Congress ಉಪ ಚುನಾವಣೆಗೆ ಸಜ್ಜಾದ ಕಾಂಗ್ರೆಸ್: 4 ಕ್ಷೇತ್ರಗಳಿಗೆ ವೀಕ್ಷಕರ ಪಡೆ ನೇಮಕ
Team Udayavani, Jun 19, 2024, 10:03 PM IST
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಾದ ಹಿನ್ನಡೆಯಿಂದ ಎಚ್ಚೆತ್ತುಕೊಂಡ ಆಡಳಿತಾರೂಢ ಕಾಂಗ್ರೆಸ್, ಆರು ತಿಂಗಳು ಮುಂಚಿತವಾಗಿಯೇ ಉಪಚುನಾವಣೆಗೆ ತಾಲೀಮು ಆರಂಭಿಸಿದೆ.
ಒಂದೆಡೆ ಸಹೋದರನ ಸೋಲಿನ ಸೇಡು ತೀರಿಸಿಕೊಳ್ಳಲು ಖುದ್ದು ತಾವೇ ಎದುರಾಳಿಯ ಅಖಾಡಕ್ಕಿಳಿಯಲು ಸ್ವತಃ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಿಂತನೆ ನಡೆಸಿದ್ದು, ಈ ಸಂಬಂಧ ಟೆಂಪಲ್ ರನ್ ನೆಪದಲ್ಲಿ ಜನರ ನಾಡಿಮಿಡಿತ ತಿಳಿಯಲು ಚನ್ನಪಟ್ಟಣದಲ್ಲಿ ಬುಧವಾರ ಓಡಾಡಿದ್ದಾರೆ.
ಮತ್ತೊಂದೆಡೆ ತಮ್ಮ ಅಧ್ಯಕ್ಷರ ಗೆಲುವಿಗೆ ಮಾಜಿ ಸಂಸದ ಹಾಗೂ ಸಹೋದರ ಡಿ.ಕೆ. ಸುರೇಶ್, ಮಂಡ್ಯ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸೇರಿದಂತೆ ಆ ಭಾಗದ ಶಾಸಕರನ್ನು ಒಳಗೊಂಡ ವೀಕ್ಷಕರ ಪಡೆಯನ್ನು ಸಿದ್ಧಪಡಿಸಲಾಗಿದೆ. ಈ ಮೂಲಕ ಉಪಚುನಾವಣೆ ರಂಗೇರಲಿದೆ.
ಚನ್ನಪಟ್ಟಣದ ಜತೆಗೆ ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳು ಹಾಗೂ ದಕ್ಷಿಣ ಕನ್ನಡ-ಉಡುಪಿ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಉಪ ಚುನಾವಣೆಗೂ ಉಸ್ತುವಾರಿ ಸಮಿತಿಯನ್ನು ಕೆಪಿಸಿಸಿ ಪ್ರಕಟಿಸಿದೆ.
ಈ ಸಮಿತಿಗಳಿಗೆ ಉಸ್ತುವಾರಿ ಕಾರ್ಯದರ್ಶಿ ಮತ್ತು ಕಾರ್ಯಾಧ್ಯಕ್ಷರ ಜತೆಗೆ ವೀಕ್ಷಕರನ್ನು ನೇಮಿಸಲಾಗಿದೆ. ಅವರು ಈಗಿನಿಂದಲೇ ಕಾರ್ಯಪ್ರವೃತ್ತರಾಗಿ ಪಕ್ಷದ ಸಂಭಾವ್ಯ ಅಭ್ಯರ್ಥಿಯನ್ನು ಶಿಫಾರಸು ಮಾಡಲಿದೆ. ಅಷ್ಟೇ ಅಲ್ಲ, ಆ ಅಭ್ಯರ್ಥಿ ಗೆಲುವಿಗಾಗಿ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸ್ಥಳೀಯ ಶಾಸಕರು, ಹಿರಿಯ ಮುಖಂಡರು ಹಾಗೂ ಇತರರೊಂದಿಗೆ ಸಮಾಲೋಚನೆ ನಡೆಸಿ ವರದಿಯನ್ನೂ ಸಲ್ಲಿಸುವಂತೆ ಉಸ್ತುವಾರಿ ಸಮಿತಿಗಳಿಗೆ ಸೂಚಿಸಲಾಗಿದೆ.
ಇದರೊಂದಿಗೆ ಉಪ ಚುನಾವಣೆ ನಡೆಯಲಿರುವ ವಿಧಾನ ಪರಿಷತ್ತು ಸೇರಿ ಒಟ್ಟಾರೆ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಮೈತ್ರಿ ಪಕ್ಷದ ತೆಕ್ಕೆಯಲ್ಲಿದ್ದವು. ಅವುಗಳನ್ನು ಶತಾಯಗತಾಯ ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ತಿರುಗೇಟು ನೀಡುವುದರ ಜತೆಗೆ ಆಯಾ ಕ್ಷೇತ್ರಗಳಲ್ಲಿ ಮತ್ತೆ ಪಕ್ಷದ ಪ್ರಾಬಲ್ಯ ಸಾಧಿಸುವ ಹವಣಿಕೆಯಲ್ಲಿ ಆಡಳಿತ ಪಕ್ಷ ಇದೆ. ಅಲ್ಲದೆ, ಲೋಕಸಭಾ ಚುನಾವಣೆಯಲ್ಲಾದ “ಡ್ಯಾಮೇಜ್’ ಅನ್ನು ಇಲ್ಲಿ ಗೆಲುವು ಸಾಧಿಸುವ ಮೂಲಕ ಸರಿಪಡಿಸಿಕೊಳ್ಳುವ ಲೆಕ್ಕಾಚಾರವೂ ಇದೆ. ಇದಕ್ಕೆ ಪೂರಕವಾಗಿ ಗೆಲುವಿಗೆ ಅಗತ್ಯ ತಂತ್ರಗಳನ್ನು ಉಸ್ತುವಾರಿ ಸಮಿತಿ ಈಗಿನಿಂದಲೇ ರೂಪಿಸಲಿದೆ ಎಂದು ಮೂಲಗಳು ತಿಳಿಸಿವೆ.
ಯಾವ ಕ್ಷೇತ್ರಕ್ಕೆ ಯಾರು ಉಸ್ತುವಾರಿ?
ಚನ್ನಪಟ್ಟಣ- ಅಭಿಷೇಕ್ ದತ್ (ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ), ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ (ಉಸ್ತುವಾರಿ ಕಾರ್ಯಾಧ್ಯಕ್ಷರು), ಸಚಿವರಾದ ಎನ್. ಚಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಮಾಜಿ ಸಂಸದ ಡಿ.ಕೆ. ಸುರೇಶ್, ಶಾಸಕರಾದ ಬಾಲಕೃಷ್ಣ, ನರೇಂದ್ರಸ್ವಾಮಿ, ಇಕ್ಬಾಲ್ ಹುಸೇನ್, ವಿಧಾನ ಪರಿಷತ್ತಿನ ಸದಸ್ಯರಾದ ಪುಟ್ಟಣ್ಣ, ಎಸ್. ರವಿ, ಕಾಂಗ್ರೆಸ್ ರಾಮನಗರ ಜಿಲ್ಲಾ ಘಟಕದ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ (ವೀಕ್ಷಕರು).
ಶಿಗ್ಗಾಂವಿ- ಮಯೂರ ಜಯಕುಮಾರ್ (ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ), ಶಾಸಕ ವಿನಯ ಕುಲಕರ್ಣಿ (ಉಸ್ತುವಾರಿ ಕಾರ್ಯಾಧ್ಯಕ್ಷರು), ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ಸಂತೋಷ ಲಾಡ್, ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯಸಚೇತಕ ಸಲೀಂ ಅಹಮದ್, ಕಾಂಗ್ರೆಸ್ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್ ಕುಮಾರ್ ನೀರಲಗಿ, ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಆನಂದ ಗಡ್ಡದೇವರಮಠ (ವೀಕ್ಷಕರು).
ಸಂಡೂರು- ಮಯೂರ ಜಯಕುಮಾರ್ (ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ), ವಸಂತಕುಮಾರ್ (ಉಸ್ತುವಾರಿ ಕಾರ್ಯಾಧ್ಯಕ್ಷರು), ಸಚಿವ ಜಮೀರ್ ಅಹಮದ್ ಖಾನ್, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಸಂಸದ ಇ. ತುಕಾರಾಂ, ಶಾಸಕರಾದ ಬಿ. ನಾಗೇಂದ್ರ ಮತ್ತು ಡಾ.ಎನ್.ಟಿ. ಶ್ರೀನಿವಾಸ್, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್, ಕಾಂಗ್ರೆಸ್ ಬಳ್ಳಾರಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವಯೋಗಿ (ವೀಕ್ಷಕರು).
ದಕ್ಷಿಣ ಕನ್ನಡ- ಉಡುಪಿ- ರೋಜಿ ಜಾನ್ (ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ), ವಿಧಾನ ಪರಿಷತ್ತಿನ ಸದಸ್ಯ ಮಂಜುನಾಥ್ ಭಂಡಾರಿ (ಉಸ್ತುವಾರಿ ಕಾರ್ಯಾಧ್ಯಕ್ಷರು), ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ, ಮಾಜಿ ಸಚಿವ ರಮಾನಾಥ ರೈ, ಶಾಸಕ ಅಶೋಕ್ ರೈ, ಲೋಕಸಭಾ ಚುನಾವಣೆ ಪರಾಜಿತ ಅಭ್ಯರ್ಥಿಗಳಾದ ಡಾ.ಜಯಪ್ರಕಾಶ್ ಹೆಗ್ಡೆ ಮತ್ತು ಪದ್ಮರಾಜ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹರೀಶ್ ಕುಮಾರ್, ಉದಯ ಶೆಟ್ಟಿ, ಕಿಶನ್ ಹೆಗ್ಡೆ (ವೀಕ್ಷಕರು).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.