವಾಹನಗಳು ನಿತ್ಯ ಸಂಚರಿಸುತ್ತವೆ.
ಇನ್ನೆಷ್ಟು ದಿನ ಕಾಮಗಾರಿ?
ಪ್ರಸ್ತುತ ಕೆಜಿ ರಸ್ತೆ, ಉಪ್ಪೂರು ಭಾಗದಲ್ಲಿ ಕೆಲಸ ನಡೆಯುತ್ತಿದ್ದು, ಬುಧವಾರ ರಾತ್ರಿಯೊಳಗೆ ಇಲ್ಲಿನ ಕೆಲಸ ಪೂರ್ಣವಾಗುತ್ತದೆ. ಅನಂತರ ಸಂತೆಕಟ್ಟೆ, ಅಂಬಾಗಿಲು, ಬಾಳಿಗ ಜಂಕ್ಷನ್ ಸಮೀಪ ಕೆಲಸ ಆರಂಭಿಸಲಾಗುತ್ತದೆ. ವ್ಯವಸ್ಥಿತವಾಗಿ ಶಿಘ್ರ ಕಾಮಗಾರಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಂಡಿದ್ದೇವೆ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ತಿಳಿಸಿದ್ದಾರೆ.
ಪರಿಶೀಲನೆ
ಬ್ರಹ್ಮಾವರ-ಉಡುಪಿ ಸಂಚಾರ ವ್ಯತ್ಯಯ ದಿಂದ ಸವಾರರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಹೆದ್ದಾರಿ ಪ್ರಾಧಿಕಾರವು ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಮತ್ತು ಸುಗಮ ಸಂಚಾರ ನಿರ್ವಹಣೆಗೆ ಪೊಲೀಸ್ ಇಲಾಖೆ ಸೂಚನೆ ನೀಡಲಾಗಿದೆ.
*ಯಶ್‌ಪಾಲ್ ಸುವರ್ಣ, ಶಾಸಕರು, ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.