Government Circular: ಧಾರ್ಮಿಕ ಹಬ್ಬಗಳ ಸಂಭ್ರಮಕ್ಕೆ ಸುತ್ತೋಲೆ ವಿಘ್ನ!
ಶಾಲೆ, ಕಾಲೇಜುಗಳಲ್ಲಿ ಅವಕಾಶ ನೀಡದಂತೆ ಸರಕಾರ ನಿರ್ಬಂಧ, ಇಕ್ಕಟ್ಟಿನಲ್ಲಿ ಸಂಘಟಕರು
Team Udayavani, Aug 5, 2024, 7:25 AM IST
ಪುತ್ತೂರು: ಗಣೇಶ ಚತುರ್ಥಿ, ಶ್ರೀಕೃಷ್ಣ ಜನ್ಮಾಷ್ಟಮಿ, ಶಾರದೋತ್ಸವ ಮುಂತಾದ ಧಾರ್ಮಿಕ ಹಬ್ಬಗಳ ಆಚರಣೆಗೆ ಈ ಬಾರಿ ಸರಕಾರಿ ಪ್ರಾಯೋಜಿತ ಸುತ್ತೋಲೆಯ ವಿಘ್ನ ಎದುರಾಗಿದೆ
ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ ಆಚರಣೆಗೆ ದಿನಗಣನೆ ಆರಂಭವಾಗಿದ್ದರೂ ಸಂಘಟಕರು ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿಲ್ಲ. ಸುತ್ತೋಲೆ ವಿಘ್ನ ನಿವಾರಣೆಯಾಗದೆ ಮುಂದಡಿ ಇಡಲಾಗದ ಪರಿಸ್ಥಿತಿ ಎದುರಾಗಿದೆ. ಸರಕಾರಿ ಶಾಲೆ, ಕಾಲೇಜು ಕ್ಯಾಂಪಸ್‌ಗಳಲ್ಲಿ ಶೈಕ್ಷಣಿ ಕೇತರ ಚಟುವಟಿಕೆ ನಡೆಸದಂತೆ ಹೊರಡಿ ಸಿರುವ ಆದೇಶವನ್ನು ಶಾಲೆಗಳು ಚಾಚೂ ತಪ್ಪದೆ ಪಾಲಿಸಲು ಹೊರಟಿರುವುದು ಇದಕ್ಕೆ ಕಾರಣ.
ಏನಿದು ಸುತ್ತೋಲೆ?
ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ 2013ರ ಫೆ.7ರಂದು ಮತ್ತು 2023 ಡಿ.1ರಂದು ರಾಜ್ಯದ ಎಲ್ಲ ಡಿಡಿಪಿಐ ಕಚೇರಿಗಳಿಗೆ ಕಳುಹಿಸಲಾದ ಸುತ್ತೋಲೆಯಲ್ಲಿ, ಖಾಸಗಿ ಕಾರ್ಯಕ್ರಮಗಳಿಗೆ ಯಾವುದೇ ಶಾಲಾ ಕಟ್ಟಡ ಅಥವಾ ಮೈದಾನದಲ್ಲಿ ಅನುಮತಿ ನೀಡಬಾರದೆಂದು ತಿಳಿಸಲಾಗಿತ್ತು. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಶಾಲಾ ಮುಖ್ಯಸ್ಥರೇ ಹೊಣೆಯಾಗುತ್ತಾರೆ ಎಂದು ಜ್ಞಾಪಕ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಈ ಪತ್ರವನ್ನು ಡಿಡಿಪಿಐ, ಬಿಇಒ ಕಚೇರಿ ಮೂಲಕ ಜುಲೈ ತಿಂಗಳಲ್ಲಿ ಪುನಃ ಪ್ರತಿಯೊಂದು ಶಾಲೆಗಳಿಗೂ ಕಳುಹಿಸಲಾಗಿದೆ.
ಆಚರಣೆಗೆ ದಿನಗಣನೆ
ಆಗಸ್ಟ್ ಕೊನೆಯ ವಾರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, ಸೆಪ್ಟಂಬರ್ ಮೊದಲ ವಾರದಲ್ಲಿ ಗಣೇಶೋತ್ಸವ (ಚೌತಿ) ನಡೆಯಲಿರುವುದರಿಂದ ಆಮಂತ್ರಣ ಪತ್ರಿಕೆ ಮುದ್ರಣವಾಗಬೇಕಿದೆ. ಶಾಲಾ ಆವರಣದಲ್ಲಿ ನಡೆಯುವ ಚೌತಿ, ಅಷ್ಟಮಿಗೆ ಸಂಬಂಧಿಸಿ ಶಾಲಾ ಮುಖ್ಯಸ್ಥರು, ಎಸ್‌ಡಿಎಂಸಿ ಬಳಿಯಲ್ಲಿ ಸಂಘಟಕರು ಅನುಮತಿ ಕೇಳಿದಾಗ ಅವಕಾಶ ಇಲ್ಲ ಎನ್ನುವ ಉತ್ತರ ಬಂದಿದೆ. ಬಿಇಒ, ಡಿಡಿಪಿಐ ಅವರಲ್ಲಿ ವಿಚಾರಿಸಿದಾಗಲೂ ನಾವು ಒಪ್ಪಿಗೆ ಕೊಡುವಂತಿಲ್ಲ ಎನ್ನುತ್ತಿದ್ದಾರೆ. ಸ್ಥಳ ಅಂತಿಮಗೊಳ್ಳದ ಕಾರಣ ಸಂಘಟಕರು ಗೊಂದಲದಲ್ಲಿ ಸಿಲುಕಿದ್ದಾರೆ.
ಹಲವು ದಶಕಗಳಿಂದ ಆಚರಣೆ
ಹಲವು ದಶಕಗಳಿಂದಲೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸಹಿತ ರಾಜ್ಯದ ವಿವಿಧ ಜಿಲ್ಲೆಗಳ ಶಾಲಾ, ಕಾಲೇಜು ಮೈದಾನದಲ್ಲಿ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಸಮಿತಿಗಳು ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಮಕ್ಕಳಿಗೆ ಕ್ರೀಡಾಕೂಟ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತದೆ. ಜತೆಗೆ ಶಾಲೆಯ ಅಗತ್ಯಗಳಿಗೂ ಸಮಿತಿ ಸ್ಪಂದನೆ ನೀಡುತ್ತಿದೆ.
ಸರಕಾರದಿಂದ ಅಧಿಕೃತ ಅವಕಾಶ ನೀಡುವ ಸುತ್ತೋಲೆ ಇಲ್ಲದಿದ್ದರೂ ಶಾಲೆ ಮತ್ತು ಸಮಿತಿ, ಊರವರ ನಡುವೆ ಪರಸ್ಪರ ಹೊಂದಾಣಿಕೆಯಿಂದ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿತ್ತು. 2013, 2023ರಲ್ಲಿ ಸುತ್ತೋಲೆ ಹೊರಡಿಸಿದ ಬಳಿಕವೂ ಆಚರಣೆ ನಡೆದಿತ್ತು. ಆದರೆ ಈ ಬಾರಿ ಮತ್ತೂಮ್ಮೆ ಶಾಲಾ ಮುಖ್ಯಸ್ಥರಿಗೆ, ಎಸ್‌ಡಿಎಂಸಿಯವರಿಗೆ ನೇರವಾಗಿ ಸುತ್ತೋಲೆಯ ಜ್ಞಾಪಕ ಪತ್ರ ಬಂದಿರುವುದರಿಂದ ಅವರು ಒಪ್ಪಿಗೆ ಸೂಚಿಸಲು ಹಿಂದೇಟು ಹಾಕುತ್ತಿದ್ದಾರೆ.
ಸ್ಥಗಿತವೇ ದಾರಿ
ಕೆಲವು ಗ್ರಾಮಗಳಲ್ಲಿ ಸಾರ್ವಜನಿಕ ಕಾರ್ಯ ಕ್ರಮಗಳಿಗೆ ಸರಕಾರಿ ಸ್ಥಳ ಇಲ್ಲ. ಹಾಗಾಗಿ ಶಾಲಾ ಆವರಣದಲ್ಲೇ ಕಾರ್ಯಕ್ರಮ ನಿಗದಿಪಡಿಸುತ್ತಾರೆ. ಕಾರ್ಯಕ್ರಮ ಆಯೋಜನೆ ಮಾಡುವುದಕ್ಕಿಂತ ಮೊದಲು ಶಾಲೆಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸುತ್ತಾರೆ. ಅರ್ಜಿಯಲ್ಲಿ ಶಾಲಾ ಸೊತ್ತುಗಳಿಗೆ ಧಕ್ಕೆಯಾದರೆ ಅದರ ಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವ ಬಗ್ಗೆ ಪತ್ರವನ್ನು ಸಲ್ಲಿಸುತ್ತಾರೆ. ಅನಂತರ ಸ್ಥಳೀಯ ಗ್ರಾ.ಪಂ., ಪೊಲೀಸ್ ಠಾಣೆಗಳಿಂದ ಅನುಮತಿ ಪತ್ರ ಪಡೆದು ಕಾರ್ಯಕ್ರಮ ನಡೆಸಲಾಗುತ್ತದೆ.
ಕಾರ್ಯಕ್ರಮದ ದಿನ ಪೊಲೀಸ್ ಸಿಬಂದಿ ಉಪಸ್ಥಿತರಿರುತ್ತಾರೆ. ಇಷ್ಟೆಲ್ಲ ಸುರಕ್ಷಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡ ಮೇಲೂ ಶಾಲಾ ಆವರಣಗಳಲ್ಲಿ ಅವಕಾಶ ಸಿಗದಿದ್ದರೆ 20-30 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಆಚರಣೆಗಳನ್ನು ಸ್ಥಗಿತಗೊಳಿಸುವುದಷ್ಟೇ ಉಳಿದಿರುವ ದಾರಿ ಎನ್ನುತ್ತಾರೆ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಮುಕ್ಕೂರಿನ ಗಣೇಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ.
ಕಾರ್ಯಕ್ರಮ ನಡೆಸಬಹುದು
ಇದು ಹಿಂದಿನ ಸರಕಾರದ ಅವಧಿಯಲ್ಲಿ ಹೊರಡಿಸಿರುವ ಆದೇಶ. ಅದು ಈಗಲೂ ಮುಂದುವರಿದಿದೆ. ಶಾಲಾ ಆವರಣಗಳಲ್ಲಿ ಅನೇಕ ದಶಕಗಳಿಂದ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗಳ ನಡೆಸಿಕೊಂಡು ಬರುತ್ತಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಬಹುದು. ಆ ಬಗ್ಗೆ ವಿರೋಧ ಇಲ್ಲ. ಸಂಬಂಧಪಟ್ಟವರ ಜತೆಗೆ ಈ ಬಗ್ಗೆ ಚರ್ಚಿಸುವೆ.
– ಅಶೋಕ್ ಕುಮಾರ್ ರೈ, ಶಾಸಕ, ಪುತ್ತೂರು
ಪರಿಶೀಲಿಸುವೆ
ಈ ವಿಷಯದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಿದ ಬಳಿಕ ಪ್ರತಿಕ್ರಿಯಿಸಲಾಗುವುದು.
ಕಾವೇರಿ ಬಿ.ಬಿ. ಆಯುಕ್ತೆ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು
” 2013 ಮತ್ತು 2023ರ ಸುತ್ತೋಲೆ ಪ್ರಕಾರ ಎಲ್ಲ ಬಿಇಗಳಿಗೆ ಜ್ಞಾಪನಾ ಪತ್ರ ಕಳುಹಿಸಲಾಗಿದೆ. ಇದು ಕಾಲಕಾಲಕ್ಕೆ ಆಗುವ ಕೆಲಸ. ಸರಕಾರದ ನಿರ್ದೇಶನಗಳನ್ನು ಪಾಲಿಸುವುದು ನಮ್ಮ ಜವಾಬ್ದಾರಿ. ಅದನ್ನು ಮಾಡಿದ್ದೇವೆ.”
ವೆಂಕಟೇಶ್ ಪಟಗಾರ, ಡಿಡಿಪಿಐ, ಮಂಗಳೂರು
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.