Congress ಪಕ್ಷದಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ
ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಸನ್ನಿವೇಶ ಇಲ್ಲ, ಕೆಲವು ಸಚಿವರು ಹಿರಿತನದ ಹಕ್ಕನ್ನು ಪ್ರತಿಪಾದಿಸುತ್ತಿದ್ದಾರಷ್ಟೇ
Team Udayavani, Sep 11, 2024, 7:45 AM IST
ಕೇಂದ್ರ ಸರಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಇಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ ಎಂಬುದೇ ತಪ್ಪು ಎನ್ನುವಂತೆ ಮಾಡುತ್ತಿದೆ. ಇವರು ವರ್ಷವಾದರೂ ಬರ ಪರಿಹಾರ ಕೊಡದಿದ್ದರೆ ಹೇಗೆ? ಮಹಾದಾಯಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಯಲ್ಲೂ ಅನ್ಯಾಯವಾಗಿದೆ.ಕರ್ನಾಟಕದ ಜನರ ಹಿತ ಕಾಪಾಡುವುದು ನಮ್ಮ ಕರ್ತವ್ಯ. ರಾಜಕೀಯ ಬಡಿದಾಟ ಮಾಡುತ್ತೇವೆ, ವಿನಂತಿ ಮಾಡುತ್ತೇವೆ. ಆದರೂ ಬಾರದಿದ್ದಾಗ ಕೋರ್ಟ್ ಗೆ ಹೋಗುತ್ತೇವೆ.
-ಇವಿಷ್ಟೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರ ನುಡಿ.
ಪಕ್ಷದೊಳಗೆ ನಾಯಕತ್ವ ಬದಲಾವಣೆಯ ಸನ್ನಿವೇಶವಿಲ್ಲ. ಸಚಿವರು ಹಿರಿತನದ ಹಕ್ಕು ಪ್ರತಿಪಾದಿಸುತ್ತಿದ್ದಾರೆ ಎನ್ನುವಂತೆ ಮಾಧ್ಯಮಗಳಲ್ಲಿ ಸೃಷ್ಟಿ ಆಗುತ್ತಿದೆಯಷ್ಟೇ. ಅಂತಹ ಗಲಾಟೆಯೂ ನಮ್ಮಲ್ಲಿ ಇಲ್ಲ. ಗುಂಪುಗಾರಿಕೆಯಾಗಲೀ, ಅಪಸ್ವರವಾಗಲೀ ಕಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಉದಯವಾಣಿಯ “ನೇರಾನೇರ’ ಪ್ರಶೆಗಳಿಗೆ ಉತ್ತರ ನೀಡಿರುವ ಸಚಿವ ಎಚ್.ಕೆ. ಪಾಟೀಲ್, ಸರಕಾರ ಹಾಗೂ ಸಿಎಂ ಅಳಿವು-ಉಳಿವಿನ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಸಿಎಂ ವಿರುದ್ಧ ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದೇ ತಡ, ಪಕ್ಷದಲ್ಲಿ ಹಲವು ಸಚಿವರು ಬಹಿರಂಗವಾಗಿಯೇ ಹಿರಿತನದ ಹಕ್ಕು ಪ್ರತಿಪಾದಿಸಿ ಸಿಎಂ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರಾ?
ಎಲ್ಲರೂ ಸೀನಿಯಾರಿಟಿ ಕ್ಲೈಮ್ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಸೃಷ್ಟಿ ಆಗುತ್ತಿದೆ. ಆದರೆ, ಅಂತಹ ಯಾವ ಗಲಾಟೆಯೂ ನಮ್ಮಲ್ಲಿ ಇಲ್ಲ. ಗುಂಪುಗಾರಿಕೆ ಇದೆ, ಅಪಸ್ವರ ಇದೆ ಎಂದು ನನಗೆ ಎಲ್ಲಿಯೂ ಅನ್ನಿಸಿಲ್ಲ. ಈ ಹಿಂದೆ ಬಹಿರಂಗ ಹೇಳಿಕೆಗಳನ್ನು ಕೊಟ್ಟಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೂ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುಜೇìವಾಲಾ, ಕೆ.ಸಿ. ವೇಣುಗೋಪಾಲ್ ಅವರೆಲ್ಲ ಬೆಂಗಳೂರಿಗೇ ಬಂದು ಎಲ್ಲರ ಮಾತನ್ನೂ ಕೇಳಿಸಿಕೊಂಡಿದ್ದಾರೆ. ಬಹಿರಂಗ ಹೇಳಿಕೆ ಕೊಡದಂತೆಯೂ ಸೂಚಿಸಿದ್ದರು. ಈಗಿನ ಮುಡಾ ಪ್ರಕರಣದ ಬಗ್ಗೆಯಾಗಲೀ, ಬಹಿರಂಗ ಹೇಳಿಕೆ ಕೊಡುತ್ತಿರುವವರ ಬಗ್ಗೆಯಾಗಲೀ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ.
ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ಬಂದ ದೂರು ಆಧರಿಸಿ ನೋಟಿಸ್ ಕೊಟ್ಟಿದ್ದು, ಪ್ರಾಸಿಕ್ಯೂಷನ್‌ಗೆ ಅನುಮತಿಸಿ ರಾಜ್ಯಪಾಲರ ವಿರುದ್ಧವೇ ಸರಕಾರ ಸಂಘರ್ಷಕ್ಕಿಳಿದಿದೆಯೇ? ತನಿಖೆಯೇ ಆಗಬಾರದು ಎಂದರೆ ಹೇಗೆ?
ತನಿಖೆಯೇ ಆಗಬಾರದೆಂದು ನಾವ್ಯಾರೂ ಹೇಳುತ್ತಿಲ್ಲ. ಸರಕಾರವೂ ಹೇಳುತ್ತಿಲ್ಲ. ಸರಕಾರದ ಮುಖ್ಯಸ್ಥರ ಪಾತ್ರ, ಪಾಲು ಇಲ್ಲದ ಪ್ರಕರಣದಲ್ಲಿ ದೂರು ಬಂದ ದಿನವೇ ಶೋಕಾಸ್ ನೋಟಿಸ್ ಕೊಡುತ್ತಾರೆ. ಒಂದು ವಾರದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 17 (ಎ) ಅಡಿಯಲ್ಲಿ ಅಭಿಯೋಜನೆಗೆ ಅನುಮತಿ ಕೊಡುವುದನ್ನು ಒಪ್ಪಬಹುದಾ? ರಾಜಭವನವನ್ನು ದುರುಪಯೋಗ ಮಾಡಿಕೊಳ್ಳಲು ಬಿಜೆಪಿಯವರು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಆ ರೀತಿ ಬಳಕೆ ಆಗದ ಹಾಗೆ ರಾಜಭವನ ಇರಬೇಕು. ಈ ದಿಸೆಯಲ್ಲಿ ರಾಜ್ಯಪಾಲರು ಗಂಭೀರ ಹೆಜ್ಜೆ ಇಡಬೇಕಾಗುತ್ತದೆ.
ಸರಕಾರದ ಮುಖ್ಯಸ್ಥರ ಪಾತ್ರ, ಪಾಲು ಇಲ್ಲ ಎನ್ನುವುದಾದರೆ ವಿಚಾರಣ ಆಯೋಗ ಮಾಡಿರುವುದೇಕೆ?
ನ್ಯಾ| ದೇಸಾಯಿ ಅವರ ಆಯೋಗವು ಕೇವಲ ಸಿಎಂ ವಿಚಾರಕ್ಕೆ ಎಂದು ಮಾಡಿರುವುದಲ್ಲ. ಒಟ್ಟಾರೆ ಮುಡಾದಲ್ಲಿ ಅವ್ಯವಹಾರ ಆಗಿದೆ ಎಂಬ ದೂರುಗಳು ಇರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗಾಗಿ ಆಯೋಗ ರಚಿಸಲಾಗಿದೆ. ಯಾವ್ಯಾವ ಕಾಲದಲ್ಲಿ ಏನೇನು ಅಕ್ರಮ ಆಗಿದೆ ಎಂಬುದನ್ನು ಪತ್ತೆ ಹಚ್ಚಲೆಂದೇ ಆಯೋಗ ವಿಚಾರಣೆ ಆರಂಭಿಸಿದೆ. ಆಯೋಗದ ವಿಚಾರಣೆ ಮುಗಿದಿಲ್ಲ, ವರದಿಯೂ ಬಂದಿಲ್ಲ. ಅಷ್ಟರಲ್ಲಿ ಯಾರ ಪಾತ್ರದ ಬಗ್ಗೆ ಏನೂ ಹೇಳಲಾಗುವುದಿಲ್ಲವಲ್ಲ.
ರಾಜಭವನದ ಜತೆಗೆ ರಾಜ್ಯ ಸರಕಾರ ಸಂಘರ್ಷಕ್ಕಿಳಿ ದಿದೆಯೇ? ರಾಜ್ಯಪಾಲರಿಗೇ ಸರಕಾರ ಸಲಹೆ ಕೊಡುತ್ತದೆ. ವಿಪಕ್ಷಗಳ ಹಲವರ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿ ಎಂದು ಒತ್ತಡ ಹೇರುತ್ತಿದೆ. ಇದೆಲ್ಲ ಎಷ್ಟರ ಮಟ್ಟಿಗೆ ಸರಿ?
ರಾಜ್ಯಪಾಲರನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಅದಕ್ಕೆ ಅವಕಾಶ ನೀಡದಿರಲು ಸರಕಾರವೂ ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಹಲವು ಮಸೂದೆಗಳಿಗೆ ಸ್ಪಷ್ಟನೆ ಕೇಳಿದ್ದರು. ಅದಕ್ಕೆಲ್ಲ ಸ್ಪಷ್ಟನೆ ಕೊಟ್ಟ ಬಳಿಕ ಅವರೂ ಮಸೂದೆಗಳನ್ನು ಅಂಗೀಕರಿಸಿದ್ದಾರೆ. ಶಿಷ್ಟಾಚಾರದ ಪ್ರಕಾರ ರಾಜಭವನಕ್ಕೆ ಕೊಡುವ ಗೌರವ ಕೊಡುತ್ತಲೇ ಇದ್ದೇವೆ. ಅದು ನಮ್ಮ ಸಂಸ್ಕೃತಿ ಇದೆ. ಅಧಿಕಾರ ನಮ್ಮದಿದೆ. ಅವನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ರಾಜಭವನದ ಜತೆಗೆ ವ್ಯವಹರಿಸುತ್ತೇವೆ.
ಮಹಾದಾಯಿ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಒಪ್ಪಿಗೆ ಸಿಕ್ಕಿಲ್ಲ. ರಾಜ್ಯ ಸರಕಾರಕ್ಕೆ ಮತ್ತೆ ಹಿನ್ನಡೆ ಆಗಿದೆ. ಮುಂದಿನ ನಡೆ ಏನು?
ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯ ಮುಂದೆ ಮಹಾದಾಯಿ ಯೋಜನೆಯ ವಿಷಯ ಬಂದಿತ್ತು. ಆದರೆ ಅದನ್ನು ಮುಂದೂಡಲಾಗಿದೆ. ಗೋವಾ-ತಮ್ನಾರ್ 400 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಕರ್ನಾಟಕದ 435 ಎಕ್ರೆ ಬಳಕೆಗೆ ಇದೇ ಸಭೆಯಲ್ಲಿ ಷರತ್ತುಬದ್ಧ ಒಪ್ಪಿಗೆ ಸಿಗುತ್ತದೆ. ಅದಕ್ಕಾಗಿ ಪತ್ರ ವ್ಯವಹಾರ ನಡೆದು ಒತ್ತಡ ತರುವ ಕೆಲಸವೂ ಆಗುತ್ತದೆ. ಮಹಾದಾಯಿ ಯೋಜನೆ ವಿಷಯ ಮಾತ್ರ ಮುಂದೂಡಿಕೆಯಾಗುತ್ತದೆ. ಇದು ದುರದೃಷ್ಟ. ಇದರ ಬಗ್ಗೆ ಸದ್ಯದಲ್ಲೇ ಸರ್ವಪಕ್ಷಗಳ ಸಭೆ ಕರೆದು, ದಿಲ್ಲಿಗೆ ನಿಯೋಗ ಕೊಂಡೊಯ್ಯುವ ಚಿಂತನೆ ಇದೆ. ಅಗತ್ಯವಿದ್ದರೆ ಸುಪ್ರೀಂ ಕೋರ್ಟ್‌ಗೂ ಹೋಗುತ್ತೇವೆ.
ಕೇಂದ್ರ ಹಾಗೂ ರಾಜ್ಯ ಸರಕಾರದ ನಡುವೆ ಪದೇ ಪದೆ ಸಂಘರ್ಷ ನಡೆಯುತ್ತಿರುವುದೇಕೆ? ಕೇಂದ್ರವು ದ್ವೇಷದ ರಾಜಕಾರಣ ಮಾಡುತ್ತಿದೆಯೋ? ರಾಜ್ಯವೇ ಜಗಳಕ್ಕಿಳಿಯುತ್ತಿದೆಯೋ?
ಮಹಾದಾಯಿ ಯೋಜನೆಯ ವಿಷಯ ಮುಂದೂಡಿಕೆ ಆದದ್ದು ಒಂದು ವಿಷಯ. ಅದೇ ರೀತಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ 5,300 ಕೋಟಿ ರೂ. ಕೊಡುವುದಾಗಿ ಭರವಸೆ ಕೊಟ್ಟು ಈಗ ಇಲ್ಲ ಎನ್ನುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಗೆ ಕಳೆದ 5 ವರ್ಷಗಳಲ್ಲಿ ಬರಬೇಕಿದ್ದ 209 ಕೋಟಿ ರೂ. ಗಳ ಪೈಕಿ ಬಂದದ್ದು ಕೇವಲ 19 ಕೋಟಿ ರೂಪಾಯಿ. ಕರ್ನಾಟಕದ ಬಗ್ಗೆ ಕೇಂದ್ರ ಸರಕಾರಕ್ಕೆ ತಾತ್ಸಾರ ಮನೋಭಾವ ಇದೆ. ಕೇಂದ್ರದಲ್ಲಿನ ನಮ್ಮ ಸಚಿವರುಗಳು, ಸಂಸದರು ಎಷ್ಟು ಒತ್ತಡ ಹಾಕಬೇಕೋ ಅಷ್ಟು ಒತ್ತಡ ಹಾಕುತ್ತಿಲ್ಲ. ಕರ್ನಾಟಕದ ಹಿತ ರಕ್ಷಣೆ ಕಾಪಾಡುವಲ್ಲಿ ಮಹತ್ವದ ಸ್ಥಾನದಲ್ಲಿ ಇರುವವರೆಲ್ಲರೂ ವಿಫಲರಾಗಿದ್ದಾರೆ. ಕೇಂದ್ರ ಸರಕಾರ ನಮ್ಮ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಅವರಿಗೆ ರಾಜಕೀಯವೇ ಮುಖ್ಯವಾಗಿದೆ. ಇಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ ಎಂಬುದೇ ತಪ್ಪು ಎನ್ನುವಂತೆ ಮಾಡುತ್ತಿದೆ. ಇವರು ವರ್ಷವಾದರೂ ಬರ ಪರಿಹಾರ ಕೊಡದಿದ್ದರೆ ಹೇಗೆ? ಸುಮ್ಮನೆ ಕೂರಬೇಕಿತ್ತೇ? ಕರ್ನಾಟಕದ ಜನರ ಹಿತ ಕಾಪಾಡುವುದು ನಮ್ಮ ಕರ್ತವ್ಯ. ರಾಜಕೀಯ ಬಡಿದಾಟ ಮಾಡುತ್ತೇವೆ, ವಿನಂತಿ ಮಾಡುತ್ತೇವೆ. ಆದರೂ ಬಾರದಿದ್ದಾಗ ಕೋರ್ಟ್ ಗೆ ಹೋಗುತ್ತೇವೆ.
ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರರ ಪಾತ್ರದ ಬಗ್ಗೆ ಜಾರಿ ನಿರ್ದೇಶನಾಲಯ ದೋಷಾರೋಪ ಪಟ್ಟಿ ಸಲ್ಲಿಸಿದೆ. ಅಕ್ರಮವೇ ನಡೆದಿಲ್ಲ ಎಂದು ಸಿಎಂ ಹೇಳುತ್ತಿದ್ದರಲ್ಲಾ?
ಕಾನೂನು ಸಚಿವನಾಗಿ ಈ ಪ್ರಕರಣದ ಬಗ್ಗೆಯೂ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಸರಕಾರವೂ ವಿಶೇಷ ತನಿಖಾ ತಂಡ ರಚಿಸಿದೆ. ತನಿಖೆ ಪ್ರಗತಿಯಲ್ಲಿದೆ. ನಿಗಮದಿಂದ ವರ್ಗಾವಣೆ ಆಗಿದ್ದ ಶೇ.75 ರಷ್ಟು ಹಣವನ್ನು ರಿಕವರಿ ಮಾಡಲಾಗಿದೆ. ಯಾವ ಪ್ರಕರಣದಲ್ಲಿಯೂ ಸರಕಾರ ಸುಮ್ಮನೆ ಕುಳಿತಿಲ್ಲ. ಕಾನೂನು ಬದ್ಧವಾಗಿ ಏನೇನು ಮಾಡಬೇಕೋ ಅದನ್ನೆಲ್ಲ ಮಾಡುತ್ತಲೇ ಇದೆ.
ಉದಯವಾಣಿ ಸಂದರ್ಶನ: ಸಾಮಗ ಶೇಷಾದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.