Hearing Tests: ಅತ್ಯಾಧುನಿಕ ಸಮಗ್ರ ಶ್ರವಣ ಪರೀಕ್ಷೆಗಳು; ಇಲ್ಲಿದೆ ವಿವರವಾದ ಮಾಹಿತಿ
Team Udayavani, Jun 2, 2024, 11:12 AM IST
ಶ್ರವಣ ಶಕ್ತಿ ದೋಷವು ಆಪ್ತರ ಜತೆಗೆ ನಮ್ಮ ಸಂಬಂಧದ ಮೇಲೆ ಗಮನಾರ್ಹ ಪ್ರತಿಕೂಲ ಪರಿಣಾಮವನ್ನು ಬೀರಬಹುದು ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನ ಪರಿಸರದ ಜತೆಗೆ ಸಂವಹನ ಸಾಮರ್ಥ್ಯಕ್ಕೆ ಮಿತಿಯೊಡ್ಡಬಹುದಾಗಿದೆ. ಶ್ರವಣ ಶಕ್ತಿ ದೋಷವು ಅನೇಕ ಕಾರಣಗಳಿಂದ ಉಂಟಾಗಬಹುದು; ಕಿವಿಯ ಸೋಂಕು, ವಯಸ್ಸಾಗುವುದು, ಕೆಲಸದ ಸ್ಥಳದಲ್ಲಿ ಘೋರವಾದ ಸದ್ದಿಗೆ ಒಡ್ಡಿಕೊಳ್ಳುವುದು ಮತ್ತು ಶ್ರವಣ ಶಕ್ತಿ ನಷ್ಟದ ಕೌಟುಂಬಿಕ ಇತಿಹಾಸ ಇವುಗಳಲ್ಲಿ ಸೇರಿವೆ. ಆದರೆ ಶ್ರವಣ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಅತ್ಯಾಧುನಿಕ ಪರಿಹಾರೋಪಾಯಗಳು ಈಗ ಲಭ್ಯವಿವೆ.
ಶ್ರವಣ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಿವಿಯಿಂದ ನಿಯಂತ್ರಿಸಲ್ಪಡುವ ನಮ್ಮ ದೇಹದ ಸಮತೋಲನ ಕಾಪಾಡುವಿಕೆಗೂ ಮುಖ್ಯವಾಗಿದೆ. ಈ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಅಡಚಣೆ ಉಂಟಾದರೂ ನಮ್ಮ ದೈನಿಕ ಚಟುವಟಿಕೆಗಳ ಮೇಲೆ ಗಮನಾರ್ಹ ಪ್ರತಿಕೂಲ ಪರಿಣಾಮ ಉಂಟಾಗಬಹುದಾಗಿದೆ. ಹೀಗಾಗಿ ಶ್ರವಣ ಶಕ್ತಿ ನಷ್ಟವನ್ನು ಶೀಘ್ರವಾಗಿ ಪತ್ತೆ ಹಚ್ಚುವುದು ಮತ್ತು ಸೂಕ್ತ ಚಿಕಿತ್ಸೆಯ ಮೂಲಕ ನಿರ್ವಹಿಸುವುದು ಅತ್ಯಗತ್ಯವಾಗಿದೆ. ಶ್ರವಣ ಶಕ್ತಿ ನಷ್ಟವನ್ನು ನಿಭಾಯಿಸುವುದಕ್ಕೆ ಸಕ್ರಿಯ ಹೆಜ್ಜೆಗಳನ್ನು ಇರಿಸುವ ಮೂಲಕ ನಾವು ನಮ್ಮ ಒಟ್ಟಾರೆ ಜೀವನ ಗುಣಮಟ್ಟವನ್ನು ಸುಧಾರಿಸಿಕೊಳ್ಳಬಹುದು ಮತ್ತು ಸ್ವಾವಲಂಬನೆಯನ್ನು ಉಳಿಸಿಕೊಳ್ಳಬಹುದು.
ಎಲ್ಲ ವಯಸ್ಸಿನ ವ್ಯಕ್ತಿಗಳಿಗೆ ಅವರವರಿಗೆ ನಿರ್ದಿಷ್ಟವಾಗಿ ಹೊಂದಿಕೊಳ್ಳುವಂತೆ ರೂಪಿಸಿದ ಸಮಗ್ರ ಮತ್ತು ಅತ್ಯಾಧುನಿಕ ಶ್ರವಣ ಶಕ್ತಿ ಪರೀಕ್ಷೆಯನ್ನು ನಾವು ಒದಗಿಸುತ್ತಿದ್ದೇವೆ. ನಾವು ನಡೆಸುವ ಅತ್ಯಂತ ನಿಖರವಾದ ವಿಶ್ಲೇಷಣೆಯು ಶ್ರವಣ ಶಕ್ತಿ ನಷ್ಟದ ಪ್ರಾಥಮಿಕ ಲಕ್ಷಣವಾಗಿರಬಲ್ಲ ತೀರಾ ಸಣ್ಣ ಪ್ರಮಾಣದ ಬದಲಾವಣೆಯನ್ನು ಕೂಡ ಗುರುತಿಸಬಲ್ಲುದಾಗಿದ್ದು, ಈ ಮೂಲಕ ನಿಮ್ಮ ಶ್ರವಣ ಸಾಮರ್ಥ್ಯವನ್ನು ಖಚಿತವಾಗಿ ಅಳೆಯಬಲ್ಲುದಾಗಿದೆ. ನಿಮ್ಮ ಶ್ರವಣ ಸಾಮರ್ಥ್ಯ ಇನ್ನಷ್ಟು ಕಡಿಮೆಯಾಗದಂತೆ ಕಾಪಾಡುವುದಕ್ಕಾಗಿ ಶ್ರವಣ ಶಕ್ತಿ ನಷ್ಟವನ್ನು ಆದಷ್ಟು ಬೇಗನೆ ಗುರುತಿಸುವುದು ಅತ್ಯಂತ ಮುಖ್ಯವಾಗಿದೆ. ಶ್ರವಣ ಶಕ್ತಿಗೆ ಸಂಬಂಧಿಸಿದ ಯಾವುದೇ ತೊಂದರೆಯನ್ನು ಗುರುತಿಸಿ ಚಿಕಿತ್ಸೆಗೆ ಒಳಪಡಿಸುವುದಕ್ಕಾಗಿ ನವಜಾತ ಶಿಶುಗಳು ಮತ್ತು ಹಿರಿಯರ ಸಹಿತ ಎಲ್ಲ ವಯಸ್ಸಿನವರು ಕೂಡ ಸಂಪೂರ್ಣ ಶ್ರವಣ ಸಾಮರ್ಥ್ಯ ತಪಾಸಣೆಗೆ ಒಳಗಾಗುವುದು ನಿರ್ಣಾಯಕವಾಗಿದೆ. ಇಷ್ಟಲ್ಲದೆ, ತೀರಾ ಗಟ್ಟಿಯಾದ ಸದ್ದುಗದ್ದಲಗಳನ್ನು ಕೇಳಿಸಿಕೊಳ್ಳುವವರು ಮತ್ತು ಯಾವುದೇ ದೀರ್ಘಕಾಲೀನ ಆರೋಗ್ಯ ಸಮಸ್ಯೆಗೆ ತುತ್ತಾಗಿರುವವರು ತಮ್ಮ ಶ್ರವಣ ಆರೋಗ್ಯವನ್ನು ಸುಧಾರಿಸಿಕೊಳ್ಳುವುದಕ್ಕಾಗಿ ಈ ತಪಾಸಣೆಗೆ ಒಳಗಾಗಬೇಕಾಗಿರುತ್ತದೆ. ಈ ಪರೀಕ್ಷೆಯ ಪ್ರಕ್ರಿಯೆಗಳ ಬಗ್ಗೆ ಇನ್ನಷ್ಟು ಮಾಹಿತಿಗಳು ಈ ಕೆಳಗಿವೆ.
ಪ್ಯೂರ್- ಟೋನ್ ಆಡಿಯೋಮೆಟ್ರಿ
ಅತ್ಯಂತ ಕಡಿಮೆ ಸ್ತರದಿಂದ ಉಚ್ಚ ಸ್ತರದ ವರೆಗೆ ವ್ಯಕ್ತಿಯೊಬ್ಬ ವಿವಿಧ ತರಂಗಾಂತರಗಳಲ್ಲಿ ಕೇಳಿಸಿಕೊಳ್ಳಬಹುದಾದ ಅತ್ಯಂತ ಮೃದುವಾದ ಸದ್ದುಗಳನ್ನು ತಿಳಿದುಕೊಳ್ಳಲು ನಡೆಸುವ ಶ್ರವಣ ಪರೀಕ್ಷೆಯೇ ಪ್ಯೂರ್-ಟೋನ್ ಆಡಿಯೋಮೆಟ್ರಿ. ಹೆಡ್‌ಫೋನ್‌ಗಳನ್ನು ಅಥವಾ ಕಿವಿಯೊಳಗೆ ತುರುಕಿಸುವ ಇಯರ್ ಫೋನ್‌ಗಳನ್ನು ಧರಿಸಿ ಪ್ಯೂರ್ ಟೋನ್‌ಗಳನ್ನು ಆಲಿಸುವುದು ಮತ್ತು ಸದ್ದು ಕೇಳಿಸಿದಾಗ ಬಟನ್ ಒತ್ತುವ ಮೂಲಕ ಅಥವಾ ಕೈ ಎತ್ತುವ ಮೂಲಕ ಸಂಕೇತ ನೀಡುವುದು ಇದರಲ್ಲಿ ಸೇರಿರುತ್ತದೆ. ಈ ಪರೀಕ್ಷೆಯು ಶ್ರವಣ ಸಂವೇದನ ಶಕ್ತಿಯನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ ಮತ್ತು ಬೇರೆ ಬೇರೆ ವಿಧವಾದ ಮತ್ತು ಮಟ್ಟದ ಶ್ರವಣ ಶಕ್ತಿ ನಷ್ಟವನ್ನು ಗುರುತಿಸಲು ನೆರವಾಗುತ್ತದೆ.
ಇಂಪೆಡೆನ್ಸ್ ಆಡಿಯೋಮೆಟ್ರಿ
ಇಂಪೆಡೆನ್ಸ್ ಆಡಿಯೋಮೆಟ್ರಿ ಅಥವಾ ಇಮಿಟೆನ್ಸ್ ಆಡಿಯೋಮೆಟ್ರಿ ಎಂಬುದು ಮಧ್ಯ ಕಿವಿಯ ಕಾರ್ಯಚಟುವಟಿಕೆಯನ್ನು ವಿಶ್ಲೇಷಿಸುವ ಒಂದು ವಿಧವಾದ ಶ್ರವಣ ಪರೀಕ್ಷೆ. ಕಿವಿ ತಮಟೆ ಮತ್ತು ಮಧ್ಯ ಕಿವಿಯ ಎಲುಬುಗಳು (ಓಸಿಕಲ್ ಗಳು) ಸದ್ದಿಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಈ ಪರೀಕ್ಷೆ ಅಳೆಯುತ್ತದೆ. ಈ ಪರೀಕ್ಷೆಯಲ್ಲಿ ಮೂರು ಪ್ರಧಾನ ಅಂಗಗಳಿವೆ: ಟಿಂಪಾನೊಮೆಟ್ರಿ, ಅಕೌಸ್ಟಿಕ್ ರಿಫ್ಲೆಕ್ಸ್ ಟೆಸ್ಟಿಂಗ್ ಮತ್ತು ಸ್ಟಾಟಿಕ್ ಅಕೌಸ್ಟಿಕ್ ಇಂಪೆಡೆನ್ಸ್ ಟೆಸ್ಟಿಂಗ್. ಟಿಂಪಾನೊಮೆಟ್ರಿಯು ಕಿವಿತಮಟೆಯ ಚಲನ ಸಾಮರ್ಥ್ಯವನ್ನು ಅಳೆಯುತ್ತದೆ; ಅಕೌಸ್ಟಿಕ್ ರಿಫ್ಲೆಕ್ಸ್ ಪರೀಕ್ಷೆಯು ಗಟ್ಟಿಯಾದ ಸದ್ದುಗಳಿಗೆ ಮಧ್ಯ ಕಿವಿಯ ಸ್ನಾಯುಗಳ ಪ್ರತಿಫಲನ ಸ್ಪಂದನವನ್ನು ಅಳೆಯುತ್ತದೆ; ಸ್ಟಾಟಿಕ್ ಅಕೌಸ್ಟಿಕ್ ಇಂಪೆಡೆನ್ಸ್ ಪರೀಕ್ಷೆಯು ಮಧ್ಯ ಕಿವಿ ಸಂರಚನೆಯ ಕ್ರಮಬದ್ಧತೆ ಮತ್ತು ಒತ್ತಡವನ್ನು ಅಳೆಯುತ್ತದೆ. ಒಟಿಟಿಸ್ ಮೀಡಿಯಾ, ಯೂಸ್ಟಾಶಿಯನ್ ಟ್ಯೂಬ್ ಡಿಸ್‌ಫಂಕ್ಷನ್‌ನಂತಹ ತೊಂದರೆಗಳು ಹಾಗೂ ಮಧ್ಯ ಕಿವಿಯ ಇತರ ಸಮಸ್ಯೆಗಳನ್ನು ಪತ್ತೆ ಹಚ್ಚಲು ಈ ಪರೀಕ್ಷೆಗಳು ಸಹಾಯ ಮಾಡುತ್ತವೆ.
ಓಟೊಅಕೌಸ್ಟಿಕ್ ಎಮಿಶನ್ಸ್
ಓಟೊಅಕೌಸ್ಟಿಕ್ ಎಮಿಶನ್ಸ್ (ಒಎಇಗಳು) ಮಧ್ಯ ಕಿವಿಯಲ್ಲಿ, ವಿಶೇಷವಾಗಿ ಕೊಕ್ಲಿಯಾದಲ್ಲಿರುವ ಕೇಶ ಕೋಶಗಳಿಂದ ಉತ್ಪನ್ನವಾಗುವ ಸದ್ದುಗಳಾಗಿವೆ. ಕಿವಿ ಕಾಲುವೆಯಲ್ಲಿ ಇರಿಸಲಾಗುವ ಸೂಕ್ಷ್ಮ ಸಂವೇದಿ ಮೈಕ್ರೊಫೋನ್‌ಗಳಿಂದ ಈ ಎಮಿಶನ್‌ಗಳನ್ನು ಅಳೆಯುಬಹುದಾಗಿದೆ.
ಬ್ರೈನ್‌ಸ್ಟೆಮ್ ಇವೋಕ್‌ಡ್ ರೆಸ್ಪಾನ್ಸ್ ಆಡಿಯೋಮೆಟ್ರಿ (ಬಿಇಆರ್‌ಎ)
ದಿ ಆಡಿಟರಿ ಬ್ರೈನ್‌ಸ್ಟೆಮ್ ರೆಸ್ಪಾನ್ಸ್ (ಎಬಿಆರ್) ಎಂಬುದು ಪ್ರಚೋದಿತ ಸಂಭವನೀಯತೆಯ ಪರೀಕ್ಷೆಯಾಗಿದ್ದು, ಇದನ್ನು ಸಾಮಾನ್ಯವಾಗಿ ಬ್ರೈನ್‌ಸ್ಟೆಮ್ ಇವೋಕ್‌ಡ್ ರೆಸ್ಪಾನ್ಸ್ ಆಡಿಯೋಮೆಟ್ರಿ (ಬಿಇಆರ್‌ಎ) ಎಂಬುದಾಗಿ ಕರೆಯಲಾಗುತ್ತದೆ. ಎಂಟನೇ ಕ್ರೇನಿಯಲ್ ನರ ಹಾಗೂ ನರಕೇಂದ್ರಗಳು ಮತ್ತು ಮಿದುಳುಬಳ್ಳಿಯ ಮೂಲಗಳಿಂದ ಶಾಬ್ದಿಕ ಪ್ರಚೋದನೆಗಳಿಗೆ ಪ್ರತಿಸ್ಪಂದನೆಯಾಗಿ ಉತ್ಪಾದನೆಯಾಗುವ ಎಲೆಕ್ಟ್ರಿಕಲ್ ಆ್ಯಕ್ಟಿವಿಟಿಯನ್ನು ಈ ಪರೀಕ್ಷೆಯು ಅಳೆಯುತ್ತದೆ.
ಎಬಿಆರ್ ಎಂಬುದು ಶಾಬ್ದಿಕ ಪ್ರಚೋದನೆಗೆ ಪ್ರತಿಸ್ಪಂದನೆಯಾಗಿ ಶ್ರವಣ ನರ ಮತ್ತು ಮಿದುಳುಬಳ್ಳಿಯ ಕಾರ್ಯಸಾಮರ್ಥ್ಯವನ್ನು ವಿಶ್ಲೇಷಿಸುವ ಗಾಯವನ್ನು ಉಂಟುಮಾಡದ ಮತ್ತು ವಸ್ತುನಿಷ್ಠ ಪರೀಕ್ಷೆಯಾಗಿದೆ. ಈ ಪರೀಕ್ಷೆಯ ವೇಳೆ ಸದ್ದಿಗೆ ಪ್ರತಿಸ್ಪಂದನೆಯಾಗಿ ಉತ್ಪಾದನೆಯಾಗುವ ಎಲೆಕ್ಟ್ರಿಕಲ್ ಚಟುವಟಿಕೆಯನ್ನು ಅಳೆಯುವುದಕ್ಕಾಗಿ ತಲೆಯ ಮೇಲೆ ಎಲೆಕ್ಟ್ರೋಡ್‌ಗಳನ್ನು ಇರಿಸಲಾಗುತ್ತದೆ. ಶ್ರವಣ ಸಂವೇದನಶೀಲತೆ, ಆಡಿಟರಿ ನ್ಯೂರೋಪತಿ ಮತ್ತು ಶ್ರವಣ ಮಾರ್ಗದ ಮೇಲೆ ಪ್ರಭಾವ ಬೀರುವಂತಹ ಯಾವುದೇ ನರಶಾಸ್ತ್ರೀಯ ಸಮಸ್ಯೆಗಳನ್ನು ವಿಶ್ಲೇಷಿಸಲು ಎಬಿಆರ್ ಸಹಕಾರಿಯಾಗಿದೆ.
ನವಜಾತ ಶಿಶುಗಳ ಶ್ರವಣ ಸಾಮರ್ಥ್ಯ ಪರೀಕ್ಷೆಯು ಎಬಿಆರ್‌ನ ಪ್ರಧಾನ ವೈದ್ಯಕೀಯ ಆನ್ವಯಿಕತೆ. ಗಾಯವನ್ನು ಉಂಟುಮಾಡದ ಇದರ ಗುಣ ಮತ್ತು ಅತ್ಯುಚ್ಚ ಸಂವೇದನಶೀಲತೆಯಿಂದಾಗಿ ಎಬಿಆರ್ ಅನ್ನು ಶಿಶು ಜನನದ ಬಳಿಕ ಅಲ್ಪಾವಧಿಯಲ್ಲಿಯೇ ಶ್ರವಣ ಶಕ್ತಿ ನಷ್ಟವನ್ನು ಗುರುತಿಸಲು ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ.
ಅತ್ಯಾಧುನಿಕ ಸಮಗ್ರ ಶ್ರವಣ ಪರೀಕ್ಷೆಗಳು
ಒಎಇಗಳು ತಾವಾಗಿ ಉತ್ಪನ್ನವಾದ ವುಗಳಾಗಿರಬಹುದು ಅಥವಾ ಪ್ರಚೋದಿತ ಉತ್ಪಾದನೆಯಾಗಿರ ಬಹುದಾಗಿದ್ದು, ಪ್ರಚೋದಿತ ಒಎಇಗಳನ್ನು ಸಾಮಾನ್ಯವಾಗಿ ಕಿವಿಗೆ ಸದ್ದು ಪ್ರಚೋದಕವೊಂದನ್ನು ಒದಗಿಸುವ ಮೂಲಕ ಉಂಟು ಮಾಡಬಹುದಾಗಿದೆ. ವೈದ್ಯಕೀಯವಾಗಿ ಇವುಗಳನ್ನು ಕೊಕ್ಲಿಯಾದ ಕಾರ್ಯಸಾಮರ್ಥ್ಯವನ್ನು ವಿಶ್ಲೇಷಿಸಲು, ನಿರ್ದಿಷ್ಟವಾಗಿ ನವಜಾತ ಶಿಶುಗಳ ಶ್ರವಣ ಸಾಮರ್ಥ್ಯ ತಪಾಸಣೆಯಲ್ಲಿ ಹಾಗೂ ಶ್ರವಣ ಶಕ್ತಿ ನಷ್ಟವನ್ನು ಪತ್ತೆಹಚ್ಚಲು ಉಪಯೋಗಿಸಲಾಗುತ್ತದೆ.
ನವಜಾತ ಶಿಶು ಶ್ರವಣ ಸಾಮರ್ಥ್ಯ ಪರೀಕ್ಷೆ: ನವಜಾತ ಶಿಶುಗಳ ಶ್ರವಣ ಶಕ್ತಿಯನ್ನು ಶೀಘ್ರವಾಗಿ ಮತ್ತು ಗಾಯವನ್ನು ಉಂಟು ಮಾಡದೆಯೇ ತಪಾಸಿಸಲು ಒಎಇಗಳನ್ನು ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ. ಶ್ರವಣ ಶಕ್ತಿ ನಷ್ಟವನ್ನು ಪತ್ತೆಹಚ್ಚಲು, ಓಟೊಟಾಕ್ಸಿಸಿಟಿಯ ಮೇಲೆ ನಿಗಾ ಇರಿಸಲು, ಶ್ರವಣ ಶಕ್ತಿ ನಷ್ಟದ ವಿಧಗಳ ನಡುವಣ ವ್ಯತ್ಯಾಸವನ್ನು ನಿರ್ಧರಿಸಲು, ಶಸ್ತ್ರಚಿಕಿತ್ಸೆಯ ನಡುವೆ ಕೊಕ್ಲಿಯಾರ್‌ನ ಕಾರ್ಯಸಾಮರ್ಥ್ಯವನ್ನು ವಿಶ್ಲೇಷಿಸಲು ಮತ್ತು ಆಡಿಟರಿ ನ್ಯೂರೋಪತಿಯ ಬಗ್ಗೆ ಹೆಚ್ಚುವರಿ ಮಾಹಿತಿ ಪಡೆಯಲು ಕೂಡ ಓಟೊ ಅಕೌಸ್ಟಿಕ್ ಎಮಿಶನ್ (ಒಎಇಗಳು) ಗಳು ಸಹಾಯ ಮಾಡುತ್ತವೆ.
ವೆಸ್ಟಿಬ್ಯುಲಾರ್ ಇವೋಕ್‌ಡ್ ಮೇಯೋಜೆನಿಕ್ ಪೊಟೆನ್ಶಿಯಲ್ಸ್ (ವಿಇಎಂಪಿ)
ವಿಇಎಂಪಿಯು ಒಳ ಕಿವಿಯಲ್ಲಿ ಇರುವಂತಹ ಓಟೋಲಿಥಿಕ್ ಅಂಗಗಳ ಆರೋಗ್ಯವನ್ನು ವಿಶ್ಲೇಷಿಸಲು ಸಹಾಯ ಮಾಡುವ ಅಮೂಲ್ಯ ತಪಾಸಣ ವಿಧಾನವಾಗಿದೆ. ಒಳ ಕಿವಿಯ ಈ ಅಂಗಗಳು ದೇಹದ ಸಮತೋಲನ ಕಾಪಾಡಿಕೊಳ್ಳಲು ಮತ್ತು ಅಂತರದ ವಿವರ ಮಾಹಿತಿ ಗ್ರಹಿಸುವುದಕ್ಕೆ ನಿರ್ಣಾಯಕವಾಗಿದ್ದು, ಈ ಗಾಯವನ್ನು ಉಂಟು ಮಾಡದ ಪರೀಕ್ಷಾ ವಿಧಾನವು ನಿರ್ದಿಷ್ಟವಾಗಿ ದೇಹ ಸಮತೋಲನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಲು ಉಪಯುಕ್ತವಾಗಿದೆ. ಒಳಕಿವಿಯ ಈ ಅಂಗಗಳ ಕಾರ್ಯಚಟುವಟಿಕೆಯಲ್ಲಿ ಇರಬಹುದಾದ ಯಾವುದೇ ಅಸಹಜತೆಗಳು ಹಲವು ವಿಧವಾದ ವೆಸ್ಟಿಬ್ಯುಲಾರ್ ತೊಂದರೆಗಳಿಗೆ ಕಾರಣವಾಗಬಹುದಾಗಿದೆ.
ಮೆನಿಯರ್ ಡಿಸೀಸ್, ಬಿನೈನ್ ಪಾರೊಕ್ಸಿಸ್ಮಲ್ ಪೊಸಿಶನಲ್ ವರ್ಟಿಗೊ (ಬಿಪಿಪಿವಿ) ಮತ್ತು ಸುಪೀರಿಯರ್ ಕೆನೆಲ್ ಡೆಹಿಸೆನ್ಸ್ ಸಿಂಡ್ರೋಮ್‌ನಂತಹ ಅನಾರೋಗ್ಯಗಳನ್ನು ಪತ್ತೆಹಚ್ಚಲು ವಿಇಎಂಪಿ ವಿಶೇಷವಾಗಿ ಸಹಾಯಕವಾಗಿದೆ. ವಿಇಎಂಪಿಯ ಪ್ರಮುಖ ವೈದ್ಯಕೀಯ ಉಪಯೋಗಗಳಲ್ಲಿ ಒಂದು ಸುಪೀರಿಯರ್ ಕೆನೆಲ್ ಡೆಹಿಸೆನ್ಸ್ ಸಿಂಡ್ರೋಮ್‌ನ್ನು ಪತ್ತೆಹಚ್ಚುವುದಾಗಿದೆ. ಒಳಕಿವಿಯ ಸುಪೀರಿಯರ್ ಅರ್ಧವೃತ್ತಾಕಾರದ ಕಾಲುವೆಯ ಮೇಲ್ಭಾಗದ ಎಲುಬಿನಲ್ಲಿ ಅಸಹಜ ತೆರಪುಗಳಿರುವುದು ಈ ತೊಂದರೆಯ ಲಕ್ಷಣವಾಗಿದೆ.
ವಿಇಎಂಪಿ ನಿರ್ದಿಷ್ಟವಾಗಿ ಸರ್ವಿಕಲ್ ವಿಇಎಂಪಿಯು ಶಾಬ್ದಿಕ ಪ್ರಚೋದನೆಗಳಿಗೆ ಹೆಚ್ಚುವರಿ ಪ್ರತಿಸ್ಪಂದನೆಗಳನ್ನು ಪತ್ತೆಹಚ್ಚಬಲ್ಲುದು. ಶಾಬ್ದಿಕ ಪ್ರಚೋದನೆಗಳಿಗೆ ಹೆಚ್ಚುವರಿ ಪ್ರತಿಸ್ಪಂದನೆಯು ಎಸ್‌ಸಿಡಿಎಸ್ ಇರುವ ಸಾಧ್ಯತೆಯನ್ನು ಸೂಚಿಸುತ್ತದೆ. ಈ ರೋಗಪತ್ತೆಯನ್ನು ಖಚಿತಪಡಿಸಿಕೊಂಡ ಬಳಿಕ ಡೆಹಿಸೆನ್ಸ್‌ನ ಶಸ್ತ್ರಚಿಕಿತ್ಸಾತ್ಮಕ ಸರಿಪಡಿಸುವಿಕೆಯ ಸಹಿತ ಸಮರ್ಪಕವಾದ ಚಿಕಿತ್ಸಾ ಯೋಜನೆಗಳನ್ನು ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಆಡಿಟರಿ ಬ್ರೈನ್ ಸ್ಟೆಮ್ ರೆಸ್ಪಾನ್ಸ್ (ಎಬಿಆರ್) ಮತ್ತು ವೆಸ್ಟಿಬ್ಯುಲಾರ್ ಇವೋಕ್‌ಡ್ ಮೇಯೊಜೆನಿಕ್ ಪೊಟೆನ್ಶಿಯಲ್ (ವಿಇಎಂಪಿ)ಗಳು ಅನುಕ್ರಮವಾಗಿ ಶ್ರವಣ ಮತ್ತು ವೆಸ್ಟಿಬ್ಯುಲಾರ್ ಕಾರ್ಯಸಾಮರ್ಥ್ಯದ ವಿಶ್ಲೇಷಣೆಯಲ್ಲಿ ವ್ಯಾಪಕವಾದ ವೈದ್ಯಕೀಯ ಆನ್ವಯಿಕ ಉಪಯೋಗಗಳನ್ನು ಹೊಂದಿರುವ ಅಮೂಲ್ಯ ನರಶಾಸ್ತ್ರೀಯ ರೋಗಪತ್ತೆ ಪರೀಕ್ಷೆಗಳಾಗಿವೆ.
ನವಜಾತ ಶಿಶುಗಳ ಶ್ರವಣ ಶಕ್ತಿ ತಪಾಸಣೆಯಿಂದ ತೊಡಗಿ ಶಸ್ತ್ರಚಿಕಿತ್ಸೆಯ ನಡುವೆ ನಿಗಾ ಹಾಗೂ ವೆಸ್ಟಿಬ್ಯುಲಾರ್ ತೊಂದರೆಗಳ ಪತ್ತೆಯವರೆಗೆ ವಿವಿಧ ಶ್ರವಣ ಸಂಬಂಧಿ ಮತ್ತು ವೆಸ್ಟಿಬ್ಯುಲಾರ್ ತೊಂದರೆಗಳನ್ನು ಗುರುತಿಸುವುದು, ರೋಗ ನಿರ್ಣಯ ಮತ್ತು ಚಿಕಿತ್ಸೆ ಹಾಗೂ ನಿರ್ವಹಣೆಯಲ್ಲಿ ಎಬಿಆರ್ ಮತ್ತು ವಿಇಎಂಪಿಗಳು ಆಧುನಿಕ ಆರೋಗ್ಯ ಸೇವಾ ರಂಗದಲ್ಲಿ ಅಮೂಲ್ಯ ಪಾತ್ರವನ್ನು ನಿರ್ವಹಿಸುತ್ತಿವೆ.
ನಿಮ್ಮ ಶ್ರವಣ ಸಾಮರ್ಥ್ಯ ಅಥವಾ ದೈಹಿಕ ಸಮತೋಲನದ ವಿಚಾರದಲ್ಲಿ ನಿಮಗೆ ಯಾವುದೇ ಸಂದೇಹಗಳು ಇದ್ದರೆ ಉಡುಪಿಯ ಟಿಎಂಎ ಪೈ ಆಸ್ಪತ್ರೆ ಅಥವಾ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗದಲ್ಲಿ ಶ್ರವಣ ಸಾಮರ್ಥ್ಯ ತಪಾಸಣೆ ಮಾಡಿಸಿಕೊಳ್ಳುವ ಬಗ್ಗೆ ಯೋಜನೆ ಹಾಕಿಕೊಳ್ಳಲು ಇದು ಸಕಾಲ.
ಈ ಸರಳ ಆದರೆ ಸಮಗ್ರವಾದ ತಪಾಸಣೆಗಳು ನಿಮ್ಮ ಒಟ್ಟಾರೆ ಆರೋಗ್ಯದ ಬಗೆಗೆ ಅಮೂಲ್ಯ ಮಾಹಿತಿಗಳನ್ನು ಒದಗಿಸಬಲ್ಲವು ಮತ್ತು ಸಂಭಾವ್ಯ ಸಮಸ್ಯೆಗಳನ್ನು ಶೀಘ್ರವಾಗಿ ಗುರುತಿಸಲು ಸಹಾಯ ಮಾಡಬಲ್ಲವು. ನಿಮ್ಮ ಒಟ್ಟಾರೆ ಸೌಖ್ಯದ ದೃಷ್ಟಿಯಿಂದ ಮುಖ್ಯವಾಗಿರುವ ಈ ಹೆಜ್ಜೆಯನ್ನು ಇರಿಸಲು ಯಾವುದೇ ಸಂಕೋಚ ಬೇಡ.
– ಡಾ| ಅರ್ಚನಾ ಜಿ.
ಅಸೋಸಿಯೇಟ್ ಪ್ರೊಫೆಸರ್,
ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ
ಎಂಸಿಎಚ್‌ಪಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.