Stray dog: ಉಡುಪಿ ನಗರದಲ್ಲಿ ಬೀದಿ ನಾಯಿಯ ಕ(ಹು)ಚ್ಚಾಟ
Team Udayavani, Jul 20, 2024, 8:13 PM IST
ಉಡುಪಿ: ಹುಚ್ಚು ನಾಯಿಯೊಂದು ಎಂಟು ಮಂದಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಉಡುಪಿ ನಗರ ಮಾರುತಿ ವಿಥಿಕಾದಲ್ಲಿ ಶನಿವಾರ(ಜು.20ರಂದು) ಮಧ್ಯಾಹ್ನ ವೇಳೆ ನಡೆದಿದೆ.
ತೀರಾ ಬಸವಳಿದ ಸ್ಥಿತಿಯಲ್ಲಿದ್ದ ಈ ನಾಯಿಯು ರಸ್ತೆಯಲ್ಲಿ ಹೋಗುವಾಗ ಎದುರಿಗೆ ಸಿಕ್ಕಿದವರೆಲ್ಲರಿಗೂ ಕಚ್ಚಿಕೊಂಡು ಹೋಗಿದೆ ಎನ್ನಲಾಗಿದೆ. ಕೆಲವರ ಕಾಲಿನ ಮಾಂಸ ಕೂಡ ಕಚ್ಚಿ ತಿಂದಿದೆ ಎನ್ನಲಾಗಿದೆ. ಗಾಯಗೊಂಡ ಎಲ್ಲರು ಉಡುಪಿ ಜಿಲ್ಲಾಸ್ಪತ್ರೆಗೆ ತೆರಳಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಸ್ಥಳೀಯವಲ್ಲದ ಎಲ್ಲಿಂದಲೋ ಬಂದ ಈ ನಾಯಿಗೆ ಹುಚ್ಚು ಹಿಡಿದಿ ರುವುದನ್ನು ಸ್ಥಳೀಯರು ಗಮನಿಸಿದರು. ಹಲವು ಮಂದಿಗೆ ಕಚ್ಚಿ ಕಚ್ಚಿ ತೀರಾ ಸುಸ್ತಾದ ಈ ನಾಯಿಯು ಉಡುಪಿಯ ನಾರ್ತ್ ಶಾಲೆಯ ಆವರಣದಲ್ಲಿ ಬಂದು ಬಿದ್ದಿರುವುದನ್ನು ಸಾರ್ವಜನಿಕರು ಗುರುತಿಸಿದರು. ಈ ಕುರಿತು ಕೂಡಲೇ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು.
ನಿತ್ಯಾನಂದ ಒಳಕಾಡು ತಕ್ಷಣ ನಗರಸಭೆ ಪೌರಾಯುಕ್ತ ರಾಯಪ್ಪ ಹಾಗೂ ಪ್ರಾಣಿದಯಾ ಸಂಘದವರಿಗೆ ಈ ವಿಚಾರವನ್ನು ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತರು ಹಾಗೂ ಪ್ರಾಣಿದಯಾ ಸಂಘದ ಮಂಜುಳಾ ಹಾಗೂ ಪೃಥ್ವಿ ಪರಿಶೀಲನೆ ನಡೆಸಿದರು. ತದನಂತರ ಪಶು ವೈದ್ಯರನ್ನು ಕರೆಸಿ ನಾಯಿಗೆ ಚುಚ್ಚುಮದ್ದು ನೀಡಿ, ಕ್ರಮ ಜರಗಿಸಲಾಯಿತು ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.