Belagavi: ಗಡಿಯಲ್ಲಿಯ ಘಾಟ್ ಹೆದ್ದಾರಿ ಭಾರೀ ಅಪಾಯಕಾರಿ-ಗುಡ್ಡ ಕುಸಿತಕ್ಕೆ ತಡೆ ಇಲ್ಲವೇ?
Team Udayavani, Jul 18, 2024, 2:12 PM IST
ಉದಯವಾಣಿ ಸಮಾಚಾರ
ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಶುರು ವಾಯಿತೆಂದರೆ ಗಡಿ ಭಾಗ ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಹಾಗೂ ಮಣ್ಣು ಕುಸಿತ ಆಗುವುದು ಸಾಮಾನ್ಯವಾಗಿದ್ದು, ಕುಸಿತಕ್ಕೆ ತಡೆ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಪಶ್ಚಿಮ ಘಟ್ಟದಲ್ಲಿ ಸುರಿಯುವ ಧಾರಾಕಾರ ಮಳೆಯಿಂದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಅಪಾಯಕಾರಿ ಮಟ್ಟಕ್ಕೆ ತಲುಪುತ್ತವೆ. ಗುಡ್ಡ ಕುಸಿತ ಆಗುವುದು ಈ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ಬಹುತೇಕ ರಸ್ತೆಗಳು ಕಿರಿದಾಗಿರು ವುದರಿಂದ ಈ ಮಾರ್ಗದಲ್ಲಿ ಗುಡ್ಡ ಕುಸಿತಗೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಗುಡ್ಡ ಕುಸಿತ ತಡೆಯಲು ಲೋಕೋಪ ಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಏಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.
ಬೆಳಗಾವಿಯಿಂದ ಗೋವಾಕ್ಕೆ ಹೋಗುವ ಅನಮೋಡ ಘಾಟ್, ಚೋರ್ಲಾ ಘಾಟ್, ತಿಲಾರಿ ಘಾಟ್, ಮಹಾರಾಷ್ಟ್ರಕ್ಕೆ ಹೋಗುವ ಅಂಬೋಲಿ ಘಾಟ್‌ನಲ್ಲಿ ಪದೇ ಪದೇ ಗುಡ್ಡ ಕುಸಿತವಾಗುತ್ತದೆ. ಕೊಂಕಣ ರೈಲ್ವೆ ಸಂಪರ್ಕ ಕಲ್ಪಿಸುವ ಗೋವಾಕ್ಕೆ ತೆರಳುವ ರೈಲ್ವೆ ಮಾರ್ಗದಲ್ಲಿಯೂ ಮಣ್ಣು ಕುಸಿತಗೊಂಡು ರೈಲು ಸಂಚಾರಕ್ಕೆ ತಡೆಯೊಡ್ಡುತ್ತದೆ. ಅಂಬೋಲಿ ಘಾಟ್ ಮಾರ್ಗದಲ್ಲಿ ಎರಡು ತಿಂಗಳಲ್ಲಿ ಮೂರ್‍ನಾಲ್ಕು ಬಾರಿ ಮಣ್ಣು ಕುಸಿತವಾಗಿದೆ. ಬುಧವಾರವಷ್ಟೇ ದೊಡ್ಡದಾದ ಕಲ್ಲು ಬಂಡೆ ರಸ್ತೆ ಮೇಲೆ ಬಿದ್ದು, ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ.ಮಳೆಗಾಲದಲ್ಲಿ ಈ ಮಾರ್ಗಗಳು ದೊಡ್ಡ ಪ್ರಮಾಣದಲ್ಲಿ ಅಪಾಯಕ್ಕೆ ಎಡೆ ಮಾಡಿಕೊಡುತ್ತವೆ.
ದೊಡ್ಡ ದೊಡ್ಡ ಕಲ್ಲುಗಳು, ಮಣ್ಣು ರಸ್ತೆ ಮೇಲೆ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಆಗುವುದು ಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿ ಗುಡ್ಡ ಕುಸಿತಗೊಂಡರೆ ನಾಲ್ಕೈದು ದಿನಗಳ ಕಾಲ ರಸ್ತೆ ಮಾರ್ಗ ಸಂಪೂರ್ಣ ಬಂದ್ ಆಗಲಿದೆ. ಬೆಳಗಾವಿಯ ಖಾನಾಪುರದಿಂದ ಅನಮೋಡ ಘಾಟ್ ಮೂಲಕ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಅನೇಕ ಸಲ ಗುಡ್ಡ ಕುಸಿತವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಇಲ್ಲಿ ಅನೇಕ ಭಾರೀ ಹಾಗೂ ಸಣ್ಣ ಪುಟ್ಟ ವಾಹನಗಳು ಓಡಾಡುತ್ತವೆ. ವಾಹನ ದಟ್ಟಣೆ ಹೆಚ್ಚಾಗಿರುತ್ತದೆ.
ತೆಲಂಗಾಣ, ಕರ್ನಾಟಕ ಹಾಗೂ ಮಹಾರಾಷ್ಟ್ರದ ಪ್ರವಾಸಿಗರು ಈ ಮಾರ್ಗದ ಮೂಲಕವೇ ಗೋವಾಕ್ಕೆ ತೆರಳುತ್ತಾರೆ. ಜಾಂಬೋಟಿ
ಮಾರ್ಗದಿಂದ ಚೋರ್ಲಾ ಘಾಟ್ ಮೂಲಕ ಗೋವಾಕ್ಕೆ ತೆರಳುವ ಈ ಮಾರ್ಗದಲ್ಲಿ ಗುಡ್ಡ ಕುಸಿತ ಆಗುತ್ತದೆ. ಭಾರೀ ಪ್ರಮಾಣದಲ್ಲಿ ಮಣ್ಣು ರಸ್ತೆ ಮೇಲೆ ಬಿದ್ದು ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅನೇಕ ಸಲ ಈ ಮಾರ್ಗದಲ್ಲಿ ಮ ಣ್ಣು ಕುಸಿತಗೊಂಡಿದೆ. ಆದರೆ ಪ್ರಾಣ ಹಾನಿ ಸಂಭವಿಸಿಲ್ಲ. ಚೋರ್ಲಾ ಘಾಟ್ ದೊಡ್ಡ ಘಟ್ಟ ಪ್ರದೇಶ ಆಗಿರುವುದರಿಂದ ಕೆಲವು ಕಡೆಗಳಲ್ಲಿ ರಸ್ತೆ ಪಕ್ಕದಲ್ಲಿ ತಡೆಗೋಡೆಗಳೂ ಇಲ್ಲ.
ಬೆಳಗಾವಿಯಿಂದ ಮಹಾರಾಷ್ಟ್ರದ ಗಡಿಭಾಗ ಶಿನೋಳಿಯಿಂದ ದೋಡಾ ಮಾರ್ಗ ವಾಗಿಯೂ ಗೋವಾಕ್ಕೆ ತೆರಳಬಹುದಾಗಿದೆ.
ತಿಲಾರಿ ಘಾಟ್‌ದಿಂದ ಗೋವಾಕ್ಕೆ ಸಂಪರ್ಕವಿದ್ದು, ಈ ಮಾರ್ಗದಲ್ಲಿ ಗುಡ್ಡ ಕುಸಿತ ಆಗುವುದು ವಿರಳ. ಆದರೂ ಈ ಪ್ರದೇಶದಲ್ಲಿ ಧಾರಾಕಾರ ಮಳೆಯಾದಾಗ ಆಗಾಗ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಅತ್ಯಂತ ಕಠಿಣ ಹಾಗೂ ಅಪಾಯಕಾರಿಯಾದ ಮಾರ್ಗ
ಇದಾಗಿದೆ.
ಮಣ್ಣು ಕುಸಿತ ತಡೆಯಲು ಕಬ್ಬಿಣದ ಜಾಳಿಗೆ ಅಸಾಧ್ಯ
ಬೆಳಗಾವಿ-ಪುಣೆ ಮಾರ್ಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರ ಮಧ್ಯದ ನಿಪ್ಪಾಣಿ ಬಳಿಯ ತವಂದಿ ಘಾಟ್ ಬಳಿ ಗುಡ್ಡದ ಪಕ್ಕದ ಮಣ್ಣು, ಕಲ್ಲು ಕುಸಿಯದಂತೆ ಕಬ್ಬಿಣದ ಜಾಳಿಗೆ ಹಾಕಲಾಗಿದೆ. ಈ ಬಲೆಯಿಂದ ಮಣ್ಣು ಕುಸಿತ ಆಗುವುದು ತೀರಾ ವಿರಳ. ಅದೇ ರೀತಿಯಲ್ಲಿ ಚೋರ್ಲಾ, ಅಂಬೋಲಿ, ಅನಮೋಡ ಘಾಟ್‌ನಲ್ಲಿ ಅಳವಡಿಸಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಆದರೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ರೀತಿಯಾಗಿ ಕಬ್ಬಿಣದ ಜಾಳಿಗೆ ಹಾಕಲು ಆಗುವುದಿಲ್ಲ. ಮಳೆ ಭಾರೀ ಪ್ರಮಾಣದಲ್ಲಿ ಆಗುವುದರಿಂದ ಇದು ಕಿತ್ತುಹೋಗುವ ಸಾಧ್ಯತೆ ಇರುತ್ತದೆ.
ಅಂಬೋಲಿ ಘಾಟ್‌ದಲ್ಲಿ ಪದೇ ಪದೇ ಗುಡ್ಡ ಕುಸಿತ
ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಬೆಳಗಾವಿಯಿಂದ 65 ಕಿ.ಮೀ. ಅಂತರದಲ್ಲಿ ಆರಂಭವಾಗುವ ಅಂಬೋಲಿ ಘಾಟ್ ಮಾರ್ಗದಲ್ಲಿ ಅಂತೂ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗುತ್ತದೆ. ಈ ಎರಡು ತಿಂಗಳ ಅವಧಿಯಲ್ಲಿ ಅನೇಕ ಸಲ ರಸ್ತೆ ಮೇಲೆ ಗುಡ್ಡ ಕುಸಿತಗೊಂಡಿದೆ. ಅದೃಷ್ಟವಶಾತ್‌ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದಗುಡ್ಡ ಕುಸಿಯುವುದು ಸಾಮಾನ್ಯವಾಗಿದೆ. ಬೆಳಗಾವಿಯಿಂದ ಸಾವಂತವಾಡಿಗೆ ಹೋಗುವ
ಮಾರ್ಗ ಇದಾಗಿದೆ. ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಓಡಾಡುತ್ತವೆ. ಬುಧವಾರ ದೊಡ್ಡದಾದ ಕಲ್ಲು ಬಂಡೆ ರಸ್ತೆ ಮೇಲೆ ಬಿದ್ದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ರೈಲು ಹಳಿ ಮೇಲೆ ಮಣ್ಣು ಕುಸಿತ ಸಾಮಾನ್ಯ
ಗೋವಾದ ನಯನಮನೋಹರ ಹಾಲ್ನೊರೆಯಂತೆ ಹರಿಯುವ ದೂಧಸಾಗರ ಜಲಪಾತ ಸಮೀಪದ ಬ್ರಾಗೆಂಜಾ ಘಾಟ್‌ನಲ್ಲಿ ರೈಲು ಮಾರ್ಗದಿಂದ ಗೋವಾ ಸಂಪರ್ಕ ಕಲ್ಪಿಸುತ್ತದೆ. ಕರ್ನಾಟಕ ಹಾಗೂ ಗೋವಾ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ರೈಲು ಹಳಿಯ ಮೇಲೆಯೇ ಅನೇಕ ಸಲ ಗುಡ್ಡ ಕುಸಿತವಾಗುತ್ತದೆ. ಪದೇ ಪದೇ ಈ ಮಾರ್ಗದಲ್ಲಿ ಮಣ್ಣು ಕುಸಿತಗೊಂಡರೆ ರೈಲು ಮಾರ್ಗವೇ ಸ್ಥಗಿತಗೊಳ್ಳುತ್ತದೆ. ಕಳೆದ ವರ್ಷವೇ ರೈಲು ಹಳಿ ಮೇಲೆ ಮಣ್ಣು ಕುಸಿತಗೊಂಡಿತ್ತು. ಭಾರೀ ಪ್ರಮಾಣದಲ್ಲಿ ಮಳೆ ಆಗುವುದರಿಂದ ಇಲ್ಲಿ ಮಣ್ಣು ಕುಸಿತವಾಗುತ್ತದೆ. ನೈರುತ್ಯ ಹಾಗೂ ಕೊಂಕಣ ರೈಲ್ವೆ ಸಂಪರ್ಕ ಇದ್ದು, ಸುಮಾರು 26 ಕಿ.ಮೀ. ಸಂಪೂರ್ಣವಾಗಿ ಘಾಟ್ ಪ್ರದೇಶವಿದೆ. ಅತ್ಯಂತ ಅಪಾಯಕಾರಿ ಮಾರ್ಗ ಇದಾಗಿದೆ.
ಮಣ್ಣು ಗಟ್ಟಿಯಾಗಿ ಉಳಿಯುವಂತೆ ಕ್ರಮ ವಹಿಸಿ: ಸಮೀರ
ಘಾಟ್ ಪ್ರದೇಶಗಳಲ್ಲಿ ಗುಡ್ಡ-ಬೆಟ್ಟ ಕಡಿದು, ಗಿಡ ಮರಗಳನ್ನು ಕಡಿದು ರಸ್ತೆ ನಿರ್ಮಿಸಲಾಗುತ್ತಿದೆ. ಪ್ರಕೃತಿಯ ವಿರುದ್ಧವಾಗಿ ಅಭಿವೃದ್ಧಿ ನೆಪದಲ್ಲಿ ಪರಿಸರ ನಾಶ ಮಾಡುವ ಕೆಲಸ ಆಗುತ್ತಿದೆ. ಚೋರ್ಲಾ ಘಾಟ್ ಮಾರ್ಗದಲ್ಲಿ ರಸ್ತೆ ನಿರ್ಮಿಸಿ
20-25 ವರ್ಷಗಳು ಕಳೆದಿವೆ. ಆದರೆ ಮಣ್ಣು ಇನ್ನೂವರೆಗೂ ಅಲ್ಲಿ ಗಟ್ಟಿಯಾಗಿ
ಉಳಿದುಕೊಂಡಿಲ್ಲ. ಪದೇ ಪದೇ ಗುಡ್ಡ ಕುಸಿತ ಆಗುತ್ತಿದೆ. ಈಗ ಮತ್ತೆ ಚತುಷ್ಪಥ ರಸ್ತೆ
ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ.
ಇದರಿಂದ ಪ್ರಕೃತಿ ನಾಶವೇ ಆಗುತ್ತದೆ
ಹೊರತು ಗಟ್ಟಿಯಾಗಿ ಉಳಿಯುವುದಿಲ್ಲ ಎಂದು ಪರಿಸರ ಪ್ರೇಮಿ, ಗ್ರೀನ್ ಸೇವಿಯರ್ ಸಂಸ್ಥಾಪಕ ಸಮೀರ ಮಜಲಿ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ಮಳೆಯಾದಾಗ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಮಣ್ಣು ಗಟ್ಟಿಯಾಗಿ ಉಳಿಯಲು ಗಿಡ ಮರಗಳನ್ನು ಬೆಳೆಸದಿರುವುದು, ಹುಲ್ಲು ಬೆಳೆಸದಿರುವುದೇ ಇದಕ್ಕೆ ಮುಖ್ಯ ಕಾರಣ. ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉಳಿಸಬೇಕಿದೆ ಹೊರತು ಹಾಳು ಮಾಡಿ ಬಳುವಳಿಯಾಗಿ ಕೊಡುವುದಲ್ಲ. ಅಭಿವೃದ್ಧಿ ಆಗಲು ನಮ್ಮ ವಿರೋಧವಿಲ್ಲ. ಆದರೆ
ಅಚ್ಚುಕಟ್ಟಾಗಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪರಿಸರಕ್ಕೆ ಹಾನಿ ಆಗದಂತೆ ಕೈಗೊಳ್ಳಬೇಕು. ಈ ಬಗ್ಗೆ ನಮ್ಮಂಥ ಪರಿಸರ ಪ್ರೇಮಿಗಳ ಸಲಹೆ-ಸೂಚನೆ ಪಡೆಯುವುದು ಸೂಕ್ತ ಎಂದು ಹೇಳಿದರು.
*ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.