Aparna Vastarey: ಅಪರ್ಣಾ… ಮಾತು ನಿಲ್ಲಿಸಿದ ಕನ್ನಡದ ಹಕ್ಕಿ
Team Udayavani, Jul 14, 2024, 11:29 AM IST
ತಮ್ಮ ಇನಿದನಿಯಿಂದ ಎಲ್ಲರಿಗೂ ಇಷ್ಟವಾಗಿದ್ದ ಅಪರ್ಣಾ, ಈಗ ಎಲ್ಲರ ಪಾಲಿಗೂ ಮಧುರ ನೆನಪು. ಅಪರ್ಣಾರ ಸಮಯಪ್ರಜ್ಞೆ, ಸೂಕ್ಷ್ಮ ಸಂದರ್ಭವನ್ನು ಆಕೆ ನಿಭಾಯಿಸುತ್ತಿದ್ದ ರೀತಿ, ಪ್ರಸಂಗಾವಧಾನದ ಕುರಿತು ಆಕಾಶವಾಣಿಯ ಬಿ. ಕೆ. ಸುಮತಿಯವರು ಇಲ್ಲಿ ವಿವರಿಸಿದ್ದಾರೆ…
ಎಫ್ಎಂ ರೇನ್‌ಬೋ ಆರಂಭದ ದಿನ. ಅಪರ್ಣಾ ಅವರದ್ದು ಸಂಜೆಯ ಪಾಳಿ. ಅದಾಗಲೇ ವಿವಿಧ ಭಾರತಿ ಎಫ್ಎಂ ತಂತ್ರಜ್ಞಾನಕ್ಕೆ ಅಳವಡಿಸಿ ಕೊಂಡಿತ್ತು. ಆದರೂ, ಗಂಟೆಗೆ ಒಂದು ವಿಚಾರ, ಮಾತು, ಮಾಹಿತಿ, ಹಾಡು, 17 ಗಂಟೆ ನಿರಂತರ ಹಾಡುಗಳು! ಪ್ರಸ್ತುತಿ, ಶೋ ಪರಿಕಲ್ಪನೆ! ಇವೆಲ್ಲ ಆಕಾಶವಾಣಿಗೂ ಹೊಸದು.
ಹೊಸ ನಿಯಮಗಳು, ಶ್ರೋತೃ ಸಂವೇದನೆ, ಯುವಜನತೆಯ ದೃಷ್ಟಿ, ಹೊಸ ಆಯಾಮ, ಇಂತಹ ಅಂಶಗಳನ್ನು ಒಳಗೊಂಡು ವಿಭಿನ್ನವಾಗಿ ಮಾತಾಡಬೇಕು ಎಂದು ಸೂಚಿಸಲಾಗಿತ್ತು. ಅದಕ್ಕೆ ತಿಂಗಳುಗಟ್ಟಲೆ ಪೂರ್ವ ತಯಾರಿಗಳು ನಡೆದಿದ್ದವು. ಅಂತೂ ನಿರೀಕ್ಷಿತ ಘಳಿಗೆ ಬಂದಿತು. “ಹೊತ್ತಿತೋ ಹೊತ್ತಿತು ಕನ್ನಡದ ದೀಪ…’ ಎಂದು ಮೊದಲ ಪ್ರಸಾರಕ್ಕೆ ನಾನು ದನಿಯಾಗಿದ್ದೆ. ಆದರೆ ಬೆಳಗ್ಗೆ 10 ಗಂಟೆ ನಂತರ ತಾಂತ್ರಿಕ ತೊಂದರೆ ಕಂಡು ಬಂದಿತ್ತು. ಹಾಗಾಗಿ ಇಡೀ ದಿನ ನಾವೆಲ್ಲ ಸ್ಟುಡಿಯೋದಲ್ಲಿಯೇ ಇದ್ದೆವು.
ಸಂಜೆ ಅಪರ್ಣಾ ಬಂದರು. ಒಂದೂ ಅಂದುಕೊಂಡ ಹಾಗೆ ಇರಲಿಲ್ಲ. ಬಹಳ ಅಡಚಣೆ. ನಾವು ಮಾತಾಡಿದ್ದು ಪ್ರಸಾರ ಆಗುತ್ತಿದೆಯೋ ಇಲ್ಲವೋ ತಿಳಿಯದೆ ಗೊಂದಲ ಸೃಷ್ಟಿ ಆಯಿತು. ಆಯೋಜಿತ ಫೋನ್ ಇನ್ ಕಾರ್ಯಕ್ರಮ ನಡೆಸಿಕೊಡಲು ತೊಂದರೆಗಳು ಎದುರಾದವು. ಅಪರ್ಣಾ ಏನು ತಯಾರಿ ಮಾಡಿಕೊಂಡಿದ್ದರೋ ಅದು ಸಾಧ್ಯವಾಗದ ಸ್ಥಿತಿ. ಸ್ಟುಡಿಯೋದಲ್ಲಿ ಮಾತಾಡಲೂ ಭಯ. (ಅಕಸ್ಮಾತ್ ಅದು ಪ್ರಸಾರಕ್ಕೆ ಹೋಗಿಬಿಟ್ಟರೆ ..)ಆದರೆ ಅವರು ಸ್ವಲ್ಪವೂ ಗಲಿಬಿಲಿಗೊಳ್ಳಲಿಲ್ಲ.
ಹಾಳೆಯಲ್ಲಿ ಬರೆದು ಮಾತಾಡಿಕೊಳ್ಳಬೇಕಾಯಿತು. ಅವರು ತಲೆ ಆಡಿಸುತ್ತ, ಬೇರೆಯೇ ಆರಂಭದ ನುಡಿ ಶುರು ಮಾಡಿದರು. ಇರದ ಕಾಲ್ಪನಿಕ ಶ್ರೋತೃಗಳ ಹೆಸರು ಹೇಳಿಕೊಂಡು ಆ ಕ್ಷಣವನ್ನು ನಿಭಾಯಿಸಿದರು. ಏನೂ ಆಗಿಯೇ ಇಲ್ಲ ಎನ್ನುವ ಹಾಗೆ ಸಮಚಿತ್ತದಿಂದ ನಗುನಗುತ್ತಾ ಮಾತಾಡಿದರು.
ಪ್ರಜ್ಞಾವಂತ ನಿರೂಪಕಿ
ಖ್ಯಾತ ಗಾಯಕಿ ಸುಲೋಚನಾ ಇಹಲೋಕ ತ್ಯಜಿಸಿದ ಸಂದರ್ಭ. ಅವರನ್ನು ಕುರಿತು ನಮ್ಮಲ್ಲಿ ಹೆಚ್ಚು ಮಾಹಿತಿ ಇರಲಿಲ್ಲ. ಆಗ ಅಪರ್ಣಾ ಅಷ್ಟನ್ನೇ ಹೇಳಿದರು: “ಹೆಚ್ಚು ಮಾಹಿತಿ ಬೇಕಿದೆ, ತಿಳಿಸುತ್ತೇವೆ ಶ್ರೋತೃಗಳೇ…’ ಎಂದು.
ಇದನ್ನು ಕೇಳಿ ಅಶ್ವಥ್ ಕುಲಕರ್ಣಿ ಎಂಬ ಶ್ರೋತೃ ಒಬ್ಬರು ಅಪರ್ಣಾ ಅವರಿಗೆ ಕರೆ ಮಾಡಿ -“ತಮ್ಮ ಬಳಿ ಗಾಯಕಿ ಸುಲೋಚನಾ ಅವರನ್ನು ಕುರಿತು ಪೂರ್ಣ ಮಾಹಿತಿ ಇದೆಯೆಂದು’ ಹೇಳಿದರು. ಕೂಡಲೇ ಅವರ ಪೂರ್ವಾಪರ ವಿಚಾರಿಸಿ, ಅಧಿಕಾರಿಗಳಿಗೆ ತಿಳಿಸಿ, ಅಶ್ವಥ್ ಅವರನ್ನು ನೇರ ಸಂಪರ್ಕ ಮಾಡಿ ಪೂರ್ತಿ ವಿವರ ಪ್ರಸಾರ ಆಗುವ ಹಾಗೆ ನೋಡಿಕೊಂಡರು. ತಮ್ಮ ಪ್ರಸಂಗಾವಧಾನ, ಸಮಯಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳುವ ತಮ್ಮ ಗುಣಗಳಿಂದ ಅಪರ್ಣಾ ಎಲ್ಲರ ಪ್ರೀತಿ ಗಳಿಸಿದ್ದರು. ಅವರ ಜೊತೆಗಿನ ಒಡನಾಟ ನೆನೆಸಿಕೊಳ್ಳುತ್ತ –
ಕನ್ನಡಮ್ಮನ ದೇವಾಲಯ
ಕಂಡೇ ಹೆಣ್ಣಿನ ಕಂಗಳಲಿ
ಕನ್ನಡ ನಾಡಿನ ಚರಿತೆಯನು
ಕಂಡೇ ಆಕೆಯ ಹೃದಯದಲಿ
ವಂದನೆ ಆ ಹೆಣ್ಣಿಗೇ…
ಮೊನ್ನೆ ವಿವಿಧಭಾರತಿಯಲ್ಲಿ ಈ ಗೀತೆ ಯನ್ನು ಪ್ರಸಾರ ಮಾಡಿ, ಇದು ನಮ್ಮನ್ನು ಅಗ ಲಿದ ಅಪರ್ಣಾ ಅವರಿಗೆ ಅರ್ಪಣೆ ಎಂದು ಹೇಳಿದಾಗ ನೂರಾರು ಸಂದೇಶಗಳು, ಪ್ರತಿ ಕ್ರಿಯೆಗಳು ಹರಿದು ಬಂದವು. “ಬ್ರಹ್ಮಾಸ್ತ್ರ’ ಚಿತ್ರದ ಈ ಹಾಡು, ಅಪರ್ಣಾ ಅವರಿಗಾಗಿಯೇ ಬರೆದಂತಿದೆ.
ಉದ್ಘೋಷಕಿಯಾಗಿ…
ಅಪರ್ಣಾ ಆಕಾಶವಾಣಿಗೆ ಹೆಜ್ಜೆ ಇಟ್ಟದ್ದು ಬಾಲಕಲಾವಿದೆಯಾಗಿ. ನಂತರದಲ್ಲಿ ಅವರು ಆಕಾಶವಾಣಿಗೆ ತಾತ್ಕಾಲಿಕ ಉದ್ಘೋಷಕಿಯಾಗಿ ಬರುತ್ತಿದ್ದರು. ಅಂದರೆ, ನಿಲಯದ ಸಿಬ್ಬಂದಿ, ಉದ್ಘೋಷಕರು ರಜೆ ಹಾಕಿದಾಗ, ಸಿಬ್ಬಂದಿ ಕೊರತೆ ಆದಾಗ ಹೊರಗಿನ ಕಲಾವಿದರಿಗೆ ಒಂದು ಪಾಳಿಯನ್ನು ಒಪ್ಪಂದದ ಮೇರೆಗೆ ನಿರ್ವಹಣೆ ಮಾಡಲು ಅವಕಾಶ ನೀಡುತ್ತದೆ ಆಕಾಶವಾಣಿ. ಬೆಳಗ್ಗೆ, ಸಂಜೆ ಮತ್ತು ಮಧ್ಯಾಹ್ನ ಮೂರೂ ಪಾಳಿ ಗಳಲ್ಲಿ ಯಾವುದೇ ಪಾಳಿ ವಹಿಸಿದರೂ ಅವರು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದ್ದರು.
ಅಪರ್ಣಾ ಇದ್ದರೆ ನಿರಾಳ. ಅವರು ಏನೇ ಇದ್ದರೂ ನಿಭಾಯಿಸುತ್ತಾರೆ ಎಂಬ ವಿಶ್ವಾಸ ಎಲ್ಲರಿಗೂ ಇತ್ತು. ಶಾಸ್ತ್ರೀಯ ಸಂಗೀತ, ಚಿತ್ರಗೀತೆ, ಮಾತು, ನಾಟಕ, ರೂಪಕ ಮಾಹಿತಿ… ಎಲ್ಲದಕ್ಕೂ ಅವರು ಹೊಂದಿಕೊಳ್ಳುತ್ತಿದ್ದರು. ಒಮ್ಮೆ ಕಾರ್ಯಕ್ರಮ ಪಟ್ಟಿ ನೋಡಿಕೊಂಡರೆ ಆಯಿತು, ತುಂಬ ಬೇಗನೆ ಅರ್ಥ ಮಾಡಿಕೊಂಡು ಮುತ್ತು ಪೋಣಿಸಿದ ಹಾಗೆ ವಾಕ್ಯ ಪೋಣಿಸಿ ಮಾತನಾಡುತ್ತಿದ್ದರು.
ನಿರೂಪಣಾ ಜಗತ್ತು ಇನ್ನೂ ಹೀಗೆ ವ್ಯಾಪಿಸಿರದ ಸಮಯದಲ್ಲಿ, ಅದು ಒಂದು ವ್ಯಾಪಾರ, ಅಬ್ಬರ, ಟಿಆರ್‌ಪಿ ಆಗಿರದೆ, ನಿಜದ ಉದ್ಘೋಷಣೆ, ನಿಜದ ಪ್ರಸ್ತುತೀಕರಣ, ನಿಜದ ಕಲೆ ಅನಿಸಿಕೊಂಡಿದ್ದ ಆ ನಿಜ ಸಮಯದಲ್ಲಿ “ನಿಜದ ನಿಜವಾಗಿ’ ಬೆಳೆದ ವರು ಅಪರ್ಣಾ. ಕನ್ನಡದ ಜನ ಮನಗಳ ವಿವಿಧ ಭಾವಗಳ ಕಿಂಡಿಗಳನ್ನು ಬೆಸೆದು ಸಾಗಿದ ನಿರೂಪಣಾ ಕೊಂಡಿ. ಅಬ್ಬರವಿಲ್ಲದ ಅವರ ಮೃದು ಮಾತು ಕೇಳಿಸುತ್ತಲೇ ಇದೆ, ನಾವು ಕಿವಿಕೊಡಬೇಕು ಅಷ್ಟೇ.
ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ…
ಅಪರ್ಣಾ, ನಿಮಗೆ ಇಷ್ಟವಾದ ಹಾಡು ಯಾವುದು? ಎಂದು ಅದೊಮ್ಮೆ ಕೇಳಿದಾಗ ಆಕೆ ಮೆಲುದನಿಯಲ್ಲಿ ಹೇಳಿದ್ದರು: ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ, ಕಣ್ಣಲ್ಲಿ ತುಂಬಿರುವೆ, ಮನದಲಿ ಮನೆ ಮಾಡಿ ಆಡುವೆ..!ಈಗೊಮ್ಮೆ ಅವರನ್ನು ನೆನಪು ಮಾಡಿಕೊಂಡಾಗ ನಾವು ಹೇಳುವ ಹಾಡೂ ಅದೇ ಆಗುತ್ತದೆ!!
ಒಮ್ಮೆ ಮುಖ ನೋಡಿ, ಅವರಿಗೇನಪ್ಪ…ಆರಾಮಾಗಿದಾರೆ ಅಂದುಬಿಡ್ತಾರೆ ಜನ. ಆದರೆ ವಾಸ್ತವ ಹಾಗೆ ಇರಲ್ಲ. ಎಲ್ಲರಿಗೂ ಕಷ್ಟ ಇರುತ್ತೆ. ಆದರೆ, ಆ ಕಷ್ಟವನ್ನು ಎದುರಿಸಿ ನಕ್ಕೊಂಡು ಆರಾಮ್ಸೆ ಇರಬೇಕು. ಹಕ್ಕಿ ಹಾರೋದು ಒಂದು ಸಂಭ್ರಮ, ಹೂವು ಅರಳ್ಳೋದು ಒಂದು ಸಂಭ್ರಮ. ಜೀವನದಲ್ಲಿ ನಾವು ನೋಡುವ ದೃಷ್ಟಿ ತುಂಬಾ ಮುಖ್ಯ ಆಗುತ್ತೆ. ಜೀವನ ಒಂದು ನಿತ್ಯೋತ್ಸವ. -ಅಪರ್ಣಾ ವಸ್ತಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್ ಓಟ; ಗಳಿಸಿದ್ದೆಷ್ಟು?
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.