Kundapura: ಭತ್ತದ ಹೊಟ್ಟಿನ ಬೂದಿಯಲ್ಲಿ ಚಾಪೆ ನೇಜಿ
Team Udayavani, Aug 15, 2024, 7:00 AM IST
ಕುಂದಾಪುರ: ಪೌಷ್ಟಿಕಾಂಶಯುಕ್ತ ಮಣ್ಣು ಬೇರೆಡೆಯಿಂದ ತಂದು ಸೋಸಿ ಚಾಪೆ ನೇಜಿ ಮಾಡಲು ತ್ರಾಸ ಪಡುವ ಬದಲು ಇಲ್ಲೊಬ್ಬ ರೈತರು ಭತ್ತದ ಹೊಟ್ಟಿನ ಬೂದಿಯಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ.
ಹೊಸ ಪ್ರಯೋಗ
ಕೃಷಿಕ ರಾಘವೇಂದ್ರ ಹಾಲಾಡಿ, ಯಾಂತ್ರೀಕೃತ ಕೃಷಿ, ಪ್ರಯೋಗಶೀಲ ಕೃಷಿಯಲ್ಲಿ ನಿರತರು. ರೈತರು ತಮ್ಮ ಗದ್ದೆಗೆ ಬೇರೆ ಬೇರೆ ಕಡೆಯಿಂದ ಮಣ್ಣು ತಂದು ಕಾರ್ಮಿಕರ ಮೂಲಕ ಸೋಸಿ (ಗಾಳಿಸಿ) ಚಾಪೆ ನೇಜಿ ಮಾಡುವುದನ್ನು ಕಂಡು ಇದಕ್ಕೊಂದು ಪರಿಹಾರ ರೂಪ ಯೋಚಿಸಿದರು. ಅಕ್ಕಿ ಮಿಲ್ಲುಗಳಲ್ಲಿ ಉಚಿತವಾಗಿ ದೊರೆತ ಭತ್ತದ ಹೊಟ್ಟಿನಿಂದ (ಉಮಿ) ಬೂದಿ ತಯಾರಿಸಿ ಅದರಲ್ಲಿ ಬಿತ್ತಿದರು. 14-15 ದಿನಕ್ಕೆ ನೇಜಿ ಮೇಲೆ ಬಂತು. ಅದನ್ನು ಗದ್ದೆಯಲ್ಲಿ ನೆಟ್ಟೂ ಆಯಿತು.
ಏನು ಮಾಡಿದರು
ಉಮಿ ತಂದು ಬೂದಿ ತಯಾರಿಸಿ ಚಾಪೆ ಮಡಿ ತಯಾರಿಕೆಗೆ ಟ್ರೇಗೆ ಹಾಕಿದರು. ಬಿತ್ತನೆ ಬಳಿಕ 4-5 ದಿನ ಶೇಡ್‌ನೆಟ್ (ಬಲೆಯ ನೆರಳು ) ಬಳಸಿದರು. 14-15 ದಿನದಲ್ಲಿ ನೇಜಿ ನೆಡಲು ಸಿದ್ಧವಾಯಿತು. ಯಂತ್ರನಾಟಿ ಮಾಡಿದರು. 18 ದಿನಗಳವರೆಗೆ ಬಿಟ್ಟರೆ ನೇಜಿ ಹಳದಿಯಾಗಲು ಆರಂಭವಾಗುತ್ತದೆ. ಭತ್ತದ ಹೊಟ್ಟಿನಲ್ಲಿ ರಾಸಾಯನಿಕ ಅಂಶಗಳು ಇರುವ ಕಾರಣ ನೆಟ್ಟ 10 ದಿನ ಬಳಿಕ 1 ಎಕ್ರೆಗೆ 10 ಕೆಜಿ ಯೂರಿಯಾ ಕೊಡಬೇಕಾಗುತ್ತದೆ. ಉಳಿದಂತೆ ಇತರ ಭತ್ತದ ತಳಿಗಳ ಆರೈಕೆ ಕ್ರಮ ಹೇಗೆಯೋ ಅದನ್ನು ಗದ್ದೆಯಲ್ಲಿ ಮಾಡಬೇಕಾಗುತ್ತದೆ. ಕೊಯಿಲಿಗೆ ಕೂಡ ಯಾವುದೇ ಬದಲಾವಣೆ ಇಲ್ಲ.
ಏನು ಪ್ರಯೋಜನ
ಮಳೆಗಾಲದಲ್ಲಿ ಒಳ್ಳೆಯ, ಫಲವತ್ತಾದ, ತೇವಾಂಶ ಇಲ್ಲದ ಮಣ್ಣಿನ ಕೊರತೆಗೆ ಪರಿಹಾರ. ಮಣ್ಣು ಗಾಳಿಸುವ ಕೆಲಸ, ಕಾರ್ಮಿಕರ ವೇತನ ಉಳಿತಾಯ. ಭತ್ತದ ಹೊಟ್ಟು ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ದೊರೆಯುತ್ತದೆ. ಇತರ ಕ್ರಮಕ್ಕಿಂತ 4-5 ದಿನ ಮೊದಲೇ ಚಾಪೆಮಡಿ ಸಿದ್ಧವಾಗಿರುತ್ತದೆ. ಉಮಿಯ ಬೂದಿಯಲ್ಲಿ ಬೇರುಗಳು ಸುಲಭವಾಗಿ ಹರಡುತ್ತದೆ. ಇದರಿಂದ ಗಟ್ಟಿ ಸಸಿ ಲಭ್ಯ. ಟ್ರೇಯಲ್ಲಿ ಮಾಡುವ ವಿಧಾನಕ್ಕೆ ಉಮಿ ಬೂದಿ ಸೂಕ್ತ, ಪ್ಲಾಸ್ಟಿಕ್‌ನಲ್ಲಿ ಮಾಡುವ ವಿಧಾನಕ್ಕೆ ಆಗುವುದಿಲ್ಲ. ಬೂದಿಗೆ ಯಾವುದೇ ಮಣ್ಣಿನ ಮಿಶ್ರಣ ಮಾಡಬೇಕಿಲ್ಲ. ಮಣ್ಣು ಮಿಶ್ರ ಮಾಡಿದ ಪ್ರಯೋಗಗಳು ನೂರು ಪ್ರತಿಶತ ಯಶಸ್ವಿ ಎನಿಸಿಲ್ಲ ಎಂಬ ಭಾವನೆ ಕೆಲವರಲ್ಲಿ ಇದೆ.
ಅಂಕಿ ಅಂಶ
1 ಎಕ್ರೆಗೆ 16-18 ಕೆಜಿ ಬೀಜ ಬೇಕಾಗುತ್ತದೆ. 80 ಟ್ರೇಗಳಲ್ಲಿ ಚಾಪೆಮಡಿ ಮಾಡಬೇಕಾಗುತ್ತದೆ. ಮಣ್ಣಾದರೆ 16 ಫೈಬರ್ ಬುಟ್ಟಿ ಬೇಕಾಗುತ್ತದೆ. ಬೂದಿಯಾದರೆ 10 ಬುಟ್ಟಿ ಸಾಕಾಗುತ್ತದೆ. ಟ್ರೇಯಲ್ಲಿ ಬೂದಿ ಹಾಕಿ ಬಿತ್ತಿದ ಅನಂತರ 4-5 ದಿನ ನೆರಳು ಹಾಕಿ ಶೇಡ್‌ನೆಟ್ ತೆಗೆದು ಒಟ್ಟು 14-15 ದಿನದಲ್ಲಿ ನಾಟಿ ಮಾಡಲು ತೆಗೆಯಬಹುದು.
ಜೊಳ್ಳಿಲ್ಲದ ಒಳ್ಳೆ ತೆನೆಗೆ ಸಹಕಾರಿ
ಇದು ಕಸದಿಂದ ರಸ ಪ್ರಯೋಗ. ಭತ್ತದ ಹೊಟ್ಟಿನ ಬೂದಿ ಜತೆ ಮಣ್ಣು ಮಿಶ್ರಣದ ಪ್ರಯೋಗ ನಡೆದಿದೆ. ಮರದ ಹೊಟ್ಟಿನ ಜತೆಯೂ ನಡೆದಿದೆ. ಇದು ಹೊಸತು. ಭತ್ತದ ಹೊಟ್ಟಿನಲ್ಲಿ ರಂಜಕ ಹಾಗೂ ಸಿಲಿಕಾನ್ ಅಂಶಗಳಿರುತ್ತದೆ. ರಂಜಕ ಬೇರು ಸುಲಭವಾಗಿ ಇಳಿಯಲು, ಹಬ್ಬಲು ಸಹಾಯ ಮಾಡುತ್ತದೆ. ಸಿಲಿಕಾನ್ ಅಂಶದಿಂದಾಗಿ ತೆನೆ ಜೊಳ್ಳಾಗುವುದು ತಪ್ಪುತ್ತದೆ. ಮಳೆಗಾಲದಲ್ಲಿ ಒಣಮಣ್ಣು ದೊರೆಯುವುದು ಕಷ್ಟವಾದ್ದರಿಂದ ಈ ಪ್ರಯೋಗ ಸುಲಭ. ನಮ್ಮ ಕೇಂದ್ರದಲ್ಲಿ ಈವರೆಗೆ ಪ್ರಯೋಗ ಮಾಡಿಲ್ಲ. ಮುಂದಿನ ಬಾರಿ ಮಾಡಿ ಪರೀಕ್ಷಿಸಬೇಕು.
– ಡಾ| ಧನಂಜಯ ಬಿ. ಕೃಷಿ ವಿಜ್ಞಾನಿ, ಮುಖ್ಯಸ್ಥರು, ಬ್ರಹ್ಮಾವರ ಕೃಷಿ ವಿಜ್ಞಾನ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ
ಪ್ರಯೋಗ ಯಶಸ್ವಿಯಾಗಿದೆ
ಮಣ್ಣು ಗಾಳಿಸುವ ಕಷ್ಟ, ಮಣ್ಣು ಸಂಗ್ರಹಿಸುವ ಕಷ್ಟ ಕಂಡು ಈ ಪ್ರಯೋಗ ಮಾಡಿದ್ದು ಈವರೆಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಕೃಷಿ ವಿಜ್ಞಾನಿಗಳ ಜತೆ, ಕೃಷಿ ಇಲಾಖೆ ಅಧಿಕಾರಿಗಳ ಜತೆ ಸಂವಹನ ನಡೆಸುತ್ತ ಪ್ರಯೋಗ ಮಾಡಿದ್ದೇನೆ.
– ರಾಘವೇಂದ್ರ ಹಾಲಾಡಿ, ಕೃಷಿಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.