Risk: ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳದಿದ್ದರೆ ಹೇಗೆ? ಹೊಸ ಸವಾಲುಗಳು ಬೇಕು…

ಗೋಪಿನಾಥ್‌ ಅವರ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಅವರ ಜೀವನ ನೂರಾರು ಜನರಿಗೆ ಪ್ರೇರಣೆ...

Team Udayavani, Aug 10, 2024, 12:40 PM IST

Risk: ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳದಿದ್ದರೆ ಹೇಗೆ? ಹೊಸ ಸವಾಲುಗಳು ಬೇಕು…

ನಮ್ಮ ಹೆತ್ತವರು, ಬಂಧು ಬಳಗ, ಸ್ನೇಹಿತರು, ಆತ್ಮೀಯರು, ಹಿತೈಷಿಗಳು ಹೀಗೆ ಹಲವಾರು ಜನ ನಮಗೆ ಕಂಫರ್ಟ್‌ ಝೋನ್‌ನಲ್ಲಿ ಬದುಕುವುದನ್ನ ಅಭ್ಯಾಸ ಮಾಡಿಸುತ್ತಾರೆ. ಉದಾಹರಣೆಗೆ, ಸರಕಾರಿ ಉದ್ಯೋಗ ಪಡೆಯಲೇಬೇಕು, ಸಾಫ್ಟ್ ವೇರ್ ಉದ್ಯೋಗ‌ ಬೇಕು, ಬೆಂಗಳೂರಿನಲ್ಲಿಯೇ ಜೀವನ ರೂಪಿಸಕೊಳ್ಳಬೇಕು, ಹುಟ್ಟಿದ ಊರಿನಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು. ಅಪ್ಪ ಬಿಜಿನೆಸ್‌ನಲ್ಲಿ ಸಕ್ಸೆಸ್‌ ಆಗಿದ್ದಾನೆ, ಈಗಾಗಲೇ ಒಂದು ನಿಯಮಿತ ಆದಾಯ ಬರುತ್ತಿದೆ, ಅದನ್ನ ಬಿಟ್ಟು ಬೇರೆ ಉದ್ಯೋಗ ಆಯ್ಕೆ ಮಾಡಿಕೊಳ್ಳಬಾರದು, ಹೊಸ ಕೆಲಸ ಏನೋ ಹೆಂಗೋ, ಸುಮ್ಮನೆ ರಿಸ್ಕ್ ಏಕೆ? ಹಾಗಾಗಿ ಯಾವುದೇ ರಿಸ್ಕ್ ಇಲ್ಲದೇ ಅದೇ ಬಿಜಿನೆಸ್‌ ಅನ್ನು ಮಗ ಮುಂದುವರೆಸಬೇಕು.ಹೀಗೆ ನಮಗಿರುವ ಕಂಫರ್ಟ್‌ ಝೋನ್‌ ಅನ್ನು ಬಿಟ್ಟು ಹೊರ ಬರಬಾರದು ಎಂದು ಸುತ್ತಮುತ್ತಲಿನವರು ಎಚ್ಚರಿಸುತ್ತಿರುತ್ತಾರೆ ಮತ್ತು ಬಹಳಷ್ಟು ಜನ ಯೋಚಿಸುತ್ತಾರೆ.

ಹೀಗೆ ನಮಗೆ ಈ ಕಂಫರ್ಟ್‌ ಝೋನ್‌ ಎನ್ನುವ ಬೇಲಿಯನ್ನು ಹಾಕಿಕೊಂಡು ಕುಳಿತರೆ, ಮುಂದೆ ನಾವು ಅಭಿವೃದ್ಧಿ ಹೊಂದುವುದು ಹೇಗೆ, ಹೊಸತನ್ನ ಯೋಚಿಸುವುದು, ಕಲಿಯುವುದು ಹೇಗೆ? ಹೊಸ ವಿಷಯ ತಿಳಿದುಕೊಳ್ಳುವುದು ಹೇಗೆ?. ಒಂದು ವಿಷಯವನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಿದೆ ನಮ್ಮ ಯಶಸ್ಸಿಗೆ ಒಂದು ಚಿಕ್ಕ ರಿಸ್ಕ್ ಅತ್ಯಗತ್ಯ. ಬರೀ ಕಂಫರ್ಟ್‌ ಝೋನ್‌ ಮತ್ತು ಸೇಫ್‌ ಆಗಿರಬೇಕು ಅಂತ ಯೋಚಿಸಿದರೆ, ಜೀವನದ ಹಲವಾರು ಮಜಲುಗಳನ್ನ ನಾವು ಮಿಸ್‌ ಮಾಡಿಕೊಳ್ಳುವುದು ಖಂಡಿತ. ಹಾಗಂತ, ಬರೀ ರಿಸ್ಕ್ ತೆಗೆದುಕೊಂಡು ಜೀವನ ನಡೆಸುವುದು ಸಹ ಬಹಳ ಅಪಾಯಕಾರಿ. ನಮ್ಮ ಇತಿಮಿತಿಯನ್ನ ಅರಿತು ಅದಕ್ಕಿಂತ ಸ್ವಲ್ಪ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವುದು ಉತ್ತಮ. ರಿಸ್ಕ್ ತೆಗೆದುಕೊಳ್ಳುವುದರಿಂದ ಸವಾಲುಗಳನ್ನ ಎದುರಿಸುವ ಸಾಮರ್ಥ್ಯ ನಮ್ಮಲ್ಲಿ ಬೆಳೆಯುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕಷ್ಟ ನಷ್ಟಗಳನ್ನ ಸರಿದೂಗಿಸಿಕೊಂಡು ಹೋಗುವ ಆತ್ಮ ಸ್ಥೈರ್ಯ ನಮ್ಮಲ್ಲಿ ಬೆಳೆಯುತ್ತದೆ.

ಭಾರತದಲ್ಲಿನ ವಿಮಾನ ಪ್ರಯಾಣದಲ್ಲಿ ಕ್ರಾಂತಿಯನ್ನುಂಟು ಮಾಡಿದ ಏರ್‌ಡೆಕ್ಕನ್‌ ಸಂಸ್ಥಾಪಕ ಕ್ಯಾಪ್ಟನ್‌ ಗೋಪಿನಾಥ್‌ ಅವರ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಅವರ ಜೀವನ ನೂರಾರು ಜನರಿಗೆ ಪ್ರೇರಣೆಯಾಗಿದೆ. ಅವರ ಕುರಿತಾದ ಎರಡು ಸಿನೆಮಾಗಳು ತೆರೆ ಕಂಡಿವೆ. ರಿಸ್ಕ್ ತೆಗೆದುಕೊಂಡು ಯಶಸ್ಸು ಕಂಡ ಹಲವರಲ್ಲಿ ಅವರೂ ಒಬ್ಬರು. ಅವರು ಬಡ ಶಾಲಾ ಶಿಕ್ಷಕನ ಮಗನಾಗಿ ಹುಟ್ಟಿದ್ದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಅವರ ಗ್ರಾಮದಲ್ಲಿ ಪಡೆದ ಅನಂತರ ಬಿಜಾಪುರದಲ್ಲಿನ ಸೈನಿಕ ಶಾಲೆಯಲ್ಲಿ ತಮ್ಮ ಮುಂದಿನ ಶಾಲಾ ಶಿಕ್ಷಣವನ್ನು ಮುಂದುವರೆಸುತ್ತಾರೆ. ಅನಂತರ ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ಪದವಿಯನ್ನು ಪಡೆಯುತ್ತಾರೆ. ತದನಂತರ, ಎಂಟು ವರ್ಷಗಳ ಅವಧಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಅಲ್ಲಿಂದ ನಿವೃತ್ತರಾಗಿ, ಹಾಸನ ಜಿಲ್ಲೆಯೊಂದರ ಹಳ್ಳಿಯಲ್ಲಿ ಕೃಷಿಕರಾಗಿ ಜೀವನ ನಡೆಸುತ್ತಾರೆ. ಕಲ್ಲು ಬಂಡೆಗಳಿಂದ ಆವೃತ್ತವಾಗಿದ್ದ ಬಂಜರು ಭೂಮಿಯಲ್ಲಿ ಕೃಷಿ ಮಾಡಿ – ಸುಸ್ಥಿರ ಫಾರ್ಮ್ ಅನ್ನು ಅಭಿವೃದ್ಧಿ ಪಡಿಸುತ್ತಾರೆ. ಅನಂತರದ ದಿನಗಳಲ್ಲಿ ಹಾಸನದಲ್ಲಿ ಎನ್‌ಫೀಲ್ಡ್‌ ಡೀಲರ್‌ಶಿಪ್‌ ಅನ್ನು ಪಡೆದು ಶೋ ರೂಮ್‌ ಅನ್ನು ತೆರೆಯುತ್ತಾರೆ. ಒಂದೆರೆಡು ವರ್ಷದ ಅನಂತರ, ಪಕ್ಕದಲ್ಲೊಂದು ಉಡುಪಿ ಹೊಟೇಲ್‌ ಅನ್ನು ಪ್ರಾರಂಭಿಸುತ್ತಾರೆ.

ಅಲ್ಲಿ ಯಶಸ್ಸನ್ನು ಕಂಡು ಅಲ್ಲಿಗೆ ಸುಮ್ಮನಿರದೆ, ಮಕ್ಕಳ ವಿದ್ಯಭ್ಯಾಸಕ್ಕಾಗಿ ಮುಂದಾಲೋಚನೆ ಮಾಡಿ ಬೆಂಗಳೂರಿಗೆ ಸೇರುತ್ತಾರೆ. ಅಲ್ಲಿ ಸ್ನೇಹಿತರ ಜತೆ ಸೇರಿ, ಹೆಲಿಕಾಪ್ಟರ್‌ ಅನ್ನು ಬಾಡಿಗೆ ಕೊಡುವ ಬಿಜಿನೆಸ್‌ ಅನ್ನು ಪ್ರಾರಂಭಿಸಿ, ಒಂದೆರೆಡು ವರ್ಷಗಳ ಕಾಲ ಯಾವುದೇ ಲಾಭವಿಲ್ಲದೆ ಸಂಸ್ಥೆಯನ್ನು ನಡೆಸುತ್ತಾರೆ, ಏವಿಯೇಶನ್‌ ಉದ್ಯಮಕ್ಕಾಗಿ ಸರಕಾರದಿಂದ ಹಲವಾರು ಲೈಸೆನ್ಸ್‌ಗಳು, ವಿದೇಶಿ ಹೆಲಿಕಾಪ್ಟರ್‌ ಅನ್ನು ಭೋಗ್ಯಕ್ಕೆ ಪಡೆಯುವ ಪ್ರಕ್ರಿಯೆಗೆ ಸಮಯ ಕಳೆದು ಹೋಗುತ್ತದೆ. ಧೃತಿಗೆಡದೆ ಸಂಸ್ಥೆಯನ್ನ ನಡೆಸಿ, ಹೆಲಿಕಾಪ್ಟರ್‌ ಅನ್ನು ಜನರು ಬಾಡಿಗೆಗೆ ಪಡೆಯಲು ಹಲವಾರು ದಾರಿಗಳನ್ನ ಕಂಡುಕೊಂಡು, ಯಶಸ್ವಿಯಾಗಿ, ಒಂದರಿಂದ ನಾಲ್ಕೈದು ಹೆಲಿಕಾಪ್ಟರ್‌ಗಳನ್ನ ಬಾಡಿಗೆಗೆ ಬಿಡುವ ಮಟ್ಟಕೆ ಬೆಳೆಯುತ್ತಾರೆ.

ಅಲ್ಲಿಗೆ ಅವರ ಸಾಧನೆ ಮುಗಿಯುವುದಿಲ್ಲ. ವಿಮಾನವನ್ನು ತರುತ್ತಾರೆ. ಜನರಿಗೆ ಕೇವಲ ಐದುನೂರು ರೂಪಾಯಿಯಲ್ಲಿ ವಿಮಾನ ಪ್ರಯಾಣ ಮಾಡುವ ಅವಕಾಶ ಕೊಡುತ್ತಾರೆ. ಮುಂದೆ ಅವರ ಡೆಕ್ಕನ್‌ ಏವಿಯೇಶನ್‌ ಸಂಸ್ಥೆ ದೊಡ್ಡ ಮಟ್ಟಕ್ಕೆ ಬೆಳೆದು ನಂಬರ್‌ 2 ಸ್ಥಾನ ಪಡೆಯುತ್ತದೆ. ಹದಿನೈದು ವರ್ಷಗಳ ಹಿಂದೆ ಆ ಸಂಸ್ಥೆಯನ್ನು 700 ಕೋಟಿಗೆ ವಿಜಯ್‌ ಮಲ್ಯಗೆ ಮಾರುತ್ತಾರೆ. ಅನಂತರ ಡೆಕ್ಕನ್‌ ಕಾರ್ಗೋ ಸಂಸ್ಥೆ ಸ್ಥಾಪಿಸಿ, ಅದರಲ್ಲೂ ಯಶಸ್ಸನ್ನ ಕಾಣುತ್ತಾರೆ. ಹಠ ಬಿಡದೆ ತ್ರಿವಿಕ್ರಮನಂತೆ ಒಂದಾದ ಮೇಲೋಂದು ರಿಸ್ಕ್ ತೆಗೆದುಕೊಂಡು, ನೂರಾರು ಕೋಟಿಯ ಮಾಲಕರಾಗಿದ್ದಾರೆ ಎಂದರೆ ಎಲ್ಲರೂ ಆಶ್ಚರ್ಯ ಪಡುತ್ತಾರೆ. ಅವರ ಅನೇಕ ಸಾಹಸಗಳು, ವೈಫಲ್ಯಗಳು ಇಂದು ಉದ್ಯಮಕ್ಕೆ ಇಳಿಯುವ ಪ್ರತಿಯೊಬ್ಬರಿಗೂ ಒಂದೊಂದು ಪಾಠದಂತಿವೆ.

ನನ್ನ ಸ್ನೇಹಿತನೊಬ್ಬ ಇಪ್ಪತ್ತು ವರ್ಷದ ಹಿಂದೆ, ಮೈಸೂರಿನಲ್ಲಿ ಸರಕಾರಿ ಉದ್ಯೋಗ ಮಾಡುತಿದ್ದ. ಅವನಿಗೆ ಆ ದಿನನಿತ್ಯದ ರೂಟೀನ್‌ ಕೆಲಸ ಬೇಸರವಾಗಿ, ಹೊಸ ತಾಂತ್ರಿಕ ವಿಷಯವನ್ನು ಕಲಿಯಲು ಕೋರ್ಸ್‌ ಮಾಡಿದ. ಕೋರ್ಸ್‌ ಮುಗಿದ ಅನಂತರ, ಸರಕಾರಿ ಕೆಲಸದ ಸಂಬಳದ ದುಪ್ಪಟ್ಟು ಹಣ ಬರುವ ಖಾಸಗಿ ಉದ್ಯೋಗ ದೊರೆಯಿತು. ಎಲ್ಲ ಲೆಕ್ಕಾಚಾರ ಮಾಡಿ, ಕೊನೆಗೊಂದು ದಿನ ಸರಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಬೆಂಗಳೂರಿಗೆ ಬಂದು ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ. ಅವನ ಕೆಲಸದ ಅನುಭವಕ್ಕೆ ತಕ್ಕಂತೆ ಒಂದು ವರ್ಷದ ಅನಂತರ ಅಮೆರಿಕದಲ್ಲಿ ಉದ್ಯೋಗ ದೊರೆಯಿತು. ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಉದ್ಯೋಗ ಮಾಡಿ ಸಾಕಷ್ಟು ಹಣ ಸಂಪಾದಿಸಿ ಬೆಂಗಳೂರಿಗೆ ಮರಳಿದ,

ಬೆಂಗಳೂರಿನಲ್ಲಿ ಮನೆಯೊಂದನ್ನ ಕಟ್ಟಿದ. ಬಳಿಕ ಹೊಸದೊಂದು ಕೆಲಸಕ್ಕೆ ಸೇರಿ, ಸಂತೋಷದಿಂದ ಜೀವನ ನಡೆಸುತ್ತಿದ್ದಾನೆ. ಈ ಇಪ್ಪತ್ತು ವರ್ಷಗಳಲ್ಲಿ ಅವನು ಸಂಪಾದಿಸಿದ ಹಣ ಕಡಿಮೆ ಏನಿಲ್ಲ, ಅರವತ್ತು ವರ್ಷದವರೆಗೂ ಸರಕಾರಿ ಉದ್ಯೋಗ ಮಾಡಿ ನಿವೃತ್ತಿ ಹೊಂದಿದರೂ ಅಷ್ಟೊಂದು ಹಣ ಅವನಿಗೆ ದೊರೆಯುತ್ತಿರಲಿಲ್ಲ. ಅವನು ಜೀವನದಲ್ಲಿ ರಿಸ್ಕ್ ತೆಗೆದುಕೊಂಡು ಮುಂದೆ ಬಂದ. ಬೇರೆಯವರಿಗೆ ಅವಕಾಶವಿದ್ದರೂ, ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿರುವುದಿಲ್ಲ.

ಮ್ಯೂಚುಯಲ್‌ ಫಂಡ್ಸ್‌, ಷೇರು ಮಾರುಕಟ್ಟೆ ವ್ಯವಹಾರ ಕಷ್ಟದ ವ್ಯವಹಾರ. ಇದ್ದುದರಲ್ಲಿ ಮ್ಯೂಚುಯಲಿ ಫಂಡ್ಸ್‌ ಪರವಾಗಿಲ್ಲ ಎಂದು ಹೇಳಬಹುದು. ಈ ರಿಸ್ಕ್ ಎನ್ನುವ ಪದ ಕೇಳಿ, ನನ್ನಂತೆ ಬಹಳಷ್ಟು ಜನ ಈ ವ್ಯವಹಾರದಲ್ಲಿ ಹಣ ತೊಡಗಿಸದೆ ಸುಮ್ಮನಿದ್ದಾರೆ. ಆದರೆ ಕೆಲವರು ಬಹಳಷ್ಟು ದುಡ್ಡು ಸಂಪಾದಿಸಿರುವುದು ಗುಪ್ತ ಸಂಗತಿಯೇನಲ್ಲ. ನಲವತ್ತು ವಯಸ್ಸಿಗೆ ರಿಟೈರ್‌ವೆುಂಟ್‌ ತೆಗೆದುಕೊಂಡು ಮನೆಯಲ್ಲಿ ಕುಳಿತು ಪ್ರತೀ ತಿಂಗಳು ಸಾವಿರಾರು ರೂಪಾಯಿಯನ್ನ ಡಿವಿಡೆಂಟ್‌ ರೂಪದಲ್ಲಿ ಪಡೆಯುವವರೇನು ಕಮ್ಮಿಯಿಲ್ಲ. ನನ್ನ ಸ್ನೇಹಿತರೊಬ್ಬರು, ಎಂಟತ್ತು ವರ್ಷಗಳ ಹಿಂದೆ ಅಂದಾಜು ಹತ್ತು ಲಕ್ಷರೂಪಾಯಿಯನ್ನ ಈ ವ್ಯವಹಾರದಲ್ಲಿ ತೊಡಗಿಸಿದ್ದರು, ಇಂದು ಸುಮಾರು ಐವತ್ತು ಲಕ್ಷ ರೂಪಾಯಿಯಷ್ಟು ಆದಾಯ ಅವರದಾಗಿದೆ. ಲಕ್ಷಾಂತರ ಜನರು ಈ ಷೇರು ವ್ಯವಹಾರದಿಂದ ಕೋಟ್ಯಾಧೀಶರೂ ಆಗಿದ್ದಾರೆ ಮತ್ತು ದಿವಾಳಿಯು ಆಗಿದ್ದಾರೆ. ರಿಸ್ಕ್ ಜತೆಗೆ ಬುದ್ಧಿವಂತಿಕೆ ಇದ್ದರೆ, ಈ ವ್ಯವಹಾರದಲ್ಲಿ ಲಾಭ ಖಂಡಿತ ಸಾಧ್ಯ.

ನನ್ನ ಆತ್ಮೀಯರೊಬ್ಬರು, ಮಸ್ಕತ್‌ನಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಒಬ್ಬ ಎಂಜಿನಿಯರ್‌ ಆಗಿ ಕೆಲಸಕ್ಕೆ ಸೇರಿದ್ದರು. ಹತ್ತು ವರ್ಷಗಳ ಸೇವೆಯ ಅನಂತರ ತಮ್ಮದೇ ಆದ ಕನ್ಸಲ್ಟೆನ್ಸಿ ಉದ್ಯಮವೊಂದನ್ನ ತೆರೆಯುತ್ತಾರೆ. ಇಂದು ಆ ಸಂಸ್ಥೆಯಲ್ಲಿ ನೂರಾರು ಎಂಜಿನಿಯರ್‌ಗಳಿಗೆ ಉದ್ಯೋಗ ನೀಡಿದ್ದಾರೆ. ಭಾರತ, ಆಫ್ರಿಕ, ಯುಎಇಯಲ್ಲಿ ವಿಭಾಗಗಳನ್ನ ತೆರೆದಿದ್ದಾರೆ. ಅವರಿಗೆ ದೊರೆತ ಒಂದು ಸವಾಲನ್ನು ಅವಕಾಶವನ್ನಾಗಿ ಮಾರ್ಪಡಿಸಿಕೊಂಡೂ ಇಂದು ಒಬ್ಬ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದಾರೆ. ಅವರೇನಾದರು ರಿಸ್ಕ್ ತೆಗೆದುಕೊಳ್ಳದೆ ಕಂಪೆನಿಯನ್ನ ಸ್ಥಾಪಿಸದೇ ಇದ್ದಿದ್ದರೆ ಇಂದು ಅವರೊಬ್ಬ ಯಶಸ್ಸು ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ನೂರಾರು ಜನರಿಗೆ ಕೆಲಸಕೊಡಲು ಸಾಧ್ಯವಾಗುತ್ತಿರಲಿಲ್ಲ. ಅವರೆಲ್ಲರ ಮನೆಯೂ ಬೆಳಗಲು ಸಾಧ್ಯವಾಗುತ್ತಿರಲಿಲ್ಲ.

ಕೆಲವರು ಚಿಕ್ಕದೊಂದು ಉದ್ಯಮವೊಂದನ್ನ ನಡೆಸಿಕೊಂಡು ಹೋಗುತ್ತಿರುತ್ತಾರೆ. ನಿರೀಕ್ಷಿತ ಆದಾಯಕ್ಕಿಂತ ಹೆಚ್ಚಿನ ಲಾಭ ಬಂದರೆ, ಯಾರು ಸುಮ್ಮನಿರುತ್ತಾರೆ ಹೇಳಿ. ಅದನ್ನ ಇನ್ನೂ ದೊಡ್ಡದಾದ ಉದ್ಯಮವನ್ನಾಗಿ ರೂಪಿಸಲು ಪ್ರಯತ್ನಿಸುತ್ತಾರೆ. ಕೆಲವು ಬುದ್ಧಿವಂತರು, ತಮ್ಮ ಮೊದಲಿನ ಆದಾಯಕ್ಕೆ ಕುತ್ತುಬಾರದಂತೆ ಹೊಸದಾದ ಬಿಜಿನೆಸ್‌ ಅನ್ನು ರೂಪಿಸಿಕೊಳ್ಳುತ್ತಾರೆ. ಎಲ್ಲ ರಿಸ್ಕ್ ಅನ್ನು ಲೆಕ್ಕಾಚಾರ ಮಾಡಿಯೇ ಮುಂದುವರೆಯುವವರು ಚಾಣಾಕ್ಷರು. ಇವತ್ತು ಕರ್ನಾಟಕದಲ್ಲಿ ಎಲ್ಲೆಡೆಯೂ ಕಾಣಸಿಗುವ ಮಾರ್ವಾಡಿ ಸಮುದಾಯ ನೋಡಿ. ಒಂದು ಚಿಕ್ಕ ಅಂಗಡಿಯಿಂದ ಶುರು ಮಾಡಿ, ಈವತ್ತು ಕೋಟಿಗಟ್ಟಲೆ ವ್ಯವಹಾರ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಅವರು ಬಾಡಿಗೆಗೆ ಪಡೆದ ಅಂಗಡಿಗಳನ್ನ ಇಂದು ಅವರೇ ಖರೀದಿಸುವ ಹಂತಕ್ಕೆ ಅವರು ಬೆಳೆದಿದ್ದಾರೆ. ಅವರು ಬೆಳೆದಂತೆ, ನಾವು ಬೆಳೆಯುವುದಕ್ಕೆ ಸಾಧ್ಯವಿಲ್ಲ ಅಂತಲ್ಲ, ಆದರೆ ನಾವು ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತೇವೆ.

ತೊಂಬತ್ತರ ದಶಕದ ಮಧ್ಯಭಾಗದಲ್ಲಿ, ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದ ನಾನು, ಸುಮಾರು ಹತ್ತು ವರ್ಷಗಳ ಕಾಲ ದುಡಿದರೂ ಹೆಚ್ಚಿನದ್ದನ್ನೇನು ಸಂಪಾದಿಸಲಾಗಲಿಲ್ಲ. ದುಡಿದ್ದಿದ್ದೆಲ್ಲ ಖರ್ಚಾಗುತಿತ್ತು, ಭವಿಷ್ಯಕ್ಕೆ ಅಂತ ಉಳಿತಾಯ ಮಾಡುವುದು ಬಹಳ ಕಷ್ಟವಾಗುತಿತ್ತು. ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವವರನ್ನ ಈಗಾಗಲೇ ನೋಡಿದ್ದರಿಂದ ವಿದೇಶದಲ್ಲಿ ಉದ್ಯೋಗ ಮಾಡುವ ಆಸೆ ಮನದಲ್ಲಿ ಹುಟ್ಟಿತ್ತು. ಆದರೆ ಹೊಸದಾಗಿ ರಿಸ್ಕ್ ತೆಗೆದುಕೊಳ್ಳಲು ಬಹಳ ಯೋಚಿಸುತ್ತಿದ್ದೆ. ಕೊನೆಗೊಂದು ದಿನ ನಿರ್ಧಾರ ಮಾಡಿ ಸುಮಾರು ಎರಡು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸಿ, ಕೊನೆಗೆ ಅದರಲ್ಲಿ ಸಫಲನಾದೆ. 2007ರಲ್ಲಿ ವಿದೇಶಕ್ಕೆ ಉದ್ಯೋಗಕ್ಕಾಗಿ ಬಂದವನು, ಸುಮಾರು ಹದಿನೇಳು ವರ್ಷಗಳ ಕಾಲ ಅಲ್ಲಿ ಉದ್ಯೋಗ ಮಾಡುತ್ತ ಬಂದಿದ್ದೇನೆ. ಯಾವುದೇ ಬಂಡವಾಳ ಉಪಯೋಗಿಸದೇ ಕೇವಲ ವಿದ್ಯೆ, ಅನುಭವ, ನ್ಯಾಯ ನಿಷ್ಠೆಯಿಂದ ಸನ್ಮಾರ್ಗದಲ್ಲಿ ದುಡಿದು ನನ್ನ ಜೀವನವನ್ನ ರೂಪಿಸಿಕೊಂಡೆ.

ಹಣ ಮಾಡುವುದೇ ಉದ್ದೇಶವಾದರೆ, ಲಂಚ ಭ್ರಷ್ಟಾಚಾರ, ಅನೈತಿಕ ಚಟುವಟಿಕೆ, ಅಕ್ರಮಗಳು ಕಡಿಮೆ ಏನಿಲ್ಲ. ಒಬ್ಬ ಸರಕಾರಿ ಉದ್ಯೋಗಿ, ಒಬ್ಬ ರಾಜಕಾರಣಿ ಕೋಟ್ಯಾಂತರ ಆಸ್ತಿ ಮಾಡಿದ್ದಾನೆ ಎಂದರೆ, ಅದರ ಮೂಲವನ್ನು ಎಲ್ಲರೂ ಊಹಿಸಬಹುದು. ಹತ್ತು ತಲೆಮಾರು ಕುಳಿತು ತಿನ್ನುವಷ್ಟು ಆಸ್ತಿ ಮಾಡಿದವರು ನಮ್ಮ ದೇಶದಲ್ಲಿ ಕಡಿಮೆ ಏನಿಲ್ಲ.

ಒಬ್ಬ ಬಿಜಿನೆಸ್‌ ಮ್ಯಾನ್‌ ಸಹ ಅನೈತಿಕ ಮಾರ್ಗದಲ್ಲಿ ದುಡಿಯಬಹುದು. ಅಕ್ರಮವನ್ನೂ ಮಾಡಬಹುದು. ಬಡ್ಡಿಗೆ ಸಾಲಕೊಟ್ಟು ಹಣಮಾಡುವವರು ಕಡಿಮೆ ಏನಲ್ಲ. ಇದ್ಯಾವುದೂ ಯಶಸ್ಸಂತು ಖಂಡಿತ ಅಲ್ಲ. ಯಶಸ್ಸು ಕೇವಲ ಕೆಲವೇ ಕೆಲವು ಜನರ ಸೊತ್ತಲ್ಲ. ಯಶಸ್ಸು ಎಲ್ಲರಿಗೂ ದಕ್ಕುತ್ತದೆ, ಅವಕಾಶ ನಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಕಾಯುವುದಕ್ಕಿಂತ ಬದಲಾಗಿ ನಾವೇ ಅವಕಾಶ ಸೃಷ್ಟಿಸಿ ಕೊಳ್ಳುವ ಪ್ರಯತ್ನ ಮಾಡಬೇಕು. ನ್ಯಾಯ ನೀತಿ ಧರ್ಮದಿಂದ ದುಡಿಯಬೇಕು ಅಂದರೆ, ಜೀವನದಲ್ಲಿ ಸ್ವಲ್ಪ ಮಟ್ಟಿನ ರಿಸ್ಕ್ ಅಗತ್ಯ. ಕಂಫರ್ಟ್‌ ಝೋನ್‌ ನಿಂದ ಹೊರಬಂದು ಸ್ವಲ್ಪ ವಿಭಿನ್ನ ಪ್ರಯತ್ನ ಮಾಡಿ ಯಶಸ್ಸುಗಳಿಸುವುದರ ಬಗ್ಗೆ ಯೋಚಿಸಬೇಕು.

ರಿಸ್ಕ್ ತೆಗೆದುಕೊಳ್ಳುವುದರಿಂದ ದೊರೆಯುವ ಪ್ರಯೋಜನಗಳು
1. ಸಾಧನೆಯ ಭಾವವನ್ನು ಅನುಭವಿಸುವಿರಿ
ಮೊದಲು ರಿಸ್ಕ್ ತೆಗೆದು ಕೊಳ್ಳುವ ಸಮಯದಲ್ಲಿ ಸ್ವಲ್ಪ ಹೆದರಿಕೆಯಾಗುವುದು ಸಹಜ. ನಿಖರವಾಗಿ ಯೋಜಿಸಿದಂತೆ ನಡೆಯದಿದ್ದರೂ ಸಹ, ನಿಮಗೊಂದು ಅನುಭವವಾಗುತ್ತದೆ. ನಿಮ್ಮ ಧೈರ್ಯ ಮತ್ತು ಆ ಪ್ರಯತ್ನಕ್ಕಾಗಿ ನಿಮ್ಮ ಬಗ್ಗೆ ನೀವು ಹೆಮ್ಮೆ ಪಡುತ್ತೀರಿ. ಅದರಿಂದಾಗುವ ಲಾಭ ಅಥವ ನಷ್ಟ ನಿಮಗೊಂದು ಪಾಠ ಕಲಿಸುತ್ತದೆ.

2. ರೆಕಾರ್ಡ್‌ ಬ್ರೇಕ್‌ ಮಾಡ್ತೀರಿ ಗೊತ್ತಾ!
ಕೆಲವೊಮ್ಮೆ, ನಾವು ನಮ್ಮ ಬಗ್ಗೆ ನಂಬಿಕೆಗಳು ಅಥವಾ ಊಹೆಗಳೊಂದಿಗೆ ಬೆಳೆಯುತ್ತೇವೆ. ಉದಾಹರಣೆಗೆ ನಾಲ್ಕು ಜನ ನಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಅಥವಾ ಏನೋ ಒಂದು ಹಿಂಜರಿಕೆಯ ಭಾವ ನಮ್ಮನ್ನ ಕಾಡಲು ಪ್ರಾರಂಭಿಸುತ್ತದೆ. ಈ ಭಯದಿಂದ ರಿಸ್ಕ್ ತೆಗೆದುಕೊಳ್ಳುವುದನ್ನ ನಾವು ನಿಲ್ಲಿಸುತ್ತೇವೆ. ಆದರೆ ಈ ಊಹೆ ಮತ್ತು ಹಳೆಯ ನಂಬಿಕೆಗಳ ಬಗ್ಗೆ ಪ್ರಶ್ನಿಸುವುದನ್ನು ನಿಲ್ಲಿಸುತ್ತೇವೆ. ಒಂದೊಮ್ಮೆ ಆತ್ಮ ವಿಶ್ವಾಸದಿಂದ ಮುಂದೆ ಹೆಜ್ಜೆ ಇಟ್ಟು, ಯಶಸ್ಸು ದೊರೆತಮೇಲೆ, ಈ ಊಹಾಪೋಹಗಳು, ಹಳೆಯ ನಂಬಿಕೆಗಳು, ನಕರಾತ್ಮಕ ಆಲೋಚನೆಗಳು, ಮೂಲೆ ಸೇರುವುದು ನಿಶ್ಚಿತ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಮೂಡುವುದು ಸಹಜ. ಹಳೆ ರೆಕಾರ್ಡ್‌ ಬ್ರೇಕ್‌ ಮಾಡಿದೆವು ಎನ್ನುವ ತೃಪ್ತ ಭಾವನೆ ನಿಮ್ಮಲ್ಲಿ ಮೂಡುತ್ತದೆ.

3. ನಿಮ್ಮ ಬಗ್ಗೆ ನೀವು ಇನ್ನಷ್ಟು ಕಲಿಯುವಿರಿ
ನೀವು ಏನು ಮಾಡಲು ಇಷ್ಟ ಪಡುತ್ತೀರಿ? ನಿಮ್ಮನ್ನು ಯಾವುದು ಸಂತೋಷಗೊಳಿಸುತ್ತದೆ? ನಿಮ್ಮ ಮೌಲ್ಯಗಳು ಯಾವುವು? ನೀವು ಯಾರು ಮತ್ತು ನಿಮ್ಮ ನಡವಳಿಕೆಯನ್ನು ಯಾವುದು ಪ್ರೇರೇಪಿಸುತ್ತದೆ? ಹೀಗೆ ನೀವು ಇನ್ನಷ್ಟು ತಿಳಿದುಕೊಳ್ಳುತ್ತೀರಿ. ಹೊಸ ಸವಾಲುಗಳು ನಿಮ್ಮನ್ನು ಮೆಚ್ಚಿಸಲು ಮತ್ತು ಬೆಳೆಯಲು ಅವಕಾಶವನ್ನು ನೀಡುತ್ತವೆ.

4. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
ಪ್ರತೀ ಹೊಸ ಸವಾಲು ಮತ್ತು ಅಪಾಯದೊಂದಿಗೆ ಮುಂದೆ ಹೆಜ್ಜೆ ಇಟ್ಟಾಗ, ಸಂದರ್ಭಗಳನ್ನು ನಿಭಾಯಿಸುವ ನಿಮ್ಮ ಸ್ವಂತ ಸಾಮರ್ಥ್ಯವನ್ನು ನೀವು ಮನವರಿಕೆ ಮಾಡಿಕೊಳ್ಳುತ್ತೀರಿ. ಇದು ನಿಮ್ಮಲ್ಲಿ ಹೆಚ್ಚು ಆತ್ಮವಿಶ್ವಾಸವನ್ನು ತುಂಬುತ್ತದೆ. ಎಲ್ಲ ಸಂದರ್ಭಕ್ಕೆ ಹೊಂದಿಕೊಳ್ಳುವ ವ್ಯಕ್ತಿಯನ್ನಾಗಿ ಮತ್ತು ಉತ್ತಮ ನಾಯಕನನ್ನಾಗಿ ಮಾಡುತ್ತದೆ. ಈ ಎಲ್ಲ ಅನುಭವ ನಿಮ್ಮ ನಿರ್ಧಾರ-ಮಾಡುವ ಕೌಶಲಗಳ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಬಹುದು.

5. ಹೊಸ ಅವಕಾಶಗಳನ್ನು ತೆರೆಯುತ್ತದೆ
ನಿಮ್ಮ ಆರಾಮ ವಲಯ (ಕಂಫರ್ಟ್‌ ಝೋನ್‌) ದಿಂದ ಹೊರಬರುವುದು ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಎಲ್ಲ ರೀತಿಯ ಹೊಸ ಅವಕಾಶಗಳಿಗೆ ಕಾರಣವಾಗಬಹುದು. ನಿಮ್ಮ ಸ್ವಂತ ವ್ಯವಹಾರವನ್ನು ತೆರೆಯುವುದು ಅಥವಾ ನಿಮ್ಮ ಉದ್ಯಮದಲ್ಲಿ ಟ್ರೆಂಡ್‌ಸೆಟರ್‌ ಆಗುವುದನ್ನು ನೀವು ಕಂಡುಕೊಳ್ಳಬಹುದು.

6. ವ್ಯಕ್ತಿತ್ವವನ್ನು ರೂಪಿಸುತ್ತದೆ
ರಿಸ್ಕ್ ತೆಗೆದುಕೊಳ್ಳುವುದರಿಂದ, ಪ್ರತಿಕೂಲ ಫಲಿತಾಂಶಗಳು ಮತ್ತು ಹಿನ್ನಡೆಗಳನ್ನು ಹೇಗೆ ನಿರ್ವಹಿಸುವುದು ಎಂಬುವ ಪಾಠವನ್ನು ಕಲಿಯುತ್ತೀರಿ. ಪ್ರತಿಕೂಲ ಪರಿಸ್ಥಿತಿಯಲ್ಲಿ, ಸಮಚಿತ್ತದಿಂದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು, ಏನೇ ಸಂಭವಿಸಿದರೂ ಅಭಿವೃದ್ಧಿ ಹೇಗೆ ಹೊಂದಬಹುದು ಮತ್ತು ಯಶಸ್ಸಿಗೆ ವಿವಿಧ ಮಾರ್ಗಗಳನ್ನು ಹುಡುಕುವಲ್ಲಿ ಹೇಗೆ ಹೆಚ್ಚು ಪ್ರವೀಣರಾಗಬಹುದು ಎಂದು ನಿಮಗೆ ನಿಧಾನಕ್ಕೆ ತಿಳಿಯುತ್ತ ಹೋಗುತ್ತದೆ.

7. ವಿಷಾದವಿಲ್ಲ
ಲೆಕ್ಕಹಾಕಿದ ರಿಸ್ಕ್ (ಅಪಾಯಗಳು) ತೆಗೆದುಕೊಳ್ಳುವುದರಿಂದ ಯಾವಾಗಲೂ ಧನಾತ್ಮಕ ಫಲಿತಾಂಶಗಳನ್ನ ನಿರೀಕ್ಷಿಸಲು ಸಾಧ್ಯವಾಗದಿದ್ದರೂ ಸಹ ಆ ರಿಸ್ಕ್ನಿಂದ ಆಗುವ ಪಾಠವನ್ನ ನಾವು ಕಲಿಯಬಹುದು, ಮುಂದಿನ ಅಧ್ಯಾಯಕ್ಕೆ ಅದೊಂದು ಅನುಭವ ಎಂಬುದನ್ನ ಮರೆಯಬಾರದು. ಒಂದು ಅಧ್ಯಯನದ ಪ್ರಕಾರ, ರಿಸ್ಕ್ ತೆಗೆದುಕೊಳ್ಳದೆ ಇರುವವರಿಗಿಂತ, ರಿಸ್ಕ್ ತೆಗೆದುಕೊಳ್ಳುವವರು ಸಾಮಾನ್ಯವಾಗಿ ತಮ್ಮ ಜೀವನದಲ್ಲಿ ಹೆಚ್ಚು ತೃಪ್ತರಾಗಿರುತ್ತಾರೆ ಮತ್ತು ಸಂತೋಷವಾಗಿರುತ್ತಾರೆ.

*ಪಿ.ಎಸ್‌.ರಂಗನಾಥ, ಮಸ್ಕತ್‌

ಟಾಪ್ ನ್ಯೂಸ್

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.