Byndoor ತುಂಬಿದ ಹೊಳೆ ಮಧ್ಯೆ ಮಕ್ಕಳನ್ನು ಹೊತ್ತೊಯ್ಯುವ ನಿತ್ಯದ ಕಸರತ್ತು
ವಿಶೇಷ ಚೇತನ ಮಕ್ಕಳಿಬ್ಬರ ಜತೆ ಶಾಲೆಯಲ್ಲಿರುವ ತಾಯಿ
Team Udayavani, Jul 3, 2024, 7:05 AM IST
ಕುಂದಾಪುರ: ತುಂಬಿ ಹರಿಯುವ ಹೊಳೆ. ದಾಟಲು ಸೇತುವೆಯಿಲ್ಲ. ವಿಶೇಷ ಚೇತನ ಮಕ್ಕಳಿಬ್ಬರನ್ನು ನಿತ್ಯ ಈ ಹೊಳೆಯಲ್ಲಿ ಎತ್ತಿಕೊಂಡೇ ಹೋಗುವ ತಂದೆ. ಅಲ್ಲಿಂದ 7 ಕಿ.ಮೀ. ದ್ವಿಚಕ್ರ ವಾಹನದಲ್ಲಿ ಪ್ರಯಾಸಪಟ್ಟು ತಂದೆ ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟರೆ, ತಾಯಿ ಬೆಳಗ್ಗೆಯಿಂದ ಸಂಜೆಯವರೆಗೆ ಮಕ್ಕಳೊಂದಿಗೆ ಶಾಲೆಯಲ್ಲಿರಬೇಕು. ಸಂಜೆ ಮತ್ತೆ ಇದೇ ರೀತಿ ಮರಳಿ ಮನೆಗೆ.
ಇದು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾ.ಪಂ. ವ್ಯಾಪ್ತಿಯ ಯಳಜಿತ್ ಗ್ರಾಮದ ಹುಲ್ಕಡಿಕೆ ಪ್ರದೇಶದ ಮರಾಠಿ ನಾಯ್ಕ ಕುಟುಂಬವೊಂದರ ಸಂಕಷ್ಟದ ಬದುಕಿನ ಕಥೆ. ಇಲ್ಲಿ ಸೇತುವೆಯಿಲ್ಲದೆ ಈ ಕುಟುಂಬ ಮಾತ್ರವಲ್ಲ, 10ಕ್ಕೂ ಮಿಕ್ಕಿ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಆದರೂ ಇವರ ಕೂಗು ಇನ್ನೂ ಆಳುವ ವರ್ಗಕ್ಕೆ ಕೇಳಿಸಿದಂತಿಲ್ಲ.
ಹುಲ್ಕಡಿಕೆಯ ಸುರೇಶ್ ನಾಯ್ಕ ಹಾಗೂ ಸುಜಾತಾ ದಂಪತಿಯ ಇಬ್ಬರೂ ಮಕ್ಕಳು 2 ವರ್ಷ ಪ್ರಾಯ ಆಗುವಾಗ ಕೈ ಹಾಗೂ ಕಾಲುಗಳೆರಡರ ಸ್ವಾಧೀನ ಕಳೆದುಕೊಂಡಿದ್ದರು. ಅಲ್ಲಿಂದೀಚೆಗೆ ಈ ಮಕ್ಕಳಿಬ್ಬರಿಗೆ ತಂದೆ-ತಾಯಿಯೇ ಎಲ್ಲದಕ್ಕೂ ಆಸರೆ. ಈಗ ಮನೆಯಿಂದ ಸುಮಾರು 7 ಕಿ.ಮೀ. ದೂರದ ಯಳಜಿತ್ ಶಾಲೆಯಲ್ಲಿ ಪುತ್ರ 8 ಹಾಗೂ ಪುತ್ರಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರನ್ನು ಮಳೆಗಾಲದಲ್ಲಿ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ನಿತ್ಯವೂ ಕರೆದುಕೊಂಡು ಹೋಗಿಬರಲು ಈ ದಂಪತಿ ಪಡುವ ಕಷ್ಟ ಅಷ್ಟಿಷ್ಟಲ್ಲ.
ಸುರೇಶ್ ಅವರದು ಬಡ ಕುಟುಂಬ. ಮಕ್ಕಳಿಬ್ಬರ ಆರೈಕೆಯಿಂದಾಗಿ ಹೊರಗಡೆ ಕೆಲಸಕ್ಕೆ ಹೋಗುವಂತಿಲ್ಲ. ಮಕ್ಕಳಿಗೆ ರಜೆಯಿದ್ದರೆ ಮಾತ್ರ ಕೆಲಸಕ್ಕೆ ಹೋಗುತ್ತಾರೆ. ಉಳಿದ ದಿನ ಬೆಳಗ್ಗೆ ಹಾಗೂ ಸಂಜೆ ತಂದೆ ಮಕ್ಕಳನ್ನು ಶಾಲೆಗೆ ಕರೆದೊಯ್ಯಬೇಕು, ಕರೆತರಬೇಕು. ತಾಯಿ ಬೆಳಗ್ಗೆಯಿಂದ ಸಂಜೆಯವರೆಗೆ ಶಾಲೆಯಲ್ಲಿದ್ದು ಮಕ್ಕಳ ಪಾಲನೆ- ಪೋಷಣೆ ನೋಡಿಕೊಳ್ಳಬೇಕು. ಇರುವ ಸಣ್ಣ ಅಡಿಕೆ ತೋಟವೇ ಇವರ ಬದುಕಿಗೆ ಜೀವನಾಧಾರ.
ಹೊಳೆಯಾಚೆ ಒಂದು ಬೈಕ್; ಈಚೆ ಬೈಕ್
ಹುಲ್ಕಡಿಕೆಯಲ್ಲಿ 5ನೇ ತರಗತಿಯ ವರೆಗೆ ಮಾತ್ರ ಕಿ.ಪ್ರಾ. ಶಾಲೆಯಿದ್ದು, ಹೆಚ್ಚಿನ ಕಲಿಕೆಗೆ 7 ಕಿ.ಮೀ. ದೂರದ ಯಳಜಿತ್‌ಗೆ ಬರಬೇಕಿದೆ. ಗುಡಿಕೇರಿ ಎಂಬಲ್ಲಿ ಒಂದು ಹೊಳೆಯಿದ್ದು, ಅದನ್ನು ದಾಟಿಯೇ ಯಳಜಿತ್‌ಗೆ ಬರಬೇಕು. ಅನೇಕ ವರ್ಷಗಳಿಂದ ಇಲ್ಲಿನ ಜನ ಮನವಿ ಮಾಡುತ್ತಿದ್ದರೂ ಈವರೆಗೆ ಯಾರಿಂದಲೂ ಸ್ಪಂದನೆ ವ್ಯಕ್ತವಾಗಿಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಎತ್ತಿಕೊಂಡೇ ಬಂದು ಹೊಳೆ ದಾಟಿಸಬೇಕು. ಇದು ಸುರೇಶ್ ಒಬ್ಬರದೇ ಕಥೆಯಲ್ಲ, ಇಲ್ಲಿರುವ ಎಲ್ಲ ಮಕ್ಕಳ ಪೋಷಕರು ಈ ಕಾರ್ಯವನ್ನು ನಿತ್ಯವೂ ಮಾಡಬೇಕಾಗಿದೆ. ಸುರೇಶ್ ಕಷ್ಟಪಟ್ಟು 2 ಬೈಕ್ ಖರೀದಿಸಿದ್ದು, ಒಂದನ್ನು ಹೊಳೆಯ ಈಚೆ, ಇನ್ನೊಂದನ್ನು ಹೊಳೆಯ ಆಚೆ ಇರಿಸಿರುತ್ತಾರೆ. ಒಂದರಲ್ಲಿ ಮನೆಯಿಂದ ಹೊಳೆಯ ವರೆಗೆ, ಇನ್ನೊಂದರಲ್ಲಿ ಹೊಳೆಯಾಚೆಯಿಂದ ಶಾಲೆಯ ವರೆಗೆ ಮಕ್ಕಳನ್ನು ಕರೆದೊಯ್ಯುತ್ತಾರೆ.
ಸಂಸದರಿಂದ ಪ್ರಯತ್ನ
ಹಿಂದಿನ ಸರಕಾರದ ಅವಧಿಯಲ್ಲಿ ಹುಲ್ಕಡಿಕೆ ಸಹಿತ 3 ಕಡೆಗಳಲ್ಲಿ ಸೇತುವೆಗಾಗಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾವ ಸಲ್ಲಿಸಿದ್ದರು. ಬಳಿಕ ಕಳೆದ ವರ್ಷ ಸರಕಾರ ಬದಲಾದದ್ದರಿಂದ ಈ ಪ್ರಸ್ತಾವನೆಗೆ ಮಂಜೂರಾತಿ ಸಿಕ್ಕಿಲ್ಲ. “ನಾವು 7-8 ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದೇವೆ. ಇಲ್ಲಿನ ಹೊಳೆಗೆ ಸೇತುವೆ ಆದರೆ ನಮ್ಮ ಕಷ್ಟ ತಪ್ಪುತ್ತದೆ’ ಎನ್ನುತ್ತಾರೆ ಸ್ಥಳೀಯ ಗ್ರಾ.ಪಂ. ಸದಸ್ಯ ರಾಜೇಶ್ ಕೊಠಾರಿ.
ಶಾಸಕರ ಭೇಟಿ; ತುರ್ತು ವ್ಯವಸ್ಥೆ ಭರವಸೆ
ಸೇತುವೆಯಿಲ್ಲದೆ ಹುಲ್ಕಡಿಕೆ ಪರಿಸರದ ಜನರು ಅನುಭವಿಸುತ್ತಿರುವ ಸಂಕಷ್ಟದ ವಿಷಯ ತಿಳಿಯುತ್ತಿದ್ದಂತೆ ಶಾಸಕ ಗುರುರಾಜ್ ಗಂಟಿಹೊಳೆ ಮಂಗಳವಾರ ಅಲ್ಲಿಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ಅಲ್ಲದೆ ಲಾರಿ, ಇನ್ನಿತರ ವಾಹನಗಳ ಚಾಸಿಸ್ ಬಳಸಿ ತಾತ್ಕಾಲಿಕ ಸೇತುವೆ ಮಾಡಿಕೊಡುವ ಸಂಬಂಧ ಪರಿಶೀಲಿಸಲಾಗುವುದು. ಇದಲ್ಲದೆ ಸುರೇಶ್ ಅವರ ಕುಟುಂಬಕ್ಕೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಾರದೊಳಗೆ ಯಳಜಿತ್ ಪರಿಸರದಲ್ಲಿ ಬಾಡಿಗೆ ಮನೆ ಮಾಡಿಕೊಡಲಾಗುವುದು. ಹಿಂದೆ ಇಲ್ಲಿಗೆ ಸಂಸದರು ಸೇತುವೆಗೆ ಪ್ರಸ್ತಾವನೆ ಕಳುಹಿಸಿದ್ದು, ಆದರೆ ಈಗಿನ ಸರಕಾರದಿಂದ ಅದು ಬಾಕಿಯಾಗಿದೆ. ಅನುದಾನ ಕೊರತೆ, ಕಾಮಗಾರಿ ಹಿಂಪಡೆದದ್ದು, ನರೇಗಾದಡಿ ಕಾಲು ಸಂಕಕ್ಕೆ ಅವಕಾಶ ಇಲ್ಲದೆ ಇರುವುದರಿಂದ ಸಮಸ್ಯೆಯಾಗಿದೆ. ಮಕ್ಕಳ ಚಿಕಿತ್ಸೆಗೂ ಪ್ರಯತ್ನಿಸಲಾಗುವುದು. ಸೇತುವೆ ಬಗ್ಗೆ ಪರಿಶೀಲಿಸಿ, ವರದಿ ಕೊಡುವಂತೆ ಸಣ್ಣ ನೀರಾವರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದೇನೆ ಎಂದು ಶಾಸಕರು ತಿಳಿಸಿದ್ದಾರೆ.
ಏಳು ವರ್ಷಗಳಿಂದ ಸೇತುವೆಗಾಗಿ ಮನವಿ ನೀಡುತ್ತಿದ್ದೇವೆ. ಆದರೆ ಇನ್ನೂ ಆಗಿಲ್ಲ. ಮಕ್ಕಳ ಆರೈಕೆ ನಮಗೆ ಕಷ್ಟವಲ್ಲ. ಆದರೆೆ ತುಂಬಿ ಹರಿಯುವ ಹೊಳೆಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವುದೇ ತುಂಬಾ ಭಯ ಹುಟ್ಟಿಸುತ್ತದೆ. ಆದಷ್ಟು ಬೇಗ ಸೇತುವೆ ಆಗಲಿ.
– ಸುಜಾತಾ, ಹುಲ್ಕಡಿಕೆ ನಿವಾಸಿ
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.