Kota ದರೋಡೆಗೆ ಬಂದಿದ್ದ ತಂಡ; ಇಬ್ಬರು ಆರೋಪಿಗಳ ಬಂಧನ
ಮಣೂರು: ಅಧಿಕಾರಿಗಳ ಸೋಗಿನಲ್ಲಿ ಮನೆ ಪ್ರವೇಶಕ್ಕೆ ಯತ್ನ ಪ್ರಕರಣ
Team Udayavani, Aug 22, 2024, 6:50 AM IST
ಕೋಟ/ಉಡುಪಿ/ಕುಂದಾಪುರ: ಪೊಲೀಸರು ಹಾಗೂ ಐಟಿ ಅಧಿಕಾರಿಗಳ ಸೋಗಿನಲ್ಲಿ ತೆಕ್ಕಟ್ಟೆ ಮಣೂರಿನ ಬಸ್ ನಿಲ್ದಾಣ ಸಮೀಪದ ಮನೆಯೊಂದಕ್ಕೆ ಅಪರಿಚಿತ ತಂಡವೊಂದು ಭೇಟಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮುಂಬಯಿಯಲ್ಲಿ ಇಬ್ಬರನ್ನು ಬಂಧಿಸಿ ಕರೆ ತಂದಿದ್ದಾರೆ. ಅಧಿಕಾರಿಗಳ ಸೋಗಿ ನಲ್ಲಿ ದರೋಡೆ ನಡೆಸಲು ಸಂಚು ರೂಪಿಸಿರು ವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಮೂಲದ, ಪ್ರಸ್ತುತ ಮುಂಬಯಿಯಲ್ಲಿ ವಾಸವಿರುವ ಸಂತೋಷ್ ನಾಯಕ್ (45) ಹಾಗೂ ಮೂಲತಃ ಕಾಪು ನಿವಾಸಿ, ಪ್ರಸ್ತುತ ಮುಂಬಯಿಯಲ್ಲಿರುವ ದೇವರಾಜ್ ಸುಂದರ್ ಮೆಂಡನ್(46) ಬಂಧಿತರು. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಪ್ರಕರಣದ ವಿವರ
ಜು. 25ರಂದು ಬೆಳಗ್ಗೆ 8.30 ಗಂಟೆಗೆ ಮಣೂರು ನಿವಾಸಿ ಸುಧೀಂದ್ರ ಪೂಜಾರಿಯ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಗಿದ್ದು, ಆಗ ಸುಧೀಂದ್ರ ಅವರ ಪತ್ನಿ ಕವಿತಾ ಮಾತ್ರ ಮನೆಯಲ್ಲಿದ್ದರು. ಅನಂತರ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೆಕ್ಯುರಿಟಿ ಸಂಸ್ಥೆಯವರು ಕರೆ ಮಾಡಿ, ನಿಮ್ಮ ಮನೆಗೆ ಸ್ವಿಫ್ಟ್ ಮತ್ತು ಇನ್ನೋವಾ ಕಾರಿನಲ್ಲಿ 6-8 ಜನ ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದರು. ಸಾಧ್ಯವಾಗದಿದ್ದಾಗ ಕಾಂಪೌಂಡ್ ಹಾರಿ ಮನೆಗೆ ಬಂದು ಕಿಟಕಿಯನ್ನು ಬಲಾತ್ಕಾರವಾಗಿ ತೆಗೆಯಲು ಪ್ರಯತ್ನಿಸಿದ್ದಾರೆ.
ಅನಂತರ ಗೇಟಿಗೆ ಹಾನಿ ಮಾಡಿ ಮರಳಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಲಾಗಿತ್ತು.
ತಂಡದಲ್ಲಿ 8 ಮಂದಿ
ಪ್ರಕರಣದಲ್ಲಿ 8 ಮಂದಿ ಆರೋಪಿಗಳು ಇರುವುದರಿಂದ ಹಾಗೂ ಇನ್ನೂ 6 ಮಂದಿಯನ್ನು ಪತ್ತೆ ಹಚ್ಚಿ ತನಿಖೆ ನಡೆಸ ಬೇಕಾಗಿರುವುದರಿಂದ ಪೊಲೀಸರು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಆರೋಪಿತರು ದರೋಡೆ ಮಾಡುವ ಸಂಚು ರೂಪಿಸಿ ಮಹಾರಾಷ್ಟ್ರದಿಂದ ಬಂದಿದ್ದರು.
ಆರೋಪಿಗಳಲ್ಲಿ ಓರ್ವ ಶಾರ್ಪ್‌ಶೂಟರ್ ಆಗಿದ್ದು, ಆತನ ವಿರುದ್ಧ ಮುಂಬಯಿಯಲ್ಲಿ ಮೋಕಾ (ಮಹಾರಾಷ್ಟ್ರ ಸಂಘಟಿತ ಅಪರಾಧಗಳ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಉಳಿದ ಆರೋಪಿಗಳ ವಿರುದ್ಧವೂ ವಿವಿಧ ಠಾಣೆಗಳಲ್ಲಿ 10ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎನ್ನಲಾಗುತ್ತಿದೆ.
ಪೊಲೀಸರಿಗೂ ಸವಾಲಾಗಿದ್ದ ಪ್ರಕರಣ
ಪ್ರಕರಣ ಪೊಲೀಸರಿಗೆ ಸಾಕಷ್ಟು ಸವಾಲಾಗಿತ್ತು. ದರೋಡೆಕೋರರ ತಂಡ ದಲ್ಲಿದ್ದ ಸದಸ್ಯರು ಮೊಬೈಲ್ ಬಳಸಿರಲಿಲ್ಲ ಹಾಗೂ ಎಲ್ಲರೂ ವೇಷ ಮರೆಸಿಕೊಂಡಿದ್ದರು. ಓರ್ವ ಆರೋಪಿ ಸೆರೆಯಾದರೆ ಇನ್ನೊಬ್ಬನ ಬಗ್ಗೆ ಮಾಹಿತಿ ಸಿಗಬಾರದು ಎನ್ನುವ ನಿಟ್ಟಿನಲ್ಲಿ ಆರೋಪಿಗಳಲ್ಲೇ ಒಬ್ಬರಿಗೊಬ್ಬರು ಪರಿಚಯವಿಲ್ಲದ ತಂಡವನ್ನು ರಚಿಸಿ ಕೃತ್ಯಕ್ಕೆ ಬಳಸಲಾಗಿತ್ತು. ಎಲ್ಲರೂ ಸಾಕಷ್ಟು ಅಪರಾಧ ಹಿನ್ನೆಲೆ ಹೊಂದಿದ್ದರಿಂದ ಯಾವುದೇ ಸುಳಿವು ಬಿಟ್ಟಿರಲಿಲ್ಲ. ಆದರೂ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿ ಆರೋಪಿಗಳ ಪತ್ತೆಗಾಗಿ ಬೆಂಗಳೂರು, ಮಹಾರಾಷ್ಟ್ರ ಮತ್ತು ಸ್ಥಳೀಯವಾಗಿ ಶೋಧನ ಕಾರ್ಯ ಕೈಗೊಳ್ಳಲಾಗಿತ್ತು. ಆರಂಭದಲ್ಲಿ ಮುಂಬಯಿಗೆ ತೆರಳಿದ ತಂಡಕ್ಕೆ ಹೆಚ್ಚಿನ ಮಾಹಿತಿ ಸಿಕ್ಕಿರಲಿಲ್ಲ. ಬಳಿಕ ಆರೋಪಿಗಳು ಮುಂಬಯಿಯವರೇ ಎನ್ನುವುದು ಖಚಿತವಾಗಿತ್ತು ಹಾಗೂ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ಪತ್ತೆ ಹಚ್ಚಿ ಊರಿಗೆ ತರಲಾಗಿತ್ತು. ಪ್ರಕರಣದ ಬೆನ್ನು ಬಿದ್ದು ಆರೋಪಿಗಳ ಬಗ್ಗೆ ನಿಗಾ ಇರಿಸಿ ಸುಮಾರು 20 ದಿನಗಳ ಕಾಲ ಪೊಲೀಸರ ತಂಡ ಮುಂಬಯಿಯಲ್ಲೇ ವಾಸವಿದ್ದು, ಮಾಹಿತಿಗಳನ್ನು ಕಲೆ ಹಾಕಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಎಸ್‌ಪಿ ಡಾ| ಕೆ. ಅರುಣ್ ಸೂಚನೆ ಮೇರೆಗೆ ಬ್ರಹ್ಮಾವರ ಸಿಐ ದಿವಾಕರ ಪಿ.ಎಂ., ಕೋಟ ಪಿಎಸ್‌ಐ ಗುರುನಾಥ ಬಿ. ಹಾದಿಮನಿ, ಕ್ರೈಂ ವಿಭಾಗದ ಸುಧಾ ಪ್ರಭು ಮತ್ತು ಹಿರಿಯಡಕ ಪಿಎಸ್‌ಐ ಮಂಜುನಾಥ ಮತ್ತು ಸಿಬಂದಿಯನ್ನೊಳಗೊಂಡ ಮೂರು ತಂಡ ರಚಿಸಲಾಗಿತ್ತು.
ದುರಂತ ತಪ್ಪಿತ್ತು
ಮನೆಯವರು ಬಾಗಿಲು ತೆರೆದಿದ್ದರೆ ದೊಡ್ಡ ಮಟ್ಟದ ದರೋಡೆ ನಡೆಯುವ ಸಾಧ್ಯತೆ ಇತ್ತು ಹಾಗೂ ಆರೋಪಿಗಳೆಲ್ಲರೂ ಕೊಲೆ ಮುಂತಾದ ದೊಡ್ಡ ಅಪರಾಧ ಹಿನ್ನೆಲೆಯವರಾದ್ದರಿಂದ ಪ್ರತಿರೋಧ ತೋರಿದ್ದರೆ ಜೀವ ಹಾನಿ ಆಗುವ ಸಾಧ್ಯತೆ ಇತ್ತು. ಆದರೆ ಅದೆಲ್ಲವೂ ತಪ್ಪಿದೆ. ಹಾಗೂ ಸೆಕ್ಯುರಿಟಿ ಸಂಸ್ಥೆಯ ಕಣ್ಗಾವಲು ಇರುವುದರಿಂದ ತಂಡ ಭೇಟಿ ನೀಡಿದ್ದ ಬಗ್ಗೆ ಮಾಹಿತಿ ತಿಳಿದಿತ್ತು. ಇಲ್ಲವಾದರೆ ಇಷ್ಟೊಂದು ದೊಡ್ಡ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ.
ಜಿಲ್ಲೆಯ ಓರ್ವ ಭಾಗಿ?
ಪ್ರಕರಣದಲ್ಲಿ ಜಿಲ್ಲೆಯ ಸ್ಥಳೀಯನೋರ್ವನ ಕೈವಾಡವಿದ್ದು, ಆತ ದೇವರಾಜ್ ಮೆಂಡನ್‌ಗೆ ಮಣೂರಿನ ಸುಧೀಂದ್ರ ಪೂಜಾರಿ ಅವರಲ್ಲಿ ಸಾಕಷ್ಟು ಹಣ ಇದೆ ಎಂದು ತಿಳಿಸಿದ್ದ. ಆತ ಈ ವಿಷಯವನ್ನು ಕ್ರಿಮಿನಲ್ ಹಿನ್ನೆಲೆಯುಳ್ಳವರ ತಂಡ ರಚಿಸಿಕೊಂಡು ದರೋಡೆ ಕೃತ್ಯಗಳನ್ನು ನಡೆಸುವ ಮುಂಬಯಿಯಲ್ಲಿರುವ ತನ್ನ ಬಾಸ್‌ಗೆ ತಿಳಿಸಿದ್ದ. ಅನಂತರ ಆತನ ಸೂಚನೆ ಮೇರೆಗೆ ಎಂಟು ಮಂದಿಯ ತಂಡವೊಂದನ್ನು ರಚಿಸಿ ಕೋಟಕ್ಕೆ ಕಳುಹಿಸಿಕೊಟ್ಟಿದ್ದ ಎಂದು ಹೇಳಲಾಗಿದೆ.
ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸ ಲಾಗಿದೆ. ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಉಳಿದ ಆರೋಪಿಗಳನ್ನು ಪತ್ತೆಹಚ್ಚಲಾಗುವುದು.
-ಡಾ| ಕೆ. ಅರುಣ್,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.