T20 World Cup: ಟೀಮ್ ಇಂಡಿಯಾ ಇಂದು ಕಣಕ್ಕೆ: ಅಪಾಯಕಾರಿ ಐರ್ಲೆಂಡ್ ಎದುರಾಳಿ
Team Udayavani, Jun 5, 2024, 6:57 AM IST
ನ್ಯೂಯಾರ್ಕ್: ಕಳೆದ ಕೆಲವು ತಿಂಗಳ ಕಾಲ ಐಪಿಎಲ್ ಗುಂಗಿನಲ್ಲಿದ್ದ ಟೀಮ್ ಇಂಡಿಯಾ ಆಟಗಾರರಿನ್ನು ಟಿ20 ವಿಶ್ವಕಪ್ ಹೋರಾಟಕ್ಕೆ ಅಣಿಯಾಗಬೇಕಿದೆ. ಬುಧವಾರ ನ್ಯೂಯಾರ್ಕ್ ನಲ್ಲಿ ನಡೆಯುವ “ಎ’ ವಿಭಾಗದ ತನ್ನ ಮೊದಲ ಮುಖಾಮುಖೀಯಲ್ಲಿ ಅಪಾಯಕಾರಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ.
ತವರಲ್ಲೇ ನಡೆದ ಕಳೆದ ಏಕದಿನ ವಿಶ್ವಕಪ್ ವೇಳೆ ನೆಚ್ಚಿನ ತಂಡವಾಗಿದ್ದ ಭಾರತ, ಅಜೇಯವಾಗಿ ಫೈನಲ್ ತನಕ ಅಭಿಯಾನ ನಡೆಸಿತ್ತು. ಟಿ20 ವಿಶ್ವಕಪ್‌ನಲ್ಲೂ ಭಾರತ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದೆ. ಆದರೆ ರೋಹಿತ್ ಪಡೆಯನ್ನು “ಫೇವರಿಟ್’ ಎಂದು ಗುರುತಿಸಲಾಗದು. “ಎ’ ವಿಭಾಗದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನದ ಸವಾಲು ಎದುರಾಗಲಿದೆ. ಆತಿಥೇಯ ಅಮೆರಿಕ ಕೂಡ ಅಪಾಯಕಾರಿ. ಕೆನಡಾವನ್ನು ಲೆಕ್ಕದ ಭರ್ತಿಯ ತಂಡ ಎನ್ನಬಹುದು.
2007ರ ಚೊಚ್ಚಲ ಪಂದ್ಯಾವಳಿಯಲ್ಲಿ ಧೋನಿ ಸಾರಥ್ಯದಲ್ಲಿ ಚಾಂಪಿಯನ್ ಆದ ಬಳಿಕ ಮತ್ತೆ ಭಾರತ ಟ್ರೋಫಿ ಎತ್ತಿಲ್ಲ. 2014ರ ಢಾಕಾ ಕೂಟದಲ್ಲಿ ಫೈನಲ್ ಪ್ರವೇಶಿಸಿತಾದರೂ ಅಲ್ಲಿ ಶ್ರೀಲಂಕಾಕ್ಕೆ ಶರಣಾಯಿತು. ಆಗಲೂ ಧೋನಿಯೇ ನಾಯಕರಾಗಿದ್ದರು.
ಈಗಿನ ಲೆಕ್ಕಾಚಾರದಂತೆ ಭಾರತ ಸೂಪರ್-8 ಪ್ರವೇಶಿಸಿ, ಅನಂತರ ಸೆಮಿಫೈನಲ್ ತಲುಬಹುದು. ಅನಂತರದ ಹಾದಿ ತುಸು ಕಠಿನ. ಇಲ್ಲಿ ಸಾಧನೆಯ ಜತೆಗೆ ಅದೃಷ್ಟದ ಪಾತ್ರವೂ ನಿರ್ಣಾಯಕವಾಗುತ್ತದೆ. ಆದರೆ ರೋಹಿತ್ ಶರ್ಮ “ಲಕ್ಕಿ ಕ್ಯಾಪ್ಟನ್’ ಅಲ್ಲ!
ರೋಹಿತ್-ಕೊಹ್ಲಿ ಓಪನಿಂಗ್?
ಇದು ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಆಡುತ್ತಿರುವ ಕೊನೆಯ ವಿಶ್ವಕಪ್ ಆಗಿರುವ ಎಲ್ಲ ಸಾಧ್ಯತೆ ಇದೆ. ಈ ಸಲವೂ ಇವರಿಬ್ಬರು ಆಡುವ ಸಾಧ್ಯತೆ ಇಲ್ಲ ಎಂಬುದು ಕೆಲವು ತಿಂಗಳ ಹಿಂದೆ ಸುದ್ದಿಯಾಗಿತ್ತು. ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿಸುವ ಕುರಿತೂ ಮಾತುಕತೆ ನಡೆದಿತ್ತು. ಅಂತಿಮವಾಗಿ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಆಯ್ಕೆಯಾದರು.
ಈಗ ಇವರಿಬ್ಬರೇ ಟೀಮ್ ಇಂಡಿಯಾ ಇನ್ನಿಂಗ್ಸ್ ಆರಂಭಿಸಬಹುದೇ ಎಂಬುದೊಂದು ಪ್ರಶ್ನೆ. ಯಶಸ್ವಿ ಜೈಸ್ವಾಲ್ ಓಪನಿಂಗ್ ರೇಸ್‌ನಲ್ಲಿರುವ ಮತ್ತೋರ್ವ ಆಟಗಾರ. ಒಂದು ವೇಳೆ ಕೊಹ್ಲಿ ಓಪನಿಂಗ್ ಬಂದರೆ ಜೈಸ್ವಾಲ್ ವನ್‌ಡೌನ್‌ನಲ್ಲಿ ಬರಬಹುದು. ಅನಂತರದ ಬ್ಯಾಟಿಂಗ್ ಲೈನ್‌ಅಪ್ ನಿರೀಕ್ಷಿತ. ಸೂರ್ಯ, ಪಂತ್, ಪಾಂಡ್ಯ, ಜಡೇಜ… ಹೀಗೆ ಮುಂದುವರಿಯುತ್ತದೆ. ಕಳೆದ ಐಪಿಎಲ್ ಸಾಧನೆಯನ್ನೇ ಮಾನದಂಡವಾಗಿ ಇರಿಸಿಕೊಂಡರೆ ಕೊಹ್ಲಿ ಹೊರತುಪಡಿಸಿ ಉಳಿದವರ್ಯಾರೂ ರನ್ ಪ್ರವಾಹ ಹರಿಸಿಲ್ಲ. ಆದರೆ ನ್ಯೂಯಾರ್ಕ್‌ನಲ್ಲಿ ರನ್ ಪ್ರವಾಹ ಹರಿದು ಬರುವುದು ಕೂಡ ಅನುಮಾನವೇ.
ನಿಧಾನ ಗತಿಯ ಟ್ರ್ಯಾಕ್ ಮೇಲೆ ಭಾರತದ ಬೌಲಿಂಗ್ ಹೆಚ್ಚಿನ ಯಶಸ್ಸು ಕಾಣುವ ಎಲ್ಲ ಸಾಧ್ಯತೆ ಇದೆ. ಬುಮ್ರಾ, ಚಹಲ್, ಅಕ್ಷರ್, ಕುಲದೀಪ್ ಘಾತಕವಾಗಿ ಪರಿಗಣಿಸಬಹುದು. ಇತ್ತ ಭಾರತದ ಬ್ಯಾಟರ್ ಜಾರ್ಜ್ ಡಾಕ್ರೆಲ್ ಅವರ ಎಡಗೈ ಸ್ಪಿನ್ ದಾಳಿಯನ್ನು ಹೇಗೆ ನಿಭಾಯಿಸಿಯಾರು ಎಂಬ ಕುತೂಹಲವಿದೆ.
ಐರ್ಲೆಂಡ್ ಈ ಕೂಟದ ಅಪಾಯಕಾರಿ ತಂಡಗಳಲ್ಲೊಂದು. ನಾಯಕ ಸ್ಟರ್ಲಿಂಗ್, ಬಾಲ್ಬಿರ್ನಿ, ಕ್ಯಾಂಫರ್, ಲಿಟ್ಲ, ಟ್ಯುಕರ್ ಅವರೆಲ್ಲ ಅಂತಾರಾಷ್ಟ್ರೀಯ ಕ್ರಿಕೆಟಿನ ಧಾರಾಳ ಅನುಭವಿಗಳು.
ಒಮ್ಮೆಯಷ್ಟೇ ಮುಖಾಮುಖಿ
ಭಾರತ-ಐರ್ಲೆಂಡ್ ಟಿ20 ವಿಶ್ವಕಪ್‌ನಲ್ಲಿ ಒಮ್ಮೆ ಯಷ್ಟೇ ಎದುರಾಗಿವೆ. ಅದು 2009ರ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ 18 ಓವರ್‌ಗಳ ಪಂದ್ಯವಾಗಿತ್ತು. ಐರ್ಲೆಂಡ್ 8ಕ್ಕೆ 112 ರನ್ನಿಗೆ ಕುಸಿದಿತ್ತು. ಭಾರತ 15 ಎಸೆತ ಉಳಿದಿರುವಾಗಲೇ 8 ವಿಕೆಟ್‌ಗಳ ಜಯ ಸಾಧಿಸಿತ್ತು. ಜಹೀರ್ ಖಾನ್ 4 ವಿಕೆಟ್ ಉರುಳಿಸಿದರೆ, ರೋಹಿತ್ ಅಜೇಯ 52, ಗಂಭೀರ್ 37 ರನ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.