Harmonium: ವಂದೇ ಗುರೂಣಾಮ್‌ ಚರಣಾರವಿಂದೇ: ಹಾರ್ಮೋನಿಯಂ ಮಾಂತ್ರಿಕ ಡಾ| ಕಾಟೋಟಿ

ಗುರುವು ಸಾಕ್ಷಾತ್‌ ಪರಬ್ರಹ್ಮ ನಮ್ಮ ಪಾಲಿಗೆ. ಗುರುವಿನ ಚಹರೆ ಬದಲಾಗಿದೆಯಲ್ಲವೇ ಇಂದು...

Team Udayavani, Jul 20, 2024, 4:30 PM IST

Harmonium: ವಂದೇ ಗುರೂಣಾಮ್‌ ಚರಣಾರವಿಂದೇ: ಹಾರ್ಮೋನಿಯಂ ಮಾಂತ್ರಿಕ ಡಾ| ಕಾಟೋಟಿ

ಗುರುಪೂರ್ಣಿಮೆಯಂದು, ಭಗವಾನ್‌ ಸದಾಶಿವನಿಂದ ಪ್ರಾರಂಭವಾಗುವ ಸಂಪೂರ್ಣ ಗುರುಪರಂಪರೆಗೆ ಪೂಜೆ ಸಲ್ಲಿಸಲಾಗುತ್ತದೆ. ಭಗವಾನ್‌ ಶ್ರೀ ಕೃಷ್ಣ, ಭಗವಾನ್‌ ವೇದವ್ಯಾಸ, ಮತ್ತು ಜಗದ್ಗುರು ಶ್ರೀ ಆದಿಶಂಕರ ಭಗವತ್ಪಾದರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಪಾವನ ದಿನದಂದು ಜಗತ್ತಿನ ಎಲ್ಲೆಡೆ ವ್ಯಾಪಿಸಿರುವ, ಸುಜ್ಞಾನದಿಂದ ಅಜ್ಞಾನದ ಕತ್ತಲನ್ನು ದೂರಮಾಡುವ, ಎಲ್ಲ ಗುರು ವೃಂದಕ್ಕೆ ನಮಸ್ಕಾರಗಳು.

ಬರುವ ಆಷಾಢ ಹುಣ್ಣಿಮಯ ದಿನ, ಜುಲೈ 21, ಗುರುಪೂರ್ಣಿಮೆಯ ದಿನ. ವಿಶ್ವದ ಶ್ರೇಷ್ಠ ಗುರುಪರಂಪರೆಗೆ ಗೌರವ ಸಲ್ಲಿಸುವ ಸುದಿನ. ಭಗವಾನ್‌ ವೇದವ್ಯಾಸರ ಜನ್ಮದಿನ. ಭಾರತದ ಶ್ರೀಮಂತ ಸಾಂಸ್ಕೃತಿಕ ಇತಿಹಾಸದಲ್ಲಿ, ಗುರು-ಶಿಷ್ಯ ಪರಂಪರೆ ಒಂದು ಅವಿಭಾಜ್ಯ ಅಂಗವಾಗಿದೆ. ಅನೇಕ ಕಥೆಗಳು ಮತ್ತು ಉದಾಹರಣೆಗಳು ಗುರುಗಳ ಜ್ಞಾನ, ಶಿಷ್ಯರ ಶ್ರದ್ಧೆ ಮತ್ತು ಈ ಪವಿತ್ರ ಸಂಬಂಧದ ಮಹತ್ವವನ್ನು ಎತ್ತಿ ತೋರಿಸುತ್ತವೆ. ಭಾರತದ ಗುರು-ಆಚಾರ್ಯ ಪರಂಪರೆಗೆ ಅನೂಚಾನವಾದ ಇತಿಹಾಸವಿದೆ.

ದೇವಾಸುರರಿಂದ ಹಿಡಿದು ಅಳಿದುಹೋದ ರಾಜಪರಂಪರೆಯ ವರೆಗೂ ಗುರುಚರಣವನ್ನು ಪೂಜಿಸಿಕೊಂಡು ಬಂದವರೇ. ಗುರುವು ಸಾಕ್ಷಾತ್‌ ಪರಬ್ರಹ್ಮ ನಮ್ಮ ಪಾಲಿಗೆ. ಗುರುವಿನ ಚಹರೆ ಬದಲಾಗಿದೆಯಲ್ಲವೇ ಇಂದು? ಗುರುಮುಖೇನಕ್ಕಿಂತಲೂ ಗೂಗಲ್‌ ಮುಖೇನ, ಜಿಪಿಟಿಗಳಂತಹ ಕೃತಕ ಬುದ್ಧಿಮತ್ತೆಯ ಯಂತ್ರ ತಂತ್ರಗಳು ಕೆಲಸವನ್ನು ಸಿದ್ಧಿಸಿದರೂ ಗುರುವಿನ ಅಗತ್ಯ ಇದ್ದದ್ದೇ. ಖೇದವೇನೆಂದರೆ ಸಮಯದ ಜತೆಗೆ, ನಾವು ಗುರು-ಶಿಷ್ಯ ಸಂಬಂಧದ ಮಹತ್ವವನ್ನು ಮರೆಯುತ್ತಿದ್ದೇವೆ.

ಆಧುನಿಕ ಶಿಕ್ಷಣದಲ್ಲಂತೂ ನಾವು ಗುರುಗಳನ್ನು ಕಾಣುವ ರೀತಿಯೇ ಬದಲಾಗಿದೆ! ವಿದ್ಯಾರ್ಥಿ ತಪ್ಪು ಮಾಡಿದರೆ ಬೈಯುವಂತಿಲ್ಲ-ಹೊಡೆಯುವಂತಿಲ್ಲ! ಮಕ್ಕಳು ಭವಿಷ್ಯದಲ್ಲಿ ಏನು ಬೇಕಾದರೂ ಆಗಲಿ ಶಿಕ್ಷಕರಿಗೆ ತಮ್ಮ ಸಿಲೆಬಸ್‌ ಚೌಕಟ್ಟು, ಮಕ್ಕಳ ತಪ್ಪಿದ್ದರೂ ಹೆತ್ತವರು ಬಂದು ಪ್ರಶ್ನಿಸುವುದು ಶಿಕ್ಷಕರಲ್ಲೇ. ಸಾಕ್ಷರರು ಮತ್ತು ವಿದ್ಯಾವಂತರ ನಡುವಿನ ವ್ಯತ್ಯಾಸವೇ ಗುರುವಿನ ಜವಾಬ್ದಾರಿಯನ್ನು ತೋರಿಸುವುದು. ಗುರು ತೋರಿಸುವುದು ಬದುಕಿನುದ್ದಕ್ಕೂ ಬೇಕಾಗುವ ಸ್ಥೈರ್ಯದ ಜ್ಞಾನವನ್ನು. ಅದುವೇ ಮಾರ್ಗ-ದರ್ಶನ. ಅಖಂಡ ಮಂಡಲಾಕಾರವೂ ಗುರುವಿನ ಕೃಪೆಯಲ್ಲಿಯೇ ಇರುವುದಲ್ಲವೇ. ಭಾರತದ ಗುರು-ಶಿಷ್ಯ ಪರಂಪರೆ ಜಗತ್ತಿನ ಇತರ ದೇಶಗಳಲ್ಲಿ ಅಷ್ಟಾಗಿ ಕಾಣದ, ಇತರರಿಗೆ ಅರ್ಥವಾಗದ ವಿಶಿಷ್ಟ ಸಂಬಂಧವಾಗಿದೆ.

ಮಠಗಳಲ್ಲಿ ಗುರು ಪರಂಪರೆ ಉಳಿದುಕೊಂಡಿದೆ ಎಂಬುದು ನಿಜ, ಆದರೆ ಸಾಮಾನ್ಯ ಜೀವನದಲ್ಲಿ ಈ ಪವಿತ್ರ ಬಂಧ ಬಹುತೇಕ ಕಣ್ಮರೆಯಾಗಿದೆ. ಸಂಗೀತ, ನೃತ್ಯ, ನಾಟಕ ಮುಂತಾದ ಲಲಿತ ಕಲೆಗಳ ಕ್ಷೇತ್ರದಲ್ಲಿ ಗುರು-ಶಿಷ್ಯ ಪರಂಪರೆ ಇನ್ನೂ ಉಳಿದುಕೊಂಡಿದೆ. ಈ ಕಲಾವಿದರು ಈ ಪರಂಪರೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಸಾಗಿಸುವ ಮೂಲಕ ಅಮೂಲ್ಯವಾದ ಸೇವೆ ಸಲ್ಲಿಸುತ್ತಿದ್ದಾರೆ. ಕಲಾವಿದನ ನೈಪುಣ್ಯತೆಗೆ ಗುರುವಿನ ಈ ಪ್ರಭಾಮಂಡಲವೇ ಕಾರಣವಾಗಿರಬಹುದೇನೋ. ನಮ್ಮ ಸುತ್ತಲೂ ಅನೇಕ ಸ್ಫೂರ್ತಿದಾಯಕ ಉದಾಹರಣೆಗಳಿವೆ – ಗುರುಗಳ ಮಾರ್ಗದರ್ಶನದಲ್ಲಿ ಜ್ಞಾನ ಗಳಿಸಿ, ಗುರುಗಳಂತೆ ಪ್ರಭಾವ ಬೀರಿ, ಇಂದು ಗುರುಸ್ಥಾನದಲ್ಲಿ ನಿಂತು ಅನೇಕ ಶಿಷ್ಯರಿಗೆ ದೇಶ-ವಿದೇಶಗಳಲ್ಲಿ ಮಾರ್ಗದರ್ಶನ ನೀಡುತ್ತಿರುವ ಪಂಡಿತ್‌ ಡಾ| ರವೀಂದ್ರ ಗುರುರಾಜ್‌ ಕಾಟೋಟಿ ಇವರ ಬಗ್ಗೆ ತಿಳಿಯಲೇಬೇಕು. ಇವರು ಹೊರಡಿಸುವ ಗಾಳಿಯ ಪೆಟ್ಟಿಗೆ- ಹಾರ್ಮೋನಿಯಂನ ನಾದಕ್ಕೆ ತಲೆದೂಗದವರಿಲ್ಲ.

ಸಂಗೀತ ಪ್ರೇಮಿಗಳ ಮನೆಯಲ್ಲಿ ಜನಿಸಿದ ಕಾಟೋಟಿ ಅವರಿಗೆ ಸಂಗೀತದ ಬಗ್ಗೆ ಆಸಕ್ತಿ ಬೆಳೆಯಲು ಅವರ ಕುಟುಂಬದ ವಾತಾವರಣವೇ ಕಾರಣವಾಯಿತು. ಎಂಟನೆಯ ವಯಸ್ಸಿನಲ್ಲಿ, ಅವರ ಅಣ್ಣನ ಕೊಳಲು ನುಡಿಸುವಿಕೆಯಿಂದ ಪ್ರೇರಿತರಾಗಿ, ಅವರು ಸಂಗೀತ ಕಲಿಯಲು ಬಯಸಿದರು. ಅವರ ಆಸಕ್ತಿಯನ್ನು ಗಮನಿಸಿದ ತಂದೆ-ತಾಯಿಯವರು ಅವರಿಗೆ ಸಂಗೀತ ಪಾಠಗಳನ್ನು ನೀಡಲು ಅವರನ್ನು ಬಿಜಾಪುರೆ ಮಾಸ್ಟರ್‌ಎಂದೇ ಖ್ಯಾತರಾದ ಪಂಡಿತ್‌ ರಾಮಭಾವು ಬಿಜಾಪುರೆ ಅವರ ಸಂಗೀತ ವಿದ್ಯಾಲಯಕ್ಕೆ ಕರೆದುಕೊಂಡು ಹೋದರು. ಸಂಗೀತ ಲೋಕದಲ್ಲಿ ಶ್ರೀ ರಾಮಭಾವು ಬಿಜಾಪುರೆ ಅವರ ಹೆಸರು ಚಿರಸ್ಥಾಯಿಯಾಗಿದೆ. ಎಂಟು ದಶಕಗಳ ಕಾಲ, ಪಂಡಿತ್‌ ಬಿಜಾಪುರೆ ಅವರು ಭಾರತೀಯ ಸಂಗೀತಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ.

ಪ್ರತಿಭೆಗೆ ಪರಿಪೂರ್ಣತೆ ನೀಡಲು ಉತ್ತಮ ಗುರು ಬೇಕೇ ಬೇಕಲ್ಲವೇ? ಇಲ್ಲಿಯೂ ಆದದ್ದು ಅದೇ. ಗುರು ಶ್ರೀ ರಾಮಭಾವು ಬಿಜಾಪುರೆ ಮತ್ತು ಶಿಷ್ಯ ಕಾಟೋಟಿ ಅವರ ಮೊದಲ ಭೇಟಿ ಒಂದು ಭಾವನಾತ್ಮಕ ಮತ್ತು ಸ್ಫೂರ್ತಿದಾಯಕ ಘಟನೆಯಾಗಿತ್ತು. ಎಂಟನೆಯ ವಯಸ್ಸಿನ ಕಾಟೋಟಿ ಅವರು ಅಣ್ಣನೊಡನೆ ಗುರುಗಳ ಕ್ಲಾಸಿಗೆ ಭೇಟಿ ನೀಡಿದಾಗ, ಗುರುಗಳು ಅವರನ್ನು “ಸಂಗೀತದಲ್ಲಿ ಏನ ಕಲೀತಿ ?’ ಎಂದು ಕೇಳಿದಾಗ, ಕಾಟೋಟಿ ಅವರ ಕಣ್ಣುಗಳು ಗುರುಗಳ ಪಕ್ಕದಲ್ಲೇ ಇದ್ದ ಹಾರ್ಮೋನಿಯಂ ಪೆಟ್ಟಿಗೆಯ ಮೇಲೆ ನೆಟ್ಟವು. “ಅದನ್ನೇ ಕಲಿಸಿ ಕೊಡಿ’ ಎಂದು ಅವರು ಧೈರ್ಯವಾಗಿ ಹೇಳಿದರು. ಗುರುಗಳು ಕಾಟೋಟಿ ಅವರನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸಿ, ಸಪ್ತ ಸ್ವರಗಳ ಜ್ಞಾನವನ್ನು ಪರಿಚಯಿಸಲು ಪ್ರಾರಂಭಿಸಿದರು. ಅವರಲ್ಲಿ ಕಾಟೋಟಿ ಅವರ ಹಾರ್ಮೋನಿಯಂ ಅಭ್ಯಾಸ ಪ್ರಾರಂಭವಾಯಿತು.

ಈ ಭಾವನಾತ್ಮಕ ಭೇಟಿಯು ಕಾಟೋಟಿ ಅವರ ಸಂಗೀತ ಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಮುಂಬರುವ ದಶಕಗಳಲ್ಲಿ ಅವರನ್ನು ಒಬ್ಬ ಪ್ರಖ್ಯಾತ ಹಾರ್ಮೋನಿಯಂ ವಾದಕರನ್ನಾಗಿ ರೂಪಿಸಿತು. ಪುಟಕ್ಕಿಟ್ಟ ಚಿನ್ನವಾಗಿ ಕಾಟೋಟಿಯವರು ಕಂಗೊಳಿಸಲು ಕಾರಣವಾದವರು ಬಿಜಾಪುರೆ ಮಾಸ್ಟರ್‌ ಅವರೇ. ಕಲಿಯುವ ಛಲ ಮತ್ತು ಶ್ರದ್ಧೆ, ಗುರುವಿನ ಆಶೀರ್ವಾದದ ಜತೆಗೆ ಮುಖ್ಯವಾಗುತ್ತದೆ. ಕಾಟೋಟಿ ಅವರ ಯಶಸ್ಸಿನ ಹಾದಿ ಸುಗಮವಾಗಿರಲಿಲ್ಲ. ಹಾರ್ಮೋನಿಯಂನಲ್ಲಿ ಅವರು ಮಾಡಿದ ಅಪಾರ ಸಾಧನೆಗಳ ಹಿಂದೆ ಅವರ ಅಪಾರ ಶ್ರಮ ಮತ್ತು ತ್ಯಾಗಗಳಿವೆ.

ಹಾರ್ಮೋನಿಯಂ ಶಿಕ್ಷಣ ಪ್ರಾರಂಭಿಸಿದ ಮೊದಲ ಎರಡು ವರ್ಷಗಳ ಕಾಲ ಅವರ ಮನೆಯಲ್ಲಿ ಹಾರ್ಮೋನಿಯಂ ಪೆಟ್ಟಿಗೆ ಇರಲಿಲ್ಲ. ಗುರುಗಳಿಂದ ಕಲಿತದ್ದನ್ನು ಅಭ್ಯಾಸ ಮಾಡಲು, ಅವರು ತಮ್ಮ ಬೆಡ್‌ ಶೀಟ್‌ ಮೇಲೆಯೇ ಹಾರ್ಮೋನಿಯಂ ಆಕಾರದ ಪಟ್ಟಿಯನ್ನು ಬಿಡಿಸಿ ಅಭ್ಯಾಸ ಮಾಡುತ್ತಿದ್ದರು. ಶಾಲೆ ಮುಗಿದ ಅನಂತರ ಗುರುಗಳ ಕ್ಲಾಸಿನಲ್ಲಿ ಒಂದು ಗಂಟೆ ಅಭ್ಯಾಸ ಮಾಡಿದ ಅನಂತರ, ಅವರು ಇತರ ಶಿಷ್ಯರ ಅಭ್ಯಾಸವನ್ನು ಕೇಳುತ್ತಾ ಕುಳಿತು, ಎಲ್ಲರ ಅಭ್ಯಾಸ ಮುಗಿದ ಅನಂತರವೇ ಮನೆಗೆ ಹೋಗುತ್ತಿದ್ದರು.ಯಾವುದೇ ಕ್ಷೇತ್ರದಲ್ಲಿ ಯಶಸ್ಸಿಗೆ ಸಿದ್ಧ ಸೂತ್ರಗಳಿಲ್ಲ, ಯಶಸ್ಸನ್ನು ಕಾಣಲು ಅವಿರತ ಅಭ್ಯಾಸ, ಶ್ರದ್ಧೆ ಮತ್ತು ತ್ಯಾಗ ಅಗತ್ಯ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸಣ್ಣ ಸಣ್ಣ ಕಷ್ಟಗಳಿಗೆ ಹೆದರದೆ, ಗುರಿ ಸಾಧನೆಗಾಗಿ ಶ್ರಮಿಸಬೇಕು ಎಂಬ ಪಾಠವನ್ನು ಅವರ ಜೀವನ ನಮಗೆ ಕಲಿಸುತ್ತದೆ.

ಹೀಗೆ ಕಾಟೋಟಿ ಅವರು ಸಂಗೀತ ಕ್ಷೇತ್ರದಲ್ಲಿ ದಣಿವರಿಯದ ಸೇವೆ, ಆಮೂಲಕ ಸಾಧನೆಯನ್ನು ಮಾಡುತ್ತಾ ಬಂದಿದ್ದಾರೆ. ಆಲ್‌ ಇಂಡಿಯಾ ರೇಡಿಯೋದ ಮ್ಯೂಸಿಕ್‌ ಆಡಿಷನ್‌ ಬೋರ್ಡ್‌ನಿಂದ “ಎ’ ಗ್ರೇಡ್‌ ಪಡೆದ ಮೊದಲ ಹಿಂದೂಸ್ಥಾನಿ ಹಾರ್ಮೋನಿಯಂ ವಾದಕ ಇವರು ಎನ್ನುವ ಹೆಮ್ಮೆ ಗುರುಗಳಿಗೆ. 1974ರ ಅನಂತರ 44 ವರ್ಷಗಳ ಅಂತರದಲ್ಲಿ ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ಸೋಲೋ ಪ್ರಸ್ತುತ ಪಡಿಸಿದ ಹೆಗ್ಗಳಿಕೆ ಕಾಟೋಟಿಯವರದು.

ಡಾ| ಗಂಗೂಬಾಯಿ ಹಾನಗಲ್‌, ಪಂಡಿತ್‌ ಭೀಮಸೇನ್‌ ಜೋಶಿ, ಪಂಡಿತ್‌ ಜಸ್ರಾಜ್‌, ಪಂಡಿತ್‌ ಅಜಯ್‌ ಚಕ್ರವರ್ತಿ, ಪಂಡಿತ್‌ ರಾಜನ್‌ – ಪಂಡಿತ್‌ ಸಾಜನ್‌ ಮಿಶ್ರಾ, ಬೇಗಂ ಪರ್ವೀನ್‌ ಸುಲ್ತಾನಾ ಸೇರಿದಂತೆ ಉನ್ನತ ಶ್ರೇಣಿಯ ಗಾಯಕರಿಗೆ ಹಾರ್ಮೋನಿಯಂನಲ್ಲಿ ಸಾಥ್‌ ನೀಡಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ವಾಣಿಜ್ಯ (M.Com) ಮತ್ತು ಡಾಕ್ಟರ್‌ ಆಫ್‌ ಫಿಲಾಸಫಿ (Ph.D) ಪದವಿಗಳನ್ನು ಪಡೆದಿರುವ ಶ್ರೀ ಕಾಟೋಟಿ ಅವರು ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಸರಕಾರಿ ಆರ್‌. ಸಿ. ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗುರುಗಳಾದ ಪಂಡಿತ್‌ ರಾಮಭಾವು ಬಿಜಾಪುರೆ ಅವರ ಹೆಸರಿನಲ್ಲಿ “ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್‌’ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ ಹಾರ್ಮೋನಿಯಂ ಹಬ್ಬ, ಹಾರ್ಮೋನಿಯಂ ಬೈಠಕ್‌, ಗುರು ಸ್ಮತಿ ಹೀಗೆ ಅನೇಕ ಕಾರ್ಯಕ್ರಮಗಳನ್ನು ವರ್ಷಂಪ್ರತಿ ಮಾಡುತ್ತಾ ಬಂದಿದ್ದಾರೆ. ಯುವ ಪ್ರತಿಭೆಗಳಿಗೆ ಇಂತಹ ವೇದಿಕೆಗಳಲ್ಲಿ ಅವಕಾಶವನ್ನು ನೀಡುತ್ತಾರೆ. ಎದುರಾಳಿ ಕಲಾವಿದನನ್ನು ಸ್ಫರ್ಧಿಯಾಗಿ ನೋಡುವ ಕಾಲದಲ್ಲೂ ಪಂಡಿತ್‌ ಕಾಟೋಟಿಯವರು ಜಗತ್ತಿನ ಮೇರು ಕಲಾವಿದರನ್ನು ಆಹ್ವಾನಿಸಿ ಅವರನ್ನೊಳಗೊಂಡ ಕಾರ್ಯಕ್ರಮಗಳನ್ನು ಆಯೋಜಿಸುವುದು ಅವರಿಂದ ಕಲಿಯಬೇಕಾದ ಅದ್ಭುತ ಗುಣ.

ಹಾರ್ಮೋನಿಯಂ ಪರಂಪರೆಯನ್ನು ಜೀವನದಿಯನ್ನಾಗಿ ಮುಂದುವರಿಸಲು ಕಾಟೋಟಿ ಅವರು ಅದೆಷ್ಟೋ ಯುವ ಹಾರ್ಮೋನಿಯಂ ವಾದಕರಿಗೆ ತರಬೇತಿ ನೀಡುತ್ತಿದ್ದಾರೆ. ಅವರ ಅನೇಕ ಶಿಷ್ಯರು ಈಗಾಗಲೇ ತಯಾರಾಗಿ ದೊಡ್ಡದೊಡ್ಡ ವೇದಿಕೆಯಲ್ಲಿ ಕಾಣಸಿಗುತ್ತಾರೆ ಹಾಗೂ ಗುರು-ಶಿಷ್ಯ ಪರಂಪರೆಯನ್ನು ಮುಂದುವರೆಸಿದ್ದಾರೆ. ದೂರದ ಶಿಷ್ಯರಿಗೆ ಗುರುಗಳು ಆನ್‌ಲೈನ್‌ ಮೂಲಕ ತರಗತಿ ನೀಡುತ್ತಾ ಹತ್ತಿರವಾಗಿದ್ದಾರೆ.

ಬಹಳಷ್ಟು ಶಿಷ್ಯರಿಗೆ ಅವರು ತಮ್ಮ ತರಗತಿಯಷ್ಟೇ ಮುಕ್ತ, ಮುಖ್ಯ ಮತ್ತು ಮುಗ್ಧ. ಅವರ ರಾಗಗಳಲ್ಲಿನ ಶುದ್ಧತೆ ಕೇಳಲು ಕಿವಿಗೆ ಹಬ್ಬ. ಸಂಗೀತದ ಸಂಶೋಧಕರಾದ ಕಾಟೋಟಿಯವರ ಹೊಸ ಯತ್ನಗಳಾದ ಪ್ರಹರ್‌, ಜರ್ನಿ ಇನ್‌ ಹಾರ್ಮನಿ, ಸಮರಸ ಸಂವಾದಿನಿ, ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಅಂದು ಗುರುಗಳು ವಾತ್ಸಲ್ಯದಿಂದ ಹಾರ್ಮೋನಿಯಂ ಕಲಿಸಿದ್ದುದಕ್ಕೆ ತಮ್ಮ ಯಶಸ್ಸಿನ ಜತೆಗೆ ಗುರುವಿನ ಹೆಸರನ್ನು ಆಚಂದ್ರಾರ್ಕ ಸ್ಥಾಯಿಯಾಗಿ ಮಾಡುತ್ತಿದ್ದಾರೆ ಡಾ| ಕಾಟೋಟಿಯವರು. ಸಂಗೀತಕ್ಕೋಸ್ಕರ ವಿದೇಶ ಪ್ರವಾಸ ಮತ್ತು ಪ್ರತೀ ಸಲದ ಪ್ರವಾಸದಲ್ಲೂ ತಮ್ಮ ಶಿಷ್ಯರನ್ನು ನೋಡುವ ತವಕ ಗುರುಗಳಿಗೆ; ಶಿಷ್ಯರಿಗೆ ಗುರುಗಳಲ್ಲಿ ವಿನೀತ ಭಕ್ತಿ. ಸರಕಾರಗಳೂ ಡಾ| ಕಾಟೋಟಿಯವರಂತಹ ಗುರು ಅನರ್ಘ್ಯ ರತ್ನಗಳನ್ನು ಗುರುತಿಸಲಿ ಎನ್ನುವ ಆಶಯವೂ ಅವರ ಶಿಷ್ಯವೃಂದಕ್ಕೆ.

*ವಿಟ್ಲ ತನುಜ್‌ ಶೈಣೈ, ಚೆಲ್ಟೆನ್‌ಹ್ಯಾಮ್‌

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

smi irani

Smriti Irani ದೆಹಲಿ ಬಿಜೆಪಿಯಲ್ಲಿ ಸಕ್ರಿಯ: ”ಸಿಎಂ ಫೇಸ್” ಆಗಿ ಕೇಳಿ ಬರುತ್ತಿರುವ ಹೆಸರು!

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

Tan removalಗೆ ಟೊಮೆಟೊ ಫೇಸ್‌ ಪ್ಯಾಕ್‌; ನೈಸರ್ಗಿಕ ತ್ವಚೆ ಕಾಳಜಿ

Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್‌ ಪ್ಯಾಕ್‌; ಇದರ ಲಾಭವೇನು ಗೊತ್ತಾ?

1

South Indian actors: ನಾಗಾರ್ಜುನ್‌ ಟು ವಿಜಯ್; ದಕ್ಷಿಣ ಭಾರತದ ಶ್ರೀಮಂತ‌ ನಟರು ಯಾರ‍್ಯಾರು

Special Food ಮನೆಯಲ್ಲೊಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ… ಟೇಸ್ಟ್ ಹೇಗಿದೆ ಹೇಳಿ

Special Food ಮನೆಯಲ್ಲೊಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ… ಟೇಸ್ಟ್ ಹೇಗಿದೆ ಹೇಳಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.