Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ
Team Udayavani, May 4, 2024, 7:45 AM IST
ಪುತ್ತೂರು: ತಾಪಮಾನ ತೀವ್ರ ಏರಿಕೆ ಕಂಡಿರುವ ಕಾರಣ ಅಡಿಕೆ ತೋಟಗಳಲ್ಲಿ ನಳ್ಳಿ (ಎಳೆ ಅಡಿಕೆ) ಉದುರುತ್ತಿದ್ದು ಅರ್ಧಕ್ಕರ್ಧ ಫಸಲು ನಷ್ಟವಾಗುವ ಭೀತಿ ಎದುರಾಗಿದೆ.
ಸಾಮಾನ್ಯವಾಗಿ ಅಡಿಕೆ ತೋಟಗಳು 35ರಿಂದ 36 ಡಿಗ್ರಿ ಸೆ. ತನಕದ ಉಷ್ಣಾಂಶ ವನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ 10 ದಿನಗಳಿಂದ ತಾಪ ಮಾನ 38, 40, 42 ಡಿಗ್ರಿ ಸೆ.ನಷ್ಟು ದಾಖಲಾಗಿದ್ದು, ಪರಿಣಾಮ ನೇರವಾಗಿ ಅಡಿಕೆಯ ಮೇಲಾಗಿದೆ. ಕೆಲವು ತೋಟಗಳಲ್ಲಿ ಅಡಿಕೆ ಮರದ ಬುಡದಲ್ಲಿ ಎಳೆಯ ನಳ್ಳಿಗಳು ರಾಶಿಯಾಗಿ ಬಿದ್ದಿವೆ.
ಬಿಸಿ ವಾತಾವರಣ
ಅಡಿಕೆ ತೋಟದ ಒಳಗೆ ತಂಪು ವಾತಾವರಣ ಇರುತ್ತದೆ. ಆದರೆ ಈಗ ಬಿಸಿ ವಾತಾವರಣ ಇದೆ. ಅಡಿಕೆ ಮರದ ಬುಡಕ್ಕೆ ಎಷ್ಟೇ ನೀರು ಹಾಯಿಸಿದರೂ ಬುಡ ಮಾತ್ರ ತಂಪಾಗುತ್ತಿದೆ ವಿನಾ ಕೊಂಬೆಗೆ ತಾಕುವ ಬಿಸಿಲಿನಿಂದ ಇಡೀ ಮರವೇ ಸುಟ್ಟಂತಾಗುತ್ತಿದೆ. ಹೆಚ್ಚಿನ ತೋಟಗಳಲ್ಲಿ ಹಿಂಗಾರ ಕರಟಿ ಹೋಗಿ ಫಸಲೇ ಶೂನ್ಯವಾಗಿದೆ. ದಿನಕ್ಕೆ ಆರೇಳು ತಾಸು ನೀರು ಹಾಯಿಸುವ ತೋಟಗಳಲ್ಲೂ ಹಿಂಗಾರ ಸುಡುತ್ತಿದ್ದು, ಎಳೆಕಾಯಿ ಉದುರುತ್ತಿದೆ. ಈಗಾಗಲೇ ಶೇ. 50ಕ್ಕೂ ಹೆಚ್ಚು ನಳ್ಳಿ ಉದುರಿದೆ. ಮುಂದಿನ ವರ್ಷ ಅರ್ಧದಷ್ಟು ಇಳುವರಿ ಸಿಗಲಾರದು ಎನ್ನುತ್ತಾರೆ ಪುತ್ತೂರಿನ ಕೃಷಿಕ ಶಿವಪ್ಪ ಪೂಜಾರಿ.
ತಾಪಮಾನವೇ ಕಾರಣ
ಸಾಮಾನ್ಯವಾಗಿ ಆರು ಕಾರಣಗಳಿಂದಾಗಿ ನಳ್ಳಿ ಉದುರುತ್ತದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಉಷ್ಣ ತಾಪಮಾನ, ಮರಗಳ ಶಕ್ತಿ ಸಾಮರ್ಥ್ಯ, ಕೀಟಬಾಧೆ, ಶಿಲೀಂಧ್ರಗಳು, ರೋಗರುಜಿನ, ಪೋಷಕಾಂಶಗಳ ಕೊರತೆ. ಈ ಬಾರಿ ತಾಪಮಾನವೇ ನೇರ ಕಾರಣ. ರೋಗ ರುಜಿನಗಳಿಗೆ ಔಷಧ ಸಿಂಪಡಿಸಿ ಆದರೂ ಪರಿಹಾರ ಕಂಡುಕೊಳ್ಳಬಹುದು. ಆದರೆ ಬಿಸಿಲಿನ ಧಗೆಗೆ ಪರಿಹಾರ ಇಲ್ಲದಿರುವುದರಿಂದ ಬೆಳೆಗಾರ ಕೈಕಟ್ಟಿ ಕೂರುವ ಸ್ಥಿತಿಯಿದೆ. ಈ ಕುರಿತಂತೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಈ ತನಕ ಬೆಳೆಗಾರರಿಂದ ದೂರು ಬಂದಿಲ್ಲ ಎನ್ನುವ ಮೂಲಕ ಅಡಿಕೆ ತೋಟಕ್ಕೆ ಇಲಾಖೆ ಇಳಿದೇ ಇಲ್ಲ ಅನ್ನುವ ಸಂಗತಿಯನ್ನು ಸ್ಪಷ್ಟಪಡಿಸಿದಂತಿದೆ.
ಮಳೆ ಬಂದರೆ ಎಲ್ಲವೂ ಧರೆಗೆ
ಮಳೆ ಬಂದರೆ ಪರಿಹಾರ ಸಿಗಬಹುದೇ ಎನ್ನುವ ಪ್ರಶ್ನೆಗೆ ರೈತರು ಹೇಳುವುದೇನೆಂದರೆ … ಮಳೆ ಬಂದರೆ ಈಗ ಉಳಿದಿರುವ ಎಲ್ಲ ಎಳೆ ಅಡಿಕೆಯೂ ಧರೆಗೆ ಉದುರಲಿವೆ.ಒಂದು ವೇಳೆ ನಿರಂತರ ಮಳೆಯಾದರೆ ಮಾತ್ರ ಅಡಿಕೆ ಗಿಡಗಳಿಗೆ ತಂಪು ಆಗಬಹುದು. ಮಳೆ-ಬಿಸಿಲಿನ ಆಟ ನಡೆದರೆ ಅಡಿಕೆಯ ಆಸೆ ಬಿಡುವುದೇ ಉತ್ತಮ ಅನ್ನುತ್ತಾರೆ.
ಕೆಲವು ತೋಟಗಳಲ್ಲಿ ನೀರಿನ ಅಭಾವ ಇದೆ. ವಾರಕ್ಕೊಮ್ಮೆ ನೀರು ಹಾಯಿಸಲಾಗುತ್ತಿರುವ ತೋಟಗಳು ಇವೆ. ಹೀಗಾಗಿ ಒಂದೆಡೆ ನೀರಿಲ್ಲದೆ, ತಾಪಮಾನ ತಾಳಲಾರದೆ ಅಡಿಕೆ ಮರಗಳು ಬಳಲಿ ಬೆಂಡಾಗಿವೆ.
ಬಹುತೇಕ ಅಡಿಕೆ ತೋಟಗಳಲ್ಲಿ ಕಾಯಿ ಗಟ್ಟುತ್ತಿ ರುವ ನಳ್ಳಿಗಳು ಉದುರುತ್ತಿವೆ. ಹಿಂಗಾರ ಒಣಗಿದೆ. ಈಗಿನ ಪರಿಸ್ಥಿತಿ ಗಮನಿಸಿದರೆ ಶೇ. 50ರಷ್ಟುಬೆಳೆ ನಷ್ಟವಾಗುವ ಸಾಧ್ಯತೆ ಇದೆ.ವಾತಾ ವರಣದಲ್ಲಿ ಪರಿಸ್ಥಿತಿ
ತಿಳಿಯಾದರೆ ಮಾತ್ರ ಇದಕ್ಕೆ ಪರಿಹಾರ.
– ಮಹೇಶ್ ಪುಚ್ಚಪ್ಪಾಡಿ,
ಅಧ್ಯಕ್ಷರು, ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘ
ನೀರಿನ ಅಭಾವ ಇರುವ ತೋಟಗಳಲ್ಲಿ ತತ್‌ಕ್ಷಣಕ್ಕೆ ಮಳೆ ಬಂದರೆ ಎಳೆ ಕಾಯಿ ಉದುರುವ ಸಾಧ್ಯತೆ ಇದೆ. ಬಿಸಿಲಿನ ತಾಪಮಾನ ಹೆಚ್ಚಿದ್ದು ನೀರಿನ ವ್ಯವಸ್ಥೆ ಇರುವ ತೋಟಗಳಿಗೆ ಸಮಸ್ಯೆ ಆಗದು. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
– ಮಂಜುನಾಥ, ಡಿ.ಡಿ., ತೋಟಗಾರಿಕಾ ಇಲಾಖೆ, ದ.ಕ.ಜಿಲ್ಲೆ
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Toxic: ಯಶ್ ಚಿತ್ರಕ್ಕೆ ಬಂದ ಹಾಲಿವುಡ್ ನ ಜೆ.ಜೆ.ಪೆರ್ರಿ
Final Verdict: ಬುಲ್ಡೋಜರ್ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್ ಅಂತಿಮ ತೀರ್ಪು
BGT: ಭಾರತ ವಿರುದ್ದದ ಮೊದಲ ಟೆಸ್ಟ್ ಗೆ ಆಸೀಸ್ ತಂಡ ಪ್ರಕಟ; ಒಂದು ಅಚ್ಚರಿಯ ಆಯ್ಕೆ
Kambala: ಪಿಲಿಕುಳ ಜೋಡುಕರೆಯಲ್ಲಿ ಮತ್ತೆ ಮೊಳಗಲಿದೆ ಕಹಳೆಗಳ ಸದ್ದು!
Covid Scam: ಕೋವಿಡ್ ಅಕ್ರಮ ವರದಿಯಿಂದ ಏನೂ ಆಗದು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.