Weight gain: ಕ್ರೀಡಾಳುಗಳಲ್ಲಿ ತೂಕ ಗಳಿಕೆ- ದೈಹಿಕ, ಮಾನಸಿಕ ಪರಿಣಾಮಗಳ ನಿರ್ವಹಣೆ
Team Udayavani, Sep 1, 2024, 10:58 AM IST
ಭಾರತೀಯ ಕುಸ್ತಿ ಪಟು ವಿನೇಶ್ ಪೋಗಾಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನ ಫೈನಲ್‌ಗೇರಿಯೂ ಅಧಿಕ ದೇಹತೂಕದಿಂದಾಗಿ ಅನರ್ಹಗೊಂಡು ಪದಕ ತಪ್ಪಿಸಿಕೊಂಡ ಬಳಿಕ ಆ್ಯತ್ಲೀಟ್‌ಗಳಲ್ಲಿ ದೇಹತೂಕ ನಿರ್ವಹಣೆಯ ವಿಷಯ ಹಠಾತ್ತಾಗ ಜನರ ಗಮನ ಸೆಳೆದಿದೆ.
ತಮ್ಮ ತಮ್ಮ ಆಯ್ಕೆಯ ಕ್ರೀಡೆಯಲ್ಲಿ ತರಬೇತಿ ಪಡೆದು ಸಾಧನೆ ಮಾಡುವುದರ ಜತೆಗೆ ಕುಸ್ತಿ, ಜುಡೋ, ವೈಟ್ ಲಿಫ್ಟಿಂಗ್, ಬಾಕ್ಸಿಂಗ್, ರೋವಿಂಗ್ ಮತ್ತು ಕುದುರೆ ಸವಾರಿಯಂತಹ ಕ್ರೀಡಾಳುಗಳು ತಮ್ಮ ತಮ್ಮ ವಿಭಾಗದಲ್ಲಿ ಸ್ಪರ್ಧಿಸಲು ಅರ್ಹರಾಗುವುದಕ್ಕಾಗಿ ದೇಹತೂಕವನ್ನು ಕಟ್ಟುನಿಟ್ಟಾಗಿ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ.
ಕೆಲವೊಮ್ಮೆ ಪಂದ್ಯಕ್ಕಿಂತ ಕೆಲವೇ ತಾಸು ಮುನ್ನ ಕಠಿನ ತೂಕ ಇಳಿಕೆಯ ಕಸರತ್ತಿನ ಮೂಲಕ ತೂಕ ಇಳಿಸಿಕೊಂಡು ತಮ್ಮ ಸಾಮಾನ್ಯ ತೂಕ ವಿಭಾಗಕ್ಕಿಂತ ಕೆಳಗಿನ ವಿಭಾಗದಲ್ಲಿ ಆಡಲು ಇಳಿದು ಪ್ರಯೋಜನ ಪಡೆಯಲು ಪ್ರಯತ್ನಿಸುತ್ತಾರೆ. ಆಹಾರ ನಿಯಂತ್ರಣ, ದ್ರವಾಹಾರ ನಿಯಂತ್ರಣ, ತೀವ್ರ ತರಹದ ವ್ಯಾಯಾಮಗಳಲ್ಲಿ ತೊಡಗಿಕೊಳ್ಳುವುದರ ಜತೆಗೆ ಬೆವರುವಿಕೆಯ ಮೂಲಕ ದೇಹದಿಂದ ದ್ರವಾಂಶ ಕಡಿಮೆಗೊಳಿಸಿಕೊಳ್ಳುವುದು ಇಂತಹ ತೂಕ ಇಳಿಸಿಕೊಳ್ಳುವ ಕಾರ್ಯತಂತ್ರಗಳಲ್ಲಿ ಕೆಲವು. ದೀರ್ಘಕಾಲೀನ ಪ್ರಕ್ರಿಯೆಯಾಗಿರಲಿ, ತತ್ಕಾಲೀನ ಪ್ರಕ್ರಿಯೆಯಾಗಿರಲಿ, ದೇಹತೂಕ ನಿಯಂತ್ರಣವು ಹಲವಾರು ಸವಾಲುಗಳನ್ನು ಕುಂದುಕೊರತೆಗಳನ್ನು ಹೊಂದಿದೆ.
ಕಠಿನ ಆಹಾರ ನಿಯಂತ್ರಣ ಮತ್ತು ತೀವ್ರ ತರಹದ ವ್ಯಾಯಾಮಗಳ ಮೊರೆ ಹೊಕ್ಕರೂ ವಂಶವಾಹಿ, ನಿದ್ದೆಯ ಗುಣಮಟ್ಟ, ಅತಿಯಾದ ಒತ್ತಡ, ಹೊಟ್ಟೆಯ ಆರೋಗ್ಯ ಕೆಟ್ಟಿರುವುದು ಹಾಗೂ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ (ಪಿಸಿಒಎಸ್), ಥೈರಾಯ್ಡ ಸಂಬಂಧಿ ತೊಂದರೆಗಳಂತಹ ಕೆಲವು ಅನಾರೋಗ್ಯಗಳು ತೂಕ ಗಳಿಕೆಗೆ ಕಾರಣವಾಗಬಹುದು.
ಜಾಗತಿಕ ಮಾರುಕಟ್ಟೆಯಲ್ಲಿ ವೈವಿಧ್ಯಮಯವಾದ ತೂಕ ನಿರ್ವಹಣೆಯ ಉತ್ಪನ್ನಗಳು ಲಭ್ಯವಿದ್ದು, ಸರಿಯಾದ ಸಮಯಕ್ಕೆ ತೂಕ ನಿರ್ವಹಣೆ ಮಾಡಿಕೊಳ್ಳುವುದಕ್ಕಾಗಿ ಆ್ಯತ್ಲೀಟ್‌ಗಳು ಇವುಗಳ ಬಳಕೆ ಮಾಡುವಂತಹ ಶಾರ್ಟ್‌ಕಟ್ ವಿಧಾನಗಳನ್ನು ಅನುಸರಿಸುವುದೂ ಇದೆ. ತೂಕ ಗಳಿಕೆ ಅಥವಾ ಇಳಿಕೆ ಕಿರು ಅವಧಿಯಲ್ಲಿ ತೀವ್ರವಾಗಿ ನಡೆದರೆ ಅದು ಕ್ರೀಡಾಳುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾಗಿದೆ.
ಕೊಲೆಸ್ಟರಾಲ್, ರಕ್ತದ ಒತ್ತಡ, ರಕ್ತದಲ್ಲಿ ಸಕ್ಕರೆಯಂಶ ಕಡಿಮೆಗೊಳಿಸುವುದು ಮತ್ತು ಆ ಮೂಲಕ ಕಾರ್ಡಿಯೊವಾಸ್ಕಾಲರ್ ಅನಾರೋಗ್ಯಗಳ ಅಪಾಯದಿಂದ ಪಾರಾಗಲು 3 ತಿಂಗಳುಗಳ ಅವಧಿಯಲ್ಲಿ ಶೇ. 5ರಿಂದ 10ರಷ್ಟು ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳುವುದನ್ನು ವೈದ್ಯರು ಕೂಡ ಶಿಫಾರಸು ಮಾಡುತ್ತಾರೆ.
ದೇಹ ತೂಕ ಕಡಿಮೆ ಮಾಡಿಕೊಳ್ಳುವುದರಿಂದ ದೈಹಿಕ ಆರೋಗ್ಯ ಚೆನ್ನಾಗಿರುವುದು ಮಾತ್ರವಲ್ಲದೆ ಆತ್ಮವಿಶ್ವಾಸ, ಕಾರ್ಯನಿರ್ವಹಣೆಯ ಸಾಮರ್ಥ್ಯ, ಲೈಂಗಿಕ ಆರೋಗ್ಯ ಉತ್ತಮಗೊಳ್ಳುತ್ತದೆಯಲ್ಲದೆ ಒಟ್ಟು ಒತ್ತಡ ಕಡಿಮೆಯಾಗುತ್ತದೆ.
ಆದರೆ ವಾರಕ್ಕೆ 0.5 ಕಿಲೊಗ್ರಾಂಗಿಂತ ಹೆಚ್ಚು ತೂ ಕಡಿಮೆಯಾಗುವುದು ಒಳ್ಳೆಯದಲ್ಲ. ದೇಹತೂಕದಲ್ಲಿ ಹಠಾತ್ ಇಳಿಕೆ ವ್ಯಕ್ತಿಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಲ್ಲುದು. ಹಠಾತ್ ತೀವ್ರ ತೂಕ ಇಳಿಕೆಯಿಂದ ಎಲುಬುಗಳು ದುರ್ಬಲವಾಗಬಹುದು, ನರಗಳಿಗೆ ಹಾನಿ ಉಂಟಾಗಬಹುದು, ಸ್ನಾಯು ದೌರ್ಬಲ್ಯ ಮತ್ತು ಸೆಳೆತ ಕಾಣಿಸಿಕೊಳ್ಳಬಹುದು, ಹೃದಯ ಬಡಿತದ ಗತಿಯಲ್ಲಿ ಏರುಪೇರು ಉಂಟಾಗಬಹುದು ಮತ್ತು ಆಗಾಗ ಮೂರ್ಛೆ ತಪ್ಪಬಹುದಾಗಿದೆ.
ತೂಕ ಕಡಿಮೆ ಮಾಡಿಕೊಳ್ಳಲು ವಾಂತಿ ಮಾಡಿಕೊಳ್ಳುವ ಅಥವಾ ಭೇದಿಯ ಮೊರೆ ಹೋಗಿದ್ದರೆ ಕರುಳಿಗೆ ಹಾನಿ, ಜಠರ ಸೀಳುವುದು ಮತ್ತು ಅನ್ನನಾಳಕ್ಕೆ ಗಾಯ ಕೂಡ ಉಂಟಾಗಬಹುದು. ಕೆಲವೊಮ್ಮೆ ಇದರಿಂದ ನಮ್ಮ ರೋಗ ನಿರೋಧಕ ಶಕ್ತಿಯಲ್ಲಿ ವ್ಯತ್ಯಯ ಉಂಟಾಗಿ ಸೋಂಕುಗಳಿಗೆ ತುತ್ತಾಗುವ ಅಪಾಯ ಹೆಚ್ಚಬಹುದು. ತೂಕ ಇಳಿಕೆಯ ಉದ್ದೇಶದ ಕೆಲವು ಉತ್ತನ್ನಗಳ ಬಳಕೆಯಿಂದ ಮೂತ್ರಪಿಂಡಗಳಿಗೆ ಹಾನಿಯಾಗಬಹುದು.
ಜತೆಗೆ ಏಕಾಗ್ರತೆ ಕಡಿಮೆ, ಗೊಂದಲ, ಸಿಟ್ಟು, ಮಾನಸಿಕ ದಣಿವು, ಚಿಂತೆ ಮತ್ತು ಮಾನಸಿಕ ಒತ್ತಡಗಳಂತಹ ಮಾನಸಿಕ ಅಡ್ಡ ಪರಿಣಾಮಗಳು ಕೂಡ ಬಾಧಿಸಬಹುದಾಗಿದೆ. ಹೀಗಾಗಿ ತೂಕ ಇಳಿಸಿಕೊಳ್ಳುವಂತಹ ಸಂದರ್ಭಗಳಲ್ಲಿ ಅನುಸರಣೆಗಾಗಿ ಗುಣಮಟ್ಟದ ಪೌಷ್ಟಿಕಾಂಶ ಶಿಕ್ಷಣ ಮತ್ತು ಸುರಕ್ಷಿತ ತೂಕ ಇಳಿಕೆಯ ಕ್ರಮ ಮತ್ತು ವಿಧಾನಗಳ ಬಗ್ಗೆ ಕ್ರೀಡಾಳುಗಳಿಗೆ ತಿಳಿವಳಿಕೆ ಒದಗಿಸುವುದು ಮೊದಲ ಆದ್ಯತೆಯಾಗಬೇಕು.
ಇಂತಹ ವಿಷಯಗಳಲ್ಲಿ ಆ್ಯತ್ಲೀಟ್‌ಗಳಿಗೆ ವೃತ್ತಿಪರ ಪಥ್ಯಾಹಾರ ತಜ್ಞರು ಮತ್ತು ಆರೋಗ್ಯ ಸೇವಾಪೂರೈಕೆದಾರರ ಸಹಾಯ ಸಿಗಬೇಕು. ಸ್ಪರ್ಧೆಗೆ ಮುನ್ನ ಆದರ್ಶ ದೇಹತೂಕವನ್ನು ಕಾಪಾಡಿಕೊಳ್ಳುವುದಕ್ಕಾಗಿ ಸರಿಯಾದ ಆಹಾರ ಕ್ರಮ ಪಾಲಿಸುವುದು, ಉಪ್ಪಿನಂಶ ಸೇವನೆಯನ್ನು ಕಡಿಮೆಗೊಳಿಸುವುದು, ಸುರಕ್ಷಿತ ಮಿತಿಯಲ್ಲಿ ದ್ರವಾಹಾರ ನಿಯಂತ್ರಣದ ಜತೆಗೆ ವಿಟಮಿನ್ ಮತ್ತು ಪೌಷ್ಟಿಕಾಂಶ ಸರಿಯಾದ ಪ್ರಮಾಣದಲ್ಲಿ ಒದಗುವುದನ್ನು ಖಾತರಿಪಡಿಸಿಕೊಳ್ಳಬೇಕು.
ಇವೆಲ್ಲವುಗಳ ಜತೆಗೆ ಒತ್ತಡದ ಸಂದರ್ಭದಲ್ಲಿ ಭಾವನೆಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಲು, ಒತ್ತಡದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುವಂತೆ ಮಾನಸಿಕ ತರಬೇತಿ ಪಡೆಯುವುದು ಹಾಗೂ ಪ್ರದರ್ಶನವನ್ನು ಚೆನ್ನಾಗಿ ನಡೆಸಲು, ಸದಾ ಸ್ಪೂರ್ತಿಯುತರಾಗಿ ಇರಲು ಮಾನಸಿಕ ತಂತ್ರಗಳನ್ನುಕಲಿತುಕೊಳ್ಳುವುದರ ಜತೆಗೆ ಪರಿಣಾಮಕಾರಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯ.
–ಡಾ| ಕೃತಿಶ್ರೀ ಸೋಮಣ್ಣ
ಸೈಕಿಯಾಟ್ರಿಸ್ಟ್, ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ,
ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.