![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, May 20, 2024, 3:36 PM IST
ನಿನ್ನ ಬೆನ್ನತ್ತಿ ಓಡಿಬರುವರಲ್ಲ ನಗುವೇ !
ನೀನೆಷ್ಟು ಮೋಹಕ ಎಲ್ಲರ ಸೆಳೆಯುವೆ……?
ಮುದ್ದಾದ ನಿಲುವಿಗೆ ನಗುವೇ ಚಿನ್ನದ ಆಭರಣಕ್ಕಿಂತಲೂ ಶೋಭೆ ತರುವುದು. ಸದಾ ನಗ್ತಾನೇ ಇರೋದು ಕಷ್ಟ. ನಮ್ಮ ಕಷ್ಟಕ್ಕಿಂತ ನಮ್ಮ ಮುಖದಲ್ಲಿರುವ ನಗುವೇ ಕಾಣುವುದು ಎಲ್ಲರಿಗೂ ಮತ್ತು ನಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡುವುದು ಅಂದ್ಮೇಲೆ ಏಕೆ ನಗ್ತಾನೇ ಇರ್ಬಾರ್ದು ?
ಹತಾಶೆ, ಬೇಸರ, ದುಃಖ ದುಗುಡಗಳು ನಗುವನ್ನು ಸ್ವಾಗತಿಸಲು ಸಮ್ಮತಿ ಕೊಡುವುದಿಲ್ಲ. ನಾವೇ ಬೀಳ್ಕೊಡಬೇಕು. ಜೀವನದಲ್ಲಿ ಬರುವ ಸಂಕಷ್ಟಗಳನ್ನು ಎದುರಿಸುತ್ತ ಮುಂದೆ ಸಾಗಬೇಕು. ಕಾಣದ ಕಡಲಿಗೆ ಹಂಬಲಿಸಿದಂತೆ, ಧಕ್ಕದೆ ಇರುವುದನ್ನು ಪಡೆಯುವ ಹಂಬಲದಿ ನೋವು ಪಡುವ ಬದಲು ಇರುವುದಷ್ಟೇ ಪಾಲಿಗೆ ಅಂದುಕೊಳ್ಳುತ್ತಾ ಬದುಕಿನಲ್ಲಿ ಹೆಜ್ಜೆ ಇಡಬೇಕು.
ಸಾಧ್ಯ ಎಂದುಕೊಂಡರೆ ಎಲ್ಲವೂ ಸಾಧ್ಯ. ಸಾಧ್ಯವೇ ಇಲ್ಲ ಎಂದುಕೊಂಡರೆ ಎಲ್ಲವೂ ಅಸಾಧ್ಯ. ನಾವು ತೆಗೆದುಕೊಳ್ಳುವ ರೀತಿಯಲ್ಲಿ ಸಾಧ್ಯ ಅಸಾಧ್ಯಗಳು ನಿಂತಿರುತ್ತದೆ. ಋಣಾತ್ಮಕವಾಗಿ ತೆಗೆದುಕೊಂಡಿದ್ದು ಬದುಕಿಗೆ ಕತ್ತಲೆಯಾದರೆ, ಧನಾತ್ಮಕ ಚಿಂತನೆಗಳು ಬೆಳಕಿನೆಡೆಗೆ ಕರೆದೊಯ್ಯುತ್ತದೆ ಅದಕ್ಕೆ ನಮ್ಮ ಚಿಂತನೆ ಪಾಸಿಟಿವ್ ದಾರಿಯಲ್ಲಿ ಸಾಗುತ್ತಿದ್ದರೆ ಬದುಕು ಸುಂದರವಾಗಿ ಕಾಣುತ್ತದೆ.
ಬೇರೆಯವರನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಾ ನಾವು ಅವರಂತೆ ಇರಬೇಕು ಅವರಂತೆ ಬದುಕಬೇಕು ಎನ್ನುವುದು ಮೂರ್ಖತನವೇ ಸರಿ. ನವಿಲು ನರ್ತಿಸುವುದನ್ನು ನೋಡಿ ಕೆಂಬೂತ ಮೈ ಪರಚಿಕೊಂಡರೆ ಯಾರಿಗೆ ನೋವಾಗುವುದು. ಅಸೂಯೆ ಎಂಬುದು ಒಳಹೊಕ್ಕರೆ ಅದು ಕಾರ್ಕೋಟಕ ವಿಷದಂತೆ ಅದು ಬದುಕಿನ ಮಹತ್ವವನ್ನು ಕಳೆದುಕೊಳ್ಳುತ್ತದೆ.
ಅತಿಯಾದ ಆಸೆಗಳು, ಅತಿಯಾದ ಬಯಕೆಗಳು ತಪ್ಪುಗಳನ್ನು ಮಾಡುವಂತೆ ಮಾಡಿ ಬಿಡುತ್ತದೆ. ನಾವಿರುವ ನೈಜ್ಯ ಬದುಕನ್ನು ಮರೆತು ಮತ್ತೂಬ್ಬರು ಬದುಕುತ್ತಿರುವ ಹಾದಿಯಲ್ಲಿ ನಡೆದರೆ ನಮಗೆ ಸಿಗುವುದು ಹತಾಶೆ, ನೋವುಗಳು ಅಷ್ಟೇ. ನಿರೀಕ್ಷೆ ಇಲ್ಲದೆ ಸಾಗಿದಷ್ಟು ನೆಮ್ಮದಿಯ ಬದುಕು ನಮ್ಮದಾಗಲಿದೆ.ಇರುವಷ್ಟರಲ್ಲಿ ಬದುಕುವುದು ಜಾಣತನ ಹಾಗೂ ನಮಗೂ ಒಳಿತು ನಮ್ಮ ಮುಂದಿನ ಬದುಕಿಗೆ ಒಳಿತು
ಪಾಲಿಗೆ ಬಂದಿದ್ದು ಪಂಚಾಮೃತ ಇರುವಷ್ಟರಲ್ಲೇ ತೃಪ್ತಿ ಪಟ್ಟುಕೊಂಡು ಬದುಕಬೇಕು. ನಮ್ಮ ನಗು ನಮ್ಮ ಕೈಯಲ್ಲಿ ಇರುವುದು. ಅದನ್ನು ನಾವು ಆರಿಸಿಕೊಳ್ಳುವ ರೀತಿಯಲ್ಲಿ ಏನೇ ಆಗಲಿ ಸದಾ ನಗ್ತಾ ಇರಬೇಕು ನಮ್ಮ ನಗು ಮತ್ತೂಬ್ಬರ ಬಾಳಿಗೆ ಸ್ಫೂರ್ತಿಯಾಗಬಹುದು ಅಲ್ಲವೇ? ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ ಮತ್ತೇಕೆ ದುಃಖ ಪಡಬೇಕು ?
ದುಃಖ ಬಂದಾಗ ಸ್ವೀಕರಿಸಿ ಬದುಕಲೇಬೇಕು. ನಮ್ಮ ಮನದ ಮೂಖವೇದನೆ ಯಾರ ಕಣ್ಣಿಗೆ ಕಾಣುವುದಿಲ್ಲ.ನಮ್ಮ ಹೊರಗಿನ ನಗು ಮಾತ್ರ ಕಾಣುವುದು ಮತ್ತು ಆ ನಗುವೇ ನಮ್ಮ ವ್ಯಕ್ತಿತ್ವವನ್ನು ಗುರುತಿಸುವುದು ಅದಕ್ಕೆ ಯಾವಾಗಲೂ ಮುಗುಳ್ನಗುತ್ತಾ ಇರಬೇಕು. ಎಲ್ಲರ ಮುಖದಲ್ಲಿ ಸದಾ ಮುಗುಳುನಗೆಯ ಭಾವ ಕಾಣುವುದಿಲ್ಲ ಅದು ಕೆಲವರಿಗೆ ಮಾತ್ರ. ಮುಗುಳುನಗೆ ನೀನೆಷ್ಟು ಚೆಂದ ನಗುವೇ ನೆಮ್ಮದಿಗೆ ಸ್ಫೂರ್ತಿ ನಗುವಿಗೆ ಎಲ್ಲವನ್ನು ಗೆಲ್ಲುವ ಶಕ್ತಿ ಇದೆ.
- ವಾಣಿ
ಮೈಸೂರು
You seem to have an Ad Blocker on.
To continue reading, please turn it off or whitelist Udayavani.