Rainy Days Memories: ಮಳೆಯಲ್ಲಿ ಸಂಭ್ರಮ ಮನದ ತುಂಬ ಚಂದ್ರಮ!
Team Udayavani, Jun 9, 2024, 11:59 AM IST
ಧೋ ಎಂದು ಸುರಿವ ಮಳೆ, ಚಿಟಪಟ ಮಳೆ, ಜಿಟಿಜಿಟಿಯಾಗಿ ಸುರಿಯುತ್ತಲೇ ಇರುವ ಮಳೆ…ಮಳೆಗಾಲ ಬಂತೆಂದರೆ ಮಳೆ ನಮ್ಮ ಹೃದಯವನ್ನೂ ತಂಪಾಗಿಸಿಬಿಡುತ್ತದೆ. ಮಳೆ ಬರುವ ಮುನ್ನ ಒಂದು ಮಳೆಗಾಗಿ ಎಷ್ಟೊಂದು ಹಪಹಪಿಸಿಬಿಡುತ್ತೇವೆ. ಒಂದು ಬಾರಿ ಸುರಿದ ಮೇಲೆ ಇಳೆಯಂತೆ ನಮ್ಮ ಮನಸ್ಸೂ ಹಗುರಾಗಿ ಬಿಡುತ್ತದೆ. ಸೃಷ್ಟಿಯ ಜೀವಕಳೆ ಮಳೆಯನ್ನವಲಂಬಿಸಿದೆ. ಮಳೆಗೆ ಕೊಡೆಯೊಳಗೆ ಸೇರಿಕೊಂಡಂತೆ, ಮಳೆಯ ಜೊತೆಗೆ ಸೇರಿಕೊಂಡ ನೆನಪುಗಳೂ ಅಷ್ಟೇ ಚೇತೋಹಾರಿ. ಅವು, ಮಳೆಯ ಸರಸರ ಸದ್ದಿನೊಂದಿಗೆ ಸರಕ್ಕನೆ ನಮ್ಮ ಕಣ್ಣ ಮುಂದೆ ಬಂದುಬಿಡುತ್ತವೆ.
ಅದರಲ್ಲೂ ಬಾಲ್ಯಕ್ಕೆ ಬಣ್ಣ ತುಂಬಿದ ಮಳೆಯ ನೆನಪುಗಳು. ಗಾಳಿಗೆ ಉಲ್ಟಾ ಹೊಡೆದ ಕೊಡೆ, ತೋಡಿನ ನೀರಿನಲ್ಲಿ ಹರಿ ಬಿಡುವ ಕಾಗದದ ದೋಣಿ, ತೋಡು ದಾಟುವಾಗ ಬೊಳ್ಳದಲ್ಲಿ ಹೋದ ಚಪ್ಪಲಿ, ಮಳೆಯಲ್ಲಿ ಬೇಕಂತಲೇ ಒದ್ದೆಯಾಗಿಕೊಂಡು ಹೋಗಿ ಮೇಷ್ಟ್ರಲ್ಲಿ ಶಾಲೆಗೆ ರಜೆ ಕೇಳಿದ್ದು, ಬರುವ ದಾರಿಯಲ್ಲಿ ಗದ್ದೆಯ ಕೆಸರಿನಲ್ಲೋ, ತೋಡಿನ ನೀರಿನಲ್ಲೋ ಆಟವಾಡುತ್ತಾ ಬಾಲ್ಯದ ದಿನಗಳನ್ನು ಎಷ್ಟು ಚಂದ ವಾಗಿ ಕಳೆದಿದ್ದೆವು… ಈಗ ಬೇಕೆಂದರೂ ಅಂತಹ ದಿನಗಳು ವಾಪಸ್ ಬರಲಾರದು. ಈಗ ಗದ್ದೆ ತೋಡು ದಾಟಿಕೊಂಡು ಶಾಲೆಗೆ ಹೋಗಬೇಕಾದ ಪ್ರಸಂಗಗಳೇ ವಿರಳ.
ಅದು ಬೆರಗಿನ ಬದುಕು…
ಹಳ್ಳಿಗಳಲ್ಲಿ ಮಳೆಗಾಲಕ್ಕಾಗಿ ನಡೆಸುವ ತಯಾರಿಯೂ ಒಂದು ರೀತಿಯಲ್ಲಿ ಸಂಭ್ರಮ ಎನ್ನಬಹುದು. ಒಲೆಯ ಬೆಂಕಿಗೆ ಕಟ್ಟಿಗೆಯಿಂದ ಹಿಡಿದು ಹಪ್ಪಳ, ಸಂಡಿಗೆ, ಅಕ್ಕಿ, ತರಕಾರಿ(ಮೊದಲೆಲ್ಲಾ ಹಳ್ಳಿಗಳಲ್ಲಿ ತಾವು ಬೆಳೆದ ಸೌತೆ, ಕುಂಬಳಕಾಯಿಗಳನ್ನೆಲ್ಲಾ ಬಾಳೆಗಿಡದ ನಾರಿನಲ್ಲಿ ಕಟ್ಟಿ ಛಾವಣಿಗೆ ನೇತು ಹಾಕಿಡುತ್ತಿದ್ದರು) ಎಲ್ಲವನ್ನೂ ಸಂಗ್ರಹಿಸಿಡುತ್ತಾರೆ.
ಹಾಗಂತ ಮಳೆ ಬಂದರೆ ಮನೆಯ ಹೊರಗೆ ಕಾಲಿಡುವುದಿಲ್ಲ ಎಂಬ ಅರ್ಥ ಅಲ್ಲ. ಮಳೆಗಾಲದಲ್ಲಿ ಹಳ್ಳಿಗಳಲ್ಲಿ ಜಡಿ ಮಳೆ ಎನ್ನದೆ ಗದ್ದೆ, ತೋಟಗಳಲ್ಲಿ ಒದ್ದೆಯಾಗುತ್ತಲೇ ದುಡಿಯುವ ರೈತರ ಬೆರಗು ತುಂಬಿದ ಬದುಕು, ಹಸಿರಿನ ನಡುವೆ ತುಂಬಿ ಹರಿಯುವ ಜಲರಾಶಿ, ಇಳೆಯ ಕಳೆ, ಬೆಳೆಯ ಸೊಗಸು ಯಾರನ್ನಾದರೂ ಆಕರ್ಷಿಸದೆ ಇರದು.
ಆಹಾ ಹಳ್ಳಿಯ ಬದುಕೇ…
ಯಾಕೆಂದರೆ ಇವೆಲ್ಲವುಗಳಲ್ಲಿ ತೋರಿಕೆಗಳಿಲ್ಲ. ಜನರ ಸಹಜ ಬದುಕಿನ ನಡುವೆ ಪ್ರಕೃತಿಯ ಸಹ ಜತೆಯೂ ಸೇರಿಕೊಂಡು ಆಹಾ ಹಳ್ಳಿಯ ಬದುಕೇ ತಂಪು ಅಂತನ್ನಿಸಿಬಿಡುತ್ತದೆ. ಮಳೆಗೆ ಇಳೆ ತಂಪಾಗಿಬಿಡುವ ಸೊಗಸು, ಒಲೆಯ ಮುಂದೆ ಕುಳಿತು ಒದ್ದೆಯಾದ ಮೈ ಮನಸ್ಸನ್ನು ಬೆಚ್ಚಗಾಗಿಸಿಕೊಳ್ಳುವ ಸುಖ, ಹಬೆಯಾಡುವ ಹಂಡೆ ನೀರಿನ ಸ್ನಾನ, ಪಾಚಿಗಟ್ಟಿದ ಅಂಗಳ, ಹೆಂಚಿನಿಂದ ಝರಿಯಾಗಿ ಇಳಿ ಬೀಳುವ ನೀರು…ಈ ಮಳೆಗಾಲದಲ್ಲಿ ಹಳ್ಳಿಗಳಲ್ಲಿ ಕಾಣಸಿಗುವ ನೋಟಗಳೇ ಸೊಗಸು. ಇದೇ ನೋಟವನ್ನು ನಮ್ಮ ನಗರಗಳಲ್ಲಿ ಕಾಣಸಿಗುವುದು ಅಸಾಧ್ಯ. ಒಂದು ಜೋರು ಮಳೆ ಬಂದರೆ ನಗರವೇ ಮುಳುಗುವಷ್ಟು ನೀರು ಹರಿದುಬರುತ್ತದೆ. ಇಲ್ಲಿ ಚರಂಡಿ ನೀರು ಹರಿಯುವುದನ್ನು ನೋಡಿ ಖುಷಿಪಡಬೇಕೇ ಹೊರತು ಮಳೆಯ ನಿಜ ಸುಖವನ್ನು ಅನುಭವಿಸಲಾಗದು.
ಮಳೆಗಾಲ ಎಂಬ ಬೆರಗು
ಆಕಾಶದಿಂದ ಧುಮ್ಮಿಕ್ಕುವ ನೀರು ಬರಿಯ ನೀರಾಗಿರದೆ ಕೆಲವೊಮ್ಮೆ ಯಾವುದೋ ಕಾಲದ ಆಪ್ತ ಸ್ನೇಹಿತ ಅಚಾನಕ್ ಕಣ್ಣ ಮುಂದೆ ಬಂದುನಿಂತಾಗ ಸಿಗುವಾಗಿನ ಭಾವವನ್ನು ನೀಡಿ ನಮ್ಮನ್ನು ಆವರಿಸುತ್ತದೆ. ನಮ್ಮೊಳಗೊಂದು ಅಳತೆಗೆ ಸಿಗದ ಪುಳಕವನ್ನೆಬ್ಬಿಸಲು ಮಳೆಗೆ ಸಾಧ್ಯ. ಎಳೆಎಳೆಯಾಗಿ ಇಳಿಬೀಳುವ ನೀರು, ಕೊಚ್ಚೆಗಳನ್ನೆಲ್ಲಾ ಕೊಚ್ಚಿಕೊಂಡು ಹೋಗುತ್ತದೆ. ಎಲ್ಲಿಯೋ ಬರಡಾದ ನೆಲದಲ್ಲಿ ಮತ್ತೆ ಚಿಗುರೊಡೆಯಬಲ್ಲ ಭರವಸೆಗೆ ಒರತೆಯಾಗುತ್ತದೆ. ನದಿಯಾಗಿ, ಝರಿಯಾಗಿ ಆಪ್ತವಾಗಿ ಬಿಡುತ್ತದೆ. ಈ ಮಳೆಗಾಲವೂ ಅಂತಹದೊಂದು ಬೆಚ್ಚನೆಯ ಭಾವಗಳ ಗೂಡಾಗಲಿ.
-ಅನುರಾಧಾ ತೆಳ್ಳಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.