Udupi: ಸಂತೆಕಟ್ಟೆ ಓವರ್‌ಪಾಸ್ ಪ್ರದೇಶ: ನಿತ್ಯ ವೆಟ್‌ಮಿಕ್ಸ್ ಹಾಕಿ, ಮೇಲ್ವಿಚಾರಣೆ ನಡೆಸಿ
ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ
Team Udayavani, Aug 4, 2024, 7:45 AM IST
ಮಣಿಪಾಲ: ಸಂತೆಕಟ್ಟೆ ವೆಹಿಕ್ಯುಲರ್ ಓವರ್‌ಪಾಸ್ ಪ್ರದೇಶದಲ್ಲಿ ವಾಹನಗಳ ಸುಲಭ ಸಂಚಾರಕ್ಕೆ ಅನುಕೂಲವಾಗುವಂತೆ ನಿತ್ಯ ವೆಟ್‌ಮಿಕ್ಸ್ ಹಾಕಬೇಕು ಮತ್ತು ನಿತ್ಯವೂ ಅದರ ಮೇಲ್ವಿಚಾರಣೆ ಮಾಡಬೇಕು. ಮಳೆ ಬಿಡುವು ನೀಡಿದ ತತ್‌ಕ್ಷಣವೇ ಕಾಮಗಾರಿ ಆರಂಭಿಸಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಸಂತೆಕಟ್ಟೆ ಓವರ್‌ಪಾಸ್ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸವಾರರಿಗೆ, ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ “ಉದಯವಾಣಿ’ ಸರಣಿ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಸಂಸದರು ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಿದ್ದರೂ ಯಾವುದೇ ಬದಲಾವಣೆ ಆಗದ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿದರು.
ಅಂದಾಜು ನಕ್ಷೆ ಪರಿಷ್ಕರಿಸಲು ಸೂಚನೆ
ಅಂಬಲಪಾಡಿ ವೃತ್ತದಲ್ಲಿ ಡಬಲ್ ಸೆಲ್ ಅಂಡರ್‌ಪಾಸ್ (ಕರಾವಳಿ ಬೈಪಾಸ್ ಮಾದರಿ) ನಿರ್ಮಾಣ ಮಾಡಲು ರೂಪಿಸಿರುವ ನಕ್ಷೆಯಲ್ಲಿ ಅಂಡರ್‌ಪಾಸ್ ವಿಸ್ತರಣೆ ಚಿಕ್ಕದಾಗಿದೆ. ಹೀಗಾಗಿ ಇದನ್ನು ಪರಿಷ್ಕರಿಸಿ ಹೊಸ ಅಂದಾಜು ನಕ್ಷೆ ಸಿದ್ಧಪಡಿಸಬೇಕು. ವಾಹನ ಸಂಚಾರಕ್ಕೆ ಸಮಸ್ಯೆಯಾಗದಂತೆ ವಿಶಾಲ ಅಂಡರ್‌ಪಾಸ್ ರಚಿಸಲು ಬೇಕಾದ ನಕ್ಷೆ ಸಿದ್ಧಪಡಿಸಲು ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.
ಭೂಸ್ವಾಧೀನ ಅಂತಿಮ
ಮಲ್ಪೆ-ಆದಿಉಡುಪಿ ರಸ್ತೆ ಅಗಲಗೊಳಿಸುವ ಸಂಬಂಧ ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಇದು ಮುಗಿದ ತತ್‌ಕ್ಷಣವೇ ಮುಂದಿನ ಚಟುವಟಿಕೆ ಆರಂಭಿಸಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಮುಗಿಸಿ ಸಂಚಾರ ಮುಕ್ತಗೊಳಿಸಲು ಸಂಸದರು ಸೂಚಿಸಿದರು.
ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಆರ್‌ಒ ಪಿ.ವಿ.ಬ್ರಾಹ್ಮಣಕರ್, ಭೂಸ್ವಾಧೀನಾಧಿಕಾರಿಗಳು, ಎಂಜಿನಿಯರ್‌ಗಳು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
15 ದಿನಗಳಲ್ಲಿ ಇಂದ್ರಾಳಿ ಸೇತುವೆ ಕಾಮಗಾರಿ ಆರಂಭಿಸಿ
ಮುಂದಿನ 15 ದಿನಗಳಲ್ಲಿ ಇಂದ್ರಾಳಿ ರೈಲ್ವೇ ಮೇಲ್ಸೇತುವೆಯ ಕಾಮಗಾರಿ ಆರಂಭಿಸಬೇಕು. ಇನ್ನೂ ತಾಂತ್ರಿಕ ಸಮಸ್ಯೆ ಹೇಳುತ್ತಾ ಕೂರುವುದಕ್ಕೆ ಅರ್ಥವಿಲ್ಲ. ಮಳೆ ಬಿಡುವು ನೋಡಿಕೊಂಡು ಕಾಮಗಾರಿ ಆರಂಭಿಸಬೇಕು ಎಂದು ನಿರ್ದೇಶಿಸಿದರು.
ಅಧಿಕಾರಿಗಳ ಜತೆ ಕೋಟ ಸಭೆ
ಮಣಿಪಾಲ: ಕೇಂದ್ರ ಸರಕಾರದ ಯೋಜನೆಗಳನ್ನು ಫಲಾನು ಭವಿಗಳಿಗೆ ಯಾವುದೇ ವಿಳಂಬ ಇಲ್ಲದೆ ತಲುಪಿಸಬೇಕು ಹಾಗೂ ಸಣ್ಣಪುಟ್ಟ ತಾಂತ್ರಿಕ ಕಾರಣಕ್ಕಾಗಿ ಯೋಜನೆಯು ಫಲಾನುಭವಿಗಳ ಕೈತಪ್ಪಬಾರದು. ಬ್ಯಾಂಕ್‌ಗಳಿಂದ ಸರಿಯಾದ ಸಮಯದಲ್ಲಿ ಸಾಲಸೌಲಭ್ಯ ಮಂಜೂರಾಗುತ್ತಿರುವ ಬಗ್ಗೆಯೂ ಪರಿಶೀಲಿಸುತ್ತಿರಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಂಸದರ ಕಚೇರಿಯಲ್ಲಿ ಶನಿವಾರ ಕೃಷಿ ಇಲಾಖೆಗೆ ಸಂಬಂಧಿಸಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ, ಕೈಗಾರಿಕೆ ಇಲಾಖೆಯ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಹಾಗೂ ಮೆಸ್ಕಾಂನ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಕುರಿತು ಆಯಾ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಕಿಸಾನ್ ಸಮ್ಮಾನ ಯೋಜನೆ ಯನ್ನು ಜಿಲ್ಲೆಯ ಎಲ್ಲ ಅರ್ಹ ಭೂ ಹಿಡುವಳಿದಾರರು ಪಡೆಯುವಂತಾ ಗಬೇಕು. ಯಾರೂ ಯೋಜನೆ ಯಿಂದ ಹೊರಗೆ ಉಳಿಯಬಾರದು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಪಿ.ಎಂ. ವಿಶ್ವಕರ್ಮ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು, ಕೌಶಲ ತರಬೇತಿಯ ಜತೆಗೆ ಶಿಷ್ಯವೇತನ ಹಾಗೂ ಕಿಟ್‌ಗಳನ್ನು ಸಂಬಂಧಪಟ್ಟ ವೃತ್ತಿಯಲ್ಲಿ ಪ್ರಾವೀಣ್ಯ ಪಡೆದವರಿಗೆ ನೀಡಲಾಗುತ್ತದೆ. ನಮ್ಮಲ್ಲಿ ಟೈಲರಿಂಗ್ ಜಾಸ್ತಿ ನೋಂದಣಿ ಆಗುತ್ತಿದೆ. ಅದೇ ರೀತಿ ಇನ್ನುಳಿದ ವೃತ್ತಿ ಬಾಂಧವರು ನೋಂದಣಿ ಮಾಡುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.
ಕೃಷಿ ಇಲಾಖೆಯ ಅಧಿಕಾರಿಗಳಾದ ಡಾ| ಸೀತಾ, ಚಂದ್ರಶೇಖರ್, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ವಿ. ನಾಯಕ್, ಮೆಸ್ಕಾಂನ ಹಿರಿಯ ಅಧಿಕಾರಿಗಳು, ಯೋಜನೆಗಳ ಅನುಷ್ಠಾನಾಧಿಕಾರಿಗಳು, ಲೀಡ್ ಬ್ಯಾಂಕ್ ಮ್ಯಾನೇಜರ್ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.