Udupi: ಪ್ಲ್ಯಾಟ್ ಫಾರಂ ಬದಲಾವಣೆಯೇ ದೊಡ್ಡ ಸರ್ಕಸ್!
ಇಂದ್ರಾಳಿ ರೈಲು ನಿಲ್ದಾಣದ ಒಂದು ಪ್ಲ್ಯಾಟ್‌ಫಾರಂಗೆ ಮಾತ್ರ ವಾಹನ ಸಂಪರ್ಕ
Team Udayavani, Jul 31, 2024, 2:04 PM IST
ಉಡುಪಿ: ಉಡುಪಿಯ ಇಂದ್ರಾಳಿ ರೈಲು ನಿಲ್ದಾಣ ಎರಡು ಪ್ಲ್ರಾಟ್ ಫಾರಂಗಳಿವೆ. ಆದರೆ, ನೇರ ಪ್ರವೇಶ ಇರುವುದು ಒಂದು ಪ್ಲ್ರಾಟ್‌ಫಾರಂಗೆ ಮಾತ್ರ. ಇನ್ನೊಂದು ಮೂಲಕವೇ ಸಾಗಬೇಕು. ಈ ಮೇಲ್ಸೇತುವೆಯನ್ನು ಹತ್ತಿ ಇಳಿಯುವುದು ಒಂದು ದೊಡ್ಡ ಸರ್ಕಸ್. ಸಾಲದಕ್ಕೆ ಈ ಮೇಲ್ಸೇತುವೆಗೆ ಮೇಲ್ಛಾವಣಿಯೂ ಇಲ್ಲ. ಹೀಗಾಗಿ ಮಳೆಗಾಲದಲ್ಲಿ ಒದ್ದೆ ಆಗಿಕೊಂಡು, ತಮ್ಮ ಸಾಮಾನು ಸರಂಜಾಮುಗಳನ್ನು ಎಳೆದುಕೊಂಡು ಮೇಲ್ಸೇತುವೆ ದಾಟಬೇಕಾದ ಅನಿವಾರ್ಯತೆ ಇದೆ. ಇಂಥ ಅವ್ಯವಸ್ಥೆಯಿಂದಾಗಿ ಅದೆಷ್ಟೋ ಮಂದಿ ರೈಲು ತಪ್ಪಿಸಿಕೊಂಡಿದ್ದೂ ಇದೆ.
ಮಂಗಳೂರಿನಿಂದ ಮುಂಬಯಿ ಕಡೆಗೆ ಹೋಗುವ ರೈಲುಗಳು ಪ್ಲ್ರಾಟ್‌ಫಾರಂ ಒಂದಕ್ಕೆ ಬರುತ್ತವೆ. ಅದೇ ಮುಂಬಯಿ ಕಡೆಯಿಂದ ಬರುವ ರೈಲುಗಳು ಎರಡನೇ ಪ್ಲ್ರಾಟ್ ಫಾರಂಗೆ ಬರುತ್ತವೆ. ಮುಂಬಯಿಯಿಂದ ದಿನವೊಂದಕ್ಕೆ ಸಾವಿರಾರು ಮಂದಿ ಉಡುಪಿಯಲ್ಲಿ ಇಳಿಯುತ್ತಾರೆ. ಆದರೆ, ಅವರು ವಾಹನ ಹಿಡಿಯಬೇಕು ಎಂದರೆ ಲಗೇಜ್‌ಗಳನ್ನು ಹೊತ್ತುಕೊಂಡು, ಎಳೆದುಕೊಂಡು ಮೇಲ್ಸೇತುವೆ ದಾಟಿಯೇ ಇನ್ನೊಂದು ಭಾಗಕ್ಕೆ ಬರಬೇಕು. ಇಳಿಜಾರಿನಂಥ ಸೇತುವೆಯಲ್ಲೇ ಸಾಗಬೇಕು… ಮಳೆ ಇರಲಿ, ಬಿಸಿಲೇ ಇರಲಿ! ಇತ್ತ ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುವವರಿಗೂ ಇದೇ ಸಮಸ್ಯೆ. ವೃದ್ಧರು, ಮಹಿಳೆಯರು, ಮಕ್ಕಳಿಗೆ ಇದರಿಂದ ಭಾರಿ ಸಮಸ್ಯೆ ಆಗುತ್ತಿದೆ.
ಈ ತೀರದಿಂದ ಆ ತೀರಕೆ…
ಉಡುಪಿಯಿಂದ ಮುಂಬಯಿಗೆ ತೆರಳಲು ಬಸ್ಸಿಗೆ ಹೋಲಿಸಿದರೆ ರೈಲಿನಲ್ಲಿ ಆಯಾಮ ಎಂಬ ಉದ್ದೇಶದಿಂದ ಹಿಂದಿನಿಂದಲೂ ರೈಲಿನಲ್ಲಿಯೇ ಹೋಗುತ್ತಿದ್ದೇನೆ. ಆದರೆ ಇತ್ತೀಚೆಗೆ ಕಾಲುನೋವು ಉಂಟಾದ ಕಾರಣ ದೂರ ನಡೆದಾಡುವುದು ಕಷ್ಟವಾಗುತ್ತಿದೆ. ರೈಲು ನಿಲ್ದಾಣಕ್ಕೆ ಆಟೋರಿಕ್ಷಾದ ಮೂಲಕ ತೆರಳಬಹುದು. ಆದರೆ ಒಳಪ್ರವೇಶಿಸಿದ ಪ್ಲ್ರಾಟ್‌ಫಾರಂ ಒಳಗೆ ಓಡಾಡುವುದೇ ಸಮಸ್ಯೆ ಎಂಬಂತಾಗಿದೆ. ಈ ಕಾರಣಕ್ಕೆ ಈ ಹಿಂದೆ ಬಸ್ ಹಾಗೂ ವಿಮಾನದ ಮೂಲಕ ಮುಂಬಯಿಗೆ ತೆರಳಿದ್ದೆ ಎಂದು ತಮ್ಮಅನುಭವ ತೋಡಿಕೊಳ್ಳುತ್ತಾರೆ ಪ್ರಯಾಣಿಕ ದಿನೇಶ್ ಅವರು.
ಅವ್ಯವಸ್ಥೆಯಿಂದಾಗಿ ಪ್ರಯಾಣವೇ ಮೊಟಕು!
ತಿಂಗಳ ಹಿಂದೆ ವಿಪರೀತ ಬಿಸಿಲು ಇದ್ದ ಕಾರಣ ಉಡುಪಿಯ ಹಿರಿಯ ನಾಗರಿಕರೊಬ್ಬರು ಎಸಿ ಬೋಗಿಯಲ್ಲಿ ಬೆಂಗಳೂರಿನ ಪುತ್ರಿಯ ಮನೆಗೆ ಹೋಗಲೆಂದು ಟಿಕೆಟ್ ಮಾಡಿದ್ದರು. ಆದರೆ ಆ ದಿನ ಭಾರೀ ಮಳೆ ಸುರಿದ ಕಾರಣ ಅವರಿಗೆ ಒಂದನೇ ಪ್ಲ್ರಾಟ್‌ಫಾರಂನಿಂದ ಎರಡನೇ ಪ್ಲ್ರಾಟ್ ಫಾರಂಗೆ ತೆರಳಲೂ ಅಸಾಧ್ಯವಾಗಿದೆ. ಒಂದು ಕೈಯಲ್ಲಿ ಛತ್ರಿ ಮತ್ತೂಂದು ಕೈಯಲ್ಲಿ ಲಗೇಜುಗಳನ್ನು ಹಿಡಿದುಕೊಂಡು ಅತ್ತ ಹೋಗಲೂ ಅಸಾಧ್ಯವಾಗಿತ್ತು. ಆ ಕ್ಷಣ ಯಾರು ಕೂಡ ನೆರವಿಗೆ ಬಂದಿಲ್ಲ. ಕೊನೆಯ ಕ್ಷಣದಲ್ಲಿ ಅವರು ಪ್ರಯಾಣವನ್ನೇ ರದ್ದುಗೊಳಿಸಿದರು. ಮಳೆಯಲ್ಲಿ ಒದ್ದೆಯಾಗಿದ್ದು, ಎಸಿಯಲ್ಲಿ ಕುಳಿತುಕೊಳ್ಳುವುದಾದರೂ ಹೇಗೆ ಎಂಬುವುದು ಒಂದು ಕಾರಣವಾದರೆ. ಸೂಕ್ತ ಮೇಲ್ಛಾವಣಿ ವ್ಯವಸ್ಥೆ ಇಲ್ಲದ ಕಾರಣ ಅತ್ತ ತೆರಳಲೂ ಕಷ್ಟಸಾಧ್ಯವಾದುದು ಮತ್ತೂಂದು ಕಾರಣವಾಗಿದೆ. ಇದು ಒಂದು ದಿನದ ಘಟನೆಯಷ್ಟೇ ಇಂತಹ ಹಲವಾರು ಸಮಸ್ಯೆಗಳು ಇಲ್ಲಿ ನಡೆಯುತ್ತಿವೆ.
ಸರಿಯಾದ ಮೇಲ್ಛಾವಣಿ ಇಲ್ಲ, ಇರುವುದೂ ಸೋರುತ್ತಿವೆ
ರೈಲು ನಿಲ್ದಾಣದಲ್ಲಿ ಬಿಸಿಲು ಹಾಗೂ ಮಳೆಯಿಂದ ರಕ್ಷಿಸಿಕೊಳ್ಳಲು ಸೂಕ್ತ ಛಾವಣಿ ವ್ಯವಸ್ಥೆ ಇಲ್ಲ. ಒಂದನೇ ಪ್ಲಾಟ್‌ಫಾರಂ ಕೋಚ್ ಪೊಸಿಶನ್ 1ರಿಂದ 24ರವರೆಗೆ ಕೆಲವೆಡೆ ಛಾವಣಿಗಳು ಇದ್ದರೂ ಪೂರ್ಣವಾಗಿಲ್ಲ. ಮತ್ತೆ ಕೆಲವೆಡೆ ಛಾವಣಿಯೇ ಇಲ್ಲ. ಓವರ್ ಪಾಸ್‌ನಲ್ಲಂತೂ ಯಾವುದೇ ಛಾವಣಿ ಇಲ್ಲ. ದುರಂತವೆಂದರೆ ಟಿಕೆಟ್ ಪಡೆದು ಫ್ಲ್ಯಾಟ್ ಫಾರಂ ಒಳಪ್ರವೇಶಿಸಿದ ಬಳಿಕವೂ ನೆನೆದುಕೊಂಡೇ ಇರಬೇಕು. ಫ್ಲ್ಯಾಟ್‌ಫಾರಂ ಸಂಖ್ಯೆ 8ರಿಂದ 12ರವರೆಗೆ ಶೆಲ್ಟರ್‌ನ ವಿವಿಧೆಡೆ ತೂತುಬಿದ್ದ ಪರಿಣಾಮ ಮಳೆನೀರು ಸೋರುತ್ತಿದೆ. ಇದೇ ಭಾಗದ ಪ್ಲ್ರಾಟ್‌ಫಾರಂ 16 ಹಾಗೂ 18 ರಲ್ಲಿ ಮೇಲ್ಛಾವಣೆ ವ್ಯವಸ್ಥೆಯೂ ಇಲ್ಲದ ಕಾರಣ ಮಳೆ ಹಾಗೂ ಬಿಸಿಲಿಗೆ ಪ್ರಯಾಣಿಕರು ಛತ್ರಿ ಹಿಡಿದೇ ನಿಲ್ಲುವಂತಾಗಿದೆ.
ವ್ಹೀಲ್ ಚೇರ್ ತಳ್ಳುವುದೂ ಕಷ್ಟ
1 ಒಂದರಿಂದ ಎರಡನೇ ಪ್ಲ್ರಾಟ್‌ಫಾರಂಗೆ ಹೋಗುವುದು ದೊಡ್ಡ ಸಾಹಸವೇ ಸರಿ.
2 ಅತ್ಯಂತ ಏರು ಮತ್ತು ಇಳಿಜಾರಿನ ಓವರ್‌ಪಾಸ್‌ನಲ್ಲಿ ನಡೆಯುವುದೇ ಕಷ್ಟ. ಲಗೇಜ್ ಎಳೆದುಕೊಂಡು ಹೋಗುವುದಂತೂ ಇನ್ನೂ ಕಷ್ಟ.
3 ವಯಸ್ಸಾದವರು ಇಲ್ಲಿ ಏದುಸಿರುಬಿಡುತ್ತಾರೆ. ಒಂದು ವೇಳೆ ವ್ಹೀಲ್‌ಚೇರ್‌ನಲ್ಲಿ ಹೋದರೆ ಅದನ್ನು ಮೇಲೆ ತಳ್ಳುವುದು, ಕೆಳಗೆ ಜಾರದಂತೆ ನಿಭಾಯಿಸುವುದೇ ಸವಾಲು.
4 ಇಡೀ ಓವರ್‌ಪಾಸ್‌ಗೆ ಮೇಲ್ಚಾವಣಿ ಇಲ್ಲ. ಹೀಗಾಗಿ ಮಳೆಗೂ ಕಷ್ಟಪಟ್ಟು ಬ್ಯಾಗ್ ಎಳೆದುಕೊಂಡು ಹೋಗಬೇಕು. ಒದ್ದೆಬಟ್ಟೆಯಲ್ಲೇ ರೈಲಿನಲ್ಲಿ ಕೂರಬೇಕು.
5 ಹಿರಿಯ ನಾಗರಿಕರು, ವಯೋವೃದ್ಧರು, ಮಕ್ಕಳಿಗೆ ಇದು ಕಷ್ಟಕರವಾಗಿ ಪರಿಣಮಿಸುತ್ತಿದೆ. ಅಂಗವಿಕಲರು ಪಡುವ ಪಾಡಂತೂ ಕೇಳಲೇಬೇಡಿ.
6 ಉನ್ನತ ಶ್ರೇಣಿಯ ಟಿಕೆಟ್ ಪಡೆದವರೂ ಇಲ್ಲಿ ನಿಲ್ದಾಣದ ಸಂಕಷ್ಟಗಳನ್ನು ಎದುರಿಸಲೇಬೇಕು.
7 ಇಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಲು ಲಿಫ್ಟ್ ವ್ಯವಸ್ಥೆಯೂ ಇಲ್ಲ.
ಪ್ಲ್ರಾಟ್‌ಫಾರಂ ನಂಬರ್ 2ರ ಕಥೆ
ಪ್ಲ್ರಾಟ್‌ಫಾರಂ ಸಂಖ್ಯೆ 1ರ ಕಥೆ ಹೀಗಾದರೆ ಎರಡನೇ ಪ್ಲ್ರಾಟ್‌ಫಾರಂನಲ್ಲಿ 1ರಿಂದ 6ನೇ ಪೊಸಿಷನ್ ವರೆಗೆ ಎಲ್ಲಿಯೂ ಶೆಲ್ಟರ್ ಇಲ್ಲ. ಫ್ಲ್ಯಾಟ್‌ಫಾರಂ 7 ಹಾಗೂ 8 ಮತ್ತು 11 ಹಾಗೂ 12ರಲ್ಲಿ ರೋಟರಿ ಸಂಸ್ಥೆಯವರು ನಿರ್ಮಿಸಿದ ಶೆಲ್ಟರ್ ವ್ಯವಸ್ಥೆ ಮಾತ್ರ ಇದೆ.
ವರದಿ – ಪುನೀತ್ ಸಾಲ್ಯಾನ್
ಚಿತ್ರ – ಆಸ್ಟ್ರೋಮೋಹನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.