Mangaluru ಬ್ರೇಕ್ ಸಮಸ್ಯೆ; ಬಸ್ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ
ಸ್ಕೂಟರ್, ಡಿವೈಡರ್‌ಗೆ ಢಿಕ್ಕಿ ಹೊಡೆಸಿ ನಿಲ್ಲಿಸಲು ಪ್ರಯತ್ನ
Team Udayavani, Jun 17, 2024, 6:40 AM IST
ಮಂಗಳೂರು: ಬಸ್ ಚಾಲಕನ ಚಾಣಾಕ್ಷತನ, ಧೈರ್ಯದ ನಿರ್ಧಾರದಿಂದಾಗಿ ದುರಂತವೊಂದು ತಪ್ಪಿ ಹತ್ತಾರಿ ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಕಂಕನಾಡಿಯಿಂದ ಆಕಾಶಭವನಕ್ಕೆ ತೆರಳುವ 60 ಸಂಖ್ಯೆಯ ಸಿಟಿ ಬಸ್ ಶನಿವಾರ ಬೆಳಗ್ಗೆ 8.45ರ ಸುಮಾರಿಗೆ ಕೊಂಚಾಡಿ ವಿದ್ಯಾ ಶಾಲೆ ಬಳಿಯ ತಗ್ಗಾದ ರಸ್ತೆ ತಲುಪುವ ಕೆಲವೇ ಕ್ಷಣಗಳ ಮೊದಲು ಬಸ್‌ನ ಬ್ರೇಕ್‌ನಲ್ಲಿ ಸಮಸ್ಯೆ ಉಂಟಾಯಿತು.
ಚಾಲಕ ಗ್ಲೆನ್ ಸಿಕ್ವೇರಾ ಬ್ರೇಕ್ ಪೆಡಲ್ ಅನ್ನು ಎಷ್ಟು ಬಲವಾಗಿ ತುಳಿದರೂ ಬ್ರೇಕ್ ಹಿಡಿಯಲಿಲ್ಲ. ಕೂಡಲೇ ಹೇಗಾದರೂ ಬಸ್ ಅನ್ನು ನಿಲ್ಲಿಸಲೇಬೇಕೆಂದು ಧೈರ್ಯ ಮಾಡಿದ ಅವರು ರಸ್ತೆ ಬದಿ ಪಾರ್ಕ್ ಮಾಡಿದ್ದ
ಸ್ಕೂಟರ್‌ಗೆ ಢಿಕ್ಕಿ ಹೊಡೆಸಿ ನಿಲ್ಲಿಸುವ ಯತ್ನ ನಡೆ ಸಿದರು. ಆದರೂ ಬಸ್ ನಿಲ್ಲಲಿಲ್ಲ.
ಅಷ್ಟರಲ್ಲೇ ಬಸ್‌ನಲ್ಲಿದ್ದ ಪ್ರಯಾಣಿಕರು ಆತಂಕದಿಂದ ಬೊಬ್ಬೆ ಹಾಕಲು ಆರಂಭಿಸಿದರು. ಧೈರ್ಯ ಕಳೆದುಕೊಳ್ಳದ ಗ್ಲೆನ್ ಬಸ್ ಅನ್ನು ಮತ್ತೆ ಬಲಕ್ಕೆ ತಿರುಗಿಸಿ ಡಿವೈಡರ್‌ಗೆ ಢಿಕ್ಕಿ ಹೊಡೆದು ನಿಲ್ಲಿಸಲು ಯತ್ನಿಸಿದರು. ಈ ನಡುವೆ ಹಂಪ್ಸ್ ಮೇಲೆಯೂ ಬಸ್ ಹಾಯಿಸಿದರು. ಕೊನೆಗೆ ಬಸ್ ಡಿವೈಡರ್‌ಗೆ ಢಿಕ್ಕಿ ಹೊಡೆದು ನಿಂತಿತು. ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ.
ದೇವರೇ ಎಲ್ಲರನ್ನೂ ರಕ್ಷಿಸಿದ
ಬಸ್ ಇನ್ನೇನು ಇಳಿಜಾರು ರಸ್ತೆಯಲ್ಲಿ ಇಳಿಯಬೇಕಿತ್ತು. ಆದರೆ ಬ್ರೇಕ್ ಹಿಡಿಯುತ್ತಿರಲಿಲ್ಲ. ಬ್ರೇಕ್‌ನ ಬೂಸ್ಟರ್‌ನ ರಬ್ಬರ್ ಏಕಾಏಕಿ ಹೋಗಿದ್ದರಿಂದ ಸಮಸ್ಯೆಯಾಯಿತು. ನಾನು ಇದೇ ರಸ್ತೆಯಲ್ಲಿ ಮೊದಲ ಎರಡು ಟ್ರಿಪ್ ಹೋಗಿದ್ದೆ. ಬ್ರೇಕ್‌ನಲ್ಲಿ ಏನೂ ಸಮಸ್ಯೆ ಇರಲಿಲ್ಲ. ಆದರೆ ಎರಡನೇ ಟ್ರಿಪ್‌ನಲ್ಲಿ ಒಮ್ಮಿಂದೊಮ್ಮೆಗೆ ಸಮಸ್ಯೆ ಉಂಟಾಯಿತು. ಬಸ್‌ನ ಬ್ರೇಕ್ ಹಿಡಿಯುತ್ತಿಲ್ಲ ಎಂದು ಗೊತ್ತಾದಾಗ ಸ್ಕೂಟರ್‌ಗೆ ಢಿಕ್ಕಿ ಹೊಡೆಸಿ ನಿಲ್ಲಿಸಲು ಯತ್ನಿಸಿದೆ. ಅದು ಫಲ ನೀಡದಿದ್ದಾಗ ಡಿವೈಡರ್‌ಗೆ ಢಿಕ್ಕಿ ಹೊಡೆಯಿಸಿ ನಿಲ್ಲಿಸಬೇಕಾಯಿತು. ಒಂದು ವೇಳೆ ಬಸ್ ಹಾಗೆಯೇ ಮುಂದೆ ಹೋಗುತ್ತಿದ್ದರೆ ಎದುರಿನಲ್ಲಿ ತುಂಬಾ ಮಂದಿ ವಿದ್ಯಾರ್ಥಿಗಳು ರಸ್ತೆ ದಾಟುತ್ತಿದ್ದರು. ಪಕ್ಕದಲ್ಲಿ ಬೇರೆ ವಾಹನಗಳು ಕೂಡ ಇದ್ದವು. ದೇವರ ದಯೆಯಿಂದ ಯಾರಿಗೂ ಏನೂ ಆಗಿಲ್ಲ. ದೇವರೇ ಎಲ್ಲರನ್ನೂ ರಕ್ಷಿಸಿದ ಎಂದು ಗ್ಲೆನ್ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.