Kannadigas in Paralympics: ಮತ್ತೆ ಮಂದಹಾಸ ಬೀರಲಿ ಸುಹಾಸ್
ಪ್ಯಾರಾಲಿಂಪಿಕ್ಸ್ ಪದಕ ಗೆದ್ದ ಭಾರತದ ಮೊದಲ ಐಎಎಸ್ ಅಧಿಕಾರಿ
Team Udayavani, Aug 24, 2024, 6:45 AM IST
ಬೆಂಗಳೂರು: ಸಾಧನೆಯ ಬೆನ್ನು ಹಿಡಿದು ಹೊರಡುವವರ ಬಳಿ ಶ್ರಮದ ನೆರಳು ಸುಳಿಯುವುದಿಲ್ಲ, ಅವರಲ್ಲಿ ಕುಂಟು ನೆಪಕ್ಕೂ ಜಾಗವಿರುವುದಿಲ್ಲ ಎಂಬ ಮಾತಿದೆ. ಈ ಮಾತನ್ನು ಪ್ಯಾರಾ ಬ್ಯಾಡ್ಮಿಂಟನ್ ಪಟು, ಸುಹಾಸ್ ಲಲಿನಾಕೆರೆ ಯತಿರಾಜ್ ಅಕ್ಷರಶಃ ನಿಜವಾಗಿಸಿದ್ದಾರೆ. ಹುಟ್ಟುತ್ತಲೇ ಅಂಟಿಕೊಂಡ ಅಂಗವೈಕಲ್ಯಕ್ಕೆ ಅವರು ಕೊರಗಿ ಕುಳಿತುಕೊಳ್ಳಲಿಲ್ಲ. ಬದಲಿಗೆ, ಸವಾಲಿನ ಬದುಕನ್ನೇ ಬದಲಿಸಿ ಸಾಧನೆಯ ಮೆಟ್ಟಿಲುಗಳನ್ನು ಏರಿ ನಿಂತವರ ಸಾಲಿನಲ್ಲಿ ಅವರೀಗ ನಿಂತಿದ್ದಾರೆ. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಅವರು ಈ ಬಾರಿ ಪ್ಯಾರಿಸ್‌ನಲ್ಲೂ ಪದಕ ಗೆಲ್ಲಲು ಸಜ್ಜಾಗಿದ್ದಾರೆ. ಸುಹಾಸ್ ಸದ್ಯ ಉತ್ತರಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಮೂಲತಃ ಅವರು ಕನ್ನಡಿಗರು ಎನ್ನುವುದು ವಿಶೇಷ.
ಹುಟ್ಟುವಾಗಲೇ ಕಾಲಿನ ನ್ಯೂನತೆ
ಯತಿರಾಜ್ ಎಲ್.ಕೆ.-ಜಯಶ್ರೀ ದಂಪತಿಯ ಪುತ್ರನಾಗಿ ಸುಹಾಸ್ ಲಲಿನಾಕೆರೆ ಯತಿರಾಜ್, 1983ರಲ್ಲಿ ಹಾಸನದಲ್ಲಿ ಜನಿಸಿದರು. ಬೆಳೆದದ್ದು, ಹೆಚ್ಚಿನ ಶಿಕ್ಷಣ ಮುಗಿಸಿದ್ದೆಲ್ಲ ಶಿವಮೊಗ್ಗ ಜಿಲ್ಲೆಯಲ್ಲಿ. ಹುಟ್ಟುವಾಗಲೇ ಸುಹಾಸ್‌ಗೆ ಬಲಗಾಲಿನ ಪಾದದ ನ್ಯೂನತೆಯಿತ್ತು.
ಉತ್ತರಪ್ರದೇಶದಲ್ಲಿ ಜಿಲ್ಲಾಧಿಕಾರಿ
ಮಂಗಳೂರಿನ ಸುರತ್ಕಲ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉನ್ನತ ಶ್ರೇಣಿಯೊಂದಿಗೆ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಪದವಿ ಪಡೆದ, ಸುಹಾಸ್ ಐಎಎಸ್ ಕೂಡ ಮುಗಿಸಿದರು. ಉತ್ತರಪ್ರದೇಶದ ಮಹಾರಾಜ್‌ಗಂಜ್, ಹತ್ರಾಸ್ ಮೊದಲಾದೆಡೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಅವರು ಉತ್ತರಪ್ರದೇಶದ ಕ್ರೀಡಾ ಕಾರ್ಯದರ್ಶಿಯಾಗಿದ್ದಾರೆ.
“ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದೆ. ಈ ಬಾರಿ ದೇಶಕ್ಕೆ ಬಂಗಾರ ಗೆಲ್ಲಲು ಶಕ್ತಿ ಮೀರಿ ಪ್ರಯತ್ನಿಸುವೆ. ಆದರೆ ಅಂತಿಮ ಫಲ ದೇವರಿಗೆ ಬಿಟ್ಟಿದ್ದು. ಕ್ರೀಡೆಯಲ್ಲಿ ನಾವು ನಮ್ಮ ಪ್ರಯತ್ನ ಮಾಡಬಹುದಷ್ಟೇ…’
– ಸುಹಾಸ್ ಎಲ್.ವೈ.
2016ರಲ್ಲಿ ವೃತ್ತಿಪರ ಕ್ರೀಡೆಗೆ ಪ್ರವೇಶ
“ಬಾಲ್ಯದಿಂದಲೂ ನನಗೆ ಕ್ರೀಡೆಯಲ್ಲಿ ಆಸಕ್ತಿಯಿತ್ತು. ಆರಂಭದಲ್ಲಿ ಬ್ಯಾಡ್ಮಿಂಟನ್ ಮತ್ತು ಬೇರೆ ಕ್ರೀಡಾ ಸ್ಪರ್ಧೆಗಳಲ್ಲಿ ಖುಷಿಗಾಗಿ ಆಡುತ್ತಿದ್ದೆ. ಆದರೆ ಬೆಳೆಯುತ್ತ ಹೋದಂತೆ ಬ್ಯಾಡ್ಮಿಂಟನ್ ಮೇಲೆ ಆಸಕ್ತಿ ಹೆಚ್ಚಿತು. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ 2016ರಲ್ಲಿ ಬೀಜಿಂಗ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಬಂಗಾರ ಗೆದ್ದೆ. ಇದು ನನ್ನ ವೃತ್ತಿಪರ ಕ್ರೀಡೆಯಲ್ಲಿ ಲಭಿಸಿದ ಮೊದಲ ಶ್ರೇಷ್ಠ ಪದಕ. ಹಾಗೆ ಆರಂಭವಾದ ನನ್ನ ಕ್ರೀಡಾ ಬದುಕು, ಈಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ವರೆಗೂ ತಲುಪಿದೆ’ ಎಂದು ಸುಹಾಸ್ ಕ್ರೀಡಾ ದಿನಗಳನ್ನು ನೆನಪಿಸಿಕೊಂಡರು.
3 ಚಿನ್ನ ಸೇರಿ 5 ಪದಕ ಗೆದ್ದ ಸಾಧನೆ
2016ರ ಬೀಜಿಂಗ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರ, 2018ರ ಜಕಾರ್ತಾ ಏಷ್ಯನ್ ಪ್ಯಾರಾ ಗೇಮ್ಸ್ ತಂಡ ಸ್ಪರ್ಧೆಯಲ್ಲಿ ಕಂಚು ಗೆದ್ದ ಸಾಧನೆ ಸುಹಾಸ್ ಅವರದ್ದಾಗಿದೆ. 2021ರ ಟೋಕಿಯೊ ಪ್ಯಾರಾಲಿಂಪಿಕ್ಸ್ ಸಿಂಗಲ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ ಸುಹಾಸ್, ಪ್ಯಾರಾಲಿಂಪಿಕ್ಸ್ ಪದಕ ಗೆದ್ದ ದೇಶದ ಮೊದಲ ಐಎಎಸ್ ಅಧಿಕಾರಿಯಾಗಿದ್ದಾರೆ. 2022ರ ಹ್ಯಾಂಗ್‌ಝೂ ಏಷ್ಯನ್ ಪ್ಯಾರಾ ಗೇಮ್ಸ್ ಹಾಗೂ 2024ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರ ಜಯಿಸಿದ್ದಾರೆ.
· ಎಸ್. ಸದಾಶಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.