Ganesha Festival: ನಿಷೇಧವಿದ್ರೂ ಮಾರುಕಟ್ಟೆಗೆ ಪಿಒಪಿ ಗಣಪ
Team Udayavani, Sep 1, 2024, 11:51 AM IST
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಆದರೆ, ಆಕರ್ಷಣೆ, ಆಡಂಬರಕ್ಕೆ ಮಾರು ಹೋಗಿ ಬ್ಯಾನ್ ಆಗಿರುವ ಪಿಒಪಿ ಗಣೇಶನನ್ನು ಆರಾಧಿಸುವುದು ಈ ವರ್ಷವೂ ಪುನರಾವರ್ತನೆ ಆಗಿದೆ. ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮುನ್ನ ಅದು ಮಣ್ಣಿನದಾಗಿರಲಿ, ವಿಷಕಾರಿ ಬಣ್ಣ ಬಳಿದ ಗಣೇಶ ಬೇಡ ಎಂಬ ದೃಢ ಸಂಕಲ್ಪ ತಳೆಯಬೇಕಿದೆ. ಆಚರಣೆ, ಸಂಪ್ರದಾಯದ ಪ್ರಕಾರ ಗಣೇಶಮೂರ್ತಿ ನೀರಿನಲ್ಲಿ ಮುಳುಗಿದರೆ ಮಾತ್ರ ಪೂರ್ಣ ಪ್ರಮಾಣ ದಲ್ಲಿ ಪೂಜಾ ಕೈಂಕರ್ಯ ನೆರವೇರಿ ದಂತಾಗುತ್ತದೆ. ಪಿಒಪಿ ಮೂರ್ತಿಗಳು ನೀರಿನಲ್ಲಿ ಮುಳುಗದೇ ತೇಲುತ್ತಿರುತ್ತವೆ. ಹೀಗಾಗಿ ಪಿಒಪಿ ಗಣೇಶ ಮೂರ್ತಿ ಸಂಪ್ರದಾಯಕ್ಕೂ ವಿರುದ್ಧ ಎಂಬುದು ಬಹುತೇಕ ಆಧ್ಯಾತ್ಮಿಕ ಚಿಂತಕರ ಅಭಿಪ್ರಾಯ.
ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿವೆ ಪಿಒಪಿ ಮೂರ್ತಿ: ಪಿಒಪಿ ಗಣೇಶಮೂರ್ತಿ ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸಾರ್ವಜನಿಕರು ಇದರ ಖರೀದಿಗೆ ಮುಂದಾಗಿದ್ದಾರೆ. ನೂರಾರು ಗಣೇಶ ಮೂರ್ತಿ ಪ್ರತಿಷ್ಠಾಪಕರು, ಸಮಿತಿಗಳು ಸಾರ್ವಜನಿಕ ಗಣೇಶೋತ್ಸವ ಸಮಾರಂಭಗಳಲ್ಲಿ ಜನರನ್ನು ಆಕರ್ಷಿಸಲು ಈಗಾಗಲೇ ಬಣ್ಣ-ಬಣ್ಣದ ಪಿಒಪಿ ಗಣೇಶ ಮೂರ್ತಿ ನೋಂದಣಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.
ಹತ್ತಾರು ಸಂಘ-ಸಂಸ್ಥೆಗಳು ಸಹ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಮುಂದಾಗಿವೆ. ಕೆಎಸ್‌ಪಿಸಿಬಿ ಅಧಿಕಾರಿಗಳ ತಂಡಗಳು ಇಂತಹ ಸಾರ್ವಜನಿಕ ಸಮಾರಂಭದಲ್ಲಿ ರಾರಾಜಿಸುವ ಗಣೇಶನ ವಿಗ್ರಹಗಳ ಮೇಲೆ ನಿಗಾ ಇಡಲು ವಿಶೇಷ ತಂಡ ರಚಿಸಿದೆ.
ಪಿಒಪಿ ರಾಸಾಯನಿಕ ಆರೋಗ್ಯಕ್ಕೆ ಮಾರಕ: ಪಿಒಪಿ ಗಣೇಶಮೂರ್ತಿಯನ್ನು ನದಿ, ಕೆರೆ, ಮನೆಯಲ್ಲಿ ನಾವು ಬಳಸುವ ನೀರಿಗೆ ಮಿಶ್ರಣ ಮಾಡಿದರೆ ವಿವಿಧ ಮೂಲಗಳಿಂದ ಇದರಲ್ಲಿರುವ ರಾಸಾಯನಿಕವು ನಮ್ಮ ದೇಹ ಸೇರುವ ಸಾಧ್ಯತೆಗಳೇ ಹೆಚ್ಚು. ಈ ರಾಸಾಯನಿಕವು ಕ್ಯಾನ್ಸರ್‌ನಂತಹ ಮಾರಾಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಲೆಡ್, ಕಾಪರ್‌ಗಳಿಂದ ಕಿಡ್ನಿಗೆ ಹಾನಿಯಾದರೆ, ಕಲುಷಿತ ನೀರಿನಿಂದ ಚರ್ಮರೋಗ ಉಂಟಾಗಲಿದೆ. ಪಿಒಪಿ ರಾಸಾಯನಿಕ ಮಿಶ್ರಣಗೊಂಡ ನೀರು ಪ್ರಾಣಿ-ಪಕ್ಷಿ ಸಂಕುಲಕ್ಕೂ ಅಪಾಯಕಾರಿ. ಒಟ್ಟಾರೆ ಪಿಒಪಿ ಪರಿಸರ ನಾಶಕ್ಕೆ ಬುನಾದಿಯಾಗಿದೆ ಎನ್ನುತ್ತಾರೆ ಕೆಎಸ್ ಪಿಸಿಬಿ(ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ)ಯ ಹಿರಿಯ ಪರಿಸರ ಅಧಿಕಾರಿ ಯತೀಶ್.
ಪಿಒಪಿ ಗಣಪತಿ ಏಕೆ ಮಾರಕ?:
ಅಪಾಯಕಾರಿ ರಾಸಾಯನಿಕಗಳಾದ ಜಿಪ್ಸಂ, ಸಲ್ಫರ್, ರಂಜಕ, ಮೆಗ್ನೀಷಿಯಂ, ಪಾದರಸ, ಸೀಸ, ಕ್ಯಾಡ್ಮಿಯಮ್, ಕಾರ್ಬನ್, ಆರ್ಸಿನಿಕ್, ಮರ್ಕ್ಯೂರಿ, ಸೀಸ, ಝಿಂಕ್, ಕಾಪರ್‌ಗಳಿಂದ ಪಿಒಪಿ ಗಣೇಶ ಮೂರ್ತಿ ನಿರ್ಮಿಸಲಾಗುತ್ತದೆ. ಇದರಲ್ಲಿರುವ ಈ ರಾಸಾಯನಿಕಗಳು ನೀರಿನಲ್ಲಿ ಕರಗಲು ಹಲವು ತಿಂಗಳುಗಳೇ ಬೇಕಾಗುತ್ತದೆ. ಸರೋವರ, ಕೊಳಗಳು, ನದಿಗಳು ಮತ್ತು ಸಮುದ್ರಗಳ ನೀರನ್ನು ವಿಷಪೂರಿತಗೊಳಿಸುತ್ತದೆ. ಗಣೇಶಮೂರ್ತಿ ಅಲಂಕಾರಕ್ಕೆ ಪಾದರಸ, ಸೀಸ, ಕ್ಯಾಡ್ಮಿಯಮ್, ಕಾರ್ಬನ್ ರಾಸಾಯನಿಕ ಬಣ್ಣ ಬಳಸಲಾಗುತ್ತದೆ. ಇದು ನೀರಿನಲ್ಲಿ ಆಮ್ಲತೆ, ಲೋಹ ಅಂಶಗಳನ್ನು ಹೆಚ್ಚಿಸುತ್ತದೆ. ಇದರಿಂದ ಜಲಚರಗಳು ಸಾಯುವುದರ ಜೊತೆಗೆ ನೀರಿನ ಗಡಸುತನ ಹೆಚ್ಚಾಗಿ ನೈಸರ್ಗಿಕ ಹರಿವಿಗೆ ತೊಂದರೆಯಾಗುತ್ತದೆ. ಇದರಿಂದ ಹಾನಿಕಾರಕ ಕೀಟಗಳ ಉತ್ಪತ್ತಿಯಾಗುತ್ತದೆ ಎಂದು ಪರಿಸರ ತಜ್ಞರು ಮಾಹಿತಿ ನೀಡಿದ್ದಾರೆ.
ಪಿಒಪಿ ಬದಲಿಗೆ ಬಂದಿದೆ ಪೇಪರ್ ಗಣೇಶ ಮೂರ್ತಿ: ಪಿಒಪಿ ಗಣಪತಿ ಬದಲಿಗೆ ಇದೀಗ ಪೇಪರ್ ಗಣಪತಿ ಮೂರ್ತಿ ಮಾರುಕಟ್ಟೆಗೆ ಬಂದಿದೆ. ದಪ್ಪದಾದ ಪೇಪರ್‌ಗೆ ವೈಟ್ ಸಿಮೆಂಟ್, ಕೆಲವು ರಾಸಾಯನಿಕ ಮಿಶ್ರಣ ಮಾಡಿ ಗಣೇಶ ಮೂರ್ತಿ ನಿರ್ಮಿಸಲಾಗುತ್ತಿದೆ. ಇನ್ನು ಪೇಪರ್ ಗಣೇಶ ಮೂರ್ತಿ ದೊಡ್ಡ ಗಾತ್ರದಲ್ಲಿದ್ದರೂ ಬಹಳ ಹಗುರವಾಗಿರುವುದು ಇದರ ವಿಶೇಷತೆಯಾಗಿದೆ. ಇದು ಕೆಎಸ್‌ಪಿಸಿಬಿ ಕೆಂಗಣ್ಣಿಗೆ ಗುರಿಯಾಗಿದೆ. ಮುಂದಿನ ವರ್ಷದಿಂದ ಮಣ್ಣಿನ ಗಣಪತಿ ಹೊರತುಪಡಿಸಿ ಬೇರೆ ಯಾವುದೇ ಗಣೇಶಮೂರ್ತಿ ಮೂರ್ತಿ ತಯಾರಿಕೆಗೆ ಅವಕಾಶ ಕಲ್ಪಿಸದಂತೆ ಸರ್ಕಾರಕ್ಕೆ ಪತ್ರ ಬರೆಯಲು ಚಿಂತಿಸಲಾಗಿದೆ.
ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರೆ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಪ್ರತಿ ವರ್ಷದಂತೆ ಪಿಒಪಿ ಗಣೇಶನ ಮೂರ್ತಿ ಮಾರಾಟ, ಪ್ರತಿಷ್ಠಾಪನೆ ಕಂಡು ಬಂದರೆ ಕೆಎಸ್‌ಪಿಸಿಬಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ. ಮನೆ ಮನೆಗಳಲ್ಲಿ ಕಸ ಸಂಗ್ರಹಿಸುವ ವಾಹನಗಳಿಗೆ ಮೈಕ್ ಅಳವಡಿಸಿ ಮಣ್ಣಿನ ಗಣಪತಿ ಮೂರ್ತಿಗಳನ್ನೇ ಪೂಜಿಸಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ. –ಯತೀಶ್, ಹಿರಿಯ ಪರಿಸರ ಅಧಿಕಾರಿ, ಕೆಎಸ್‌ಪಿಸಿಬಿ.
ಜಲಚರಗಳ ಸಾವಿಗೆ ಕಾರಣವಾಗುವ, ಜಲ ಮೂಲಗಳನ್ನು ಕಲುಷಿತಗೊಳಿಸುವ ರಾಸಾಯನಿಕ ಬಣ್ಣ ಲೇಪಿತ ಪಿಒಪಿ ಗಣೇಶ ಮೂರ್ತಿ ಪೂಜೆ ಮಾಡುವುದಿಲ್ಲ. ಬದಲಾಗಿ ಸಣ್ಣ ಮಣ್ಣಿನ ಪರಿಸರ ಸ್ನೇಹಿ ಗಣಪನನ್ನೇ ತಂದು ಪೂಜಿಸಿ, ಮನೆಯಲ್ಲೇ ವಿಸರ್ಜಿಸಿ ಆ ನೀರನ್ನು ಮರ-ಗಿಡಗಳಿಗೆ ಹಾಕುತ್ತೇನೆ ಎಂದು ಸಂಕಲ್ಪ ಮಾಡೋಣ.–ಈಶ್ವರ ಬಿ.ಖಂಡ್ರೆ, ಸಚಿವ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ
-ಅವಿನಾಶ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.