Mysore Chalo Yathre: ಮಂಡ್ಯದಲ್ಲಿ 6ನೇ ದಿನಕ್ಕೆ ಕಾಲಿಟ್ಟ ಬಿಜೆಪಿ-ಜೆಡಿಎಸ್ ಪಾದಯಾತ್ರೆ
"ಗೌಡರ ಗೌಡ ದೇವೇಗೌಡ' ಎಂಬ ಘೋಷಣೆ
Team Udayavani, Aug 9, 2024, 6:35 AM IST
ಮಂಡ್ಯ: ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಯು ಗುರುವಾರ 6ನೇ ದಿನಕ್ಕೆ ಕಾಲಿಟ್ಟಿದ್ದು, ಮಂಡ್ಯದಲ್ಲಿ 3ನೇ ದಿನವೂ ಪಾದಯಾತ್ರೆ ಮುಂದುವರಿಯಿತು.
ಬುಧವಾರ ಮಂಡ್ಯ ನಗರದಿಂದ ಹೊರಟು ತೂಬಿನಕೆರೆ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದ ತಂಡ ಗುರುವಾರ ಬೆಳಗ್ಗೆ ಪುನರಾರಂಭಗೊಂಡು ಸುಮಾರು 17 ಕಿ.ಮೀ. ದೂರದ ಶ್ರೀರಂಗಪಟ್ಟಣ ತಲುಪಿತು. ಪಾದಯಾತ್ರೆಗೆ ಎಂದಿನಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡಿದರು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್ ಕುಮಾರಸ್ವಾಮಿ, ವಿಪಕ್ಷದ ನಾಯಕ ಆರ್. ಅಶೋಕ್ ಮೊದಲಾದವರಿದ್ದರು.
ಪಾದಯಾತ್ರೆ ಆರಂಭವಾಗುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಮತ್ತೆ “ಗೌಡರ ಗೌಡ ದೇವೇಗೌಡ’ ಎಂಬ ಘೋಷಣೆ ಕೂಗ ತೊಡಗಿದರು. ಪಕ್ಕದಲ್ಲಿ ಬಿಜೆಪಿ ಕಾರ್ಯಕರ್ತರು ಇದ್ದರೂ ಜೆಡಿಎಸ್ ಕಾರ್ಯಕರ್ತರ ಘೋಷಣೆ ಜೋರಾಗಿತ್ತು. ಅನಂತರ ನಿಖೀಲ್ ಬರುತ್ತಿದ್ದಂತೆ ಕಾರ್ಯಕರ್ತರು ಘೋಷಣೆ ಕೂಗುವುದನ್ನು ನಿಲ್ಲಿಸಿದರು.
ಪಾದಯಾತ್ರೆಯಿಂದ ಪ್ರೀತಂ ಗೌಡ ಹೊರಕ್ಕೆ
ಮಂಡ್ಯ: ಗುರುವಾರ ನಡೆದ ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಕಾಣಿಸಿಕೊಳ್ಳಲಿಲ್ಲ. ಬುಧವಾರ ಮಂಡ್ಯ ನಗರದಲ್ಲಿ ಪ್ರೀತಂ ಬೆಂಬಲಿಗರು ಹಾಗೂ ಜೆಡಿಎಸ್ ಬೆಂಬಲಿಗರ ನಡುವೆ ನಡೆದ ಘರ್ಷಣೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಕೂಡ ತನ್ನ ಎಕ್ಸ್ ಖಾತೆಯಲ್ಲಿ “ಸಂಘರ್ಷದ ಪಾದಯಾತ್ರೆ’ ಎಂದು ವ್ಯಂಗ್ಯವಾಡಿದ್ದು, ಮೈತ್ರಿ ಪಕ್ಷಗಳಿಗೆ ಮುಜುಗರ ತಂದಿತ್ತು. ಆದ್ದರಿಂದ ಬಿಜೆಪಿ ನಾಯಕರು ಪ್ರೀತಂ ಭಾಗವಹಿಸದಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರೀತಂ ಗೌಡ ಫ್ಲೆಕ್ಸ್‌ಗೆ ಬೆಂಕಿ ಹಾಕಿ ಆಕ್ರೋಶ
ಪ್ರೀತಂಗೌಡ ಫ್ಲೆಕ್ಸ್‌ಗೆ ಬುಧವಾರ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹೆಚ್ಚಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ತೂಬಿನಕೆರೆ ಬಳಿ ನಡೆದಿದೆ. ಬುಧವಾರ ಪಾದಯಾತ್ರೆ ಸಂದರ್ಭ ಪ್ರೀತಂ ಆಗಮಿಸುತ್ತಿದ್ದಂತೆ ಅವರ ಬೆಂಬಲಿಗರು “ಗೌಡರ ಗೌಡ ಪ್ರೀತಂ ಗೌಡ’ ಎಂದು ಘೋಷಣೆ ಕೂಗಿದ್ದರು. ಇದು ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿತ್ತು. ಆಗ ಕೆಲವು ಜೆಡಿಎಸ್ ಕಾರ್ಯಕರ್ತರು ಸಹ “ಗೌಡರ ಗೌಡ ದೇವೇಗೌಡ’ ಎಂದು ಘೋಷಣೆ ಕೂಗಲು ಆರಂಭಿಸಿದಾಗ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿತ್ತು.
ಕಿಡಿಗೇಡಿಗಳ ಚೇಷ್ಟೆಗೆ ತಾಳ್ಮೆ ಕಳೆದುಕೊಳ್ಳದಿರಿ: ನಿಖಿಲ್
ಮಂಡ್ಯ: ಯಾರೇ ಕಿಡಿಗೇಡಿಗಳು ಪಾದಯಾತ್ರೆಗೆ ಬಂದು ಏನೇ ಚೇಷ್ಟೆ ಮಾಡಿದರೂ ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳಬಾರದು. ಪಾದಯಾತ್ರೆ ಉದ್ದೇಶ ಮುಡಾ, ವಾಲ್ಮೀಕಿ ಹಗರಣಗಳ ವಿರುದ್ಧ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯದಲ್ಲಿ ನಡೆದ ಘಟನೆ (ಪ್ರೀತಂ ಗೌಡ ಹಾಗೂ ಜೆಡಿಎಸ್ ಬೆಂಬಲಿಗರ ಮಧ್ಯೆ ಚಕಮಕಿ) ಬೇಸರ ತರಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಮ್ಮ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ದೇವೇಗೌಡರ ಸಂಬಂಧ ಅತ್ಯುತ್ತಮವಾಗಿದ್ದು, ಇಂತಹ ಘಟನೆಗಳಿಗೆ ಅವಕಾಶ ಕೊಡಬಾರದು ಎಂದರು.
8 ವರ್ಷಗಳ ಬಳಿಕ ಮನೆ ದೇವರ ದರ್ಶನ ಪಡೆದ ಬಿಎಸ್‌ವೈ
ಮಂಡ್ಯ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 8 ವರ್ಷಗಳ ಅನಂತರ ಗುರುವಾರ ತಮ್ಮ ಮನೆದೇವರು ತಾಲೂಕಿನ ಬೂಕನಕೆರೆ ಗ್ರಾಮದಲ್ಲಿಯ ಗೋಗಾಲಮ್ಮದೇವಿ ಮತ್ತು ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದು ಪೀಠಾಧ್ಯಕ್ಷ ಚನ್ನವೀರ ಮಹಾಸ್ವಾಮಿ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿ, ಕಾರ್ಯದೊತ್ತಡದ ಕಾರಣ ಹಲವು ವರ್ಷಗಳಿಂದ ಇಲ್ಲಿಗೆ ಬರಲು ಸಾಧ್ಯವಾಗಿರಲಿಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.