Exclusive Interview; ಗ್ಯಾರಂಟಿಗೆ ಯಾವ ಮಂತ್ರಿಯ ವಿರೋಧವೂ ಇಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
Team Udayavani, Jun 19, 2024, 6:07 AM IST
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಇಬ್ಬರೂ ನಮ್ಮ ಪಕ್ಷದ ನಾಯಕರು. ಅವರ ನಡುವೆ ಏನೇ ಸಮಸ್ಯೆ ಇದ್ದರೂ ಮಾತನಾಡಿಕೊಂಡು ಬಗೆಹರಿಸಿಕೊಳ್ಳುವುದು ಒಳ್ಳೆಯದು. ಇದು ನನ್ನ ಅಭಿಪ್ರಾಯ ಅಷ್ಟೇ.
ಬೆಳಗಾವಿ ರಾಜಕಾರಣದಿಂದ ಹಿಡಿದು ರಾಜ್ಯ ಕಾಂಗ್ರೆಸ್‌ನ ರಾಜಕಾರಣದ ಮೇಲೂ ಪರಿಣಾಮಗಳನ್ನು ಬೀರುತ್ತಿರುವ ಸತೀಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ ವಿಚಾರವಾಗಿ ಮಹಿಳಾ ಮತ್ತು ಕುಟುಂಬ ಕಲ್ಯಾಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಒಂದೇ ಮಾತಿನಲ್ಲಿ ಉತ್ತರಿಸಿದ್ದಾರೆ. ಆದರೆ ಸ್ಥಳಿಯವಾಗಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲು ಇಬ್ಬರು ನಾಯಕರ ನಡುವಿನ ವೈಷಮ್ಯವೂ ಕಾರಣವಾಗಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಉದಯವಾಣಿ ಪತ್ರಿಕೆ ಜತೆಗೆ “ನೇರಾನೇರ’ ಮಾತನಾಡಿರುವ ಅವರು, ಪುತ್ರ ಮೃಣಾಲ್‌ನ ಸೋಲು, ಬೆಳಗಾವಿಯ ರಾಜಕಾರಣ, ಡಿಸಿಎಂ ಹುದ್ದೆ ಸೃಷ್ಟಿ, ಗ್ಯಾರಂಟಿ ಯೋಜನೆ, ಪೆಟ್ರೋಲ್-ಡೀಸೆಲ್ ದರ ಏರಿಕೆ… ಹೀಗೆ ಹಲವು ವಿಷಯಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಬೆಳಗಾವಿಯಲ್ಲಿ ನೀವು, ಸತೀಶ್ ಜಾರಕಿಹೊಳಿಯಂತಹ ಸಚಿವರು, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಯಂತಹ ನಾಯಕರಿದ್ದೂ ಕಾಂಗ್ರೆಸ್‌ಗೆ ಹಿನ್ನಡೆ ಆದದ್ದೇಕೆ?
ನಮ್ಮ ನಿರೀಕ್ಷೆ ಹುಸಿ ಆಗುವುದಿಲ್ಲ ಎನ್ನುವ ವಿಶ್ವಾಸವಿತ್ತು. ಚುನಾವಣ ಪ್ರಕ್ರಿಯೆ ಶುರುವಿನಿಂದ ಕೊನೆವರೆಗೆ ಮೃಣಾಲ್ ಪರವಾಗಿ ಎಲ್ಲರೂ ಇದ್ದರು. ಮೃಣಾಲ್ ಬಗ್ಗೆ ಯಾರದ್ದೂ ಅಪಸ್ವರ ಇರಲಿಲ್ಲ. ಮೃಣಾಲ್ ಸ್ಪರ್ಧೆಯನ್ನು ಯಾರೂ ಬೇಡ ಎಂದಿರಲಿಲ್ಲ. ನಾವು ನಡೆಸಿದ ಸಭೆ, ಸಮಾರಂಭ ಎಲ್ಲೆಡೆ ಜನ ಸೇರಿ ಪ್ರೋತ್ಸಾಹಿಸಿದ್ದರು. ನಿಜ, ಸ್ವತಃ ನಾನೇ ಸಚಿವೆ. ಸತೀಶ್ ಜಾರಕಿಹೊಳಿ ಅವರೂ ಸಚಿವರಿದ್ದಾರೆ. ಲಕ್ಷ್ಮಣ್ ಸವದಿಯವರೂ ಹಿರಿಯ ನಾಯಕರಿದ್ದಾರೆ. ಜಿಲ್ಲೆಯಲ್ಲಿ ಹಲವು ಹಿರಿಯರಿದ್ದಾರೆ. ಆದರೂ ಸೋಲುಂಟಾಗಿದೆ. ಇದನ್ನು ಗೌರವಪೂರ್ವಕವಾಗಿ ಸ್ವೀಕರಿಸಿದ್ದೇವೆ. ಸೋಲಿಗೆ ಕಾರಣ ಏನೆಂಬುದನ್ನು ಇನ್ನೂ ಹುಡುಕುತ್ತಿದ್ದೇನೆ.
ಲೋಕಸಭೆ ಚುನಾವಣ ಸೋಲಿನ ಬಗ್ಗೆ ಪರಾಮರ್ಶೆಯೇ ಆಗಿಲ್ಲವೇ? ಅದರ ಹೊಣೆ ಹೊರುವವರು ಯಾರು?
ನನಗೆ ತಿಳಿದ ಮಟ್ಟಿಗೆ ವಿಧಾನಸಭೆ ಚುನಾವಣೆಗೂ, ಲೋಕಸಭೆ ಚುನಾವಣೆಗೂ ವ್ಯತ್ಯಾಸಗಳಿವೆ. ಜನರ ಆಯ್ಕೆ ಬೇರೆಯೇ ಆಗಿರುತ್ತದೆ. ನಾನೂ 2014ರಲ್ಲಿ ಸ್ಪರ್ಧಿಸಿ ಸೋತಿದ್ದರ ಆಧಾರದಲ್ಲಿ ಇದನ್ನು ಹೇಳುತ್ತಿದ್ದೇನೆ. ಎಲ್ಲಿ ಸೋತೆವೋ ಅಲ್ಲೇ ಗೆಲ್ಲಬೇಕು ಎಂಬುದನ್ನು ಮಗನಿಗೆ ಹೇಳಿದ್ದೇನೆ. ನನ್ನ ತಿಳುವಳಿಕೆ ಪ್ರಕಾರ ಹುಬ್ಬಳ್ಳಿಯ ನೇಹಾ ಹಿರೇಮs… ಪ್ರಕರಣವನ್ನು ಬಿಜೆಪಿ ಚೆನ್ನಾಗಿ ಬಳಸಿಕೊಂಡಿತು. ನಮ್ಮದು ಗಡಿ ಜಿಲ್ಲೆಯಾದ್ದರಿಂದ ಹಿಂದುತ್ವ, ಮರಾಠ ಸೇರಿದಂತೆ ಹಲವು ವಿಷಯಗಳು ಕಾರಣ ಆಗಿರಬಹುದು. ಜನರು ಹಿಂದುತ್ವದ ಪರ ವಾಲಿದರು. ನಾನೆಂದೂ ಹಿಂದೂ, ಮುಸ್ಲಿಂ, ಅನ್ಯ ಜಾತಿ ಎಂದು ರಾಜ ಕಾರಣ ಮಾಡಿದವಳಲ್ಲ. ಎಲ್ಲರನ್ನೂ ಜತೆಯಲ್ಲಿ ತೆಗೆದುಕೊಂಡು ಹೋಗಿ ದ್ದೇನೆ. ಬಿಜೆಪಿ ನಾಯಕರಿಗೇ ಗೆಲ್ಲುವ ವಿಶ್ವಾಸ ಇರಲಿಲ್ಲ. ಎಂಇಎಸ್ ಮತ್ತು ಬಿಜೆಪಿ ಒಂದಾದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಎಲ್ಲಿ ತಪ್ಪಿದ್ದೇವೋ ಅಲ್ಲೇ ಸುಧಾರಿಸಿ ಕೊಳ್ಳುತ್ತೇವೆ. ಒಟ್ಟಾರೆ ಫಲಿತಾಂಶ ದಿಂದ ಎಲ್ಲರ ಮನಸ್ಸಿಗೂ ಘಾಸಿಯಾಗಿದೆ, ಎಲ್ಲರೂ ಆಘಾತದಲ್ಲಿದ್ದಾರೆ. ಅವರಿವರಿಂದ ತಪ್ಪಾಗಿದೆ ಎಂದು ಕಲಕಲು ಹೋಗುವುದಿಲ್ಲ.
ಕೇಂದ್ರದಲ್ಲಿ ನಾಯಕತ್ವದ ಕೊರತೆ ಇರುವುದೇ ಚುನಾವಣೆ ಸೋಲಿಗೆ ಕಾರಣವೇ?
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರಬಹುದು. ಕರ್ನಾಟಕ ವಿಧಾನಸಭೆಗೆ ಈಗ ಚುನಾವಣೆ ನಡೆದರೂ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಜನರ ಆಯ್ಕೆ ಬೇರೆ ಬೇರೆ ಆಗಿರುತ್ತವೆ. ಕರ್ನಾಟಕದ ಮಟ್ಟಿಗೆ ಗ್ಯಾರಂಟಿಯೂ ಇದೆ, ನಾಯಕತ್ವವೂ ಚೆನ್ನಾಗಿದೆ. ಹಾಗೆಂದ ಮಾತ್ರಕ್ಕೆ ಕೇಂದ್ರದಲ್ಲಿ ನಾಯಕತ್ವ ಇಲ್ಲ ಎನ್ನಲಾಗುವುದಿಲ್ಲ. 10 ವರ್ಷದ ಹಿಂದಿನ ಪರಿಸ್ಥಿತಿ ಈಗಿಲ್ಲ. ರಾಹುಲ್ ಗಾಂಧಿ ಅವರನ್ನು ಎಲ್ಲರೂ ಗಂಭೀರ ರಾಜಕಾರಣಿಯಾಗಿ ನೋಡುತ್ತಿದ್ದಾರೆ. ಭವಿಷ್ಯದ ನಾಯಕ ಎನ್ನುವ ವ್ಯಕ್ತಿತ್ವನ್ನು ಕಾಣುತ್ತಿದ್ದಾರೆ.
ಗ್ಯಾರಂಟಿಯಿಂದ ಚುನಾವಣೆಯಲ್ಲಿ ಪ್ರಯೋಜನ ಆಗಿಲ್ಲ, ಮುಂದುವರಿಸುವುದು ಬೇಡವಾದ ನಿಮ್ಮ ಪಕ್ಷದಲ್ಲೇ ಇದೆಯಲ್ಲಾ?
ರಾಜ್ಯದಲ್ಲಿ ಒಟ್ಟು 1.52 ಕುಟುಂಬಗಳಿವೆ. ತೆರಿಗೆ ಪಾವತಿದಾರರು, ಎಪಿಎಲ್ ಕಾರ್ಡುದಾರರನ್ನು ಬಿಟ್ಟು 1.30 ಕೋಟಿ ಕುಟುಂಬಕ್ಕೆ ಗೃಹಲಕ್ಷ್ಮೀ ಯೋಜನೆಯನ್ನು ಕೊಡುವ ಗುರಿ ಹೊಂದಿದ್ದೆವು. 1.22 ಕೋಟಿ ಕುಟುಂಬ ಅಂದರೆ ಶೇ.90ರಷ್ಟು ಕುಟುಂಬಕ್ಕೆ ಗೃಹಲಕ್ಷ್ಮೀ ಯೋಜನೆಯ ಫಲ ತಲುಪುತ್ತಿದೆ. ದೊಡ್ಡ ಯೋಜನೆ ರೂಪಿಸುವುದು ಸುಲಭ, ಅದನ್ನು ಜನರಿಗೆ ಮುಟ್ಟಿಸುವುದು ಸವಾಲು. ಐದು ಗ್ಯಾರಂಟಿ ಯೋಜನೆಗಳೂ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಇದು ನಮ್ಮ ಹೆಮ್ಮೆ. ನಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಯಾಗಿಯೂ ಇದ್ದೇನೆ. ಜಯಪ್ರಕಾಶ್ ಹೆಗ್ಡೆ ಅವರು ಸದ್ಗುಣ ರಾಜಕಾರಣಿ. ಅಲ್ಲೂ ಕಾಂಗ್ರೆಸ್ ಸೋಲಾಗಿದೆ. ಶೇ.99ರಷ್ಟು ಜನ ಗ್ಯಾರಂಟಿ ಉಪಯೋಗಿಸುತ್ತಿದ್ದಾರೆ. ಅವರೆಲ್ಲರೂ ನಮಗೇ ಮತ ಹಾಕಬೇಕು ಎನ್ನಲಾಗಲ್ಲ. ನಾವು ಜನರ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು ಎನಿಸುತ್ತದೆ. ಲೋಕಸಭೆ ಚುನಾವಣೆ ಬಳಿಕ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆ ವಿರುದ್ಧ ಯಾವೊಬ್ಬ ಮಂತ್ರಿಗಳೂ ಅಪಸ್ವರ ಎತ್ತಿಲ್ಲ. ಚುನಾವಣ ಫಲಿತಾಂಶ ಏನೇ ಇರಲಿ, ಖಡಾಖಂಡಿತವಾಗಿ ಗ್ಯಾರಂಟಿ ಮುಂದುವರಿಸಿಕೊಂಡು ಹೋಗಲೇಬೇಕು ಎಂದು ಸಿಎಂ, ಡಿಸಿಎಂ ಕೂಡ ಹೇಳಿದ್ದಾರೆ. ಜನರಿಗೆ ಕೊಟ್ಟ ಮಾತು ತಪ್ಪಬಾರದು ಎಂದಿದ್ದಾರೆ.
ಬೊಕ್ಕಸ ಖಾಲಿಯಾದದ್ದಕ್ಕೇ ಪೆಟ್ರೋಲ್, ಡೀಸೆಲ್ ದರ ಏರಿಸಿದ್ದೀರಿ ಎಂದು ಬಿಜೆಪಿ ಆರೋಪಿಸುತ್ತಿದೆ. ಇದಕ್ಕೆ ಏನು ಹೇಳುವಿರಿ?
ಗ್ಯಾರಂಟಿಗಳಿಂದ ಬೊಕ್ಕಸ ಖಾಲಿ ಆಗಿಲ್ಲ. ಇವರ ಅಸಂಬದ್ಧ ನೀತಿ ಗಳಿಂದ ನಡೆಸಿದ ಸರಕಾರದ ಪರಿಣಾಮ ಬೊಕ್ಕಸ ಬರಿದಾಗಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಗ್ಯಾರಂಟಿಗೂ ಸಂಬಂಧವಿಲ್ಲ. ಇದು ನೈಸರ್ಗಿಕ ಪ್ರಕ್ರಿಯೆಯೇ ಹೊರತು ದಿಢೀರ್ ಬೆಳವಣಿಗೆ ಅಲ್ಲ. 54 ರೂ. ಇದ್ದ ಡೀಸೆಲ್ ಮತ್ತು 62 ರೂ. ಇದ್ದ ಪೆಟ್ರೋಲ್ ದರವನ್ನು 100 ರೂ.ಗಳ ಗಡಿ ದಾಟಿಸಿದ ಶ್ರೇಯಸ್ಸು ಬಿಜೆಪಿಗೆ ಸಲ್ಲುತ್ತದೆ. ಕಚ್ಚಾ ತೈಲ ದರ ಕಡಿಮೆ ಇದ್ದರೂ ಪ್ರತೀ ವಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುತ್ತಲೇ ಇತ್ತು. ಈಗಲೂ ಬಿಜೆಪಿ ಆಡಳಿತವಿರುವ ಮಹಾ ರಾಷ್ಟ್ರದಲ್ಲಿ ಕರ್ನಾಟಕಕ್ಕಿಂತ 9 ರೂ. ಜಾಸ್ತಿ ಇದೆ. ದೆಹಲಿ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೇರಿಗಳಲ್ಲಿ ಕರ್ನಾಟಕಕ್ಕಿಂತ ಕನಿಷ್ಠ 6 ರೂ. ಹೆಚ್ಚಿಗೆ ಇದೆ. ಕಳೆದ ನಾಲ್ಕು ವರ್ಷದಲ್ಲಿ ಲಂಗು-ಲಗಾಮಿಲ್ಲದೆ ಬಿಜೆಪಿಯವರು ಆಡಳಿತ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಡಿಸಿಎಂ ಇರುವಾಗ ಮೂರು ಡಿಸಿಎಂ ಹುದ್ದೆಯ ಆವಶ್ಯಕತೆ ಇದೆಯೇ?
ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರದಲ್ಲಿ ನಾನು ಮಾತನಾಡುವುದು ಅಷ್ಟು ಸಮಂಜಸ ಅಲ್ಲ ಎಂದೆನಿಸುತ್ತದೆ. ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ ಅವರು ಈ ಬಗ್ಗೆ ಮಾತನಾಡಿರಬಹುದು. ಅದೇನೇ ಇದ್ದರೂ ಹೈಕಮಾಂಡ್ ನಿರ್ಧಾರ. ಸಿಎಂ ಯಾರಾಗಬೇಕು, ಡಿಸಿಎಂ ಯಾರಾಗಬೇಕು, ಎಷ್ಟು ಜನ ಡಿಸಿಎಂ ಆಗಬೇಕು ಎಂಬುದೆಲ್ಲ ಸಂಪೂರ್ಣವಾಗಿ ಹೈಕಮಾಂಡ್‌ಗೆ ಬಿಟ್ಟ ವಿಚಾರ.
ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ನಡುವಿನ ವೈಷಮ್ಯವೇ ಮೃಣಾಲ್ ಸೋಲಿಗೆ ಕಾರಣವೇ?
ಹಾಗೆಂದು ಹೇಳಲಾಗುವುದಿಲ್ಲ. ಇಬ್ಬರೂ ನಮ್ಮ ಪಕ್ಷದ ಹಿರಿಯ ನಾಯಕರಿದ್ದಾರೆ. ಅವರ ನಡುವೆ ವೈಮನಸ್ಸು ಇದೆಯೋ? ಏಕಿದೆಯೋ ಒಂದೂ ಗೊತ್ತಿಲ್ಲ. ಅಂಥದ್ದೇನೇ ಇದ್ದರೂ ಇಬ್ಬರು ಕೂಡ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ. ಇದನ್ನು ನನ್ನ ಮನವಿ ಎಂದು ಪರಿಗಣಿಸಲಿ. ಆದರೆ ಪರಸ್ಪರ ಕುಳಿತು ಮಾತನಾಡಿಕೊಂಡು ಸಮಸ್ಯೆ ಪರಿಹರಿಸಿಕೊಳ್ಳುವುದು ಒಳಿತು.
ಸಾಮಗ ಶೇಷಾದ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.