CID ಕಚೇರಿಯಲ್ಲಿ ನಿದ್ದೆ ಇಲ್ಲದೆ ರಾತ್ರಿ ಕಳೆದ ರೇವಣ್ಣ
ಮಾಜಿ ಸಚಿವರಿಗೆ ಹೊಸ ಹಾಸಿಗೆ, ಬೆಡ್‌ಶೀಟ್; ಅಧಿಕಾರಿಗಳ ಎದುರು ಗೊಂದಲದ ಹೇಳಿಕೆ
Team Udayavani, May 6, 2024, 12:11 AM IST
ಬೆಂಗಳೂರು: ಸುಖದ ಸುಪ್ಪತ್ತಿಗೆಯಲ್ಲೇ ಬೆಳೆದಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಶನಿವಾರ ರಾತ್ರಿಯಿಡೀ ಸಿಐಡಿ ಕಚೇರಿಯಲ್ಲಿ ಕಳೆದಿದ್ದು, ಸರಿಯಾಗಿ ನಿದ್ದೆ ಮಾಡದೇ ಚಿಂತೆಯಲ್ಲೇ ಕಾಲ ಕಳೆದಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರಿನ ಕೆ.ಆರ್.ನಗರದಲ್ಲಿ ದಾಖಲಾದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ಬಂಧನಕ್ಕೊಳಗಾಗಿದ್ದರು.
ಎಸ್‌ಐಟಿ ಅಧಿಕಾರಿಗಳು ಶನಿವಾರ ತಡರಾತ್ರಿವರೆಗೂ ರೇವಣ್ಣ ಅವರಲ್ಲಿ ಪ್ರಕರಣದ ಮಾಹಿತಿ ಕೊಡುವಂತೆ ಕೇಳಿಕೊಂಡರು. ಆದರೆ ರೇವಣ್ಣ ಗೊಂದಲದ ಹೇಳಿಕೆ ಕೊಟ್ಟ ಹಿನ್ನೆಲೆ ಯಲ್ಲಿ ಎಸ್‌ಐಟಿ ಅಧಿಕಾರಿಗಳು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದರು. ಪ್ಯಾಲೇಸ್ ರಸ್ತೆಯ ಸಿಐಡಿ ಕಚೇರಿಯಲ್ಲೇ ಶನಿವಾರ ರಾತ್ರಿ ಕಳೆದ ರೇವಣ್ಣ ಮುಂಜಾನೆವರೆಗೂ ಸರಿಯಾಗಿ ನಿದ್ದೆ ಮಾಡದೆ ಮುಂದೇನು ಎಂಬ ಚಿಂತೆಯಲ್ಲೇ ಕಾಲ ಕಳೆದರು ಎಂದು ತಿಳಿದುಬಂದಿದೆ.
ಸಿಐಡಿ ಕಚೇರಿಯಲ್ಲಿ ರೇವಣ್ಣಗಾಗಿ ಹೊಸ ಹಾಸಿಗೆ ಹಾಗೂ ಬೆಡ್ ಶೀಟ್ ನೀಡಲಾಗಿತ್ತು. ಬಳಿಕ ರವಿವಾರ ಬೆಳಗ್ಗೆ 6 ಗಂಟೆಗೆ ರೇವಣ್ಣ ಎಚ್ಚರಗೊಂಡರು. ಬಳಿಕ ಎಸ್‌ಐಟಿ ಸಿಬಂದಿ ತಂದುಕೊಟ್ಟಿದ್ದ ಉಪಾಹಾರ ಸೇವಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದಿದ್ದಾರೆ. ಅನಂತರ ಬೆಳಗ್ಗೆ 10.30ಕ್ಕೆ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ವಿಚಾರಣ ವಿಭಾಗಕ್ಕೆ ಕರೆತಂದು ಅಪಹರಣ ಪ್ರಕರಣದ ಬಗ್ಗೆ ಪ್ರಶ್ನಿಸಿದ್ದರು. ಇದರಿಂದ ಸಿಡಿಮಿಡಿಕೊಂಡ ರೇವಣ್ಣ, “ನಾನು ಆ ಮಹಿಳೆ ಯಾರೆಂದು ನೋಡಿಲ್ಲ, ನನಗೆ ಅಪಹರಣ ಮಾಡಿರುವ ಬಗ್ಗೆ ಮಾಹಿತಿ ಇಲ್ಲ’ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ ಎಸ್‌ಐಟಿ ಸಿಬಂದಿ ನೀಡಿದ ಊಟವನ್ನು ಸೇವಿಸಿ ಕೊಂಚ ವಿಶ್ರಾಂತಿ ಪಡೆದರು ಎಂದು ತಿಳಿದು ಬಂದಿದೆ.
ಮಗನ ಮೇಲಿನ ಆರೋಪದ ಬಗ್ಗೆ
ಮಾತನಾಡಲು ಕರೆದಿದ್ದೆ ಅಷ್ಟೇ…!
ಬೆಂಗಳೂರು: ನಾನು ಯಾರನ್ನೂ ಅಪಹರಣ ಮಾಡಲು ಹೇಳಲಿಲ್ಲ. ಪುತ್ರನ ವಿರುದ್ಧ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಯಾರು ಆಕೆ ಮನೆಗೆ ಕರೆದುಕೊಂಡು ಬಾ, ಆರೋಪದ ಬಗ್ಗೆ ಮಾತಾಡಬೇಕು ಎಂದು ತಿಳಿಸಿದ್ದೆ ಅಷ್ಟೇ… ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಎಸ್‌ಐಟಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.
ರವಿವಾರ ಬೆಳಗ್ಗೆ 10.30ರ ಬಳಿಕ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರಿಂದ ಪ್ರಕರಣದ ಪ್ರಾಥಮಿಕ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಪ್ರಕರಣದ ಕುರಿತು ನಿಮಗಿರುವ ಮಾಹಿತಿ ತಿಳಿಸುವಂತೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ರೇವಣ್ಣ, “ನಾನು ಯಾರನ್ನೂ ಅಪಹರಣ ಮಾಡಲು ಹೇಳಿಲ್ಲ. ಪುತ್ರನ ವಿರುದ್ಧ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಯಾರು ಆಕೆ? ಮನೆಗೆ ಕರೆದುಕೊಂಡ ಬಾ, ಆರೋಪದ ಬಗ್ಗೆ ಮಾತಾಡಬೇಕು ಎಂದು ತಿಳಿಸಿದೆ. ಆದರೆ ಸತೀಶ್ ಬಾಬಣ್ಣ ಈ ರೀತಿ ಮಾಡಿದ್ದಾನೆ. ಆ ಮಹಿಳೆ ಯಾರೆಂದು ನೋಡಿಲ್ಲ. ಆಕೆಯನ್ನು ಅಪಹರಿಸಿ ಮತ್ತಷ್ಟು ಸಮಸ್ಯೆಯನ್ನು ನಾನು ಯಾಕೆ ಮೈಮೇಲೆ ಎಳೆದುಕೊಳ್ಳಲಿ’ ಎಂದು ಎಸ್‌ಐಟಿ ವಿಚಾರಣೆ ವೇಳೆ ತಮ್ಮ ಹೇಳಿಕೆ ನೀಡಿದ್ದಾರೆ. ಮುಂದುವರಿದು, ಮನೆಯಲ್ಲಿ ಹತ್ತಾರು ಮಂದಿ ಕೆಲಸ ಮಾಡುತ್ತಾರೆ, ಯಾರೆಂದು ನೋಡಲಿ. ಕೆಲಸದವರನ್ನು ನೋಡಿಕೊಳ್ಳಲು ಒಂದಿಬ್ಬರು ಇದ್ದಾರೆ. ಅವರೇ ಕೆಲಸದವರನ್ನು ನೇಮಿಸುತ್ತಾರೆ. ಹೀಗಿರುವಾಗ ಅಪಹರಣಗೊಂಡ ಮಹಿಳೆಯ ಪುತ್ರ ನೀಡಿರುವ ದೂರು ನಿಜವೆಂದು ಹೇಗೆ ಹೇಳಲಾಗುತ್ತದೆ ಎಂದು ಹೇಳುವ ಮೂಲಕ ರೇವಣ್ಣ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ಹೊಳೇನರಸೀಪುರ ಪ್ರಕರಣದ ಬಗ್ಗೆಯೂ ರೇವಣ್ಣ ಗೊಂದಲದ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ. ನಾನು ಯಾವ ಮಹಿಳೆಗೂ ಲೈಂಗಿಕ ಕಿರುಕುಳ ಕೊಡಲಿಲ್ಲ. ಕೆಲಸದಾಕೆಗೆ ಯಾಕೆ ಲೈಂಗಿಕ ಕಿರುಕುಳ ನೀಡಲಿ? ಪುತ್ರ ಪ್ರಜ್ವಲ್, ಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನಾನೇಕೆ ಅವೆಲ್ಲ ನೋಡಲಿ ಎಂದು ಹೇಳಿ ಸುಮ್ಮನಾಗಿದ್ದಾರೆ ಎಂದು ತಿಳಿದು ಬಂದಿದೆ.
ರೇವಣ್ಣ ಮೊಬೈಲ್ ಪರಿಶೀಲನೆ
ಬೆಂಗಳೂರು: ಎಸ್‌ಐಟಿ ಅಧಿಕಾರಿಗಳು ರೇವಣ್ಣ ಮೊಬೈಲ್ ಜಪ್ತಿ ಮಾಡಿ ಡೇಟಾ ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಶನಿವಾರ ರೇವಣ್ಣನನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು ಅವರ ಮೊಬೈಲ್ ಚಾಟಿಂಗ್, ಕರೆಗಳು, ಸಿಡಿಆರ್ ಪರಿಶೀಲಿಸಲು ಎಸ್‌ಐಟಿ ಮುಂದಾಗಿದೆ. ತಾಂತ್ರಿಕ ಸಾಕ್ಷ್ಯಾಧಾರಗಳಿಗೆ ತನಿಖಾಧಿಕಾರಿಗಳು ಇದರಲ್ಲಿರುವ ಕೆಲವು ಅಂಶಗಳನ್ನು ಪರಿಗಣಿಸುವ ಸಾಧ್ಯತೆಗಳಿವೆ. ಮೊಬೈಲ್‌ನಲ್ಲಿ ಡಿಲೀಟ್ ಆಗಿರುವ ಡೇಟಾಗಳನ್ನೂ ರಿಟ್ರೈವ್ ಮಾಡಿ ಮಾಹಿತಿ ಕಲೆ ಹಾಕಲು ಸಿದ್ಧತೆ ನಡೆಯುತ್ತಿದೆ.
ಎಸ್‌ಐಟಿ ತಂಡವು ತನಿಖಾ ಹಂತದಲ್ಲಿ ಬಹಳ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದೆ. ಸರಕಾರದ ವಿರುದ್ಧವಾಗಲಿ, ಎಸ್‌ಐಟಿ ವಿರುದ್ಧವಾಗಲಿ ಯಾವುದೇ ಅಪವಾದ ಬಾರದಂತೆ ಪ್ರಕರಣವನ್ನು ನಿಭಾಯಿಸುತ್ತಿದೆ. ಅಶ್ಲೀಲ ವೀಡಿಯೋ ಪೆನ್‌ಡ್ರೈವ್ ಪ್ರಕರಣವಾಗಿರುವುದರಿಂದ ಗೌಪ್ಯವಾಗಿ ತನಿಖೆ ನಡೆಸಿ ಒಂದೊಂದೇ ಮಾಹಿತಿ ಕಲೆ ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.