ರಾಜ್ಯ ರಾಜಕಾರಣದಲ್ಲಿ ನಿಸ್ವಾರ್ಥ ಜನ ಸೇವಕ ಕೆ. ವಸಂತ ಬಂಗೇರ
ಬೆಳ್ತಂಗಡಿ ಕ್ಷೇತ್ರಯಲ್ಲಿ ಮೂರೂ ಪಕ್ಷಗಳಿಂದ 5 ಬಾರಿ ಗೆದ್ದ ಶಾಸಕ
Team Udayavani, May 9, 2024, 6:35 AM IST
ಬೆಳ್ತಂಗಡಿ: ಕೇದೆ ಸುಬ್ಬ ಪೂಜಾರಿ-ದೇವಕಿ ದಂಪತಿಯ ಪುತ್ರನಾಗಿ 15-1-1946ರಲ್ಲಿ ಜನಿಸಿದ ಕೆ. ವಸಂತ ಬಂಗೇರ ಹುಟ್ಟು ಹೋರಾಟಗಾರ. ಕುವೆಟ್ಟು ಪಂಚಾಯತ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿ ರಾಜಕೀಯ ಜೀವನ ಪ್ರವೇಶಿಸಿದರು.
ಬಳಿಕ ಶಾಸಕರಾಗಿ ಆಯ್ಕೆಯಾದವರು. ಆಗ ರಾಜ್ಯದಲ್ಲೇ ಇಬ್ಬರು ಬಿಜೆಪಿ ಶಾಸಕರ ಪೈಕಿ ಒಬ್ಬ ರೆಂಬ ಹೆಗ್ಗಳಿಕೆಗೆ ಪಾತ್ರ ರಾಗಿದ್ದರು. ಇವರ ಜತೆ ಇನ್ನೊಬ್ಬ ಬಿಜೆಪಿಯಿಂದ ಆಯ್ಕೆಯಾಗಿದ್ದವರು ಬಿ.ಎಸ್. ಯಡಿಯೂರಪ್ಪ. ಬಿಜೆಪಿ ಯಿಂದ ಹೊರಬಂದ ಬಂಗೇರರು ಜನತಾದಳದಲ್ಲಿ ಶಾಸಕರಾಗಿ ಆಯ್ಕೆ ಯಾಗಿ ವಿಧಾನಸಭೆಯ ಮುಖ್ಯ ಸಚೇತಕರೂ ಆದರು. ಎರಡು ಬಾರಿ ಸೋಲನುಭವಿಸಿ ಕಾಂಗ್ರೆಸ್ ಕೈಹಿಡಿದರು.
ಕಾಂಗ್ರೆಸ್‌ನಲ್ಲಿ ಸತತ ಎರಡು ಗೆಲುವು ತಂದಿತ್ತರು. 5ನೇ ಬಾರಿ ಶಾಸಕರಾಗಿ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮೂರು ಪಕ್ಷದಲ್ಲಿ ಗೆದ್ದ ಶಾಸಕ
ಬಿಜೆಪಿ, ಕಾಂಗ್ರೆಸ್, ಜನತಾದಳ, ಕಾಂಗ್ರೆಸ್ ಸೇರಿ ಮೂರೂ ಪಕ್ಷಗಳಲ್ಲಿ ಗೆಲುವು ಸಾಧಿಸಿ, ಐದು ಬಾರಿ ಗೆಲುವು ಕಂಡ ತಾಲೂಕಿನ ಏಕೈಕ ಶಾಸಕರು ಬಂಗೇರರು. 1983, 1985, 1994, 2008, 2013ರಲ್ಲಿ ಶಾಸಕರಾಗಿದ್ದ ಅವರು ತಮ್ಮ ಅವಧಿಯಲ್ಲಿ ಅತ್ಯಂತ ಹೆಚ್ಚು ಹಕ್ಕುಪತ್ರಗಳನ್ನು ನೀಡಿದವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಭ್ರಷ್ಟಾಚಾರ ಮತ್ತು ಸೋಮಾರಿ ಅಧಿಕಾರಿ ಗಳಿಗೆ ದುಃಸ್ವಪ್ನವಾದ ಬಂಗೇರರು ಯಾವತ್ತೂ ಬಡವರ ಪರ.
ಕತ್ತಲ ಕೂಪದ ಹಳ್ಳಿಗೆ ಬೆಳಕು
ಮೊತ್ತಮೊದಲ ಬಾರಿಗೆ ಕತ್ತಲಕೂಪ ದಲ್ಲಿದ್ದ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಕೀರ್ತಿ. ವೈಕುಂಠ ಬಾಳಿಗರು ಬೆಳ್ತಂಗಡಿಗೆ ವಿದ್ಯುತ್ ತಂದರೆ ಅದನ್ನು ತಾಲೂಕಿನ ಮನೆ ಮನೆಗೆ ಹಳ್ಳಿ ಹಳ್ಳಿಗಳಿಗೆ ತಲುಪಿಸಿದ್ದು ಬಂಗೇರರು. ಗುರುವಾಯನಕೆರೆ ವರೆಗೆ ಮಾತ್ರ ಬರುತ್ತಿದ್ದ ಉಡುಪಿ, ಉಪ್ಪಿನಂಗಡಿ ಖಾಸಗಿ ಬಸ್‌ಗಳನ್ನು ಬೆಳ್ತಂಗಡಿ ವರೆಗೆ ಬರುವಂತೆ ಮಾಡುವಲ್ಲಿ ಬಂಗೇರರ ಪಾತ್ರ ಮಹತ್ತರ. ಅನೇಕ ಕಡೆ ನದಿಗಳಿಗೆ ಸೇತುವೆ ರಚಿಸುವ ಮೂಲಕ ಹಳ್ಳಿಗಳ ನಡುವಿನ ಸಂಪರ್ಕಕೊಂಡಿಯಾಗಲು ಕಾರಣರಾದವರು.
ಐದನೇ ಅವಧಿ
ಐದನೇ ಅವಧಿಯಲ್ಲಿ ಆಡಳಿತ ಪಕ್ಷದ ಶಾಸಕರಾಗಿ ಅತಿ ಹೆಚ್ಚಿನ ಜನೋಪಯೋಗಿ ಚುಟವಟಿಕೆ ನಿರತರಾಗಿದ್ದಾರೆ. 10 ಕೋ.ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ಕಾಮ ಗಾರಿ, ಜನೋಪಯೋಗಿ ಕೆಲಸಗಳಲ್ಲಿ ಬಂಗೇರರು ಸದಾ ಮುಂದು. ನೇರ ನಿಷ್ಠುರ ವಾದಿ, ಖಡಕ್ ರಾಜಕೀಯದಲ್ಲಿ ದುಡಿದುದಕ್ಕಿಂತ ಹೆಚ್ಚು ಜನಸೇವೆಗೆ ಕಳೆದುಕೊಂಡವರು.
ಒಂದೇ ಮನೆಯ ಮೂವರು ಶಾಸಕರು
ಸಹೋದರ ಚಿದಾನಂದ ಬಂಗೇರರೂಶಾಸಕರಾಗಿದ್ದರು. 2 ಅವಧಿಗೆ ಶಾಸಕರಾಗಿದ್ದ ಕೆ. ಪ್ರಭಾಕರ ಸೇರಿ ಒಂದೇ ಮನೆಯಮೂವರು ಶಾಸಕರಾಗಿ ಮೆರೆದದ್ದು ಬೆಳ್ತಂಗಡಿ ಇತಿಹಾಸದಲ್ಲಿ ಮೊದಲು.
ಗುರುದೇವ ಕಾಲೇಜು ಸ್ಥಾಪನೆ
ಗ್ರಾಮಾಂತರದ ಮಂದಿ, ಆರ್ಥಿಕ ಬಡತನದ ಮಂದಿ ಕಲಿಕೆ ನಿಲ್ಲಿಸಬಾರದು ಎಂಬ ಉದ್ದೇಶದಿಂದ ಗುರುದೇವ ಎಜುಕೇಶನ್ ಟ್ರಸ್ಟ್ ಸ್ಥಾಪಿಸಿ ಗುರುದೇವ ಪ.ಪೂ. ಕಾಲೇಜು, ಗುರುದೇವ ಪದವಿ ಕಾಲೇಜು ನಡೆಸುತ್ತಿದ್ದಾರೆ. ಈ ಶಿಕ್ಷಣ ಸಂಸ್ಥೆ ಕನಿಷ್ಠ ಫೀಸು ಸ್ವೀಕರಿಸಿ ಉತ್ತಮ ಫಲಿತಾಂಶ ನೀಡುತ್ತಿದೆ. ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಸ್ಥಾಪನೆಯ ರೂವಾರಿ, ಸಂಘದ ನಿರ್ದೇಶಕರಾಗಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷರಾಗಿ, ಇನ್ನೂ ಅನೇಕ ಸಂಘ ಸಂಸ್ಥೆಗಳಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ ಸಜ್ಜನ ರಾಜಕಾರಣಿ.
ಬೆಳ್ತಂಗಡಿ ಹಳೆಕೋಟೆ ಬಳಿಯ ಮನೆಯಲ್ಲಿ ವಾಸವಾಗಿದ್ದ ಅವರು ಪತ್ನಿ ಬಿಲ್ಲವ ಮಹಿಳಾ ವೇದಿಕೆಯ ಸ್ಥಾಪಕಾ ಧ್ಯಕ್ಷೆ, ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕಿ, ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್‌ನ ಮಾಜಿ ನಿರ್ದೇಶಕಿ, ಗುರುವಾಯನಕೆರೆ ಸಿಎ ಬ್ಯಾಂಕ್ ಮಾಜಿಉಪಾಧ್ಯಕ್ಷೆ, ಹಾಲಿ ನಿರ್ದೇಶಕಿ ಸುಜಿತಾ ವಿ. ಬಂಗೇರ, ಪುತ್ರಿಯರಾದ ಪ್ರೀತಿತಾ,ಬಿನುತಾ, ಸಹೋದರ ಕೆ. ಪ್ರಭಾಕರ ಬಂಗೇರ, ರಮೇಶ್ ಬಂಗೇರ, ಸಹೋ ದರಿ ಶಾರದಾ ಕೃಷ್ಣ, ಅಳಿಯಂದಿರಾದ ಉದ್ಯಮಿ ಧರ್ಮ ವಿಜೇತ್, ಎಂಜಿನಿ ಯರ್ ಸಂಜೀವ್ ಕಾನೆಕಲ್ ಸಹಿತ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಬಂಗೇರ ನಿಧನಕ್ಕೆ ಗಣ್ಯರ ಸಂತಾಪ
ಆತ್ಮೀಯ ಗೆಳೆಯ ಮತ್ತು ದೀರ್ಘಕಾಲದ ಸಹೋದ್ಯೋಗಿ ವಸಂತ ಬಂಗೇರರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನೇರ, ನಿಷ್ಠುರ ನಡೆ-ನುಡಿಯ ಬಂಗೇರ, ಆಂತರ್ಯದಲ್ಲಿ ಅಪಾರವಾದ ಜನಪರ ಕಾಳಜಿ ಮತ್ತು ಸ್ನೇಹನಿಷ್ಠೆಯನ್ನು ಹೊಂದಿದ್ದವರು.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಹೊಂದಿದ್ದ ಬಂಗೇರ ನೇರ ಮಾತಿನ, ಮೃದು ಸ್ವಭಾವದ ಅವರು ಕಾಂಗ್ರೆಸ್
ಪಕ್ಷದ ಮೂಲಕ ತಮ್ಮ ರಾಜಕೀಯ ಬದುಕಿನ ಪುನರುಜ್ಜೀವನ ಕಂಡಿದ್ದರು.
– ಡಿ.ಕೆ. ಶಿವಕುಮಾರ್, ಡಿಸಿಎಂ
ದ.ಕ. ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದ ವಸಂತ ಬಂಗೇರ ಅವರ ನಿಧನ ದುಃಖ ತಂದಿದೆ. ಅನೇಕ ವರ್ಷಗಳ ಹಿಂದೆ ನಾನು ಮತ್ತು ವಸಂತ ಬಂಗೇರ ಮಾತ್ರ ಪಕ್ಷದಿಂದ ಶಾಸಕರಾಗಿ ಗೆದ್ದ ಸಂದರ್ಭದಲ್ಲಿ ಆ ಹೋರಾಟದ ದಿನಗಳನ್ನು ನಾನೆಂದಿಗೂ ಮರೆಯಲಾರೆ.
– ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ವಸಂತ ಬಂಗೇರರವರು ಸ್ವರ್ಗಸ್ಥರಾದ ವಿಚಾರ ತಿಳಿದು ವಿಷಾದ ವಾಯಿತು. ಸಾಮಾನ್ಯ ಜನರೊಳಗೆ ಹಾಗೂ ಕುಟುಂಬದಲ್ಲಿ ವಿಚಾರ-ಭೇದಗಳು ಬಂದಾಗ ಪಂಚಾಯತಿಕೆ ನಡೆಸಿ ಒಗ್ಗೂಡಿಸು ವಿಕೆಗೆ ಪ್ರಯತ್ನಿಸುತ್ತಿದ್ದರು. ಅವರ ಈ ಕಾರ್ಯದಿಂದ ಅನೇಕ ಕುಟುಂಬಗಳು ಒಟ್ಟಾಗುತ್ತಿದ್ದವು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ.
-ಡಾ| ಡಿ. ವೀರೇಂದ್ರ ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳ
ರಾಜ್ಯದ ಹಿರಿಯ ಮುಖಂಡ ಹಾಗೂ ಆತ್ಮೀಯ ಸ್ನೇಹಿತರಾದ ಕೆ. ವಸಂತ ಬಂಗೇರ ಅವರ ನಿಧನ ವಾರ್ತೆ ತಿಳಿದು ಅತೀವದುಃಖವಾಗಿದೆ. ಅವರ ಆಗಲಿಕೆಯಿಂದ ರಾಜ್ಯದ ಅದರಲ್ಲೂ ವಿಶೇಷ ವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಓರ್ವ ಹಿರಿಯ ಮುತ್ಸದ್ದಿ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ.
– ಯು.ಟಿ. ಖಾದರ್, ವಿಧಾನ ಸಭಾಧ್ಯಕ್ಷ
ಕರ್ನಾಟಕ ರಾಜ್ಯ ಕಂಡ ಅಭೂತಪೂರ್ವ ರಾಜಕಾರಣಿ, ಅಪ್ಪಟ ಮಾನವತಾವಾದಿ, ಸಜ್ಜನ ವಸಂತ ಬಂಗೇರ ನಿಧನಕ್ಕೆ ಬೆಳ್ತಂಗಡಿ ಧರ್ಮ ಪ್ರಾಂತದ ಪರವಾಗಿ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.
– ಲಾರೆನ್ಸ್ ಮುಕ್ಕುಯಿ, ಬಿಷಪ್
ಸಮಾಜ ನೊಂದವರ ಪಾಲಿಗೆ ಧ್ವನಿಯಾಗಿದ್ದ ಕೆ.ವಸಂತ ಬಂಗೇರರವರು ನಿಧನರಾಗಿದ್ದು ಇಡೀ ಸಮಾಜಕ್ಕೆ ನೋವುಂಟು ಮಾಡಿದೆ. ಕನ್ಯಾಡಿ ಶ್ರೀ ರಾಮಕ್ಷೇತ್ರದ ಟ್ರಸ್ಟಿಯಾಗಿ ಕ್ಷೇತ್ರದ ಬೆಳವಣಿಗೆ ಶಕ್ತಿಯಾದವರು.
– ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಕನ್ಯಾಡಿ ಕ್ಷೇತ್ರ
ನೇರ ನಡೆ ನುಡಿಯ ನಿಷ್ಠಾವಂತ ರಾಜಕಾರಣಿ ವಸಂತ ಬಂಗೇರ ಶ್ರೀ ಮಠದ ಓರ್ವ ಭಕ್ತರಾಗಿದ್ದರು. ಅವರ ಅಗಲಿದ ಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿಯಾಗಲಿ ಎಂದು ಶ್ರೀ ಜಿನೇಶ್ವರರ ಜಿನ ಶಾಸನ ದೇವತೆ ಗಳಲ್ಲಿ ಪ್ರಾರ್ಥಿಸುತ್ತೇವೆ.
-ಜಗದ್ಗುರು ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ,
ಮೂಡುಬಿದಿರೆ
ದ.ಕ. ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ|ಎಂ.ಎನ್ ರಾಜೇಂದ್ರ ಕುಮಾರ್, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಗ್ಲೋಬಲ್ ಮೀಡಿಯಾ ಕಮ್ಯುನಿಕೇಶನ್ ಸಂಸ್ಥೆಯ ಮುಖ್ಯಸ್ಥ ದಿನೇಶ್ ಶೆಟ್ಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪಾಡಿಗುತ್ತು, ಮಂಗಳೂರು ಉತ್ತರ ಶಾಸಕ ಡಾ| ಭರತ್ ಶೆಟ್ಟಿ ವೈ., ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ರಾಜ್ಯಸಭಾ ಮಾಜಿ ಸದಸ್ಯ ಬಿ.ಇಬ್ರಾಹಿಂ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಗಂಗಾಧರ್ ಗೌಡ, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ, ಅಖೀಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕೆಪಿಸಿಸಿ ಪದಾಧಿ ಕಾರಿಗಳಾದ ಮಿಥುನ್ ರೈ, ರಕ್ಷಿತ್ ಶಿವರಾಂ ಹಾಗೂ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ವಿವಧೆಡೆ ಕಾಂಗ್ರೆಸ್ ಕಚೇರಿಯಲ್ಲಿ ಕೂಡ ಸಂತಾಪ ಸಭೆ ನಡೆಸಲಾಯಿತು.
ಇಂದು ಅಂತಿಮ ನಮನ, ಸರಕಾರಿ ಗೌರವ
-ಪಾರ್ಥಿವ ಶರೀರ ಮೇ 9ರಂದು ಮುಂಜಾನೆ ಚಾರ್ಮಾಡಿ ಮೂಲಕ ಬೆಳ್ತಂಗಡಿಗೆ
– ಬೆಳಗ್ಗೆ 10.30ಕ್ಕೆ ಹಳೇಕೋಟೆಯ ಅವರ ಮನೆಯಿಂದ ತಾಲೂಕು ಕ್ರೀಡಾಂಗಣಕ್ಕೆ ಪಾರ್ಥೀವ ಶರೀರದ ಮೆರವಣಿಗೆ
– ತಾಲೂಕು ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ. ಅಪರಾಹ್ನ 3ಕ್ಕೆ ಬೆಳ್ತಂಗಡಿ ನಗರದಲ್ಲಿ ಪಾರ್ಥಿವ ಶರೀರದ ಅಂತಿಮ ಯಾತ್ರೆ
– ಸಂಜೆ 5ಕ್ಕೆ ಕುವೆಟ್ಟು ಗ್ರಾಮದ ಕೇದೆ ಹೊಸಮನೆಯಲ್ಲಿ ಅಂತ್ಯ ಸಂಸ್ಕಾರ
– ಅಂತಿಮ ದರ್ಶನಕ್ಕೆ ಸಿಎಂ, ಡಿಸಿಎಂ ಸಹಿತ ಗಣ್ಯರು ಭಾಗವಹಿಸುವ ನಿರೀಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.