MUDA scam: ಸಿಎಂ ವಿರುದ್ಧದ ‘ಮುಡಾ’ ಅರ್ಜಿ: 13ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
Team Udayavani, Aug 10, 2024, 10:00 PM IST
ಬೆಂಗಳೂರು: ಮುಡಾ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರ ಖಾಸಗಿ ದೂರಿನ ಕುರಿತು ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆಗಸ್ಟ್ 13ಕ್ಕೆ ಆದೇಶ ಕಾಯ್ದಿರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾದಿಂದ 14 ನಿವೇಶನಗಳನ್ನು ಪಡೆದಿ¨ªಾರೆ. ಈ ಸಂಬಂಧ ಸಿದ್ದರಾಮಯ್ಯ ಸೇರಿದಂತೆ ಪ್ರಕರಣದಲ್ಲಿರುವ ಐವರ ವಿರುದ್ಧ ಸಿಬಿಐ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ (82-ಸಿಸಿಎಚ್) ಆ.8ರಂದು ಖಾಸಗಿ ದೂರು ಸಲ್ಲಿಸಿದ್ದರು. ಶುಕ್ರವಾರ ನ್ಯಾಯಾಲಯವು ಅರ್ಜಿ ವಿಚಾರಣೆ ನಡೆಸಿದೆ.
ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ:
ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ ಮಂಡಿಸಿದರು. ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದ ದೇವನೂರು ಹಾಗೂ ಮೈಸೂರಿನ ವಿಜಯನಗರ ವ್ಯಾಪ್ತಿಯ ಭೂಮಿ ಡಿನೋಟಿಫಿಕೇಷನ್ ಉಲ್ಲೇಖಿಸಿದರು. 2004ರಲ್ಲಿ ಸಿದ್ದರಾಮಯ್ಯ ಪತ್ನಿಯ ಸಹೋದರ ದೇವರಾಜುನಿಂದ ಜಮೀನು ಖರೀದಿಸಲಾಗಿದೆ. 2006 ರಿಂದ 2010ರ ನಡುವೆ ಈ ಜಮೀನಿನಲ್ಲಿ ಬಡಾವಣೆ ರಚನೆಯಾಗಿ ಸೈಟು ಹಂಚಿಕೆಯಾಗಿತ್ತು. 2004ಕ್ಕೂ ಮುನ್ನವೇ ಬಡಾವಣೆಯಲ್ಲಿ ಮುಡಾ ಅಭಿವೃದ್ಧಿಪಡಿಸಿತ್ತು. ಆದರೂ ಈ ಜಮೀನನ್ನು ಭೂ ಪರಿವರ್ತನೆ ಮಾಡಲಾಗಿದೆ. 2010ರಲ್ಲಿ ಮುಖ್ಯಮಂತ್ರಿ ಪತ್ನಿ ಸಹೋದರನಿಂದ ದಾನಪತ್ರ ಪಡೆದಿದ್ದರು. ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವವರೆಗೂ ಸುಮ್ಮನಿದ್ದರು. 2014ರಲ್ಲಿ ಸಿಎಂ ಆದ ವೇಳೆ ಪರಿಹಾರದ ನಿವೇಶನ ಕೇಳಿದರು.
ಈ ನಿವೇಶನಗಳಿಗೆ ಜಮೀನು ಮಾರಾಟ ಮಾಡಿದ ದೇವರಾಜು, ಅವರಿಂದ ಖರೀದಿಸಿದ ಮಲ್ಲಿಕಾರ್ಜುನ ಸ್ವಾಮಿ, ಸಿಎಂ ಪತ್ನಿ ಪಾರ್ವತಿ ಅವರು ಸಹ ಮಾಲೀಕರಾಗುವುದಿಲ್ಲ. ಆದರೆ, ಜಮೀನಿಗೆ ಬದಲಿ ನಿವೇಶನ ಕೇಳುತ್ತಾರೆ. ಕಾನೂನು ಪ್ರಕಾರ ಸಿಎಂ ಪತ್ನಿಗೆ 14 ನಿವೇಶನದ ಹಕ್ಕಿರಲಿಲ್ಲ. ಹಕ್ಕಿದ್ದಿದ್ದರೂ ಗರಿಷ್ಠ 4,800 ಚದರಡಿ ಜಾಗ ಮಾತ್ರ ಪಡೆಯಬಹುದಿತ್ತು. ಆದರೆ 14 ನಿವೇಶನ ಪಡೆದಿರುವುದು ಕಾನೂನು ಬಾಹಿರವಾಗಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಸ್ವಾಧೀನವಾದ ಜಮೀನಿನಲ್ಲಿ ಮಾತ್ರ 4,800 ಅಡಿ ನಿವೇಶನ ಪಡೆಯಬಹುದು ಎಂದು ಲಕ್ಷ್ಮೀ ಐಯ್ಯಂಗಾರ್ ವಾದಿಸಿದರು.
ಖಾಸಗಿ ದೂರು ಸಲ್ಲಿಕೆಗೂ ಮೊದಲು ಪೂರ್ವಾನುಮತಿ ಬೇಕಲ್ಲವೇ ಎಂದು ದೂರುದಾರರ ಪರ ವಕೀಲರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾದೀಶರಾದ ಸಂತೋಷ್ ಗಜಾನನ ಭಟ್ ಪ್ರಶ್ನಿಸಿದರು. ಕೋರ್ಟ್ ಅಪರಾಧವನ್ನು ಪರಿಜ್ಞಾನಕ್ಕೆ ತೆಗೆದುಕೊಳ್ಳುವಾಗ ಮಾತ್ರ ಪೂರ್ವಾನುಮತಿಬೇಕಾಗುತ್ತದೆ. 156(3) ಅಡಿಯಲ್ಲಿ ತನಿಖೆಗೆ ಆದೇಶಿಸುವಾಗ ಪೂರ್ವಾನುಮತಿ ಬೇಡ. ಭ್ರಷ್ಟಾಚಾರ ತಡೆ ಕಾಯ್ದೆ, ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ವಾದ ಮಂಡಿಸಲಾಗಿದೆ ಎಂದು ತಿಳಿಸಿದರು. ವಾದ ಆಲಿಸಿದ ಕೋರ್ಟ್ ಆ.13ಕ್ಕೆ ಆದೇಶ ಕಾಯ್ದಿರಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.