Olympics ವನಿತಾ ಮ್ಯಾರಥಾನ್: ಸಿಫಾನ್ ಚಿನ್ನದೊಂದಿಗೆ ಪ್ಯಾರಿಸ್ ಸ್ಪರ್ಧೆ ಸಮಾಪ್ತಿ
ನೂತನ ಒಲಿಂಪಿಕ್ಸ್ ದಾಖಲೆ ಸ್ಥಾಪಿಸಿದ ಡಚ್ ಆ್ಯತ್ಲೀಟ್
Team Udayavani, Aug 12, 2024, 6:10 AM IST
ಪ್ಯಾರಿಸ್: ವನಿತಾ ಮ್ಯಾರಥಾನ್‌ನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಪಂದ್ಯಾವಳಿಯ ಸ್ಪರ್ಧೆಗಳಿಗೆ ತೆರೆ ಬಿತ್ತು. ಈ ಕಟ್ಟಕಡೆಯ ಚಿನ್ನದ ಪದಕ ನೆದರ್ಲೆಂಡ್ಸ್‌ನ ಸಿಫಾನ್ ಹಸನ್ ಪಾಲಾಯಿತು. ಅವರು 2 ಗಂಟೆ, 22 ನಿಮಿಷ, 55 ಸೆಕೆಂಡ್‌ಗಳ ನೂತನ ಒಲಿಂಪಿಕ್ಸ್ ದಾಖಲೆಯೊಂದಿಗೆ ಮೊದಲಿಗರಾಗಿ ಗುರಿ ತಲುಪಿದರು. ಇಥಿಯೋಪಿಯಾದ ಟಿಸ್ಟ್ ಅಸೇಫಾ ಬೆಳ್ಳಿ (2:22.58) ಮತ್ತು ಕೀನ್ಯಾದ ಹೆಲೆನ್ ಒಬಿರಿ ಕಂಚು ಗೆದ್ದರು (2:23.10).
“ಇದೊಂದು ಕನಸೋ ಎಂಬಂತೆ ಭಾಸವಾಗುತ್ತಿದೆ. ಒಲಿಂಪಿಕ್ ಚಾಂಪಿಯನ್‌ಗಳನ್ನು ನಾನು ಟಿವಿಯಲ್ಲಷ್ಟೇ ಕಾಣುತ್ತೇನೆ. ಮ್ಯಾರಥಾನ್ ಅತ್ಯಂತ ಕಠಿನ ಸ್ಪರ್ಧೆ. 42.195 ಕಿ.ಮೀ. ದೂರವನ್ನು 2 ಗಂಟೆ, 20 ನಿಮಿಷಗಳಲ್ಲಿ ಮುಗಿಸುವುದು ಸುಲಭವಲ್ಲ. ಪ್ರತಿಯೊಂದು ಹೆಜ್ಜೆ ಕೂಡ ನೋವಿನಿಂದ ಕೂಡಿರುತ್ತದೆ. ಆದರೆ ಒಮ್ಮೆ ಗುರಿ ಮುಟ್ಟಿ ಗದ್ದು ಬಂದಾಗ ಉಂಟಾಗುವ ಸಂಭ್ರಮಕ್ಕೆ ಮೇರೆ ಇಲ್ಲ’ ಎಂದು ಸಿಫಾನ್ ಹಸನ್ ಹೇಳಿದರು.
2 ಒಲಿಂಪಿಕ್ಸ್, 6 ಪದಕ
ಇದರೊಂದಿಗೆ ಸತತ 2 ಒಲಿಂಪಿಕ್ಸ್‌ಗಳಲ್ಲಿ 3 ಪದಕ ಗೆದ್ದ ಹಿರಿಮೆ ಸಿಫಾನ್ ಹಸನ್ ಅವರದ್ದಾಯಿತು. ಮ್ಯಾರಥಾನ್‌ಗೂ ಮುನ್ನ ಪ್ಯಾರಿಸ್ ಕೂಟದ 5,000 ಮೀ. ಹಾಗೂ 10,000 ಮೀ. ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು. ಕಳೆದ ಟೋಕಿಯೊ ಒಲಿಂಪಿಕ್ಸ್‌ನ 5,000 ಮೀ. ಹಾಗೂ 10,000 ಮೀ. ಸ್ಪರ್ಧೆಯಲ್ಲಿ ಚಿನ್ನ ಹಾಗೂ 1,500 ಮೀ. ರೇಸ್‌ನಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಅವರು ಒಲಿಂಪಿಕ್ಸ್ ಮ್ಯಾರಥಾನ್‌ನಲ್ಲಿ ಸ್ಪರ್ಧೆಗೆ ಇಳಿದದ್ದು ಇದೇ ಮೊದಲು.
ಈ ಸಾಧನೆಯೊಂದಿಗೆ 31 ವರ್ಷದ ಸಿಫಾನ್ ಹಸನ್, 1952ರ ಬಳಿಕ ಒಂದೇ ಒಲಿಂಪಿಕ್ಸ್‌ನ 5,000 ಮೀ., 10,000 ಸಾವಿರ ಮೀ. ಮತ್ತು ಮ್ಯಾರಥಾನ್‌ನಲ್ಲಿ ಪದಕ ಗೆದ್ದ ಮೊದಲ ಕ್ರೀಡಾಪಟು ಎನಿಸಿದರು. ಅಂದು ಜೆಕ್‌ನ ಎಮಿಲ್ ಝಾಟೋಪೆಕ್ ಈ ಸಾಧನೆಗೈದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.