Kambala; ಮೊದಲ ಓಟದಲ್ಲೇ ಪ್ರಶಸ್ತಿ ಗೆದ್ದಿದ್ದ ‘ಲಕ್ಕಿ’ ಅದೇ ಅವರಸರದಲ್ಲಿ ಹೊರಟು ಹೋದ
ಬದುಕಿನ ಓಟವನ್ನು ತುಸು ಹೆಚ್ಚೇ ವೇಗದಲ್ಲೇ ಮುಗಿಸಿದ ಲಕ್ಕಿ| ಪಿನ್ನುಪಾಲರಿಗೆ ಅದೃಷ್ಟ ತಂದ ಲಕ್ಕಿ ಇನ್ನು ನೆನಪು ಮಾತ್ರ
ಕೀರ್ತನ್ ಶೆಟ್ಟಿ ಬೋಳ, Jul 18, 2024, 4:01 PM IST
ಲಕ್ಕಿ…. A star has born ಎಂದು ಕಂಬಳಾಭಿಮಾನಿಗಳು ತಮ್ಮೊಳಗೆ ಮಾತನಾಡಿಕೊಂಡಿದ್ದ ದಿನಗಳು ಕಳೆದು ಹೆಚ್ಚೇನೂ ಆಗಿಲ್ಲ.. ಜೂನಿಯರ್ ವಿಭಾಗದಲ್ಲಿ ಮೊದಲು ತನ್ನನ್ನು ಪರಿಚಯಿಸಿಕೊಂಡು ಸೀನಿಯರ್ ಆದೊಡನೆ ತನ್ನ ಓಟವೇನು, ಗತ್ತು ಗೈರತ್ತೇನು ಎಂದು ತೋರಿಸಿಕೊಟ್ಟಾತ. 2023-24ರ ಸೀಸನ್ ನಲ್ಲಿ ದೊಡ್ಡ ಹೆಸರು ಮಾಡಿ ಪದಕಮಾಲೆಗೆ ಕೊರಳೊಡ್ಡಿದ್ದ ಲಕ್ಕಿ ಭವಿಷ್ಯದ ದೊಡ್ಡ ಸ್ಟಾರ್ ಆಗುವ ಸೂಚನೆ ನೀಡಿದ್ದ. ಆದರೆ ಕಂಬಳ ಕರೆಯಲ್ಲಿ ಚಿಗರೆಯಂತೆ ಓಡುತ್ತಿದ್ದ ಲಕ್ಕಿ ಬದುಕಿನ ಓಟವನ್ನು ಬಹುಶಃ ತುಸು ಹೆಚ್ಚು ವೇಗವಾಗಿಯೇ ಓಡಿದ್ದ. ಕಾಲ ನಿರ್ಣಯಿಸಿದ್ದ ಅಂತಿಮ ಗೆರೆಯನ್ನು ತಲುಪಿದ್ದ ಲಕ್ಕಿಯನ್ನು ಓಡಿ ಬಂದು ಮುತ್ತಿಕ್ಕಲು ಅಭಿಮಾನಿಗಳ ಕಾಲಲ್ಲಿ ಕಸುವು ಉಳಿದಿಲ್ಲ. ಲಕ್ಕಿ ಇನ್ನಿಲ್ಲವೆಂಬ ವಾರ್ತೆಯನ್ನು ಅರಗಿಸಿಕೊಳ್ಳಲು ಹಲವರಿಗೆ ಇನ್ನೂ ಸಾಧ್ಯವಾಗಿಲ್ಲ.
ಹೌದು, ವರಪಾಡಿ ಬಡಗುಮನೆ ದಿವಾಕರ ಚೌಟರ ಹಟ್ಟಿಯಲ್ಲಿದ್ದ ಆರು ವರ್ಷ ಪ್ರಾಯದ ಲಕ್ಕಿ ಎಂಬ ಓಟದ ಕೋಣ ಬುಧವಾರ (ಜುಲೈ 17) ಕೊನೆಯುಸಿರೆಳೆದಿದೆ. ಕಳೆದ ಕೆಲವು ದಿನಗಳಿಂದ ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಕಿ ಇಹ ಲೋಕದ ಯಾತ್ರೆಯನ್ನು ಮುಗಿಸಿ ಹೊರಟಿದ್ದಾನೆ.
ಕಳೆದ ಮೂರು ವರ್ಷಗಳಿಂದ ಜೋಡುಕರೆ ಕಂಬಳದಲ್ಲಿ ಭಾಗವಹಿಸುತ್ತಿದ್ದ ಲಕ್ಕಿ ಸುಮಾರು 12 ಪದಕಗಳನ್ನು ಗೆದ್ದುಕೊಂಡಿದ್ದಾನೆ. ಇದಕ್ಕೂ ಮೊದಲು ಸಾಂಪ್ರದಾಯಿಕ ಕಂಬಳಗಳಲ್ಲಿ ತನ್ನದೇ ಛಾಪು ಮೂಡಿಸಿದ್ದ ಓಟಗಾರನೀತ.
ಹೆಸರಿನ ಹಿಂದಿದೆ ‘ಅದೃಷ್ಟ’ದ ಕಥೆ
ಸುಮಾರು ಆರೇಳು ವರ್ಷಗಳ ಹಿಂದೆ ಕೋಣವೊಂದನ್ನು ಖರೀದಿ ಮಾಡಲೆಂದು ದಕ್ಷಿಣ ಕನ್ನಡದ ಬೆಳುವಾಯಿಯ ಪೈರಿಗೆ ಬಂದಿದ್ದ ಭಟ್ಕಳದ ಎಚ್.ಎನ್. ನಿವಾಸದ ಪಿನ್ನುಪಾಲ್ ಅವರ ಕಣ್ಣಿಗೆ ಬಿದ್ದಿದ್ದು ಒಂದೂವರೆ ಎರಡು ವರ್ಷ ಪ್ರಾಯದ ಈ ಕೋಣ. ಅದರ ಅಂಗಸೌಷ್ಟವ, ಲಕ್ಷಣಗಳಿಗೆ ಮನಸೋತ ಪಿನ್ನು ಪಾಲ್ ಅವರು ಕೋಣವನ್ನು ಭಟ್ಕಳಕ್ಕೆ ತೆಗೆದುಕೊಂಡು ಹೋದರು.
ಹಲವು ವರ್ಷಗಳಿಂದ ಸ್ಥಳೀಯ ಸಾಂಪ್ರದಾಯಿಕ ಕಂಬಳಗಳಲ್ಲಿ ಭಾಗವಹಿಸುತ್ತಿದ್ದ ಪಿನ್ನು ಪಾಲ್ ಅವರಿಗೆ ಅದುವರೆಗೂ ಒಂದೇ ಒಂದು ಕಡೆ ಗೆಲ್ಲಲಾಗಲಿಲ್ಲ ಎಂಬ ಕೊರಗಿತ್ತು. ಇದೇ ಕಾರಣದಿಂದ ಒಳ್ಳೆಯ ಕೋಣವೊಂದನ್ನು ಸಾಕಬೇಕು ಎಂದು ಭಟ್ಕಳದಿಂದ 150 ಕಿ.ಮೀ ದೂರದ ಬೆಳುವಾಯಿವರೆಗೆ ಬಂದಿದ್ದರು ಪಿನ್ನು ಪಾಲ್.
ಅಂದು ಬೈಂದೂರಿನ ಪಟೇಲರ ಕಂಬಳ. ಅದು ಪಿನ್ನುಪಾಲರ ಹೊಸ ಕೋಣದ ರಂಗಪ್ರವೇಶ. ಆ ಕೋಣಕ್ಕೆ ಭಾಗವಹಿಸಿದ ಮೊದಲ ಕಂಬಳದಲ್ಲಿಯೇ ಮೆಡಲ್. ಇದು ಪದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಶತಕ ಗಳಿಸಿದಂತೆ. ಇದುವರೆಗೆ ಒಂದೂ ಮೆಡಲ್ ಗೆದ್ದಿರದ ಪಿನ್ನುಪಾಲ್ ಅವರಿಗೆ ಮೆಡಲ್ ಅದೃಷ್ಟ ತಂದ ಕೋಣಕ್ಕೆ ಪ್ರೀತಿಯಿಂದ ಅವರು ಅಂದು ಇಟ್ಟ ಹೆಸರು ‘ಲಕ್ಕಿ’.
ಅಲ್ಲೊಂದು ವಿಶೇಷವಿತ್ತು. ಆಗಿನ್ನು ಲಕ್ಕಿಗೆ ಸಣ್ಣ ಪ್ರಾಯ. ಸಬ್ ಜೂನಿಯರ್ ವಿಭಾಗದಲ್ಲಿ ಓಡಬೇಕಿತ್ತು. ಆದರೆ ಪಟೇಲರ ಕಂಬಳದಲ್ಲಿ ಸಬ್ ಜೂನಿಯರ್ ವಿಭಾಗದ ಸ್ಪರ್ಧೆಯೇ ಇರಲಿಲ್ಲ. ಹೀಗಾಗಿ ತನಗಿಂತ ಹೆಚ್ಚಿನ ಪ್ರಾಯದ ಕೋಣಗಳ ಜೂನಿಯರ್ ವಿಭಾಗದಲ್ಲಿ ಭಾಗವಹಿಸಿದ್ದ ಲಕ್ಕಿ ಅಲ್ಲಿ ಎಲ್ಲರ ಗಮನ ಸೆಳೆದು ಪದಕ ಗೆದ್ದುಕೊಂಡಿದ್ದ. ಹೀಗೆ ಕಂಬಳ ಗದ್ದೆಯಿಂದ ಸಿಡಿದ ಮೊದಲ ಕೆಸರು ನೀರನ್ನೇ ವಿಜಯದ ಪನ್ನೀರಾಗಿಸಿದ್ದ ಲಕ್ಕಿ.
ಎರಡು ವರ್ಷದ ಸಾಂಪ್ರದಾಯಿಕ ಕಂಬಳಗಳಲ್ಲಿ ಓಡಿದ್ದ ಲಕ್ಕಿ ಹಲವು ಪ್ರಶಸ್ತಿ ಗೆದ್ದುಕೊಂಡಿದ್ದ. ಪದಕಗಳಿಲ್ಲ ಎನ್ನುವ ಬೇಸರದಲ್ಲಿದ್ದ ಭಟ್ಕಳ ಎಚ್.ಎನ್.ನಿವಾಸ ಪಿನ್ನುಪಾಲ್ ಅವರ ಹೆಸರನ್ನು ಹಲವೆಡೆ ಮಿಂಚುವಂತೆ ಮಾಡಿದ್ದ. 2020-21ರ ಸಮಯದಲ್ಲಿ ಪಿನ್ನುಪಾಲ್ ಅವರು ಅವಿಭಜಿತ ದಕ್ಷಿಣ ಕನ್ನಡದ ಜೋಡುಕರೆ ಕಂಬಳಕ್ಕೆ ಬಂದಿದ್ದರು. ಈ ಸಾಲಿನಲ್ಲಿ ಕೆಲವು ಕಂಬಳಗಳಲ್ಲಿ ಸೆಮಿ ಫೈನಲ್ ತನಕ ಬಂದರೂ, ಪದಕ ಸಿಕ್ಕಿದ್ದು 2021-22 ಸಾಲಿನಲ್ಲಿ.
2021-22ರ ಮೂಡಬಿದಿರೆಯ ಕೋಟಿ ಚೆನ್ನಯ ಕಂಬಳದಲ್ಲಿ ತೆಗ್ಗರ್ಸೆ ಪಾಂಡೂ ಜೊತೆಗೂಡಿದ ಲಕ್ಕಿ ಮೊದಲ ಬಾರಿಗೆ ಜೋಡುಕರೆ ಕಂಬಳದ ಪ್ರಶಸ್ತಿ ಗೆದ್ದುಕೊಂಡಿದ್ದ. ಆ ಸೀಸನ್ ನಲ್ಲಿ ಬಳಿಕ ಅದೇ ಜೋಡಿ ಮಿಯ್ಯಾರು ಮತ್ತು ಬಾರಾಡಿ ಕಂಬಳದಲ್ಲಿ ಪ್ರಶಸ್ತಿ ಬಾಚಿತ್ತು. 2022-23 ಸೀಸನ್ ನಲ್ಲಿ ಭಟ್ಕಳ ಪವನ್ ಜತೆಯಾಗಿ ಎರಡು ಮತ್ತು ನಾವುಂದ ಪುಟ್ಟ ಜತೆಯಾಗಿ ಎರಡು ಮೆಡಲ್ ಗೆದ್ದುಕೊಂಡಿದ್ದ. ಇದೇ ಸೀಸನ್ ಕೊನೆಗೆ ವರಪಾಡಿ ಬಡಗುಮನೆ ದಿವಾಕರ ಚೌಟರು ಲಕ್ಕಿಯನ್ನು ಖರೀದಿ ಮಾಡಿದ್ದರು.
“ಲಕ್ಕಿ ನಮಗೆ ಲಕ್ಕಿ ಕೋಣ. ಆತ ಎಲ್ಲಾ ಕೋಣಗಳಂತೆ ಅಲ್ಲ. ಆತ ಭಿನ್ನವಾಗಿದ್ದ. ಎಲ್ಲರಿಗೂ ಪ್ರಿಯವಾಗಿದ್ದ. ಗಂತಿನಲ್ಲಿ ಸ್ವಲ್ಪ ಕಿರಿಕಿರಿ ಮಾಡುತ್ತಿದ್ದರೂ ಓಟದಲ್ಲಿ ಎಂದೂ ಜತೆಗಾರ ಕೋಣವನ್ನು ಎಂದೂ ಹಾಳು ಮಾಡಲಿಲ್ಲ. ಸೀನಿಯರ್ ಆಗಿ ಕೇವಲ ವರ್ಷವಾಗಿತ್ತು, ಇನ್ನಷ್ಟು ಮೆಡಲ್ ಮಾಡುವ ಕೋಣವಾಗಿದ್ದ ನಮ್ಮ ಲಕ್ಕಿ..” ಎನ್ನುತ್ತಾರೆ ಲಕ್ಕಿಯನ್ನು ಹಲವು ಕೂಟಗಳಲ್ಲಿ ಓಡಿಸಿ ಪದಕ ಗೆದ್ದಿದ್ದ ಓಟಗಾರ ಭಟ್ಕಳ ಶಂಕರ್.
2023-24ರ ಸೀಸನ್ ನಲ್ಲಿ ಸೀನಿಯರ್ ವಿಭಾಗಕ್ಕೆ ಎಂಟ್ರಿ ಪಡೆದಿದ್ದ ಲಕ್ಕಿ ಮೊದಲ ಎರಡು ಕಂಬಳಗಳಲ್ಲಿಯೇ ಪದಕ ಗೆದ್ದು ಬೀಗಿದ್ದ. ಅದರಲ್ಲೂ ಇದೇ ಮೊದಲ ಬಾರಿಗೆ ನಡೆದ ಬೆಂಗಳೂರು ಕಂಬಳದಲ್ಲಿ ಮಾಳ ರಾಜನ ಜೊತೆಯಾಗಿ ಓಡಿದ ಲಕ್ಕಿ ರಜತ ಪದಕ ಗೆದ್ದುಕೊಂಡಿದ್ದ. ಈ ಸೀಸನ್ ನಲ್ಲಿ ಕಕ್ಯಪದವು, ಬೆಂಗಳೂರು, ನರಿಂಗಾನ, ಐಕಳ, ಜಪ್ಪು ಕಂಬಳಗಳಲ್ಲಿ ಲಕ್ಕಿ ಪದಕ ಗೆದ್ದುಕೊಂಡಿದ್ದ.
ಇಂತಹ ಲಕ್ಕಿಗೆ ಕಳೆದ ಕೆಲವು ದಿನಗಳಿಂದ ಹೊಟ್ಟೆಯಲ್ಲೇನೋ ಸಮಸ್ಯೆ. ಜೀರ್ಣ ಕ್ರಿಯೆಯ ಸಮಸ್ಯೆಯ ಕಾರಣದಿಂದ ಕೆಲವು ದಿನಗಳಿಂದ ಸರಿಯಾಗಿ ತಿನ್ನದೆ ಬಳಲಿದ್ದ. ಜು.16ರಂದು ಕಾರ್ಕಳದ ಖ್ಯಾತ ವೈದ್ಯ ವಾಸುದೇವ ಪೈ ಅವರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಮರುದಿವಸ ಮತ್ತೆ ಚಿಕಿತ್ಸೆಗೆಂದು ಕಾರ್ಕಳಕ್ಕೆಂದು ಕರೆತರಲಾಗಿತ್ತು. ಅಲ್ಲಿ ಲಕ್ಕಿ ಕೊನೆಯುಸಿರೆಳೆದಿದೆ.
ಭಟ್ಕಳ ಎಚ್.ಎನ್.ನಿವಾಸ ಪಿನ್ನು ಪಾಲ್ ರಿಗೆ ಕಂಬಳ ಕ್ಷೇತ್ರದಲ್ಲಿ ಲಕ್ ತಂದಿದ್ದ ಲಕ್ಕಿಗೆ ಜೀವನದ ರೇಸ್ ನಲ್ಲಿ ದೀರ್ಘಾಯುಷ್ಯದ ಅದೃಷ್ಟವಿರಲಿಲ್ಲ. ಭಾಗವಹಿಸಿದ ಕೆಲವೇ ವರ್ಷಗಳಲ್ಲಿ ಕಂಬಳ ಇತಿಹಾಸದಲ್ಲಿ ಅಚ್ಚಳಿಯದ ಹೆಸರು ಮೂಡಿಸಿದ್ದಾನೆ. ಕಂಬಳ ಕರೆಯಲ್ಲಿ ಲಕ್ಕಿ ಗೆಲುವಿನ ಗೆರೆ ಮುಟ್ಟುತ್ತಿದ್ದಂತೆ ಸಂತಸದಲ್ಲಿ ಕುಣಿದಾಡಿದ್ದ ಅಭಿಮಾನಿಗಳು ಇದೀಗ ಇನ್ನೆಂದೂ ಬಾರದ ಲಕ್ಕಿಗೆ ಕಣ್ಣೀರು ಹರಿಸಿದ್ದಾರೆ.
ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.