Accident: ರಾಜ್ಯದ ವಿವಿಧೆಡೆ ವಾಹನಗಳ ಅಪಘಾತ: 10 ಮಂದಿ ಸಾವು
Team Udayavani, Sep 7, 2024, 12:11 AM IST
ಬೈಕ್ ವ್ಹೀಲಿಂಗ್: ಮೂವರ ಸಾವು
ಮುದ್ದೇಬಿಹಾಳ: ಮುದ್ದೇಬಿಹಾಳ- ತಾಳಿಕೋಟೆ ರಾಜ್ಯ ಹೆದ್ದಾರಿ ಕುಂಟೋಜಿ ಬಳಿ ಬೈಕ್ ವ್ಹೀಲಿಂಗ್ ಮಾಡುವಾಗ ಸಂಭವಿಸಿದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಾಯಗೊಂಡ ಘಟನೆ ಗುರುವಾರ ಮಧ್ಯರಾತ್ರಿ ಸಂಭವಿಸಿದೆ.
ವ್ಹೀಲಿಂಗ್ ಮಾಡುತ್ತಿದ್ದ ಬೈಕ್ ಸವಾರ ತಾಳಿಕೋಟೆ ತಾಲೂಕು ಗೋಟಖಂಡ್ಕಿ ಗ್ರಾಮದ ನಿಂಗರಾಜ ದೇವೇಂದ್ರಪ್ಪ ಚೌಧರಿ (22), ಹಿಂದೆ ಕುಳಿತಿದ್ದ ದೇವರಹಿಪ್ಪರಗಿಯ ಅನಿಲ ಮಲ್ಲಪ್ಪ ಖೈನೂರ (27) ಮತ್ತು ರಸ್ತೆ ಬದಿ ನಡೆದು ಹೋಗುತ್ತಿದ್ದ ಮುದ್ದೇಬಿಹಾಳ ತಾಲೂಕು ಮಲಗಲದಿನ್ನಿಯ ಉದಯಕುಮಾರ ರಮೇಶ ಪ್ಯಾಟಿ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು ಬಾಗಲಕೋಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಂಗರಾಜ ತನ್ನ ಬಜಾಜ್ ಪಲ್ಸರ್-200 ಸಿಸಿ ಬೈಕ್ ವ್ಹೀಲಿಂಗ್ ಮಾಡುತ್ತ ಒಂದೆರಡು ಬಾರಿ ಇದೇ ರಸ್ತೆಯಲ್ಲಿ ಸಂಚರಿಸಿದ್ದ. 3ನೇ ಬಾರಿ ವೇಗವಾಗಿ ಬಂದಾಗ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಪಕ್ಕದಲ್ಲಿದ್ದ ಯುವಕರ ತಂಡಕ್ಕೆ ಢಿಕ್ಕಿ ಹೊಡೆಯಿತು.
ಬೈಕ್‌ಗೆ ಲಾರಿ ಢಿಕ್ಕಿಯಾಗಿ ಮೂವರ ಸಾವು
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯ ರಾಮನಗರ ತಾಲೂಕಿನ ಮಾಯಗಾನಹಳ್ಳಿ ಬಳಿ ಸರ್ವೀಸ್ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಟಿಪ್ಪರ್ ಲಾರಿಯೊಂದು ಬೈಕ್‌ಗೆ ಢಿಕ್ಕಿಯಾಗಿ ಮೂವರು ಸಾವನ್ನಪ್ಪಿದರೆ, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಗಾರೆ ಕೆಲಸದವರು.
ನಾಲ್ವರೂ ಒಂದೇ ಬೈಕಿನಲ್ಲಿ ರಾಮನಗರದಿಂದ ಬಿಡದಿ ಕಡೆಗೆ ಹೊರಟಿದ್ದು, ಪೆಟ್ರೋಲ್ ಖಾಲಿಯಾದ ಕಾರಣ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ರಸ್ತೆಯಂಚಿನಲ್ಲಿ ಮಾತನಾಡುತ್ತಾ ನಿಂತಿದ್ದರು. ಆಗ ಬಂಕ್‌ನಲ್ಲಿ ಡೀಸೆಲ್ ತುಂಬಿಸಿಕೊಂಡು ಹೊರಟ ಟಿಪ್ಪರ್ ಲಾರಿಯ ಚಾಲಕ ಕಾರ್ಮಿಕರು ನಿಂತಿರುವುದನ್ನು ಗಮನಿಸದೆ ಅವರ ಮೇಲೆಯೇ ಲಾರಿಯನ್ನು ಚಲಾಯಿಸಿದನು. ಮೂವರು ಸ್ಥಳದಲ್ಲೇ ಸಾವಿಗೀಡಾದರು. ಓರ್ವನ ಕಾಲಿನ ಮೇಲೆ ಲಾರಿಯ ಚಕ್ರ ಹರಿದು ತೀವ್ರ ಗಾಯಗೊಂಡಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ.
ದ್ವಿಚಕ್ರ ವಾಹನಗಳ ಢಿಕ್ಕಿ: ಮೂವರ ಸಾವು
ಬಾಗಲಕೋಟೆ: ಚೌತಿ ಹಬ್ಬದ ರಜೆಗೆಂದು ಊರಿಗೆ ಬಂದಿದ್ದ ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಸಹಿತ ಮೂವರು ಮೃತಪಟ್ಟ ಘಟನೆ ನಗರದ ಹೆಲಿಪ್ಯಾಡ್ ರಸ್ತೆಯಲ್ಲಿ ಸಂಭವಿಸಿದೆ. ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ರಜನಿ ಒಂದಕುದರಿ (34), ಬಾಗಲಕೋಟೆಯ ಬಿವಿವಿ ಸಂಘದ ದಂತ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ ಶ್ರುತಿ ಒಂದಕುದರಿ (32) ಮತ್ತು ಅಭಿಷೇಕ ದೋತ್ರೆ (20) ಮೃತಪಟ್ಟವರು.
ಬೈಕ್‌ನಲ್ಲಿದ್ದ ಇನ್ನೋರ್ವ ತೀವ್ರವಾಗಿ ಗಾಯಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮಹಿಳೆಯರು ಸ್ಕೂಟಿಯಲ್ಲಿ ಸಾಗುತ್ತಿದ್ದು, ಹೆಲಿಪ್ಯಾಡ್ ರಸ್ತೆಯ ಬಳಿ ರಸ್ತೆಯ ತಿರುವು ಬದಲಿಸಿಕೊಂಡು ಹೊರಟಿದ್ದರು. ಆಗ ಎದುರಿನಿಂದ ವೇಗವಾಗಿ ಬಂದ ಢಿಕ್ಕಿ ಹೊಡೆಯಿತು. ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟರೆ, ಯುವಕ ಮತ್ತು ಇನ್ನೋರ್ವ ಮಹಿಳೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟರು.
ಹಬ್ಬದ ಖರೀದಿಗೆಂದು ಹೋಗಿದ್ದ ಪೊಲೀಸ್ ಸಿಬಂದಿ ಅಪಘಾತದಲ್ಲಿ ಸಾವು
ಗದಗ: ಗಣೇಶನ ಹಬ್ಬಕ್ಕೆ ಪೂಜಾ ಸಾಮಗ್ರಿ ಖರೀದಿಸಿ ಮನೆಗೆ ಹೊರಟಿದ್ದ ಪೊಲೀಸ್ ಸಿಬಂದಿ ಗಜೇಂದ್ರಗಡ ಠಾಣೆಯ ಹೆಡ್ ಕಾನ್‌ಸ್ಟೆಬಲ್ ರಮೇಶ್ ಡಂಬಳ (45) ಕಾಂಕ್ರೀಟ್ ಮಿಕ್ಸರ್ ಲಾರಿ ಹರಿದು ಸಾವನ್ನಪ್ಪಿದ ಘಟನೆ ಶುಕ್ರವಾರ ಗದಗ
ನಗರದ ಭೂಮರೆಡ್ಡಿ ಸರ್ಕಲ್ ಬಳಿ ಸಂಭವಿಸಿದೆ.
ಇನ್ನೊಂದು ವಾಹನವನ್ನು ಓವರ್‌ಟೆಕ್ ಮಾಡಿ ಹೋಗುತ್ತಿದ್ದ ಲಾರಿಯ ಢಿಕ್ಕಿಯಾಗಿ ಕೆಳಗೆ ಬಿದ್ದ ರಮೇಶ್ ಡಂಬಳ ಅವರ ತಲೆಯ ಮೇಲೆ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದರು. ಅವರು ರಾತ್ರಿ ಪಾಳಿಯ ಕೆಲಸ ಮುಗಿಸಿ ಹಬ್ಬದ ಖರೀದಿಗೆಂದು ಮಾರುಕಟ್ಟೆಗೆ ಬಂದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.