BJP: ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ: ಪ್ರತಾಪ್‌ ಸಿಂಹ

ಎಲ್ಲ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಮೆರೆಯುತ್ತಿದೆ, ಹೀಗಾದಲ್ಲಿ ಬೇರೆ ಅರ್ಹರಿಗೆ ಅವಕಾಶ ಸಿಗುವುದು ಯಾವಾಗ?

Team Udayavani, Aug 7, 2024, 7:25 AM IST

pratp

 ಉದಯವಾಣಿ ಸಂದರ್ಶನ
ತಮ್ಮ ಮಕ್ಕಳನ್ನು ಗದ್ದುಗೆ ಮೇಲೆ ಕೂರಿಸಲು ಕಂಡವರ ಮಕ್ಕಳನ್ನು ಹಾಳು ಮಾಡುವ ಪ್ರಯತ್ನಗಳು ಎಲ್ಲ ಪಕ್ಷಗಳಲ್ಲೂ ನಡೆಯುತ್ತಿದೆ. ನಮ್ಮ ಪಕ್ಷದಲ್ಲೂ ಆಗುತ್ತಿದೆ. ಜತೆಗೆ ಯೋಗ್ಯತೆ ಬದಲು ಜಾತಿಯೇ ಪ್ರಧಾನವಾಗುತ್ತಿದೆ. ಕಂಡವರ ತಾಯಿ ಹೊಟ್ಟೆಯಲ್ಲಿ ಒಳ್ಳೆಯ ಮಕ್ಕಳೇ ಹುಟ್ಟುವುದಿಲ್ಲವೇನೋ ಎಂಬಂತೆ ಮತದಾರರೂ ವರ್ತಿಸುತ್ತಿದ್ದಾರೆ. ಮಕ್ಕಳನ್ನು ಬೆಳೆಸುವ ಅಪ್ಪಂದಿರು ಇರುವವರೆಗೆ ಕಂಡವರ ಮಕ್ಕಳಿಗೆ ಭವಿಷ್ಯ ಇರಲ್ಲ. ಇಂಥದ್ದೇ ವ್ಯವಸ್ಥೆಗೆ ನಾನು ಬಲಿಯಾಗಿದ್ದೇನೆ. ಆದರೆ ನಾನು ಹೋರಾಟಗಾರ. ರಾಷ್ಟ್ರೀಯತೆ, ಹಿಂದುತ್ವದ ತಳಹದಿಯಲ್ಲಿ ಹೋರಾಟ ಮಾಡುತ್ತೇನೆ. ನನಗೆ ಹಿಂದೆ ಯಾರು ಆಶೀರ್ವಾದ ಮಾಡಿದ್ದರೋ, ಅವರ ಆಶೀರ್ವಾದ ಈ ಬಾರಿಯೂ ಸಿಗುವ ವಿಶ್ವಾಸವಿದೆ…

ಇವಿಷ್ಟು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರ ಮದಾಳದ ನುಡಿಗಳು. ಉದಯವಾಣಿ ಪತ್ರಿಕೆಯ “ನೇರಾನೇರ’ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ಹತ್ತು ವರ್ಷ ಕ್ಷೇತ್ರಕ್ಕಾಗಿ ಕೆಲಸ ಮಾಡಿ ಟಿಕೆಟ್‌ ಕಳೆದುಕೊಂಡ ಬಗ್ಗೆ ಬೇಸರ ಹೊರಹಾಕಿದ್ದಾರಲ್ಲದೆ, ಹಳೆ ಮೈಸೂರು ಭಾಗದಿಂದ ಮುಂದಿನ ದಿನಗಳಲ್ಲಿ ವಿಧಾನಸಭೆ ಪ್ರವೇಶಿಸುತ್ತೇನೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ಕುಟುಂಬ ರಾಜಕಾರಣದ ವಿರುದ್ಧವೂ ಅಸಮಾಧಾನ ಹೊರಗೆಡವಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

1. ರಾಷ್ಟ್ರೀಯ ಬಿಜೆಪಿಯಲ್ಲಿ ಏಕಚಕ್ರಾಧಿಪತ್ಯ ಇದೆ ಎಂಬ ಆರೋಪವಿದೆಯಲ್ಲ. ಅದರ ಬಗ್ಗೆ ನಿಮ್ಮ ಅಭಿಪ್ರಾಯ?

ಪಕ್ಷವು ಯಾರೊಬ್ಬರ ಹಿಡಿತದಲ್ಲೂ ಇಲ್ಲ. 2014ರಲ್ಲಿ ಬಿಜೆಪಿ 274 ಸ್ಥಾನ ಗೆದ್ದಾಗ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ನರೇಂದ್ರ ಮೋದಿ ಕೃಪೆಯಿಂದ ಇಷ್ಟು ಸ್ಥಾನ ಬಂತು ಎಂದು ಅಡ್ವಾಣಿ ಅವರು ಹೇಳಿದ್ದರು. ಭಾವುಕರಾಗಿ ಮಾತನಾಡಿದ್ದ ಮೋದಿ, ತಾಯಿಗೆ ಮಗ ಕೃಪೆ ತೋರಲ್ಲ, ಋಣ ತೀರಿಸುತ್ತಾನಷ್ಟೇ ಎಂದಿದ್ದರು. ತಾಯಿ ಮೇಲೆ ಯಾರೂ ಚಕ್ರಾಧಿಪತ್ಯ ಸ್ಥಾಪಿಸಲಾಗಲ್ಲ. ಬಿಜೆಪಿ ಎಂಬುದು ಆರೆಸ್ಸೆಸಿನ ಹೊಕ್ಕುಳಬಳ್ಳಿ. ಸೈದ್ಧಾಂತಿಕ ಬುನಾದಿಯಿದೆ. ಸ್ವಲ್ಪ ಆಚೀಚೆ ಆದಾಗ ಆರೆಸ್ಸೆಸ್‌ ಕಿವಿ ಹಿಂಡಿ ಸರಿಪಡಿಸುತ್ತಾರೆ. ರಾಮ ಎನ್ನುವ ಮೇರುವ್ಯಕ್ತಿತ್ವ ಇಲ್ಲದಿದ್ದರೆ ವಾನರ ಸೇನೆ, ಅಳಿಲು ಎಲ್ಲೆಲ್ಲೋ ಇರುತ್ತಿದ್ದವು. ಅಳಿಲೂ ನೀರಲ್ಲಿ ಮುಳುಗಿ, ಮರಳಲಿ ಹೊರಳಿ ಮೈಕೊಡವಿತು. ವಾನರ ಸೇನೆ ಸೇತುವೆ ಕಟ್ಟಿತು. ರಾಮ ಒಬ್ಬನೇ ರಾವಣನನ್ನು ಹೊಡೆಯಬಹುದಿತ್ತು. ಎಲ್ಲರನ್ನೂ ಕರೆದೊಯ್ದು ನಾಯಕತ್ವ ವಹಿಸಿದ. ಬಿಜೆಪಿಗೆ ನಾಯಕತ್ವ ಕೊಡುವ ಗುಣ ಮೋದಿ ಅವರಿಗಿದೆ, ನಾಳೆ ಅದು ಯೋಗಿ ಆದಿತ್ಯನಾಥ್‌ ಅವರಿಗೆ ಬರಬಹುದು.

2. ಪತ್ರಕರ್ತರಾಗಿದ್ದ ಪ್ರತಾಪ್‌ ಸಿಂಹ ಅವರು ರಾಜಕಾರಣಿ ಆದಿರಿ. ಯಾವ ಆಶಯ ಇಟ್ಟುಕೊಂಡು ರಾಜಕಾರಣಕ್ಕೆ ಬಂದಿರಿ?
ನಾನು 13 ವರ್ಷ ಪತ್ರಕರ್ತನಾಗಿ ಕೆಲಸ ಮಾಡಿದೆ. ಚಿಕ್ಕ ವಯಸ್ಸಿನಲ್ಲೇ ಅಂಕಣಕಾರನಾದೆ. ಎಲ್ಲ ಬರೆದ ಅನಂತರ, ಪತ್ರಕರ್ತನಾಗಿ ಜನರ ಪರವಾಗಿ ವಕಾಲತ್ತು ವಹಿಸಿ ಬರೆಯಬಹುದೇ ಹೊರತು, ಅವರ ಕಷ್ಟಗಳಿಗೆ ಸ್ಪಂದಿಸಲಾಗುವುದಿಲ್ಲ. ಹಾಗೆ ನೇರವಾಗಿ ಸ್ಪಂದಿಸುವ ಅವಕಾಶ ಇರುವುದು ರಾಜಕಾರಣದಲ್ಲಿ ಮಾತ್ರ ಎನ್ನಿಸಿತು. ಅದೇ ಸಂದರ್ಭಕ್ಕೆ ಮೋದಿ ಪ್ರಧಾನಿ ಅಭ್ಯರ್ಥಿ ಎಂಬ ಘೋಷಣೆ ಹೊರಬಿತ್ತು. ಸಕಾಲ ಎಂದು ಭಾವಿಸಿ ರಾಜಕಾರಣಕ್ಕೆ ಬಂದೆ. ಸಂಘದಲ್ಲಿ ಇರುವ ಹಿರಿಯರು ಆಶೀರ್ವಾದ ಮಾಡಿದರು. 2014ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ, ಐವರು ಕಾಂಗ್ರೆಸ್‌ ಶಾಸಕರಿದ್ದಾಗಲೇ ಮೈಸೂರು-ಕೊಡಗಿನಂತಹ ಕ್ಲಿಷ್ಟಕರ ಕ್ಷೇತ್ರದಲ್ಲಿ ಗೆದ್ದು ಬಂದೆ.

3. 10 ವರ್ಷ ಸಂಸದರಾಗಿದ್ದಿರಿ. ರಾಜಕಾರಣಕ್ಕೆ ಬರುವಾಗ ಇಟ್ಟುಕೊಂಡಿದ್ದ ಆಶಯಗಳೆಲ್ಲವನ್ನೂ ಈಡೇರಿಸಿದ ತೃಪ್ತಿ ಇದೆಯೇ?

ಚುನಾವಣೆ ಬಂದಾಗ ಭರವಸೆ ಕೊಟ್ಟು ಗೆದ್ದವರು, ಅದನ್ನು ಈಡೇರಿಸುವ ಭರವಸೆ ಕೊಟ್ಟು ಮತ್ತೂಂದು ಚುನಾವಣೆ ಗೆಲ್ಲುತ್ತಾರೆ. ನಾನು ಹಾಗಲ್ಲ. ರಾಜಕಾರಣಿ ಆದಾಗಲೂ ಪತ್ರಕರ್ತನ ಮನಸ್ಥಿತಿ ಇಟ್ಟುಕೊಂಡಿದ್ದೆ. ಕ್ಷೇತ್ರಕ್ಕೆ 13 ರೈಲುಗಳನ್ನು ತಂದಿದ್ದೇನೆ. 350 ಕೋಟಿ ರೂ. ಅನುದಾನದಲ್ಲಿ ಹೊಸ ರೈಲು ನಿಲ್ದಾಣ ಕಾಮಗಾರಿಗೆ ಟೆಂಡರ್‌ ಆಗಿದೆ. 319 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಭೂಸ್ವಾಧೀನ ಮಾಡಲಾಗುತ್ತಿದೆ. 4,130 ಕೋಟಿ ರೂ. ವೆಚ್ಚದಲ್ಲಿ ಮೈಸೂರು-ಕುಶಾಲನಗರ ನಡುವೆ ಚತುಷ್ಪಥ ಕಾಮಗಾರಿ, ಸಾಫ್ಟ್­ ವೇರ್‌ ಟೆಕ್ನಾಲಜಿ ಪಾರ್ಕ್‌ ಆಫ್ ಇಂಡಿಯಾ ತಂದಿದ್ದೇನೆ. ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ 45.50 ಕೋಟಿ ರೂ. ತಂದೆ. ಮೈಸೂರು ವರ್ತುಲ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರಿಸಿ ಹೊರವರ್ತುಲ ಪೆರಿಫೆರಲ್‌ ರಸ್ತೆಗೆ 10 ಕೋಟಿ ರೂ.ನ ಡಿಪಿಆರ್‌ ತಯಾರಾಗಿದೆ. ಇದನ್ನೆಲ್ಲಾ ಪೂರ್ಣಗೊಳಿಸುವ ಕನಸುಗಳಿದ್ದವು. ಇನ್ನೊಂದು 5 ವರ್ಷ ಸಂಸದ ನಾಗಿ ಮುಂದುವರಿಯುವುದಾಗಿ ಘೋಷಿಸಿದ್ದೆ. ರಾಜಕೀಯ ತಂತ್ರ, ರಣತಂತ್ರ, ಒಳತಂತ್ರ, ಷಡ್ಯಂತ್ರಗಳಿಗೆ ನಾನು ಬಲಿಯಾಗಬೇಕಾಯಿತು. ನಾನು 10 ವರ್ಷ ಸತತವಾಗಿ ಶ್ರಮಿಸಿ ತಂದ ಯೋಜನೆಗಳು ಕೈಗೂಡುವ ಸಂದರ್ಭದಲ್ಲಿ ಆ ಸ್ಥಾನದಲ್ಲಿ ನಾನಿಲ್ಲ ಎಂಬ ಬೇಸರ ಖಂಡಿತಾ ಇದೆ.

4. ಸಂಸದನಾಗಿ ಸಾಧನೆ ಮಾಡಿದ್ದೇನೆ ಎಂದು ಹೇಳಿಕೊಳ್ಳುವ ನಿಮಗೇಕೆ ಟಿಕೆಟ್‌ ಪಡೆಯಲಾಗಲಿಲ್ಲ? ನಿಮಗೆ ಟಿಕೆಟ್‌ ತಪ್ಪಿಸಲು ಷಡ್ಯಂತ್ರ ಮಾಡಿದವರ್ಯಾರು?
ನಮ್ಮ ತಂದೆ 1968ರಲ್ಲಿ ಹಾಸನದಲ್ಲಿ ಜನಸಂಘದ ದೀಪದ ಗುರುತಿನ ಮೇಲೆ ಸ್ಪರ್ಧಿಸಿ ಗೆದ್ದು ಗ್ರಾಮ ಪಂಚಾಯತ್‌ ಅಧ್ಯಕ್ಷರಾದವರು. ನಾಗಪುರದಲ್ಲಿ ಆರ್‌ಎಸ್‌ಎಸ್‌ನ ಒಟಿಸಿ ಮಾಡಿದವರು. ಸಂಘದ ಹಿನ್ನೆಲೆ ಇದ್ದುದರಿಂದ ಬಿಜೆಪಿ ನನ್ನ ಸಹಜ ಆಯ್ಕೆಯಾಗಿತ್ತು. ರಾಜಕಾರಣದಲ್ಲಿ ಅಭಿವೃದ್ಧಿ ಕೆಲಸಗಳೊಂದೇ ಕೈಹಿಡಿಯುತ್ತವೆ ಎಂದುಕೊಂಡಿರುತ್ತೇವೆ. ಆದರೆ ಯಾವ ವಿದ್ಯಾರ್ಹತೆಯನ್ನೂ ಬೇಡದ ಕ್ಷೇತ್ರವಿದು. ಕಳ್ಳರು, ಸುಳ್ಳರು, ಭ್ರಷ್ಟರು, ಲಫ‌ಂಗರೆಲ್ಲ ಇರುವುದು ಇಲ್ಲೇ. ಯೋಗ್ಯತೆ ಮುಖ್ಯ ಆಗಲಿಲ್ಲ. ನನ್ನಂತೆ ಕೆಲಸ ಮಾಡಿದ ಯಾವುದಾದರೂ ಸಂಸದರಿದ್ದರೆ? ನನಗಿಂತ ಯೋಗ್ಯ ವ್ಯಕ್ತಿಗಳು ಇದ್ದರೆ? ನಾನೇನು ಕೆಲಸ ಮಾಡಿರಲಿಲ್ಲವೇ? ನನಗೇನು ವಯಸ್ಸಾಗಿತ್ತೇ? ನನಗೆ ಅನ್ಯಾಯ ಆಗಲ್ಲ ಎಂಬ ವಿಶ್ವಾಸ ಇತ್ತು. ನಮ್ಮದೇ ರಾಜ್ಯದ ಯಡಿಯೂರಪ್ಪ ಸಾಹೇಬರು ಸಂಸದೀಯ ಮಂಡಳಿ ಸದಸ್ಯರಾಗಿದ್ದಾರೆ. ಬೇರೆಯವರ ವಿಷಯದಲ್ಲಿ ಹಠ ಹಿಡಿದಂತೆ ನನ್ನ ವಿಷಯದಲ್ಲೂ ಹಿಡಿದು ಟಿಕೆಟ್‌ ಕೊಡಿಸಬಹುದಿತ್ತಲ್ಲವೇ? ಅನಂತಕುಮಾರ್‌ ಸಾಹೇಬರು ಇದ್ದಿದ್ದರೆ ನನಗೆ ಅನ್ಯಾಯ ಆಗಲು ಬಿಡುತ್ತಿರಲಿಲ್ಲ.

5. ಯದುವೀರ್‌ ಒಡೆಯರ್‌ ಆಯ್ಕೆ ಮೊದಲೇ ಗೊತ್ತಿತ್ತಾ?
ಅದೆಲ್ಲವೂ ಕಳೆದು ಹೋದ ವಿಚಾರ. ನನ್ನ ಟಿಕೆಟ್‌ಗೆ ತಡೆಯೊಡ್ಡಿದ ಕೂಡಲೇ ಯದುವೀರ್‌ ಅವರ ಹೆಸರನ್ನು ಒಬಿಸಿ ಕೋಟಾದಡಿ ತೇಲಿಬಿಟ್ಟರು. ನಾನೇ ಕರೆ ಮಾಡಿದಾಗ ಅವರು ಚುನಾವಣೆಯಲ್ಲಿ ಆಸಕ್ತಿ ಇಲ್ಲ ಎಂದಿದ್ದರು. ನಿಲ್ಲುವ ಆಸಕ್ತಿ ಇದ್ದರೆ ಹೇಳಿಬಿಡಿ, ನನಗೆ ಅವಮಾನ ಆಗುವುದು ಬೇಡ ಎಂದಿದ್ದೆ. ಪ್ರಸ್ತಾವನೆ ಬರಲಿ ನೋಡೋಣ ಎಂದಿದ್ದರು. ನೀವು ಒಪ್ಪಿಕೊಂಡರೆ ನನ್ನ ಮನೆ ಹಾಳಾಗುತ್ತದೆ, ನಿಮ್ಮನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದೆ. ಹಾಗಾಗಲು ಬಿಡಲ್ಲ ಎಂದಿದ್ದರು. ಟಿಕೆಟ್‌ ಘೋಷಣೆಯಾದ ಬಳಿಕ, ಒಂದು ವರ್ಷದಿಂದ ತಯಾರಿ ಮಾಡಿಕೊಂಡಿದ್ದೆ ಎನ್ನುತ್ತಾರೆ. ಟಿಪ್ಪುವನ್ನು ಸೋಲಿಸಿ ಸಾಮ್ರಾಜ್ಯ ಪಡೆದ ರಾಜಮನೆತನದವರು ತುಂಗಭದ್ರಾ ನದಿಯಿಂದ ಈಚೆಗೆ ಎಲ್ಲಿ ಬೇಕಿದ್ದರೂ ನಿಲ್ಲಬಹುದಿತ್ತಲ್ಲವೇ? ಅವರು ರಾಜ, ನಾನು ಪ್ರಜೆ. ರಾಜನಿಗೇ ಪ್ರಜೆಯ ಸ್ಥಾನ ಬೇಕು ಎಂದರೆ ಬಿಟ್ಟುಕೊಟ್ಟಿದ್ದೇನೆ.

6. ಯದುವೀರ್‌ಗೆ ಟಿಕೆಟ್‌ ಘೋಷಣೆಯಾದಾಗ ಪಕ್ಷೇತರರಾಗಿ ಸ್ಪರ್ಧಿಸಲು ಚಿಂತಿಸಿದ್ದಿರಾ?
ಜನಸಂಘದ ಮನೆತನದ ಹಿನ್ನೆಲೆಯಿಂದ ಬಂದು ಪಕ್ಷೇತರನಾಗಿ ಸ್ಪರ್ಧಿಸುವ ಯೋಚನೆ ಮಾಡಿರಲಿಲ್ಲ. ಆದರೆ ಕಾಂಗ್ರೆಸ್‌ನಿಂದ ಕರೆ ಬಂದಿತ್ತು. ನನಗಾಗಿ ಟಿಕೆಟ್‌ ಕಾಯ್ದಿರಿಸಿದ್ದರು. ತತ್ವ ಸಿದ್ಧಾಂತ ಬೇರೆ ಎಂಬ ಕಾರಣಕ್ಕೆ ಹೋಗಲಿಲ್ಲ. ನಾನೇನಾದರೂ ಹೋಗಿದ್ದರೆ ಎದುರಿಗೆ ಯಾರೇ ಇದ್ದರೂ ಸೋಲಿಸುತ್ತಿದ್ದೆ.

7. ಬಿಜೆಪಿಗೆ ನಾಯಕತ್ವದ ಕೊರತೆ ಕಾಡುತ್ತಿದೆಯೇ? ಹೊಸ ನಾಯಕತ್ವ ಹುಟ್ಟಿಕೊಳ್ಳುತ್ತಿಲ್ಲವೇ? ಪಕ್ಷ ಶುದ್ಧೀಕರಣದ ಮಾತೇಕೆ ಕೇಳಿಬರುತ್ತಿದೆ?
ಹೋರಾಟ ಬಲದಿಂದ ನಾಯಕತ್ವ ಹುಟ್ಟುತ್ತದೆ. ಸ್ವಾತಂತ್ರಾéನಂತರ ಗಾಂಧಿ ಅವರ ವೈಯಕ್ತಿಕ ಪ್ರೀತಿಯಿಂದ ನೆಹರೂ ಪ್ರಧಾನಿ ಆದರೇ ಹೊರತು ಸ್ವಂತ ಯೋಗ್ಯತೆ ಅಥವಾ ಆಯ್ಕೆಯಿಂದಲ್ಲ. ಆಗಿನಿಂದಲೇ ದೇಶದ ನಾಯಕತ್ವ ದಿಕ್ಕು ತಪ್ಪಿತ್ತು. ಕಾಂಗ್ರೆಸ್‌ಗೆ ಪರ್ಯಾಯ ಸಿದ್ಧಾಂತದ ಚಳವಳಿಗಳು ಹೊಸ ನಾಯಕತ್ವ ಸೃಷ್ಟಿಸಿದವು. ಈಗೀಗ ಕುಟುಂಬ ಹಿನ್ನೆಲೆಯವರು ನಾಯಕರಾಗುತ್ತಿದ್ದಾರೆ. ದೊಡ್ಡ ನಾಯಕರು ಅವರವರ ಮಕ್ಕಳನ್ನು ನಾಯಕರಾಗಿಸಲು ತಹತಹಿ ಸುತ್ತಾರೆ. ಅಪ್ಪ ಪಟ್ಟ ಕಷ್ಟ ಮಕ್ಕಳಿಗೇ ತಿಳಿದಿರುವುದಿಲ್ಲ. ಅಂತಹವರನ್ನು ನಾಯಕರಾಗಿ ಬೆಳೆಸಲಾಗುತ್ತಿದೆ. ವೈದ್ಯನ ಮಗ ವೈದ್ಯನಾಗಲು ವೈದ್ಯಕೀಯ ಶಿಕ್ಷಣ ಪಡೆದೇ ಬರಬೇಕು. ಅಮಿತಾಬ್‌ ಬಚ್ಚನ್‌ರ ಶೇ.10 ರಷ್ಟೂ ಅವರ ಮಗ ಅಭಿನಯ ಮಾಡುವುದಿಲ್ಲ.

ಸಚಿನ್‌ ತೆಂಡುಲ್ಕರ್‌ ಮಗ ಕ್ಲಬ್‌ ಕ್ರಿಕೆಟ್‌ ಕೂಡ ಆಡಲ್ಲ. ಬೇಂದ್ರೆ, ಕಾರಂತರು, ಡಿವಿಜಿ, ಅನಕೃ, ರಾಜರತ್ನಂ, ತರಾಸು ಅವರಂತಹ ಅತ್ಯುತ್ತಮ ಸಾಹಿತಿಗಳ ಮಕ್ಕಳಿಗೇ “ಪ್ರತಿಭೆ’ ಎನ್ನುವುದು ವರ್ಗಾವಣೆ ಆಗಿರುವುದಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಮಕ್ಕಳೆಲ್ಲ ಅವರಂತೆಯೇ ಹುಟ್ಟುತ್ತಾರೆ ಎಂದು ಏಕೆ ಅಂದುಕೊಳ್ಳಬೇಕು? ಜನರ ನೋವು ಅವರಿಗೆ ಗೊತ್ತಿರುವುದಿಲ್ಲ. ಆ ಮಕ್ಕಳನ್ನು ಗದ್ದುಗೆಯಲ್ಲಿ ಕೂರಿಸಲು ಕಂಡವರ ಮಕ್ಕಳನ್ನು ಹಾಳು ಮಾಡುವ ಎಲ್ಲ ಪ್ರಯತ್ನ ನಡೆಯುತ್ತಿದೆ. ಎಲ್ಲ ಪಕ್ಷದಲ್ಲೂ ಹಾಗೇ ಆಗುತ್ತಿದೆ. ವಿಶಾಲ ಹಿತಾಸಕ್ತಿಯಿಂದ ಈ ವಿಚಾರ ಎತ್ತಿದ್ದೇನೆ.

8. ಹಾಗಿದ್ದರೆ ಜನನಾಯಕರ ಮಕ್ಕಳು, ಕುಟುಂಬಸ್ಥರು ರಾಜಕೀಯಕ್ಕೆ ಬರಲೇಬಾರದಾ?
ಯಾವ ರಾಜಕಾರಣಿಯ ಮಗ ಅಪ್ಪನಂತೆ ಕಷ್ಟಪಟ್ಟು ಬಂದವರಿದ್ದಾರೆ? ಮಕ್ಕಳನ್ನು ಬೆಳೆಸುವ ಅಪ್ಪಂದಿರು ಇರುವವರೆಗೆ ಕಂಡವರ ಮಕ್ಕಳಿಗೆ ಭವಿಷ್ಯ ಇರಲ್ಲ. ಇಂಥದ್ದೇ ವ್ಯವಸ್ಥೆಗೆ ನಾನು ಬಲಿಯಾಗಿದ್ದೇನೆ. ಕಂಡವರ ತಾಯಿ ಹೊಟ್ಟೆಯಲ್ಲಿ ಒಳ್ಳೆಯ ಮಕ್ಕಳೇ ಹುಟ್ಟುವುದಿಲ್ಲವೇನೋ ಎನ್ನುವಂತೆ ಆಡುತ್ತಾರೆ. ಯಡಿಯೂರಪ್ಪ ಸೈಕಲ್‌ನಲ್ಲಿ ರಾಜ್ಯ ಸುತ್ತಿ ಪಕ್ಷ ಕಟ್ಟಿದವರು. ಪಕ್ಷ ಹಾಗೂ ಕಾರ್ಯಕರ್ತರು ಅಪ್ಪಾಜಿ ಎಂದು ಬೆಲೆ ಕೊಡುತ್ತಾರೆ. ಲ್ಯಾಬ್‌ ನಡೆಸುತ್ತಿದ್ದ ಮಗ ಯತೀಂದ್ರನನ್ನು ಕರೆತಂದು ಸಿದ್ದರಾಮಯ್ಯ ಅವರು ವಿಧಾನಪರಿಷತ್‌ ಸದಸ್ಯರನ್ನಾಗಿಸಿದರು. ಸಿದ್ದರಾಮಯ್ಯ ಈಗ ಕೆಳಗಿಳಿದರೆ ಮಗನನ್ನು ಮಂತ್ರಿ ಮಾಡಿ ಎನ್ನುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಮಗನನ್ನು ಮಂತ್ರಿ ಮಾಡಲು ಬಾಬುರಾವ್‌ ಚಿಂಚನಸೂರು, ಖಮರುಲ್‌ ಇಸ್ಲಾಂ, ಉಮೇಶ್‌ ಜಾಧವ್‌ ಅವರನ್ನು ಬಿಡಲಿಲ್ಲವೇ? ಕುಮಾರಸ್ವಾಮಿ ಮಗನನ್ನು ಎರಡು ಚುನಾವಣೆಗೆ ನಿಲ್ಲಿಸಿದರು.

ಜನ ಆಶೀರ್ವಾದ ಮಾಡಲಿಲ್ಲ. ಆದರೂ ಅವರಿಗೆ ನಾಯಕತ್ವ ಕೊಟ್ಟಿದ್ದಾರೆ. ಈ ನಾಯಕರೆಲ್ಲ ಮಕ್ಕಳನ್ನು ನಾಯಕರನ್ನಾಗಿ ಬೆಳೆಸುತ್ತಿದ್ದಾರೆ. ಜನನಾಯಕರ ಮಕ್ಕಳು ರಾಜಕೀಯಕ್ಕೆ ಬರಬಾರದು ಎನ್ನುವುದಿಲ್ಲ. ಆದರೆ ಅವರು ತಳಮಟ್ಟದಿಂದ ಬೆಳೆದು ಬರಬೇಕು. ವರ್ಷಾನುಗಟ್ಟಲೆ ಹೋರಾಟ ನಡೆಸಿ ಅರ್ಹತೆ ಗಳಿಸಿಕೊಳ್ಳಬೇಕು. ಆದರೆ ನಮ್ಮಲ್ಲಿ ಹಾಗಾಗುತ್ತಿಲ್ಲ. ಜಾತಿ ಮುಂದಿಟ್ಟು ರಾಜಕೀಯ ಮಾಡುತ್ತಾರೆ. ಜನ ಎಲ್ಲಿವರೆಗೆ ಜಾತಿ ಇಟ್ಟುಕೊಂಡು ಹೋಗುತ್ತಾರೋ ಅಲ್ಲಿಯವರೆಗೆ ಈ ರಾಜಕಾರಣಿಗಳು ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ನಿಮ್ಮ ಮಕ್ಕಳಿಗೆ ಭವಿಷ್ಯ ಇರುವುದಿಲ್ಲ, ಅವರ ಮಕ್ಕಳಿಗಷ್ಟೇ ಭವಿಷ್ಯ ಮಾಡಿಕೊಡುತ್ತಾರೆ. ಅದಕ್ಕಾಗಿ ಜಾತಿ ಎಂಬ ನಶೆಯನ್ನು ನಿಮ್ಮ ತಲೆಯಲ್ಲಿ ತುಂಬುತ್ತಾರೆ.

9. 25 ಸ್ಥಾನವಿದ್ದ ಬಿಜೆಪಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 17ಕ್ಕೆ ಕುಸಿದಿದೆ. ಏನು ಕಾರಣ? ಏನು ಪರಿಹಾರ?
ಮೊದಲ ಹಂತದ ಚುನಾವಣೆ ನಡೆದ 14 ಕ್ಷೇತ್ರಗಳು ಒಕ್ಕಲಿಗ ಪ್ರಾಬಲ್ಯದವೇ ಆಗಿದ್ದವು. ಹಾಸನದಲ್ಲಿ ಸಣ್ಣ-ಪುಟ್ಟ ಸಮಸ್ಯೆಯಿಂದ ಗೆಲ್ಲಲಿಲ್ಲ ಎನ್ನುವುದು ಬಿಟ್ಟರೆ ಉಳಿದೆಡೆ ಗೆದ್ದಿದ್ದೇವೆ. ಚಾಮರಾಜ ನಗರದಲ್ಲಿ ಪ್ರಯತ್ನಿಸಿದ್ದರೆ ಗೆಲ್ಲುತ್ತಿದ್ದೆವು. ದೇವೇಗೌಡರೇ ಮೋದಿ ಪ್ರಧಾನಿ ಆಗಬೇಕೆಂಬ ಆಸೆ ವ್ಯಕ್ತಪಡಿಸಿದ್ದರಿಂದ ಬಿಜೆಪಿ ಪರವಾಗಿ ಒಂದು ವರ್ಗದ ಮತಗಳು ಸಮೀಕರಣವಾದವು. ಉತ್ತರ ಕರ್ನಾ ಟಕದಲ್ಲಿ ದಾವಣಗೆರೆ, ಚಿಕ್ಕೋಡಿ, ಬೀದರ್‌, ರಾಯಚೂರು, ಕೊಪ್ಪಳದಲ್ಲಿ ಲಿಂಗಾಯತರ ಪ್ರಾಬಲ್ಯವಿದೆ. ಅಲ್ಲಿ ಸೋತದ್ದರ ಹೊಣೆಗಾರಿಕೆ ಯಾರು ತೆಗೆದುಕೊಳ್ಳಬೇಕು? ಇದರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾವ ಜಾತಿಗೂ ಯಾರೂ ಅಧಿಪತಿಗಳಲ್ಲ. ಜನ ಒಮ್ಮೆ ಮೈಕೊಡವಿ ನಿಲ್ಲಬೇಕು. ಇನ್ನಾದರೂ ಜಾತಿ ಬಿಟ್ಟು ಯೋಗ್ಯತೆ ಮೇಲೆ, ಗುಣದೌರ್ಬಲ್ಯ ನೋಡಿ ಮತ ಹಾಕುವುದನ್ನು ಕಲಿಯಬೇಕು.

10. ಪಕ್ಷದ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರ ವಿರುದ್ಧ ಮಾತನಾಡುವ ಯತ್ನಾಳ್‌ರನ್ನು ಸಮಾನಮನಸ್ಕರು ಎನ್ನುತ್ತೀರಿ. ಶಾಸಕಾಂಗ ಸಭೆಗೇ ಬಾರದವರೊಂದಿಗೆ ಸಖ್ಯ ಬೆಳೆಸುತ್ತೀರಿ? ಏನಿದರ ಮರ್ಮ?
ಬಿಜೆಪಿಯ ಮುಖ್ಯ ಧ್ಯೇಯವಾದ ರಾಷ್ಟ್ರೀಯತೆ ವಿಚಾರದಲ್ಲಿ ಯಾರು ಕೈಜೋಡಿಸಿದರೂ ಅವರೊಂದಿಗೆ ನಾನಿರುತ್ತೇನೆ. ಈ ವಿಚಾರದಲ್ಲಿ ಬಸನಗೌಡ ಪಾಟೀಲರು ಮುಂದಿರುತ್ತಾರೆ. ಯಡಿಯೂರಪ್ಪ ಅವರ ಸರಕಾರ ತರಲು ರಮೇಶ್‌ ಜಾರಕಿಹೊಳಿ ಅವರ ಪಾತ್ರವಿದೆ. ವೈಯಕ್ತಿಕ ವರ್ಚಸ್ಸು ಇರುವವರು ಅಭಿಪ್ರಾಯಭೇದವನ್ನು ಪಕ್ಷದ ವೇದಿಕೆಯಲ್ಲಿ ಹೇಳಿದರೂ ಪ್ರಯೋಜನವಾಗದಿದ್ದಾಗ ಸಾರ್ವಜನಿಕವಾಗಿ ಹೇಳುತ್ತಾರೆ. ಅವರೊಂದಿಗೆ ಗುರುತಿಸಿಕೊಂಡ ಮಾತ್ರಕ್ಕೆ ನನ್ನ ಬದ್ಧತೆ ಬದಲಾಗಿಲ್ಲ. ನನ್ನ ನಿಷ್ಠೆ ಪ್ರಶ್ನಾತೀತ. ಕುಟುಂಬದೊಳಗೇ ಅಭಿಪ್ರಾಯ ಭೇದ ಇರುತ್ತದೆ ಎಂದ ಮೇಲೆ ಪಕ್ಷದೊಳಗೆ ಎಷ್ಟೋ ಬಾರಿ ಅಭಿಪ್ರಾಯ ಭೇದಗಳು ಇರುತ್ತವೆ. ವೈಯಕ್ತಿಕ ಕಿತ್ತಾಟ ಎಲ್ಲವೂ ಇರುತ್ತದೆ. ಎಲ್ಲವನ್ನೂ ಸರಿದೂಗಿಸಿಕೊಂಡು ಕರೆದೊಯ್ಯುವ ನಾಯಕತ್ವ ಬೇಕು. ಉದ್ದೇಶ ಶುದ್ಧಿ ಇರುವ ನಾಯಕತ್ವ ಬೇಕು. ಅಸಮಾಧಾನಿತರೆಂದು ಯಾರನ್ನೂ ಹೇಳಲ್ಲ. ಶಕಾöನುಸಾರ ಅವಕಾಶ, ಪ್ರಾಮುಖ್ಯ ಸಿಗಬೇಕು. ಸಿಗದಿದ್ದಾಗ ಸಾರ್ವಜನಿಕವಾಗಿ ಬೇಸರ ವ್ಯಕ್ತಪಡಿಸತ್ತಾರೆ. ಅಷ್ಟಕ್ಕೆ ಬಂಡುಕೋರರು ಎನ್ನಲಾಗುವುದಿಲ್ಲ.

11. ಬೊಮ್ಮಾಯಿ, ಶೆಟ್ಟರ್‌, ಕುಮಾರಸ್ವಾಮಿ, ಕೋಟ ಅವರುಗಳೆಲ್ಲ ದಿಲ್ಲಿಗೆ ಹೋದ ಮೇಲೆ ವಿಧಾನಸಭೆ, ಪರಿಷತ್ತಿನಲ್ಲಿ ವಿಪಕ್ಷ ದುರ್ಬಲ ಆಗಿದೆ ಎನ್ನುತ್ತಾರಲ್ಲ?
ವಿಧಾನಸೌಧದಲ್ಲಿ ನಾನಿಲ್ಲದೇ ಇರಬಹುದು. ಯಾವುದೇ ವಿಚಾರ ಇದ್ದರೂ ನಾನೀಗ ತಾರ್ಕಿಕವಾಗಿ, ಪ್ರಬಲವಾಗಿ ಮಾತನಾಡುತ್ತಿದ್ದೇನೆ. ಶೆಟ್ಟರ್‌, ಬೊಮ್ಮಾಯಿ, ಕುಮಾರಸ್ವಾಮಿ ಅವರೆಲ್ಲರೂ ಹತ್ತಾರು ವರ್ಷ ಇಲ್ಲಿದ್ದರು. ಈಗ ಲೋಕಸಭೆಗೆ ಹೋಗಿದ್ದಾರೆ. ನಾನು ಅಲ್ಲಿದ್ದವನು. ಇಲ್ಲಿಗೆ ಬಂದಿದ್ದೇನೆ. ಯತ್ನಾಳ್‌ರು, ವಿಜಯೇಂದ್ರ ಎಲ್ಲರೂ ಇದ್ದಾರೆ. ದುರ್ಬಲ ಎನ್ನುವಂತಿಲ್ಲ.

12. ರಾಷ್ಟ್ರೀಯ ಮಟ್ಟಕ್ಕೆ ಕಣ್ಣು ಹಾಯಿಸಿದರೆ, ಪ್ರಧಾನಿ ಮೋದಿಗೆ 75 ತುಂಬುತ್ತಿದೆ. ಪರ್ಯಾಯವಾಗಿ ಯೋಗಿ ಹೆಸರು ಕೇಳಿಬರುತ್ತಿದೆ. ನೀವು ದಿಲ್ಲಿಯಲ್ಲಿದ್ದವರು. ನಿಮ್ಮ ಕಿವಿಗೆ ಅಂಥದ್ದೇನಾದರೂ ಬಿದ್ದಿದೆಯಾ?
ಯೋಗಿ ಅವರಿಗೆ ಮೋದಿ ಅವರದ್ದೇ ಮಾದರಿಯ ವರ್ಚಸ್ಸಿದೆ. ಮೋದಿ ಅವರಿಗೆ ಮುಂದಿನ 5 ವರ್ಷದ ಜನಾದೇಶವಿದೆ. 75 ವರ್ಷ ಎಂಬುದು ಬಿಜೆಪಿ ಸಂವಿಧಾನದಲ್ಲಿ ಇಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿದ್ದರು. ಹಾಗೆಲ್ಲ ಏನಿಲ್ಲ. 2029 ರವರೆಗೆ ಮೋದಿ ಅವರಿರುತ್ತಾರೆ. ಅನಂತರದ ಚುನಾವಣೆ ಮೋದಿ ಅವರ ನೇತೃತ್ವದಲ್ಲಿ ಹೋಗುತ್ತೇವೋ, ಯೋಗಿ ಅವರ ನೇತೃತ್ವದಲ್ಲಿ ಹೋಗುತ್ತೇವೋ ಅಥವಾ ಇನ್ಯಾರ ನೇತೃತ್ವದಲ್ಲಿ ಹೋಗುತ್ತೇವೋ ಗೊತ್ತಿಲ್ಲ. ಆರ್‌ಎಸ್‌ಎಸ್‌ ಎನ್ನುವ ವೇದಿಕೆ ಇಲ್ಲದಿದ್ದರೆ ಇಂದಿನ ನಾಯಕರೆಲ್ಲ ಎಲ್ಲಿರುತ್ತಿದ್ದರು? ಆರ್‌ಎಸ್‌ಎಸ್‌ ಇಲ್ಲದೆ ಬಿಜೆಪಿ ಏನೇನೂ ಅಲ್ಲ.

  • ಸಾಮಗ ಶೇಷಾದ್ರಿ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

BR-patil

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.