T20 World Cup 3ನೇ ಸೂಪರ್ ಓವರ್; ಧೋನಿಗೆ ಮೊದಲ ಗೆಲುವು
Team Udayavani, Jun 3, 2024, 11:37 PM IST
ಬ್ರಿಜ್‌ಟೌನ್ (ಬಾರ್ಬಡಾಸ್): ದೊಡ್ಡ ಕೌತುಕ ಮೂಡಿಸಿದ ಸಣ್ಣ ತಂಡಗಳ ರೋಚಕ ಹಣಾಹಣಿಯೊಂದಕ್ಕೆ ಟಿ20 ವಿಶ್ವಕಪ್ ಸಾಕ್ಷಿಯಾಗಿದೆ. “ಕೆನ್ಸಿಂಗ್ಟನ್ ಓವಲ್’ನಲ್ಲಿ ನಡೆದ “ಬಿ’ ವಿಭಾಗದ ನಮೀಬಿಯಾ-ಒಮಾನ್ ನಡುವಿನ ಪಂದ್ಯ ಟೈಯಲ್ಲಿ ಅಂತ್ಯ ಕಂಡಿತು. ಬಳಿಕ ಸೂಪರ್ ಓವರ್‌ನಲ್ಲಿ ನಮೀಬಿಯಾ ಗೆಲುವು ಸಾಧಿಸಿತು.
ಇದು ಟಿ20 ವಿಶ್ವಕಪ್ ಇತಿಹಾಸದ 3ನೇ ಸೂಪರ್ ಓವರ್ ನಿದರ್ಶನ. 2007ರ ಪ್ರಥಮ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ ನಡುವಿನ ಗ್ರೂಪ್ ಪಂದ್ಯ ಟೈ ಆದಾಗ “ಬೌಲ್ ಔಟ್’ ನಿಯಮವನ್ನು ಅಳವಡಿಸಲಾಗಿತ್ತು.
ಸೂಪರ್ ಓವರ್-1
ಕ್ಯಾಂಡಿಯಲ್ಲಿ ನಡೆದ 2012ರ ಶ್ರೀಲಂಕಾ-ನ್ಯೂಜಿಲ್ಯಾಂಡ್ ನಡುವಿನ ಮುಖಾಮುಖೀ ಟಿ20 ವಿಶ್ವಕಪ್‌ನ ಮೊದಲ ಟೈ ಪಂದ್ಯಕ್ಕೆ ಸಾಕ್ಷಿಯಾಗಿದೆ. ನ್ಯೂಜಿಲ್ಯಾಂಡ್ 7ಕ್ಕೆ 174 ರನ್ ಗಳಿಸಿದರೆ, ಶ್ರೀಲಂಕಾ 6ಕ್ಕೆ 174 ರನ್ ಬಾರಿಸಿತು. ಸೂಪರ್ ಓವರ್‌ನಲ್ಲಿ ಲಂಕಾ ಗೆದ್ದು ಬಂದಿತು. ಸ್ಕೋರ್: ಶ್ರೀಲಂಕಾ-ಒಂದಕ್ಕೆ 13, ನ್ಯೂಜಿಲ್ಯಾಂಡ್-ಒಂದಕ್ಕೆ 7.
ಸೂಪರ್ ಓವರ್-2
ದ್ವಿತೀಯ ಟೈ ಪಂದ್ಯಕ್ಕೂ 2012ರ ವಿಶ್ವಕಪ್, ಕ್ಯಾಂಡಿ ಪಂದ್ಯ ಹಾಗೂ ನ್ಯೂಜಿಲ್ಯಾಂಡ್ ಸಾಕ್ಷಿಯಾದದ್ದು ಕಾಕತಾಳೀಯ. ಎದುರಾಳಿ ವೆಸ್ಟ್ ಇಂಡೀಸ್. ವಿಂಡೀಸ್ ಪಡೆ 19.3 ಓವರ್‌ಗಳಲ್ಲಿ 139 ರನ್ ಗಳಿಸಿದರೆ, ನ್ಯೂಜಿಲ್ಯಾಂಡ್ 7ಕ್ಕೆ 139 ರನ್ ಮಾಡಿತು. ಸೂಪರ್ ಓವರ್‌ನಲ್ಲಿ ಮತ್ತೆ ನ್ಯೂಜಿಲ್ಯಾಂಡ್ ಸೋತಿತು. ಸ್ಕೋರ್: ನ್ಯೂಜಿಲ್ಯಾಂಡ್-17/0, ವೆಸ್ಟ್ ಇಂಡೀಸ್-19/0.
ಭಾರತ-ಪಾಕ್ ಬೌಲ್ ಔಟ್!
2007ರ ಮೊದಲ ಟಿ20 ವಿಶ್ವಕಪ್ ವೇಳೆ ಪಂದ್ಯ ಟೈ ಆದಾಗ ಸೂಪರ್ ಓವರ್ ನಿಯಮ ಇರಲಿಲ್ಲ. ಅದೇನೂ ಕಾಕತಾಳೀಯವೋ, ಭಾರತ-ಪಾಕಿಸ್ಥಾನ ನಡುವೆ ಡರ್ಬನ್‌ನಲ್ಲಿ ನಡೆದ ಲೀಗ್ ಪಂದ್ಯವೇ ಟೈ ಆಯಿತು! ಭಾರತ 9ಕ್ಕೆ 141, ಪಾಕಿಸ್ಥಾನ 7ಕ್ಕೆ 141 ರನ್ ಮಾಡಿತ್ತು.
ಆಗ ಟೈ ಬ್ರೇಕರ್‌ಗಾಗಿ ಅಳವಡಿಸಿದ್ದು “ಬಾಲ್ ಔಟ್’ ನಿಯಮ. ಅಂದರೆ, ಬ್ಯಾಟಿಂಗ್ ಎಂಡ್‌ನಲ್ಲಿರುವ ಸ್ಟಂಪ್‌ಗೆ ಬೌಲರ್ ಚೆಂಡೆಸೆಯುವುದು. ಅಲ್ಲಿ ಬ್ಯಾಟರ್ ನಿಂತಿರುವುದಿಲ್ಲ, ಕೇವಲ ಕೀಪರ್ ಮಾತ್ರ. ಚೆಂಡು ಸ್ಟಂಪ್‌ಗೆ ತಗಲಬೇಕಿತ್ತು. ಭಾರತ ಇಲ್ಲಿ 3-0 ಅಂತರದ ಮೇಲುಗೈ ಸಾಧಿಸಿತು. ಭಾರತದ ಮೂವರೂ ಎಸೆದ ಚೆಂಡು ಸ್ಟಂಪ್‌ಗೆ ಹೋಗಿ ಬಡಿದಿತ್ತು. ಪಾಕಿಸ್ಥಾನದ ಮೂರೂ ಎಸೆತಗಳು ಗುರಿ ತಪ್ಪಿದವು.
ಅಂದಹಾಗೆ ಭಾರತದ ಪರ ಚೆಂಡೆಸೆದವರು ಯಾರು ಗೊತ್ತೇ? ವೀರೇಂದ್ರ ಸೆಹವಾಗ್, ಹರ್ಭಜನ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ! ಪಾಕಿಸ್ಥಾನ ಪರ ಯಾಸಿರ್ ಅರಾಫತ್, ಉಮರ್ ಗುಲ್ ಮತ್ತು ಶಾಹಿದ್ ಅಫ್ರಿದಿ ಬೌಲಿಂಗ್ ಮಾಡಿದ್ದರು.
ಧೋನಿಗೆ ಮೊದಲ ಗೆಲುವು
ಇಲ್ಲಿ ಇನ್ನೊಂದು ವಿಶೇಷವಿದೆ. ಇದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಲಿದ ಮೊದಲ ಜಯವಾಗಿತ್ತು! ಇದು ಕೂಟದಲ್ಲಿ ಭಾರತ ಆಡಿದ ದ್ವಿತೀಯ ಪಂದ್ಯ. ಸ್ಕಾಟ್ಲೆಂಡ್ ಎದುರಿನ ಮೊದಲ ಮುಖಾಮುಖೀ ರದ್ದುಗೊಂಡಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.