![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 13, 2024, 10:38 PM IST
ಬೆಂಗಳೂರು: ಶುಲ್ಕ ಪರಿಷ್ಕರಣೆ ಮಾಡಬೇಕೆಂಬ ನರ್ಸಿಂಗ್ ಕಾಲೇಜುಗಳ ಆಡಳಿತ ಮಂಡಳಿಯ ಬೇಡಿಕೆಯನ್ನು ತಿರಸ್ಕರಿಸಿರುವ ರಾಜ್ಯ ಸರ್ಕಾರ, ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸದ ಕಾಲೇಜುಗಳಿಗೆ ಬೀಗ ಜಡಿಯುವಂತೆ ಸೂಚಿಸಿದೆ.
ಗುರುವಾರ ವಿಕಾಸಸೌಧದಲ್ಲಿ ನಡೆದ ನರ್ಸಿಂಗ್ ಕಾಲೇಜುಗಳ ಪದಾಧಿಕಾರಿಗಳ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಈ ನಿದೇರ್ಶನ ನೀಡಿದರು.
ಸರ್ಕಾರದಿಂದ ಎಲ್ಲ ಸವಲತ್ತುಗಳನ್ನು ಪಡೆದುಕೊಂಡರೂ ರಾಜ್ಯದ ಸುಮಾರು ನರ್ಸಿಂಗ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದಿರುವ ಬಗ್ಗೆ ತಮಗೆ ಸಾಕಷ್ಟು ದೂರುಗಳು ಬಂದಿವೆ. ಬೋಧಕ, ಬೋಧಕೇತರ, ಪ್ರಯೋಗಾಲಯ, ಸಿಬ್ಬಂದಿ, ಗ್ರಂಥಾಲಯ, ಶುಚಿತ್ವ ಸೇರಿ ಹಲವು ಸಮಸ್ಯೆಗಳಿವೆ ಹೀಗಾಗಿ ತಪಾಸಣೆ ನಡೆಸಿ ಅಂತಹ ಕಾಲೇಜುಗಳಿಗೆ ಬೀಗ ಜಡಿಯಿರಿ ಎಂದು ಇಲಾಖೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್‌ರಿಗೆ ನಿದೇರ್ಶನ ನೀಡಿದರು.
ಬೇಡಿಕೆ ಏನಿತ್ತು?:
ಸರ್ಕಾರಿ ಕೋಟಾದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿ ವಾರ್ಷಿಕ 10 ಸಾವಿರ, ಆಡಳಿತ ಮಂಡಳಿಯ ವಿದ್ಯಾರ್ಥಿ 1 ಲಕ್ಷ ಹಾಗೂ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ 1.40 ಲಕ್ಷ ಶುಲ್ಕವನ್ನು ನಿಗದಿಪಡಿಸಲಾಗಿದೆ. ಇದನ್ನು ಶೇ.20ರಷ್ಟು ಪರಿಷ್ಕರಣೆ ಮಾಡಬೇಕು ಎಂಬುದು ಸಂಘದ ಬೇಡಿಕೆಯಾಗಿತ್ತು. ಇದಕ್ಕೊಪ್ಪದ ಸಚಿವರು, ಸಾಧ್ಯವಾದರೆ ಈಗಿರುವ ಶುಲ್ಕವನ್ನೇ ಕಡಿಮೆ ಮಾಡಲಾಗುವುದು ಎಂದರು.
ಶುಲ್ಕ ಪರಿಷ್ಕರಣೆ ಇಲ್ಲ :
ಕೆಲ ಕಾಲೇಜುಗಳನ್ನು ಹೊರತುಪಡಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಬೋಧಕ, ಬೋಧಕೇತರ, ಪ್ರಯೋಗಾಲಯ, ಸಿಬ್ಬಂದಿ, ಗ್ರಂಥಾಲಯ, ಶುಚಿತ್ವ ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಇಷ್ಟು ಸಮಸ್ಯೆಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಯಾವ ಶಿಕ್ಷಣ ಕೊಡುತ್ತಾರೆ ಎಂದು ತರಾಟೆಗೆ ತೆಗೆದುಕೊಂಡ ಸಚಿವರು, ಯಾವುದೇ ಕಾರಣಕ್ಕೂ ವಾರ್ಷಿಕ ಶುಲ್ಕವನ್ನು ಪರಿಷ್ಕರಣೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಸೀನ್, ರಾಜೀವ್‌ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪಿ.ಆರ್. ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.