Editorial; ಪಿಒಕೆ: ಭುಗಿಲೆದ್ದ ಜನಾಕ್ರೋಶ ಇಕ್ಕಟ್ಟಿಗೆ ಸಿಲುಕಿದ ಪಾಕಿಸ್ಥಾನ
Team Udayavani, May 15, 2024, 6:10 AM IST
ರಾಜಕೀಯ ಅರಾಜಕತೆ, ಭಯೋತ್ಪಾದಕ ದಾಳಿ, ಆಹಾರ ಅಭಾವ, ದಿವಾಳಿ ಯಾಗಿರುವ ಆರ್ಥಿಕತೆ.. ಹೀಗೆ ಸರಣಿ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿ ಒದ್ದಾಡು ತ್ತಿರುವ ಪಾಕಿಸ್ಥಾನಕ್ಕೀಗ ಮತ್ತೂಂದು ಸಮಸ್ಯೆ ಎದುರಾಗಿದೆ. ಸ್ವಾತಂತ್ರ್ಯದ ಸಂದರ್ಭ ದಲ್ಲಿ ಪಾಕಿಸ್ಥಾನ ಕುತಂತ್ರದಿಂದ ಅತಿಕ್ರಮಿಸಿದ್ದ ಭಾರತದ ಭಾಗವಾಗಿದ್ದ ಹಾಲಿ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳುವುದೇ ಅಲ್ಲಿನ ಸರಕಾರದ ಪಾಲಿಗೆ ಬಲುದೊಡ್ಡ ಸವಾಲಾಗಿದೆ. ಪಿಒಕೆ ಜನತೆ ಈಗ ಬಹಿರಂ ಗವಾಗಿ ಬೀದಿಗಿಳಿದು ಪಾಕಿಸ್ಥಾನ ಸರಕಾರದ ಮಲತಾಯಿ ಧೋರಣೆ, ಬೆಲೆ ಏರಿಕೆ, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಸೂಲು, ವಿದ್ಯುತ್ ದರ ಹೆಚ್ಚಳ ಹಾಗೂ ಸರಕಾರಿ ಸೌಲಭ್ಯ ನೀಡಿಕೆಯಲ್ಲೂ ತಾರತಮ್ಯ ನೀತಿಯನ್ನು ತನ್ನದಾಗಿಸಿಕೊಂಡಿರುವುದರ ವಿರುದ್ಧ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಪಿಒಕೆಯನ್ನು ಭಾರತದೊಂದಿಗೆ ಸೇರ್ಪಡೆಗೊಳಿಸಬೇಕೆಂಬ ಆಗ್ರಹವೀಗ ಪ್ರತಿಧ್ವನಿಸತೊಡಗಿದೆ.
ಪಿಒಕೆಯ ಜನರು ಪಾಕಿಸ್ಥಾನ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಹಲವಾರು ವರ್ಷಗಳಿಂದ ಪಿಒಕೆಯಲ್ಲಿ ಇಂತಹ ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಹಾಗೆಯೇ ಪಿಒಕೆಯನ್ನು ಭಾರತ ದೊಂದಿಗೆ ವಿಲೀನಗೊಳಿಸಬೇಕೆಂಬ ಬೇಡಿಕೆಯನ್ನು ಇರಿಸಿದ್ದಾರೆ. ಈ ಸಂದರ್ಭ ದಲ್ಲೆಲ್ಲ ಪಾಕಿಸ್ಥಾನ ಸರಕಾರ ಅಲ್ಲಿನ ಹೋರಾಟಗಾರರು ಮತ್ತು ಸ್ಥಳೀಯ ಜನತೆಯ ಮೂಗಿಗೆ ತುಪ್ಪ ಸವರಿ ಅವರ ಆಕ್ರೋಶವನ್ನು ಒಂದಿಷ್ಟು ಕಡಿಮೆಗೊಳಿಸಿ, ಪರಿಸ್ಥಿತಿಯನ್ನು ತಣ್ಣಗಾಗಿಸುತ್ತ ಬಂದಿದೆ. ಆದರೆ ಈ ಬಾರಿ ಜನರು ಪಿಒಕೆಯ ಸ್ವಾತಂತ್ರ್ಯಕ್ಕಾಗಿ ಪಟ್ಟು ಹಿಡಿದಿದ್ದು, ಪಾಕಿಸ್ಥಾನ ಸರಕಾರದ ಯಾವುದೇ ಭರವಸೆ, ಆಮಿಷಗಳಿಗೆ ಸೊಪ್ಪು ಹಾಕದಿರಲು ನಿರ್ಧರಿಸಿದಂತಿದೆ.
ಕಳೆದೆರಡು ವರ್ಷಗಳಿಂದ ಪಾಕಿಸ್ಥಾನ ಆರ್ಥಿಕವಾಗಿ ಸಂಪೂರ್ಣವಾಗಿ ಜರ್ಝರಿತವಾಗಿದೆ. ತಿಂಗಳುಗಳ ಹಿಂದೆ ನಡೆದ ಚುನಾವಣೆಯಲ್ಲೂ ಅತಂತ್ರ ಸ್ಥಿತಿ ನಿಮಾಣವಾಗಿತ್ತಾದರೂ ಪಿಎಂಎಲ್-ಎನ್ ಮತ್ತು ಪಿಪಿಪಿ ಮೈತ್ರಿಕೂಟ ಸರಕಾರ ರಚಿಸಿತ್ತು. ಆದರೆ ಮೈತ್ರಿ ಸರಕಾರ ಕೂಡ “ನಾಮ್ ಕೇ ವಾಸ್ತೆ’ ಎಂಬಂತಾಗಿದ್ದು, ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಂದ ಜನತೆಯನ್ನು ಪಾರು ಮಾಡಲು ಹರಸಾಹಸ ಪಡುತ್ತಿದೆ. ದೇಶದ ಮುಖ್ಯ ಆಹಾರ ಧಾನ್ಯವಾದ ಗೋಧಿಯ ಅಭಾವ ತೀವ್ರವಾಗಿದ್ದು ಜನರು ಒಂದು ಹೊತ್ತಿನ ಊಟಕ್ಕೂ ಪ್ರಯಾಸ ಪಡುವಂತಾಗಿದೆ.
ವಿದೇಶಿ ಹಣಕಾಸು ಸಂಸ್ಥೆಗಳನ್ನು ಅಂಗಲಾಚಿ ಆರ್ಥಿಕ ನೆರವನ್ನು ಪಡೆದಿದ್ದರೂ ಅದು “ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ. ಪಿಒಕೆಯಂತೂ ಪಾಕಿಸ್ಥಾನ ಸರಕಾರಕ್ಕೆ ಪ್ರಯೋಗಶಾಲೆಯಂತಾಗಿದ್ದು ಇಲ್ಲಿನ ಜನರು ಬೆಲೆ ಏರಿಕೆಯಿಂದ ಹೈರಾಣಾಗಿದ್ದಾರೆ. ಇವೆಲ್ಲದರಿಂದ ಬೇಸತ್ತಿರುವ ಪಿಒಕೆಯ ಜನರು ಬೀದಿಗಿಳಿದಿದ್ದಾರೆ. ಪಿಒಕೆ ಜನತೆ ಭಾರತದೊಂದಿಗೆ ವಿಲೀನಗೊಳಿಸುವಂತೆ ಬೇಡಿಕೆ ಇಡುತ್ತಿದ್ದಂತೆಯೇ ಪಾಕಿಸ್ಥಾನ ಸರಕಾರಕ್ಕೆ ಪ್ರತಿಭಟನೆಯ ತೀವ್ರತೆಯ ಬಿಸಿ ತಟ್ಟಿ ಪಿಒಕೆಗಾಗಿ 2,300 ಪಾಕಿಸ್ಥಾನಿ ಕೋ.ರೂ.ಗಳ ಪ್ಯಾಕೇಜ್ ಅನ್ನು ಘೋಷಿಸಿದೆ. ಆದರೆ ಸರಕಾರದ ಈ ಭರವಸೆಗೆ ಸೊಪ್ಪು ಹಾಕದ ಪಿಒಕೆ ಜನರು ಮಂಗಳವಾರ ತಮ್ಮ ಪ್ರತಿಭಟನೆಯನ್ನು ತೀವ್ರ ಗೊಳಿಸಿದ್ದಾರೆ. ಪಾಕಿಸ್ಥಾನ ಸರಕಾರದ ಬಲ ಪ್ರಯೋಗಕ್ಕೂ ಜಗ್ಗದ ಜನರು, ಯೋಧರ ಬಂದೂಕಿಗೆ ಎದೆಯೊಡ್ಡಿ ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಪಿಒಕೆಯಲ್ಲಿನ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಭಾರತ ಸರಕಾರ, ಸದ್ಯೋಭವಿಷ್ಯದಲ್ಲಿ ಅಲ್ಲಿನ ಜನರೇ ಪಿಒಕೆಯನ್ನು ಭಾರತ ದೊಂದಿಗೆ ವಿಲೀನಗೊಳಿಸಲಿದ್ದಾರೆ ಎಂಬ ತುಂಬು ವಿಶ್ವಾಸದಲ್ಲಿದೆ. ಒಟ್ಟಾರೆ ಪಾಕಿ ಸ್ಥಾನದ ಸದ್ಯದ ಪರಿಸ್ಥಿತಿ “ಮಾಡಿದ್ದುಣ್ಣೋ ಮಹಾರಾಯ’ ಎನ್ನುವಂತಾಗಿದೆ. ಕಳೆದ ಏಳೂವರೆ ದಶಕಗಳಿಂದ ಭಾರತ ಪ್ರತಿಪಾದಿಸುತ್ತಲೇ ಬಂದಿದ್ದ “ಪಿಒಕೆ ತನ್ನ ಅವಿಭಾಜ್ಯ ಅಂಗ’ ಎಂಬ ವಾದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಬಲ ಲಭಿಸಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ
FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.