Father: ನಾ ಕಂಡ ಮೊದಲ ಜೀವ
Team Udayavani, Sep 4, 2024, 5:54 PM IST
ಬದುಕು ಎನ್ನುವುದು ಸಾಧ್ಯ, ಅಸಾಧ್ಯಗಳ ನಡುವೆ ಇರುವ ಹೋರಾಟ. ಬದುಕಿನಲ್ಲಿ ಒಬ್ಬಂಟಿಯಾಗಿದ್ದರೆ ಅರ್ಥವಿಲ್ಲ, ಹಾಗಂತ ಸಂಸಾರಸ್ಥ ಬದುಕಿಗೂ ಅರ್ಥವಿಲ್ಲ. ಜೀವನದಲ್ಲಿ ಹೆಣ್ಣಾಗಿ ಹುಟ್ಟಿದ ಮೇಲೆ ಅವಳು ತಾಯಿ ಆಗಲೇ ಬೇಕು, ಗಂಡಾಗಿ ಹುಟ್ಟಿದ ಮೇಲೆ ಆತ ತಂದೆ ಆಗಲೇಬೇಕು ಇಲ್ಲವಾದಲ್ಲಿ ಏನೋ ಒಂದು ಪಾಠ ಕಲಿಯದಂತೆ.
ತಾಯಿ ಆದವಳು 9 ತಿಂಗಳ ನೋವಿನ ಜತೆ ಮಗುವನ್ನು ಹೆತ್ತರೆ ತಂದೆಯಾದವನು ಅದೇ ಮಗುವನ್ನು ಜೀವನವಿಡೀ ಕಾಪಾಡುತ್ತಾನೆ. ಒಬ್ಬ ತಾಯಿಗೆ ಗಂಡು ಮಗು ಜನಿಸಲಿ ಎಂದು ಮನಸಿನಲ್ಲಿ ತುಂಬಾ ಆಸೆ ಇರುತ್ತದೆ. ಮಗು ತನ್ನ ಅಪ್ಪನಂತೆಯೋ, ಗಂಡನಂತೆಯೋ ಇರಲಿ ಎಂದು ಆಶಿಸುತ್ತಿರುತ್ತಾಳೆ. ಅದೇ ತಂದೆಯಾದವನಿಗೆ ಒಂದು ಹೆಣ್ಣು ಮಗು ಇದ್ದರೆ ಸಾಕು ಎಂಬ ಆಸೆ ಇರುತ್ತದೆ.
ಯಾರು ಒಂದು ಹೆಣ್ಣು ಮನೆಯ ನಂದಾದೀಪ ಎಂದು ತಿಳಿದಿರುತ್ತಾನೋ ಅಂಥವರಿಗೆ ಮಾತ್ರ ಭಗವಂತ ಹೆಣ್ಣು ಮಗು ಕರುಣಿಸುತ್ತಾನೆ. ದೇವರಿಗೆ ಯಾರ ಮನೆ ಇಷ್ಟವಾಗುತ್ತದೆಯೋ ಅಂತವರ ಮನೆಯಲ್ಲಿ ಮಾತ್ರ ಹೆಣ್ಣು ಮಗಳನ್ನು ಕೊಡುತ್ತಾನೆ ಎನ್ನುವ ಮಾತಿದೆ. ಅದರಲ್ಲೂ ಅಪ್ಪ ಮಗಳ ಭಾಂದವ್ಯ ನೋಡಲು ಇನ್ನೂ ಸೊಗಸು.
ಮಗನಿಗೆ ಅಮ್ಮನ ಮೇಲೆ ಪ್ರೀತಿ ಜಾಸ್ತಿ, ಮಗಳಿಗೆ ಅಪ್ಪನ ಮೇಲೆ ಪ್ರೀತಿ ಜಾಸ್ತಿ. ಆದರೆ ಅಪ್ಪನಾದವನು ಎಲ್ಲಿಯೂ ತಾರತಮ್ಯ ಮಾಡುವುದಿಲ್ಲ. ಮಗನ ಮೇಲೆ ಪ್ರೀತಿ ತೋರಿಸಿದರೆ ಎಲ್ಲಿ ಮಗ ಕೆಟ್ಟು ಹೋಗುತ್ತಾನೋ ಎನ್ನುವ ಭಯ. ಬೆಟ್ಟದಷ್ಟು ಪ್ರೀತಿ ಇದ್ದರೂ ತೋರಿಸಲಾರ ಅದೇ ಅಮ್ಮನಿಗೆ ಮಗಳ ಮೇಲೆ ಜಾಸ್ತಿ ಪ್ರೀತಿ ನೀಡಿದರೆ ಹೋದ ಮನೆಯಲ್ಲಿ ಹೇಗೆ ಇರುತ್ತಾಳೆ ಎನ್ನುವ ಭಯ ಅದಕ್ಕೆ ಬೈದು, ಕೆಲಸ ಮಾಡಿಸಿ ತಿದ್ದಿ ಬುದ್ಧಿ ಹೇಳುತ್ತಾಳೆ. ಎಷ್ಟು ವಿಚಿತ್ರ ಅಲ್ಲ ದೇವರ ಸೃಷ್ಟಿ. ಇಲ್ಲಿ ಒಂದು ಸಾಮ್ಯತೆ ಇದೆ ಹೆಣ್ಣಿಗೆ ಹೆಣ್ಣಿನ ಮನಸ್ಸು ಗೊತ್ತು ಗಂಡಿಗೆ ಗಂಡಿನ ಮನಸ್ಸು ಗೊತ್ತು ಅಷ್ಟೇ.
ಒಂದು ಹೆಣ್ಣು ತನ್ನ ತಂದೆಯ ಮೇಲೆ ಅಪಾರ ಗೌರವ ಇಟ್ಟಿರುತ್ತಾಳೆ, ಅದೇ ತಂದೆ ಮಗಳ ಮೇಲೆ ಬೆಟ್ಟದಷ್ಟು ಪ್ರೀತಿ ತೋರುತ್ತಾನೆ. ಅವಳ ನಗು, ತುಂಟತನ, ಕೋಪ, ಆಸೆ, ಹುಚ್ಚಾಟ ಎಲ್ಲವನ್ನೂ ಪ್ರೀತಿಸುವವನೆ ತಂದೆ.
ಮಗಳಿಗೆ ಅಮ್ಮ ಎಷ್ಟು ಮುಖ್ಯವೋ ಅದಕ್ಕಿಂತ ಹತ್ತು ಪಟ್ಟು ಅಪ್ಪ ಮುಖ್ಯ. ಯಾಕೆಂದರೆ ಎಲ್ಲ ಹೆಣ್ಣಿನ ಬದುಕಲ್ಲಿ ಮೊದಲ ಗಂಡು ಜೀವವೇ ಅಪ್ಪ. ಮಗಳು ಅಪ್ಪನನ್ನೇ ನೋಡಿ ಲೋಕದ ಎಲ್ಲ ಗಂಡಸನ್ನು ಅಳೆಯುವುದು. ಆದರೆ ಕೆಲವರ ಪಾಲಿಗೆ ಅಪ್ಪ ಎನ್ನುವ ಗಂಡು ಜೀವ ಇರುವುದಿಲ್ಲ, ಇದ್ದರೂ ಪ್ರಯೋಜನಕ್ಕೆ ಇರುವುದಿಲ್ಲ. ಮಗಳು ಎಲ್ಲ ಅಪ್ಪನನ್ನೇ ನೋಡಿ ಕಲಿಯುತ್ತಾಳೆ ಅವನ ಕಷ್ಟ, ಮನಸ್ಸು, ವಾತ್ಸಲ್ಯ, ಮಮತೆ, ಮಾತು ಹೀಗೆ ಬಹುತೇಕ ಎಲ್ಲ ಮಕ್ಕಳಿಗೂ ನನ್ನ ಅಪ್ಪ ಗೆಳೆಯನಾಗಿ, ಅಣ್ಣನಾಗಿ, ಅಮ್ಮನಾಗಿ ಇರಲಿ ಎಂದು ಆರೈಸುತ್ತಾಳೆ.
ಮಗಳ ಮತ್ತು ಅಪ್ಪನ ಪ್ರೀತಿ ಅಂತಿಂಥದ್ದಲ್ಲ. ಅಮ್ಮ ಎಷ್ಟೇ ಬೈದರೂ ಬೇಸರ ಆಗದ ಆ ಜೀವಕ್ಕೆ ಅಪ್ಪ ಒಂದು ಧ್ವನಿ ಜೋರಾಗಿ ಹೇಳಿದರೆ ಸಾಕು ಕಣ್ಣಲ್ಲಿ ನೀರು ಬಂದಾಯಿತು. ಮಗಳು ಮದುವೆ ವಯಸ್ಸಿಗೆ ಬಂದರೆ ಮಗಳು ಭಗವಂತನ ಬಳಿ ಕೇಳಿ ಕೊಳ್ಳುವುದು ಒಂದೇ ಅಪ್ಪನ ಹಾಗೆ ಪ್ರೀತಿ ತೋರುವ ಗಂಡ ಸಿಗಲಿ ಎಂದು. ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋದರು ಅಪ್ಪನ ಮೇಲಿರುವ ಪ್ರೀತಿ ಎಂದಿಗೂ ಶಾಶ್ವತ. ಮಗಳೇ ಎಂದು ಕೂಗುವ ಪ್ರೀತಿಯ ಧ್ವನಿಯೇ ಅಪ್ಪ. ಅಪ್ಪನ ಹೆಗಲು ಅಮ್ಮನ ಮಡಿಲು ಎಲ್ಲ ಮಕ್ಕಳಿಗೆ ತುಂಬಾ ಮುಖ್ಯ. ಮಗಳಿಗೆ ಕಷ್ಟ ಎಂದಾಗ ಮೊದಲಿಗೆ ಭುಜ ನೀಡುವವನೇ ಅಪ್ಪ. ಮಗಳು ಬಾಯಿ ಬಿಟ್ಟು ಹೇಳುವ
ಮೊದಲೇ ಆಕೆಯ ಕಷ್ಟಗಳ ಬಗ್ಗೆ ಅರ್ಥ ಮಾಡಿಕೊಳ್ಳುವ ಜೀವ. ಅಪ್ಪನಿಗೆ ಎಷ್ಟೇ ವಯಸ್ಸಾಗಲಿ, ಅವನು ಎಷ್ಟೇ ದುರ್ಬಲನಾಗಿದ್ದರೂ ಕೂಡ ಮಗಳ ಜವಾಬ್ದಾರಿ ನಿಭಾಯಿಸುವುದನ್ನು ಆತ ಮರೆಯುವುದಿಲ್ಲ. ಕಷ್ಟ ಕಾಲದಲ್ಲಿ ಆಕೆಗೆ ಮಹಾ ಶಕ್ತಿಯಾಗಿ ನಿಲ್ಲುವವನೇ ಅಪ್ಪ. ಮಗಳಿಗೂ ಕೂಡ ಅಪ್ಪ ಎಂದರೆ ಆಕಾಶ. ಅಪ್ಪನ ಪ್ರೀತಿಗೆ ಬೆಲೆ ಕಟ್ಟುವುದಕ್ಕೆ ಸಾಧ್ಯ ಇಲ್ಲ. ಅದೇ ರೀತಿ ಅಪ್ಪ – ಮಗಳ ಸಂಬಂಧವನ್ನು ಪದಗಳಲ್ಲಿ ಬಣ್ಣಿಸುವುದಕ್ಕೆ ಸಾಧ್ಯವಿಲ್ಲ.
-ಕಾವ್ಯ ಪ್ರಜೇಶ್
ಪೆರುವಾಡು, ಕುಂಬಳೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.