Hebri: ನಮಗೆ ಕಾಲು ಸಂಕ ಬೇಕು: ಮತ್ತಾವು ಸಂಕದಲ್ಲಿ ಹೆಜ್ಜೆ ಹೆಜ್ಜೆಗೂ ಆತಂಕ
ನಕ್ಸಲರಿಂದ ಬಾಂಬ್ ಸ್ಫೋಟ ನಡೆದ ಊರು ಇದು
Team Udayavani, Jul 31, 2024, 12:11 PM IST
ಹೆಬ್ರಿ: ಹೆಬ್ರಿ ತಾಲೂಕಿನ ಮತ್ತಾವು ನಕ್ಸಲರ ಬಾಂಬ್ ಸ್ಫೋಟ ಘಟನೆಯಿಂದ ರಾಜ್ಯದಲ್ಲಿ ಗುರುತಿಸಿಕೊಂಡ ಪ್ರದೇಶ. ಮೂಲಸೌಕರ್ಯಕ್ಕಾಗಿ ಹಿಂದಿನಿಂದಲೂ ಇಲ್ಲಿ ಹೋರಾಟ ನಡೆದಿದೆ. ಆದರೆ ತಮ್ಮ ಊರಿಗೆ ಕಾಲು ಸಂಕ ಬೇಕು ಎಂಬ ಈ ಭಾಗದ ಜನರ ಬೇಡಿಕೆ 45ವರ್ಷಗಳ ಬಳಿಕವೂ ಈಡೇರಿಲ್ಲ. ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಬ್ಬಿನಾಲೆ ಗ್ರಾಮದ ಮಲೆಕುಡಿಯ ಜನರೇವಾಸಿಸುವ ಮತ್ತಾವಿನಲ್ಲಿ ಹರಿಯುವ ಹೊಳೆಗೆ ಶಾಶ್ವತ ಸೇತುವೆ ಬೇಕೆನ್ನುವ ಕನಸು ಇನ್ನೂ ನನಸಾಗಿಲ್ಲ.
ಮತ್ತಾವಿನಲ್ಲಿ ಮಲೆಕುಡಿಯ ಜನಾಂಗದ ಸುಮಾರು 15 ಮನೆಗಳಿವೆ. ಮಕ್ಕಳು ಸೇರಿ ಸುಮಾರು 90 ಜನ ವಾಸವಿದ್ದಾರೆ.ಇಲ್ಲಿನ ಜನರು ದಿನನಿತ್ಯ ಓಡಾಡುವ ಶಾಲಾ ಮಕ್ಕಳು, ಕೂಲಿ ಕೆಲಸ, ಫ್ಯಾಕ್ಟರಿ ಕೆಲಸಕ್ಕೆ ತೆರಳುವ ಮಹಿಳೆಯರು ಕಬ್ಬಿನಾಲೆ ಮತ್ತು ಮತ್ತಾವಿನ ನಡುವೆ ಅಡ್ಡಲಾಗಿ ಹರಿಯುವ ಹೊಳೆಯನ್ನು ದಾಟಲೇಬೇಕು. ಮಳೆಗಾಲದಲ್ಲಿ ಸೊಕ್ಕಿ ರಭಸದಲ್ಲಿ ಹರಿಯುವ ಹೊಳೆಯನ್ನು ಮರದ ಸೇತುವೆಯ ಮೂಲಕ ದಾಟುವಾಗ ಭಯಾತಂಕ. ಕೆಲವೊಮ್ಮೆ ನೀರು ಮರದ ಸಂಕದವರೆಗಿಂದಲೂ ಹರಿಯುತ್ತದೆ. ಕೆಲವೊಮ್ಮೆ ನೀರಿನ ರಭಸಕ್ಕೆ ಮರದ ಸಂಕ ಕೊಚ್ಚಿಹೋಗಿ ವಾರಗಟ್ಟಲೆ ನಗರ ಸಂಪರ್ಕ ಕಡಿತಗೊಂಡ ಪ್ರಸಂಗಗಳಿವೆ.
ಗ್ರಾಮಸ್ಥರೇ ನಿರ್ಮಿಸಿಕೊಂಡ ಕಾಲು ಸಂಕ
ಮತ್ತಾವಿನಿಂದ ಕಬ್ಬಿನಾಲೆಗೆ ಬರಬೇಕಾದರೆ ಮತ್ತಾವು ಹೊಳೆಯನ್ನು ದಾಟಿಯೇ ಬರಬೇಕು. ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ದಾಟುವುದು ಕಷ್ಟಸಾಧ್ಯವಾದ್ದರಿಂದ ಈ ಭಾಗದ ಗ್ರಾಮಸ್ಥರು ಸೇರಿಕೊಂಡು ಮರದ ಕಾಲು ಸಂಕವನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಇದರಲ್ಲಿ ದಾಟುವುದು ಕೂಡ ಹೆಜ್ಜೆ ಹೆಜ್ಜೆಗೆ ಅಪಾಯವನ್ನು ಎದುರಿಸಿದಂತೆ.
ಜೋರು ಮಳೆ ಬಂದರೆ ಶಾಲೆಗೆ ರಜೆ
ಮತ್ತಾವು ಭಾಗದ ವಿದ್ಯಾರ್ಥಿಗಳು ಕಬ್ಬಿನಾಲೆ, ಮುದ್ರಾಡಿ, ಮುನಿಯಾಲು, ಹೆಬ್ರಿ, ಕಾರ್ಕಳ, ಉಡುಪಿಯ ಶಾಲಾ ಕಾಲೇಜುಗಳಿಗೆ ಹೋಗುತ್ತಾರೆ. ಆದರೆ ಜೋರಾಗಿ ಮಳೆ ಬಂದರೆ ಕಿರಿದಾದ ಕಾಲು ಸಂಕದಲ್ಲಿ ದಾಟಲಾಗದೆ ಶಾಲೆಗಳಿಗೆ ರಜೆ ಹಾಕಬೇಕಾದ ಪರಿಸ್ಥಿತಿ.
ನೆಟ್‌ವರ್ಕ್, ವಿದ್ಯುತ್ ಸಮಸ್ಯೆಯಾದರೆ…
ಭಾರಿ ಗಾಳಿ ಮಳೆಗೆ ಈ ಭಾಗದ ಅಪಾಯಕಾರಿ ಮರಗಳು ಧರೆಗುರುಳಿ ವಿದ್ಯತ್ ಕಂಬಗಳು ಹಾನಿಯಾಗಿ ವಾರಗಟ್ಟಲೆ ಕರೆಂಟ್ ಹಾಗೂ ಮೊಬೈಲ್ ನೆಟ್‌ವರ್ಕ್ ಇರುವುದಿಲ್ಲ. ಆ ಸಮಯದಲ್ಲಿ ಕಾಲು ಸಂಕದಲ್ಲಿ ಆನಾಹುತವಾದರೆ ಯಾರನ್ನೂ ಸಂಪರ್ಕಿಸಲಾಗದೆ ಆತಂಕದಲ್ಲಿ ಬದುಕು ಸಾಗಿಸಬೇಕಾದ ಪರಿಸ್ಥಿತಿ ಈ ಭಾಗದ ಗ್ರಾಮಸ್ಥರದ್ದು.
ಸೇತುವೆ ಬಿಡಿ, ಕಾಲು ಸಂಕವಾದರೂ ಕೊಡಿ
ಕಬ್ಬಿನಾಲೆ ಮತ್ತಾವು ನಕ್ಸಲ್ ಬಾಧಿತ ಗ್ರಾಮವಾಗಿದೆ. ಇಲ್ಲಿ ಸೇತುವೆ ನಿರ್ಮಾ ಣಕ್ಕೆ ನಕ್ಸಲ್ ಪ್ಯಾಕೇಜ್‌ನಲ್ಲಿ ಸೇತುವೆ 17ಲಕ್ಷ ರೂ. ಕಾಯ್ದಿರಿಸಲಾಗಿತ್ತು. ಆನಂತರ ಏರಿಕೆಯಾಗಿ 2 ಕೋಟಿ ರೂ. ವರೆಗೆ ತಲುಪಿದೆ. ಆದ ರೆ, ಮತ್ತಾವು ಪ್ರದೇಶ ಆದರೆ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಬರುವುದರಿಂದ ಹೊಸ ಸೇತುವ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅನುಮತಿ ನೀಡದ ಪರಿಣಾಮ ಸೇತುವೆ ನಿರ್ಮಾಣ ಕನಸಾಗಿಯೇ ಉಳಿದಿದೆ. ಹೀಗಾಗಿ ಇಲ್ಲಿ ಕಾಲು ಸಂಕವಾದರೂ ಬೇಕು ಎನ್ನುವುದು ಬೇಡಿಕೆ.
ಸುರಕ್ಷಿತ ಕಾಲು ಸಂಕ ಕೊಡಿ
ಈ ಬಾರಿಯ ಭಾರೀ ಮಳೆಗೆ ಕಳೆದ ವಾರವೇ ಕಾಲು ಸಂಕ ಹಾನಿಯಾಗಿತ್ತು. ಕೊನೆಗೆ ಗ್ರಾಮಸ್ಥರು ಸೇರಿ ದುರಸ್ತಿ ಮಾಡಿಕೊಂಡಿದ್ದೇವೆ. ಮಳೆಯಿಂದ ಸಂಕ ಜಾರುತ್ತಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತದೆ. ಸರಕಾರ ಅಥವಾ ಸ್ಥಳೀಯಾಡಳಿತ ಕೊನೆಯ ಪಕ್ಷ ನಮಗೆ ಸೇತುವೆ ಅಲ್ಲದಿದ್ದರೂ ಸುರಕ್ಷಿತವಾದ ಕಾಲು ಸಂಕವನ್ನಾದರೂ ನಿರ್ಮಿಸಿ ಕೊಡಿ.
– ನಾರಾಯಣ ಗೌಡ, ಮತ್ತಾವು
ಮಳೆಗಾಲಕ್ಕೆ ಮುನ್ನ ಆಹಾರ ಸಂಗ್ರಹ
ಭಾರೀ ಮಳೆಯ ನಡುವೆ ಕಾಲು ಸಂಕದಲ್ಲಿ ಒಬ್ಬರು ನಡೆದುಕೊಂಡು ಹೋಗುವುದೇ ಕಷ್ಟ. ಈ ನಡುವೆ ಮನೆಗೆ ಬೇಕಾಗುವ ಧವಸ ಧಾನ್ಯವನ್ನು ಸಾಗಿಸಲು ಕಷ್ಟ ಎಂಬ ಕಾರಣಕ್ಕೆ ಮಳೆಗಾಲಕ್ಕೆ ಮೊದಲೇ ಸಂಗ್ರಹಿಸುತ್ತೇವೆ.
– ರಾಜೇಶ್, ಮತ್ತಾವು
ಮೂಲಸೌಕರ್ಯ ಒದಗಿಸಿ
ಮತ್ತಾವು ಹೊಳೆಗೆ ಸೇತುವೆ ನಿರ್ಮಾಣ ವಿಚಾರದಲ್ಲಿ, ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೂ ಬಗೆಹರಿಸಿಕೊಂಡು ಸ್ಥಳೀಯ ಮಲೆಕುಡಿಯರಿಗೆ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ ಇಲಾಖಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು.
– ಕಬ್ಬಿನಾಲೆ ಶ್ರೀಕರ ಭಾರದ್ವಾಜ್,ಸಾಮಾಜಿಕ ಕಾರ್ಯಕರ್ತ
ಅನುದಾನ ಬಿಡುಗಡೆಯಾಗದೆ ಸಮಸ್ಯೆ
ಮಳೆಗಾಲದಲ್ಲಿ ಕಬ್ಬಿನಾಲೆ ಗ್ರಾಮದ ಮಲೆಕುಡಿಯ ಜನರ ಬದುಕು ಅತಂತ್ರ ಸ್ಥಿತಿಯಲ್ಲಿರುತ್ತ ದೆ. ಮತ್ತಾವು ನದಿಗೆ ಸೇತುವೆ ನಿರ್ಮಾಣದ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ಹಲವಾರು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಸಮುದಾಯ ಅರಣ್ಯ ಹಕ್ಕುಪತ್ರದ ಮುಖಾಂತರ ರಾಜ್ಯ ಅನುಮತಿ ಸಿಕ್ಕಿದರೂ ಅನುದಾನ ಬಿಡುಗಡೆಯಾಗದೆ ಇರುವುದರಿಂದ ಸಮಸ್ಯೆಯಾಗಿದೆ. ಇನ್ನಾದರೂ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಗಮನ ಹರಿಸಲಿ.
– ಗಂಗಾಧರ ಗೌಡ, ಅಧ್ಯಕ್ಷರು, ಜಿಲ್ಲಾ ಮಲೆಕುಡಿಯ ಸಂಘ
ಕೊಚ್ಚಿ ಹೋಗುವ ಕಾಲು ಸಂಕ
ಈ ಭಾಗದ ಜನರು ಪ್ರತೀ ವರ್ಷ ಮಳೆಗಾಲಕ್ಕೆ ಮುನ್ನ ಮರದ ಕಾಲು ಸಂಕ ದುರಸ್ತಿ ಮಾಡುತ್ತಾರೆ. ಈ ಅಪಾಯಕಾರಿ ಸಂಕದಲ್ಲೇ ಮಕ್ಕಳು, ಮಹಿಳೆಯರು, ವೃದ್ಧರು ನಡೆಯಬೇಕು. ಅನೇಕ ಬಾರಿ ಈ ಮರದ ಕಾಲು ಸಂಕ ಭಾರೀ ನೆರೆಗೆ ಕೊಚ್ಚಿ ಹೋಗಿದೆ.
ಅನಾರೋಗ್ಯವಾದರೆ ಕಂಬಳಿಯೇ ಗತಿ
ಶಾಲೆಗೆ ಮಕ್ಕಳನ್ನು ಕಳುಹಿಸಲು ಪ್ರತಿ ದಿನ ಪೋಷಕರು ಮಕ್ಕಳನ್ನು ಸಂಕ ದಾಟಿಸಿ ಬರಬೇಕಾದ ಅನಿವಾರ್ಯತೆ ಇದೆ.
ಈ ಸಂಕದಿಂದ ಮತ್ತೆ ಮತ್ತಾವಿಗೆ 5 ಕಿ.ಮೀ. ನಡೆಯಬೇಕು.
ಅಡುಗೆ ಸಾಮಗ್ರಿ ಮತ್ತಿತರ ವಸ್ತುಗಳನ್ನು ಮತ್ತು ಅನಾರೋಗ್ಯ ಸಮಸ್ಯೆಯಾದರೂ ರೋಗಿಯನ್ನು ಕಂಬಳಿ ಸುತ್ತಿ ಹೊತ್ತುಕೊಂಡೇ ಬರಬೇಕು.
ಹೀಗಾಗಿ ಪ್ರತಿನಿತ್ಯದ ಕೆಲಸಗಳಿಗೆ ಓಡಾಟ ನಡೆಸಲು ಮತ್ತಾವು ಸೇತುವೆ ನಿರ್ಮಾಣ ಅತ್ಯಾವಶ್ಯಕ.
ಮರವೇ ಪೋಸ್ಟ್ ಬಾಕ್ಸ್
ಮತ್ತಾವಿಗೆ ಮಳೆಗಾಲದಲ್ಲಿ ಅಂಚೆಯಣ್ಣನೂ ಬರುವುದಿಲ್ಲ, ಯಾವುದೇ ಪಾರ್ಸೆಲ್ ಇಲ್ಲ. ಅವರೆಲ್ಲರೂ ಮತ್ತಾವು ಕಾಲು ಸಂಕದ ಒಂದು ಭಾಗದಲ್ಲಿ ಮರಕ್ಕೆ ಕಟ್ಟಲಾಗಿರುವ ಬಾಕ್ಸ್‌ನಲ್ಲೇ ಪತ್ರ ಮತ್ತು ಪಾರ್ಸೆಲ್‌ಗಳನ್ನು ಹಾಕುತ್ತಾರೆ. ಹೊಳೆ ದಾಟಿ ಊರಿಗೆ ಹೋಗುವವರು ಅದನ್ನು ಹಿಡಿದು ಕೊಂಡು ಹೋಗು ತ್ತಾರೆ.
– ಹೆಬ್ರಿ ಉದಯಕುಮಾರ್ ಶೆಟ್ಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.