ರಾಜ್ಯದಲ್ಲಿ ಫಲಿಸಿದ ಮೈತ್ರಿ ಮ್ಯಾಜಿಕ್ ; ಮೈತ್ರಿಯಿಂದ ಬಿಜೆಪಿ- ಜೆಡಿಎಸ್ ಎರಡಕ್ಕೂ ಲಾಭ
ಸಿಂಗಲ್ ಡಿಜಿಟ್‌ನಲ್ಲೇ ಕಾಂಗ್ರೆಸ್ ತೃಪ್ತಿ ; ಫಲಿಸದ ಗ್ಯಾರಂಟಿ ಯೋಜನೆ
Team Udayavani, Jun 5, 2024, 6:30 AM IST
ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಫಲಿತಾಂಶ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರು ಪಕ್ಷಗಳಿಗೂ “ಸಿಹಿ-ಕಹಿ’ ಅನುಭವ ನೀಡಿದೆ. ಕೆಲವು ಕಡೆ ಅಚ್ಚರಿ ಹಾಗೂ ಆಘಾತಕಾರಿ ಫಲಿತಾಂಶ ನೀಡುವ ಮೂಲಕ ರಾಜ್ಯದ ಮತದಾರರು “ಎಚ್ಚರಿಕೆ’ ಸಂದೇಶ ನೀಡಿದ್ದಾರೆ. ಯಾರಿಗೂ ಸಂತೋಷವೂ ಇಲ್ಲ- ದುಃಖವೂ ಇಲ್ಲ ಎಂಬ “ಸಮಾಧಾನಕರ’ ಫಲಿತಾಂಶ ಇದಾಗಿದೆ.
ಕರ್ನಾಟಕದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಕೂಟ ಅತ್ಯಧಿಕ 19 (ಬಿಜೆಪಿ 17 ಹಾಗೂ ಜೆಡಿಎಸ್ 2) ಸ್ಥಾನ ಗೆಲ್ಲುವ ಮೂಲಕ ಯಶಸ್ವಿಯಾಗಿದೆ. ಜತೆಗೆ ಆಡಳಿತಾರೂಢ ಕಾಂಗ್ರೆಸ್‌ಗೆ ಮುಖಭಂಗ ಉಂಟು ಮಾಡಿದ್ದರೆ, 5 ಗ್ಯಾರಂಟಿ ಯೋಜನೆಗಳನ್ನೇ ನಂಬಿ ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ಕೇವಲ 9 ಕಡೆ ಗೆಲ್ಲುವಲ್ಲಿ ಮಾತ್ರ ಸಾಧ್ಯವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು ಕೊಟ್ಟಿದ್ದ ಮತದಾರರು ಈಗ ಸರ್ಜರಿ ಮಾಡಿದ್ದಾರೆ.
ಕಳೆದ 2019ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ (25) ಗಳಿಸಿದ್ದರಲ್ಲಿ 8 ಸ್ಥಾನಗಳನ್ನು ಕಳೆದುಕೊಂಡು ಭಾರೀ ನಷ್ಟ ಅನುಭವಿಸಿದೆ. ಆದರೆ ಈ ಸಲದ ಒಟ್ಟಾರೆ ಫಲಿತಾಂಶದಲ್ಲಿ ಬಿಜೆಪಿಯೇ ಉಳಿದ ಎರಡು ಪಕ್ಷಕ್ಕಿಂತ ಅತ್ಯಧಿಕ (17) ಸ್ಥಾನ ಗಳಿಸಿದೆ ಎಂಬುದಷ್ಟೇ ಸಮಾಧಾನ. ಇನ್ನು ಕಳೆದ ಸಲ ಒಂದೇ ಕಡೆ ಗೆದ್ದಿದ್ದ ಕಾಂಗ್ರೆಸ್ ಈ ಸಲ ತನ್ನ ಸಾಮರ್ಥ್ಯವನ್ನು 1 ರಿಂದ 9ಕ್ಕೆ ವೃದ್ಧಿಸಿಕೊಂಡಿರುವುದು ದೊಡ್ಡ ಸಾಧನೆ. ಇನ್ನು ಜೆಡಿಎಸ್ ವಿಷಯಕ್ಕೆ ಬಂದರೆ 1 ರಿಂದ 2ಕ್ಕೆ ತನ್ನ ಸಂಖ್ಯಾಬಲ ಹೆಚ್ಚಿಸಿಕೊಂಡಿರುವುದೇ ಆ ಪಕ್ಷದ ಪಾಲಿಗೆ ಖುಷಿಯ ಸಂಗತಿ.
ಕಲ್ಯಾಣ ಕರ್ನಾಟಕದ 5 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದು, ಬಿಜೆಪಿ ಸಾಧನೆ ಶೂನ್ಯ. ಕಾಂಗ್ರೆಸ್ ಗೆಲುವಿನ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮ ಕೆಲಸ ಮಾಡಿದೆ. ಕರಾವಳಿಯ ಮೂರು ಕ್ಷೇತ್ರಗಳು ಮತ್ತೆ ಬಿಜೆಪಿ ಪಾಲಾಗಿವೆ. ಅದೇ ರೀತಿ ಬೆಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದ 11 ಕ್ಷೇತ್ರಗಳ ಪೈಕಿ 7 ಕಡೆ ಬಿಜೆಪಿ ಗೆದ್ದಿದ್ದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ತಲಾ ಎರಡೆರಡು ಸ್ಥಾನ ಗೆದ್ದಿವೆ. ಒಕ್ಕಲಿಗರ ಪ್ರಾಬಲ್ಯವಿರುವ ಈ ಭಾಗದಲ್ಲಿ ಮೈತ್ರಿ ಫಲ ಕೊಟ್ಟಿದೆ. ಒಂದು ವೇಳೆ ಮೈತ್ರಿ ಇಲ್ಲದಿದ್ದರೆ ಬಿಜೆಪಿ ಸಂಖ್ಯೆ ಮತ್ತಷ್ಟ ಇಳಿಕೆಯಾಗುತ್ತಿತ್ತು. ಜತೆಗೆ ಕಾಂಗ್ರೆಸ್‌ಗೆ ಗ್ಯಾರಂಟಿಗಳು ಕೈಕೊಟ್ಟಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಸಹೋದರರಿಗೆ ಶಾಕ್: ವಿಶೇಷ ಅಚ್ಚರಿ ಹಾಗೂ ಆಘಾ ತಕಾರಿ ಫಲಿತಾಂಶವೆಂದರೆ ರಾಜ್ಯದ ಹೈವೋಲ್ಟೆàಜ್ ಕ್ಷೇತ್ರವೆಂದೇ ಹೆಸರಾಗಿದ್ದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಹಾಲಿ ಸಂಸದ ಡಿ.ಕೆ.ಸುರೇಶ್ ಅವರು ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಳಿಯ ಡಾ|ಸಿ.ಎನ್.ಮಂಜುನಾಥ್ ವಿರುದ್ಧ ಹೀನಾಯ ಸೋಲು ಅನುಭವಿ ಸಿರುವುದು ಸಹೋದರರಿಗೆ ರಾಜಕೀಯವಾಗಿ ಸಾಕಷ್ಟು ಹಿನ್ನಡೆ ಅಗಿದೆ. ಚುನಾವಣೆ ವೇಳೆ ದೇವೇಗೌಡರ ಕುಟುಂಬ ಹಾಗೂ ಡಿ.ಕೆ.ಕುಟುಂಬದ ನಡುವೆ ನಡೆದ ಜಿದ್ದಾಜಿದ್ದಿನ ರಾಜಕಾರಣದಲ್ಲಿ ಅಂತಿಮವಾಗಿ ದೊಡ್ಡ ಗೌಡರ ಕುಟುಂಬ ನಗೆ ಬೀರುವ ಮೂಲಕ ಸೇಡು ತೀರಿಸಿಕೊಂಡಿದೆ.
ಇನ್ನೊಂದೆಡೆ ಮಂಡ್ಯದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸೋಲಿಸಲು ಇಡೀ ಸರಕಾರವೇ ಟೊಂಕ ಕಟ್ಟಿ ನಿಂತಿತ್ತು. ಉದ್ಯಮಿ ಹಾಗೂ ಶ್ರೀಮಂತ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಕಣಕ್ಕಿ ಳಿಸಿದ್ದ ಕಾಂಗ್ರೆಸ್ ಹೇಗಾದರೂ ಮಾಡಿ ಎಚ್‌ಡಿಕೆಗೆ ಮಣ್ಣು ಮುಕ್ಕಿಸಬೇಕೆಂದು ಎಲ್ಲ ತಂತ್ರಗಾರಿಕೆ ನಡೆಸಿತು. ಅಂತಿಮವಾಗಿ ಮಾಜಿ ಸಿಎಂ ಭರ್ಜರಿ ಮತಗಳ ಅಂತರದಿಂದ ಗೆಲ್ಲುವ ಮೂಲಕ ಮಂಡ್ಯ ಮತ್ತೆ ಜೆಡಿಎಸ್ ತೆಕ್ಕೆಗೆ ಒಲಿದಿದೆ. ಮಂಡ್ಯದಲ್ಲಿ 7 ಮಂದಿ ಕಾಂಗ್ರೆಸ್ ಶಾಸಕರಿದ್ದರೂ ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ. ಸಚಿವ ಚಲುವರಾಯಸ್ವಾಮಿ ಮುಖಭಂಗ ಅನುಭವಿಸುವಂತಾಗಿದೆ.
ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ಮೈಸೂರಿನಿಂದ ಬಿಜೆಪಿಯ ಯದುವೀರ್ ಒಡೆಯರ್ ಅವರು ಕಾಂಗ್ರೆಸ್‌ನ ಲಕ್ಷ್ಮಣ ಅವರನ್ನು ಸೋಲಿಸುವ ಮೂಲಕ ಅರಮನೆಯಿಂದ ಸಂಸತ್ ಪ್ರವೇಶಿಸಿದ್ದಾರೆ. ಸ್ವಕ್ಷೇತ್ರದಲ್ಲೇ ಕಾಂಗ್ರೆಸ್ ಸೋತಿರುವುದು ಸಿಎಂಗೆ ಒಂದು ರೀತಿ ಮುಜುಗರ ತಂದಿದೆ.
3 ದಶಕಗಳ ಬಳಿಕ ಕಾಂಗ್ರೆಸ್: ಅಶ್ಲೀಲ ವೀಡಿಯೋಗಳ ಪೈನ್‌ಡ್ರೈವ್ ಪ್ರಕರಣದಲ್ಲಿ ದೇಶದ ಗಮನ ಸೆಳೆದಿದ್ದ ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರು ತಮ್ಮ ರಾಜಕೀಯ ಎದುರಾಳಿ ಕುಟುಂಬ ದಿವಂಗತ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ವಿರುದ್ಧ ಸೋಲು ಅನುಭವಿಸುವ ಮೂಲಕ 3 ದಶಕಗಳ ಬಳಿಕ ಹಾಸನ ಮತ್ತೆ ಕಾಂಗ್ರೆಸ್ ಮಡಿಲಿಗೆ ಸೇರಿದೆ. ಇದು ದೇವೇಗೌಡರ ಕುಟುಂಬಕ್ಕೆ ರಾಜಕೀಯವಾಗಿ ಸಾಕಷ್ಟು ಪೆಟ್ಟು ನೀಡಿದೆ.
ಇನ್ನು 13 ಮಂದಿ ಹಾಲಿ ಸಂಸದರ ಪೈಕಿ ಹಾಸನದ ಪ್ರಜ್ವಲ್ ರೇವಣ್ಣ, ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ 6 ಮಂದಿ ಸೋತು ಮನೆ ಸೇರಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದಲ್ಲಿ 5ನೇ ಬಾರಿಗೆ ಗೆಲುವು ಸಾಧಿಸಿದ್ದರೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷೇತ್ರ ಬದಲಾಯಿಸಿಯೂ ಬೆಂಗಳೂರು ಉತ್ತರದಿಂದ 3ನೇ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಶಿವಮೊಗ್ಗದಲ್ಲಿ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಗೆಲ್ಲುವ ಮೂಲಕ ಕಾಂಗ್ರೆಸ್‌ನ ಗೀತಾ ಶಿವರಾಜಕುಮಾರ್ 2ನೇ ಬಾರಿಗೆ ಸೋಲು ಕಂಡಿದ್ದು ಸಹೋದರ ಮಧು ಬಂಗಾರಪ್ಪಗೆ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ , ಸಚಿವರಾದ ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್, ಸತೀಶ್ ಜಾರಕಿಹೊಳಿ ಪುತ್ರ ಪ್ರಿಯಾಂಕಾ ಜಾರಕಿಹೊಳಿ, ಈಶ್ವರ ಖಂಡ್ರೆ ಪುತ್ರ ಸಾಗರ ಖಂಡ್ರೆ, ಎಸ್.ಎಸ್.ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಗೆಲುವು ಸಾಧಿಸಿದ್ದಾರೆ. ಇನ್ನು ಸಚಿವರಾದ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್, ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿ, ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಪತ್ನಿ ಗಾಯಿತ್ರಿ ಅವರು ಸೋಲು ಅನುಭವಿಸಿದ್ದಾರೆ.
ಇನ್ನು ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರು ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಎರಡು ಕಡೆ ಸೋತಿದ್ದ ಮಾಜಿ ಸಚಿವ ವಿ.ಸೋಮಣ್ಣ ಕೊನೆಗೂ ತುಮಕೂರಿನಲ್ಲಿ ನಗೆ ಬೀರಿದ್ದಾರೆ. ಅದೇ ರೀತಿ ಚಿಕ್ಕಬಳ್ಳಾಪುರದಿಂದ ಡಾ| ಕೆ.ಸುಧಾಕರ್ ಗೆಲುವು ಕಂಡಿದ್ದಾರೆ.
ಮತ ಗಳಿಕೆ ಎಷ್ಟು?
ಕಳೆದ ಸಲ 27 ಕಡೆ ಸ್ಪರ್ಧಿಸಿ ಶೇ.51.75 ರಷ್ಟು ಮತ ಗಳಿಸಿದ್ದ ಬಿಜೆಪಿ ಈ ಸಲ 25 ಕಡೆ ಸ್ಪರ್ಧಿಸಿ 46.06 ರಷ್ಟು ಮತ ಗಳಿಸಿದೆ. ಕಳೆದ ಸಲ ಮಂಡ್ಯ ದಲ್ಲಿ ಬಿಜೆಪಿಯು ಸುಮಲತಾ ಅವರನ್ನು ಬೆಂಬಲಿತ್ತು. ಆಗ ಕಾಂಗ್ರೆಸ್‌ನ ಮಿತ್ರಪಕ್ಷವಾಗಿದ್ದ ಜೆಡಿಎಸ್ 7 ಕಡೆ ಸ್ಪರ್ಧಿಸಿ ಕೇವಲ 9.74 ರಷ್ಟು ಮತ ಗಳಿಸಿತ್ತು. ಈ ಸಲ ಬಿಜೆಪಿಯ ಮಿತ್ರ ಪಕ್ಷವಾಗಿರುವ ಜೆಡಿಎಸ್ 3 ಕಡೆ ಸ್ಪರ್ಧಿಸಿ ಶೇ.5.60 ರಷ್ಟು ಮತಗಳಿಸಿದೆ. ಇನ್ನು ಕಳೆದ ಸಲ 21 ಕಡೆ ಸ್ಪರ್ಧಿಸಿದ್ದ ಕಾಂಗ್ರೆಸ್ ಶೇ.32.11 ರಷ್ಟು ಮತಗಳಿ ಸಿತ್ತು. ಈ ಸಲ ಏಕಾಂಗಿಯಾಗಿ 28 ಕಡೆಯೂ ಸ್ಪರ್ಧಿಸಿ ಶೇ.45.43 ರಷ್ಟು ಮತ ಗಳಿಸಿದೆ.
-ಎಂ.ಎನ್.ಗುರುಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.