Raksha Bandhan; ಸೋದರತ್ವದ ಬಾಂಧವ್ಯ ಸಾರುವ ರಕ್ಷಾ ಬಂಧನ..!: ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಪುರಾಣಗಳಲ್ಲಿ ಉಲ್ಲೇಖೀತ ರಾಖಿ
Team Udayavani, Aug 19, 2024, 6:00 AM IST
ಭಾರತೀಯ ಸಂಸ್ಕೃತಿಯಲ್ಲಿ ಪ್ರತೀ ಬಾಂಧವ್ಯಕ್ಕೂ ಒಂದೊಂದು ಹಬ್ಬದ ನಂಟಿದೆ. ಅದರಂತೆ ಸೋದರ-ಸೋದರಿಯರ ಸಂಬಂಧ, ಪ್ರೀತಿಯ ಪ್ರತೀಕವಾದ ಹಬ್ಬ ರಕ್ಷಾ ಬಂಧನ. ಪ್ರತೀ ವರ್ಷ ಶ್ರಾವಣ ಹುಣ್ಣಿಮೆಯಂದು ಆಚರಿಸಲ್ಪಡುವ ಈ ಹಬ್ಬವು ಸಾಕಷ್ಟು ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಹೊಂದಿದೆ. ಅದಲ್ಲದೇ ಸಮಾಜದಲ್ಲಿ ಹೆಣ್ಣುಮಕ್ಕಳ ರಕ್ಷಣೆಯನ್ನು ಪ್ರತಿಬಿಂಬಿಸುವ ರಾಖೀ ಹಬ್ಬದ ಹಿನ್ನೆಲೆ, ಮಹತ್ವದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಸೋದರಿಗೆ ರಕ್ಷಣೆಯ ಭರವಸೆ
ಸೋದರತ್ವ ಸಾರುವ ರಕ್ಷಾ ಬಂಧನ ಶತಮಾನಗಳ ಇತಿಹಾಸ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿದೆ. ರಕ್ಷಾ ಬಂಧನ ಎಂಬುದು ಸಂಸ್ಕೃತದ ಪದವಾಗಿದ್ದು, ಇದರ ಅರ್ಥ ರಕ್ಷಣೆಯ ಬಂಧ ಎಂದು. ರಕ್ಷಾ ಬಂಧನದಂದು ಸೋದರಿಯರು ತಮ್ಮ ಸೋದರನ ಏಳಿಗೆಗಾಗಿ, ದೀರ್ಘಾಯುಷ್ಯಕ್ಕಾಗಿ ವ್ರತ ಆಚರಿಸಿ ಸೋದರನ ಮಣಿಕಟ್ಟಿಗೆ ರಕ್ಷಾ ದಾರ ಅಥವಾ ರಾಖೀಯನ್ನು ಕಟ್ಟುತ್ತಾರೆ. ಈ ಮೂಲಕ ಸಹೋದರನಿಂದ ರಕ್ಷಣೆಯ ಭರ ವಸೆ ಯನ್ನು ಪಡೆಯುತ್ತಾರೆ. ಇದು ಸಹೋದರಿಯನ್ನು ರಕ್ಷಿಸುವ ಜವಾಬ್ದಾರಿ ನೀಡುತ್ತದಲ್ಲದೇ ಸೋದರ- ಸೋದರಿ ಯರ ನಡುವಿನ ಬಂಧವನ್ನು ಬಲ ಪಡಿಸುತ್ತದೆ.
ದ್ವಾಪರ ಯುಗದಿಂದಲೂ ಆಚರಣೆ
ರಕ್ಷಾ ಬಂಧನದ ಆಚರಣೆಯ ಹಿನ್ನೆಲೆ ನೋಡಲು ಹೊರಟರೆ ಅದು ದ್ವಾಪರ ಯುಗಕ್ಕೆ ಕೊಂಡೊಯ್ಯುತ್ತದೆ. ಶ್ರೀಕೃಷ್ಣ ಮತ್ತು ದ್ರೌಪದಿಯ ನಡುವಿನ ಬಾಂಧವ್ಯ ಎಲ್ಲರಿಗೂ ತಿಳಿದಿದ್ದೇ ಆಗಿದೆ. ವಸ್ತ್ರಾಪಹರಣವಾದ ಸಂದರ್ಭ ಕೃಷ್ಣ ದ್ರೌಪದಿಯ ಸಹಾಯಕ್ಕೆ ನಿಂತನು. ಇದಕ್ಕೆ ಈ ಹಿಂದೆ ಆತನು ಮಾಡಿದ್ದ ಪ್ರತಿಜ್ಞೆಯೇ ಕಾರಣವಾಗಿತ್ತು. ಯುದ್ಧದಲ್ಲಿ ಉಂಟಾದ ಗಾಯ ದಿಂದಾಗಿ ಕೃಷ್ಣನ ಮಣಿಕಟ್ಟಿನಲ್ಲಿ ರಕ್ತ ಒಸರುವುದನ್ನು ಕಂಡ ದ್ರೌಪದಿ ತಾನುಟ್ಟಿದ್ದ ಸೀರೆಯನ್ನು ಹರಿದು ಆತನ ಕೈಗೆ ಕಟ್ಟುತ್ತಾಳೆ. ಅದಕ್ಕೆ ಪ್ರತಿಯಾಗಿ ಅಗತ್ಯವಿದ್ದಾಗ ಅವಳಿಗೆ ಸಹಾಯ ಮಾಡುವುದಾಗಿ ಕೃಷ್ಣ ಭರವಸೆ ನೀಡಿದ್ದನು. ಇದಕ್ಕೆ ಅನು ಗುಣವಾಗಿ ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಕೃಷ್ಣನು ಅವಳಿಗೆ ರಕ್ಷಣೆ ನೀಡುವ ಮೂಲಕ ಅವಳಿಗಾಗಬೇಕಿದ್ದ ಮುಜುಗರವನ್ನು ತಡೆದನು. ಅದರ ಪ್ರತೀಕವಾಗಿ ರಾಖಿ ಹಬ್ಬ ಆಚರಿಸಲಾಗುತ್ತದೆಂದು ಪುರಾಣ ಹೇಳುತ್ತದೆ.
ವಿದೇಶಗಳಲ್ಲೂ ಆಚರಣೆ
ಭಾರತವೊಂದೇ ಅಲ್ಲದೇ ಇನ್ನೂ ಹಲವು ದೇಶಗಳಲ್ಲಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ನೆರೆಯ ನೇಪಾಲ, ಪಾಕಿಸ್ಥಾನಗಳಲ್ಲೂ ರಾಖಿ ಹಬ್ಬ ಆಚರಿಸುವ ವಾಡಿಕೆಯಿದ್ದು, ಮಾರಿಷಸ್, ಫಿಜಿಯಲ್ಲೂ ಆಚರಣೆ ಮಾಡಲಾಗುತ್ತದೆ.
ಇಂದ್ರ-ಶಚಿ ದೇವಿ
ಹಲವು ಪೌರಾಣಿಕ ಕಥೆಗಳಲ್ಲಿ ಹೆಣ್ಣು ಮಕ್ಕಳು ರಾಖಿ ಕಟ್ಟಿ ತಮಗೆ ರಕ್ಷೆ ಕೋರಿರುವ ಸಾಕಷ್ಟು ಉದಾಹರಣೆಗಳಿವೆ. ಅದರಂತೆ ಅಸುರನಿಂದ ಸೋಲಿಸಲ್ಪಟ್ಟಂತಹ ಇಂದ್ರನಿಗೆ ತನ್ನ ಶತ್ರುಗಳಿಂದ ರಕ್ಷಣೆ ಪಡೆಯಬೇಕಾದರೆ ಕೈಗೆ ರಾಖಿ ಕಟ್ಟಿಕೊಳ್ಳಬೇಕು ಎಂದು ಬೃಹಸ್ಪತಿ ಹೇಳಿದರು. ಬೃಹಸ್ಪತಿಯ ಮಾತಿನಂತೆ ಇಂದ್ರನ ಪತ್ನಿ ಶಚಿ ದೇವಿಯು ಇಂದ್ರನಿಗೆ ರಾಖಿ ಕಟ್ಟಿದಳು ಎಂದು ಪುರಾಣದಲ್ಲಿದೆ.
ಯಮ-ಯಮುನಾ
ಇನ್ನೊಂದು ಕಥೆಯ ಪ್ರಕಾರ, ರಕ್ಷಾ ಬಂಧನದ ಆಚರಣೆಗೆ ಯಮ ಹಾಗೂ ಯಮುನೆಗೂ ಸಂಬಂಧವಿದೆ. ಭಾರತದಲ್ಲಿ ಹರಿಯುವ ನದಿ ಯಮುನಾ ಯಮನಿಗೆ ರಾಖಿ ಕಟ್ಟಿದಾಗ, ಸಾವಿನ ಅಧಿಪತಿ ಯಮ ಅವಳಿಗೆ ಅಮರತ್ವವನ್ನು ನೀಡಿದನೆಂದು ಕಥೆ ಹೇಳುತ್ತದೆ ಮತ್ತು ಆತನು ಆ ಭಾವದಿಂದ ಮನನೊಂದನು, ರಾಖಿ ಕಟ್ಟಿದ ಮತ್ತು ತನ್ನ ಸಹೋದರಿಯನ್ನು ರಕ್ಷಿಸಲು ಮುಂದಾದ ಯಾವುದೇ ಸಹೋದರ ಕೂಡ ಅಮರನಾಗುತ್ತಾನೆ ಎಂದು ಆತ ಘೋಷಿಸಿದನೆಂದು ಹೇಳಲಾಗಿದೆ.
ಲಕ್ಷ್ಮೀ ದೇವಿ-ಬಲಿ ಚಕ್ರವರ್ತಿ
ವಾಮನನ ಅವತಾರದಲ್ಲಿ ಬಂದು ಬಲಿಯನ್ನು ಪಾತಾಳಕ್ಕೆ ಕಳುಹಿಸಿದ ವಿಷ್ಣುವಿನ ಬಳಿ ಬಲಿ ಚಕ್ರವರ್ತಿ ತನ್ನೊಂದಿಗೆ ಪಾತಾಳಕ್ಕೆ ಬರುವಂತೆ ಕೋರುತ್ತಾನೆ. ಭಕ್ತನ ಆಸೆಯ ಮೇರೆಗೆ ಭಗವಾನ್ ವಿಷ್ಣು ವೈಕುಂಠವನ್ನು ತ್ಯಜಿಸಿ ಪಾತಾಳಕ್ಕೆ ಹೋಗುತ್ತಾನೆ. ಇದರಿಂದ ಚಿಂತಿತಳಾದ ಲಕ್ಷ್ಮೀಯು ಬಡ ಮಹಿಳೆಯ ರೂಪ ಧರಿಸಿ ಬಲಿಯಿದ್ದಲ್ಲಿಗೆ ಬಂದು ಆತನಿಗೆ ರಕ್ಷಾ ದಾರವನ್ನು ಕಟ್ಟುತ್ತಾಳೆ. ಆಗ ಬಲಿ ಚಕ್ರವರ್ತಿ ತಾಯಿ ನಿಮಗೆ ಉಡುಗೊರೆಯಾಗಿ ನೀಡಲು ನನ್ನ ಬಳಿ ಈಗ ಏನೂ ಉಳಿದಿಲ್ಲ ಎನ್ನುತ್ತಾನೆ. ಲಕ್ಷ್ಮೀ ದೇವಿ ನನಗೆ ನಿನ್ನ ಉಡುಗೊರೆ ನನಗೆ ಏನು ಬೇಕಿಲ್ಲ, ಆದರೆ ನನ್ನ ಪತಿ ವಿಷ್ಣುವನ್ನು ನನಗೆ ಹಿಂದಿರುಗಿಸು ಎಂದು ಕೇಳಿಕೊಳ್ಳುತ್ತಾಳೆ. ಬಳಿಕ ಬಲಿ ವಿಷ್ಣುವನ್ನು ಪಾತಾಳ ಲೋಕದಿಂದ ಲಕ್ಷ್ಮೀಯೊಂದಿಗೆ ವೈಕುಂಠಕ್ಕೆ ಕಳುಹಿಸುತ್ತಾನೆ.
ದೇಶ, ಧರ್ಮ ಮೀರಿದ ಬಂಧ ರೊಕ್ಸಾನಾ ಮತ್ತು ಕಿಂಗ್ ಪೋರಸ್
ದಂತಕಥೆಗಳ ಪ್ರಕಾರ ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಆಗ ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ವೇಳೆ ಅಲೆಕ್ಸಾಂಡರ್‌ನ ಪತ್ನಿ ರೊಕ್ಸಾನಳು ಪೋರಸ್‌ಗೆ ಒಂದು ಪವಿತ್ರ ದಾರ (ರಾಖಿ) ಕಳುಹಿಸಿದಳು. ಅದರ ಜತೆಗೆ ತನ್ನ ಪತಿಯನ್ನು ಕೊಲ್ಲದಿರುವಂತೆ ಮನವಿ ಮಾಡಿ ಪತ್ರವನ್ನೂ ಕಳುಹಿಸಿದ್ದಳು. ಅದೇ ಕಾರಣಕ್ಕೆ ಯುದ್ಧದಲ್ಲಿ ಪೋರಸ್ ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು ಎಂದು ಇತಿಹಾಸ ಹೇಳುತ್ತದೆ.
ರಾಣಿ ಕರ್ಣಾವತಿ-ಹುಮಾಯುನ್
ಮತ್ತೂಂದು ಘಟನೆಯಲ್ಲಿ ಚಿತ್ತೂರಿನ ರಾಣಿ ಕರ್ಣಾವತಿಯು ಗಂಡನನ್ನು ಕಳೆದುಕೊಂಡು ವೈಧವ್ಯದ ಜೀವನ ನಡೆಸುತ್ತಿದ್ದಳು. ಈ ವೇಳೆ ಬಹದ್ದೂರ್ ಶಾ ಯುದ್ಧ ಆರಂಭಿಸಿದ ಕಾರಣ, ಸಹಾಯ ಬೇಡಿ ಹುಮಾಯುನ್‌ಗೆ ರಾಖಿ ಕಳುಹಿಸಿದಳು. ಇದನ್ನು ಮುಟ್ಟುವ ಮೂಲಕ ಸ್ವೀಕರಿಸಿದ ಹುಮಾಯೂನನು ತನ್ನ ಸೇನೆಯನ್ನು ರಾಣಿ ಕರ್ಣಾವತಿಯ ಸಹಾಯಕ್ಕೆ ಧಾವಿಸುವಂತೆ ಸೂಚಿಸಿದನು. ಆದರೆ ಸೈನ್ಯವು ಅಲ್ಲಿಗೆ ತಲುಪಲು ತಡವಾಯಿತು. ಇದೇ ವೇಳೆಗೆ ಕರ್ಣಾವತಿ ಪ್ರಾಣತ್ಯಾಗ ಮಾಡಿದ್ದಳು. ಆದರೂ ಹುಮಾಯುನ್, ಬಹದ್ದೂರ್ ಶಾನನ್ನು ಹೊರ ಹಾಕಿ ಕರ್ಣಾವತಿ ಮಗ ವಿಕ್ರಮಜೀತನನ್ನು ಸಿಂಹಾಸನದಲ್ಲಿ ಕೂರಿಸಿದನು.
ಸಾಮಾಜಿಕ ಆಚರಣೆ
ಪ್ರತಿ ವರ್ಷ ರಕ್ಷಾ ಬಂಧನವನ್ನು ಆರ್‌ಎಸ್‌ಎಸ್ ಸೇರಿದಂತೆ ಹಲವು ಸಾಮಾಜಿಕ ಸಂಘಟನೆಗಳು ಬ್ರಾತೃತ್ವದ ಪ್ರತೀಕವಾಗಿ ಆಚರಿ ಸುತ್ತವೆ, ದೇಶದ ರಕ್ಷಣೆ ಮಾಡುವ ಯೋಧರಿಗೆ ಸಾಂಕೇ ತಿಕ ವಾಗಿ ರಾಖಿ ಕಟ್ಟಲಾಗುತ್ತದೆ. ಆರ್‌ಎಸ್‌ಎಸ್ ಸ್ವಯಂ ಸೇವ ಕರು ಪ್ರತೀ ವರ್ಷ ಸರಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಪರಸ್ಪರ ಕಟ್ಟಲು ರಾಖೀ ನೀಡಿ ಸಿಹಿ ಹಂಚುತ್ತಾರೆ. ಒಟ್ಟಿನಲ್ಲಿ ಧರ್ಮದ ಪರಿಧಿಯನ್ನು ಮೀರಿ ಎಲ್ಲರೂ ಸೋದರತ್ವದ ಭಾವನೆ ಯಿಂದ ಆಚರಿಸುವ ರಕ್ಷಾ ಬಂಧನದ ಈ ಸುಸಂದರ್ಭ ದಲ್ಲಿ ಎಲ್ಲ ಸೋದರರಿಗೂ ದೀರ್ಘಾಯುಷ್ಯ ಸಿಗಲಿ, ಎಲ್ಲ ಸೋದರಿಯರಿಗೂ ರಕ್ಷಣೆ ಸಿಗಲಿ ಎಂದು ಆಶಿಸೋಣ.
*ತೇಜಸ್ವಿನಿ.ಸಿ.ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.