Kundapura: ಚೂಡಿ ಪೂಜೆ: ಎಲ್ಲೆಡೆ ಪ್ರಕೃತಿ ಪೂಜೆಯ ಸಡಗರ
ಹೊಸ್ತಿಲಿಗೆ ಶೇಡಿ ಬರೆದು ಅಲಂಕಾರ | ತುಳಸಿಗೆ 5 ಪ್ರದಕ್ಷಿಣೆ ಬಂದು ಆರತಿ | ಸೂರ್ಯ ದೇವನಿಗೂ ಅಕ್ಷತೆ
Team Udayavani, Aug 12, 2024, 5:42 PM IST
ಕುಂದಾಪುರ: ಶ್ರಾವಣ ಮಾಸ ಬಂದಾಗ ಆನಂದ ತಂದಾಗ ಎಂಬಂತೆ ಆಗಸ್ಟ್ ತಿಂಗಳಲ್ಲಿ ಈ ಬಾರಿ ಶ್ರಾವಣ ಮಾಸದ ಆರಂಭವಾಗಿದ್ದು ಶುಕ್ರವಾರದ ಚೂಡಿ ಪೂಜೆ ಪ್ರಾರಂಭವಾಗಿದೆ.
ಅರ್ಪಣೆ
ಮನೆಯ ಪ್ರಧಾನ ಹೊಸ್ತಿಲಿಗೆ ಪೂಜೆ ಮಾಡಿ, ದೇವರ ಕೋಣೆಗೆ ಬಂದು ಕುಲದೇವರು, ಇಷ್ಟದೇವರು, ಗ್ರಾಮ ದೇವರನ್ನು ಸ್ಮರಿಸಿ ಶ್ರೀದೇವರ ಸನ್ನಿಧಿಯಲ್ಲಿ ಚೂಡಿ ಅರ್ಪಿಸಲಾಗುತ್ತದೆ. ಪೂಜಿಸಿದ ಚೂಡಿಯನ್ನು ಮುಡಿವ ಮುತ್ತೈದೆಯರು ತಮ್ಮ ಪತಿಗೆ ವೀಳ್ಯ ನೀಡಿ ಆಶೀರ್ವಾದ ಪಡೆಯುತ್ತಾರೆ. ಹಿರಿಯರು, ಸಂಬಂಧಿಕರ ಮನೆಗೆ ತೆರಳಿ ಚೂಡಿ ನೀಡುತ್ತಾರೆ. ಚೂಡಿ ನೀಡುವುದರಿಂದ ಕುಟುಂಬ, ನೆರೆಹೊರೆಯವರ ಜತೆ ಪ್ರೀತಿ, ವಿಶ್ವಾಸ ವೃದ್ಧಿಯಾಗಿ ಸಂಬಂಧ ಶಾಶ್ವತವಾಗಲು ಸಹಕಾರಿಯಾಗುತ್ತದೆ.
ಸಾಮೂಹಿಕ ಆಚರಣೆ
ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರು ತಮ್ಮೂರ ದೇವಳಗಳಲ್ಲಿ ಸಾಮೂಹಿಕ ಚೂಡಿ ಪೂಜೆಯನ್ನು ಒಟ್ಟಾಗಿ ಆಚರಿಸುವ ರೂಢಿಯಿದೆ. ದೇವರ ಕೋಣೆಯಲ್ಲಿ ಜ್ಯೋತಿ ಬೆಳಗಿ, ಪತಿ ದೇವರಿಗೆ ಆರೋಗ್ಯ, ಆಯುಷ್ಯ, ಗೃಹಿಣಿಯರಿಗೆ ಮುತ್ತೈದೆ ಸೌಭಾಗ್ಯ ನೀಡಿ, ಕುಟುಂಬದ ಪ್ರೀತಿ ವಿಶ್ವಾಸ, ಸಂಬಂಧ, ಸಂತೋಷ ನಿರಂತರವಾಗಿ, ಉತ್ತಮ ರೀತಿಯಲ್ಲಿ ಇರಲು ಸೂರ್ಯದೇವನಲ್ಲಿ ಹಾಗೂ ತುಳಸಿ ಸನ್ನಿಧಿಯಲ್ಲಿ ಕುಲ ದೇವರನ್ನು ಸ್ಮರಿಸುತ್ತಾ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಪೂಜಾ ಸಮಯ
ಪ್ರಾತಃ ಕಾಲದಲ್ಲಿ ಚೂಡಿ ಪೂಜೆ ಮಾಡಲು ಪ್ರಶಸ್ತ ಸಮಯ. ಬೇಗನೆ ಆಗದಿದ್ದಲ್ಲಿ ಮಧ್ಯಾಹ್ನ 12 ಗಂಟೆಯೊಳಗಾದರೂ ಪೂಜೆ ಮುಗಿಸಬೇಕು. ಬೆಳಗ್ಗೆ ಮಂಗಲ ಸ್ನಾನ ಪೂರ್ವಕ ಸಾಂಪ್ರದಾಯಿಕ ಶೆ„ಲಿಯ 18 ಮೊಳದ ಸೀರೆಯನ್ನು ಕಚ್ಚೆ ಹಾಕಿ ಉಡುವ ಮುತ್ತೈದೆಯರು ಬಾವಿ ದಂಡೆಗೆ ಹಳದಿ ಕುಂಕುಮ ಹಚ್ಚಿ, ಹೂವು ಇಟ್ಟು ನೀರಿಗೆ ಹರಿದ್ರಾ ಕುಂಕುಮ ಅರ್ಪಿಸಿ ಗಂಗಾ ಸ್ಮರಣ ಪೂರ್ವಕ ನೀರು ತೆಗೆದು ಮನೆ ಅಂಗಳದಲ್ಲಿ ತುಳಸಿ ಕಟ್ಟೆ ಎದುರು ರಂಗೋಲಿ ಹಾಕಿ, ಮನೆ ದ್ವಾರದ ಹೊಸ್ತಿಲಿಗೆ ಶೇಡಿ ಬರೆದು, ಅಲಂಕರಿಸಿ ಚೂಡಿ ಪೂಜೆ ಆರಂಭಿಸುತ್ತಾರೆ. ದೀಪ ಹಚ್ಚಿ ಜಾಗಂಟೆ ಬಾರಿಸಿ ತುಳಸಿಗೆ ನೀರೆರೆದು ಅರಸಿನ ಕುಂಕುಮ, ಗಂಧ ಹಚ್ಚಿ, ವೀಳ್ಯ ಚೂಡಿ ಅರ್ಪಿಸಿ, ಹಣ್ಣುಕಾಯಿ, ಪಂಚ ಕಜ್ಜಾಯ ನೈವೇದ್ಯ ಮಾಡಿ ಆರತಿ ಬೆಳಗಲಾಗುತ್ತದೆ. ಬಳಿಕ ತುಳಸಿಗೆ 5 ಪ್ರದಕ್ಷಿಣೆ ಹಾಕಿ ಪ್ರತಿ ಸುತ್ತಿನಲ್ಲಿಯೂ ತುಳಸಿಗೂ ಸೂರ್ಯ ದೇವನಿಗೂ ಅಕ್ಷತೆ ಹಾಕುತ್ತಾರೆ.
ಅಂಚೆ ಮೂಲಕ
ದೂರದ ಊರಿಗೆ ಅಂಚೆ ಮೂಲಕ ಚೂಡಿ ಕಳುಹಿಸಿ, ತಮ್ಮ ಸಂಬಂಧ, ಪ್ರೀತಿ ವಿಶ್ವಾಸ ನಿರಂತರ ಇರಲು ಪತ್ರ ಬರೆದು ಆಶೀರ್ವಾದವನ್ನೂ ಪಡೆಯುವುದಿತ್ತು. ಗೌಡ ಸಾರಸ್ವತ ಬ್ರಾಹ್ಮಣರು ಪವಿತ್ರ ವೃಕ್ಷ, ಜಲ, ಸೂರ್ಯ, ಪ್ರತಿಮೆಯಲ್ಲಿ ದೇವರನ್ನು ಆರಾಧಿಸಿದರೆ ಸ್ತ್ರೀಯರು ಶ್ರಾವಣ ಮಾಸದಲ್ಲಿ ತುಳಸಿ ಸನ್ನಿಧಿಯಲ್ಲಿ ದೇವರನ್ನು ಆರಾಧಿಸುತ್ತಾರೆ. ಮಕ್ಕಳನ್ನೂ ಚೂಡಿ ಪೂಜೆಯಲ್ಲಿ ತೊಡಗಿಸಿದರೆ, ಮಾಹಿತಿ, ಮಾರ್ಗದರ್ಶನ ನೀಡಿದರೆ ಮುಂದಿನ ಪೀಳಿಗೆಗೂ ಚೂಡಿ ಪೂಜೆಯ ಸಂಪ್ರದಾಯ ಉಳಿಯಲಿದೆ, ಮಹತ್ವ ಅರಿತುಕೊಳ್ಳುವಂತಾಗಲಿದೆ.
ಏನಿದು ಚೂಡಿ ಪೂಜೆ?
ಸಿಂಹ ಮಾಸ ಅಥವಾ ಶ್ರಾವಣ ಮಾಸದಲ್ಲಿ ಸೂರ್ಯ ಪರಮಾತ್ಮನು ತನ್ನ ಸ್ವ ಕ್ಷೇತ್ರ ಸಿಂಹ ರಾಶಿಯಲ್ಲಿ ಆಗಮಿಸಿದ ಸಂದರ್ಭ ಸೂರ್ಯ ದೇವನ ಬಿಂಬವನ್ನು ರಂಗೋಲಿಯಲ್ಲಿ ಬರೆದು ಅದರ ಹತ್ತಿರ ಪ್ರಕೃತಿಯಲ್ಲಿ ಸಿಗುವ ಗರಿಕೆ, ಬಣ್ಣ ಬಣ್ಣದ ಲಕ್ಷ್ಮೀ ಸಾನ್ನಿಧ್ಯವುಳ್ಳ ಹೂವುಗಳನ್ನು ಅರ್ಪಿಸಿ ಸೂರ್ಯನಿಗೆ ವಂದನೆ ಸಲ್ಲಿಸಲಾಗುತ್ತದೆ. ತುಳಸಿ ಸನ್ನಿಧಿಯಲ್ಲಿ ಶ್ರಾವಣ ಮಾಸದ ಪ್ರತಿ ಶುಕ್ರವಾರ ಮತ್ತು ಭಾನುವಾರ ನಡೆಯುವ ಚೂಡಿ ಪೂಜೆಯು ಗೌಡ ಸಾರಸ್ವತ ಬ್ರಾಹ್ಮಣ, ವಿಶ್ವಕರ್ಮ, ಹಾಗೂ ದೈವಜ್ಞ ಬ್ರಾಹ್ಮಣ ಕುಟುಂಬದ ಹಾಗೂ ಪರಿಸರದ ಮುತ್ತೈದೆಯರನ್ನು ಒಟ್ಟು ಸೇರುವಂತೆ ಮಾಡುತ್ತದೆ.
ಚೂಡಿ ಎಂಬ ಹೂವಿನ ಗಂಟು
“ಚೂಡಿ’ ಶಬ್ದವು ಕನ್ನಡದ ಸೂಡಿ ಅರ್ಥಾತ್ ಗಂಟು, ಗುಂಪು ಎನ್ನುವ ಅರ್ಥ ಹೊಂದಿದೆ. ಗರಿಕೆ ಹುಲ್ಲಿನೊಂದಿಗೆ ರಥ ಪುಷ್ಪ, ಕರವೀರ, ರತ್ನಗಂಧಿ, ಮಿಠಾಯಿ ಹೂವು ಹಾಗೂ ವೈವಿಧ್ಯಮಯ ಸಸ್ಯಗಳಾದ ಅನ್ವಾಳೆ, ಲಾಯೆಮಾಡ್ಡೊ, ನೆಲ ನೆಲ್ಲಿ, ಕಾಟ್‌ಚಿರ್ಡೋ, ಕಾಯ್‌ಳ್ಯಾದೋಳ್ಳೋ ಮಜ್ರಾನಾಂಕುಟ, ಗಾಂಟಿಮಾಡ್ಡೊ ಇತ್ಯಾದಿ ನಿಸರ್ಗ ಸಹಜವಾಗಿ ಬೆಳೆಯುವ ಕಾಟು ಹೂಗಳನ್ನೆಲ್ಲಾ ಜೋಡಿಸಿ ಬಾಳೆ ಹಗ್ಗದಿಂದ ಒಟ್ಟಿಗೆ ಕಟ್ಟಿದರೆ ಅದೇ ಚೂಡಿ. ಇವೆಲ್ಲಾ ಹೂವಿನ ಅಂಗಡಿಯಲ್ಲಿ ಲಭ್ಯವಿದ್ದರೂ ಮಹಿಳೆಯರು ಅದನ್ನು ಸುತ್ತಮುತ್ತಲಿನ ಪರಿಸರದಿಂದ ಸಂಗ್ರಹಿಸಿಯೇ ಕಟ್ಟಲು ಇಷ್ಟಪಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.