Neralakatte: ಹಿಲ್ಕೋಡು ಮಣ್ಣಿನ ರಸ್ತೆ ಅಭಿವೃದ್ಧಿಗೆ ಬೇಡಿಕೆ
ಒಂದು ಕಿ.ಮೀ. ರಸ್ತೆ ಡಾಮರೀಕರಣಕ್ಕೆ ಮಿನಮೇಷ; ಗ್ರಾ.ಪಂ. ವ್ಯಾಪ್ತಿಯ ಅತೀ ಹಳೆಯ ರಸ್ತೆಗಿಲ್ಲ ದುರಸ್ತಿ ಭಾಗ್ಯ
Team Udayavani, Sep 11, 2024, 6:39 PM IST
![Neralakatte: ಹಿಲ್ಕೋಡು ಮಣ್ಣಿನ ರಸ್ತೆ ಅಭಿವೃದ್ಧಿಗೆ ಬೇಡಿಕೆ](https://www.udayavani.com/wp-content/uploads/2024/09/15-7-620x331.jpg)
![Neralakatte: ಹಿಲ್ಕೋಡು ಮಣ್ಣಿನ ರಸ್ತೆ ಅಭಿವೃದ್ಧಿಗೆ ಬೇಡಿಕೆ](https://www.udayavani.com/wp-content/uploads/2024/09/15-7-620x331.jpg)
ನೇರಳಕಟ್ಟೆ: ಕರ್ಕುಂಜೆ ಗ್ರಾ.ಪಂ. ವ್ಯಾಪ್ತಿಯಲ್ಲೇ ಅತ್ಯಂತ ಹಳೆಯದಾದ ಹಿಲ್ಕೋಡು ಮಣ್ಣಿನ ರಸ್ತೆಯು ಹಲವಾರು ವರ್ಷಗಳಿಂದ ಅಭಿವೃದ್ಧಿಯಾಗದೇ ನನೆಗುದಿಗೆ ಬಿದ್ದಿದೆ. ಅನೇಕ ವರ್ಷಗಳಿಂದ ಊರವರು ಈ ರಸ್ತೆಯ ಡಾಮರೀಕರಣಕ್ಕೆ ಒತ್ತಾಯಿಸುತ್ತಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.
ನೇರಳಕಟ್ಟೆ ಜಂಕ್ಷನ್ ಬಳಿಯ ಮೂರುಕೈನಿಂದ ಕೆಂಚಮ್ಮ ದೈವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಸುಮಾರು 1 ಕಿ.ಮೀ. ದೂರದ ಈ ರಸ್ತೆ ಈಗಲೂ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ. ಮಳೆಗಾಲದಲ್ಲಿ ಕೆಸರುಮಯಗೊಂಡು, ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ.
ಈ ರಸ್ತೆ ಯಾಕೆ ನಿರ್ಲಕ್ಷ್ಯ?
ಇದು 60-70 ವರ್ಷಗಳಷ್ಟು ಹಳೆಯದಾದ ರಸ್ತೆಯಾಗಿದೆ. ಕರ್ಕುಂಜೆ ವ್ಯಾಪ್ತಿಯ ಬಾಕಿ ಉಳಿದ ಎಲ್ಲ ಪ್ರಮುಖ ರಸ್ತೆಗಳೆಲ್ಲವನ್ನು ಅಭಿವೃದ್ಧಿಪಡಿಸಲಾಗಿದೆ. ಈ ರಸ್ತೆಯ ನಂತರ ಆದ ರಸ್ತೆಗಳಿಗೂ ಅಭಿವೃದ್ಧಿ ಭಾಗ್ಯ ಸಿಕ್ಕಿದೆ. ಆದರೆ ಈ ರಸ್ತೆಯ ಅಭಿವೃದ್ಧಿಗೆ ಮಾತ್ರ ಯಾಕೆ ಈ ರೀತಿಯ ನಿರ್ಲಕ್ಷ್ಯ ಎನ್ನುವುದಾಗಿ ಊರವರು ಪ್ರಶ್ನಿಸುತ್ತಿದ್ದಾರೆ.
ಹಿಲ್ಕೋಡು ಭಾಗದ ಜನರು ನೇರಳಕಟ್ಟೆ ಪೇಟೆಗೆ ಬರಲು ಇದೇ ಮುಖ್ಯ ಸಂಪರ್ಕ ರಸ್ತೆಯಾಗಿದೆ. ಹಿಂದೆ ಬಾಂಡ್ಯ, ಕೊಡ್ಲಾಡಿ ಭಾಗದಿಂದಲೂ ಈ ರಸ್ತೆಯಾಗಿಯೇ ಬರುತ್ತಿದ್ದರು. ಈಗ ಆಜ್ರಿ – ಸಿದ್ದಾಪುರ ರಸ್ತೆಯಾಗಿದ್ದರಿಂದ ಈ ರಸ್ತೆಯನ್ನು ಆ ಆ ಭಾಗದ ಜನ ಅಷ್ಟೊಂದು ಬಳಸುತ್ತಿಲ್ಲ. ಆದರೆ ಹಿಲ್ಕೋಡು ಭಾಗದ 15 ರಿಂದ 20 ಮನೆಗಳ ಜನ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ.
ಎಲ್ಲರಿಗೂ ಮನವಿ
ನಮ್ಮ ಹಿಲ್ಕೋಡು ರಸ್ತೆಯ ಡಾಮರು ಕಾಮಗಾರಿಗೆ ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ಗ್ರಾ.ಪಂ.ಗೆ ಮನವಿ ಮಾಡಿದ್ದೇವೆ. ಗ್ರಾಮಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾವಿಸಿದ್ದೇವೆ. ಹಿಂದಿನ, ಈಗಿನ ಶಾಸಕರಿಗೂ ಪತ್ರ ಸಲ್ಲಿಸಿದ್ದೇವೆ. ಕಳೆದ ಚುನಾಚಣೆ ವೇಳೆ ಪ್ರತಿಭಟನೆ ಮಾಡಲು ಮುಂದಾದಾಗ ತಾ.ಪಂ. ಇಒ ಭೇಟಿ ನೀಡಿ, ಅನುದಾನ ನೀಡುವ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವುದೇ ಅನುದಾನ ಬಂದಿಲ್ಲ. ಈ ರಸ್ತೆ ಅಭಿವೃದ್ಧಿಗೆ ನಾವು ಇನ್ನೆಷ್ಟು ವರ್ಷ ಕಾಯಬೇಕು?. – ನಾಗರಾಜ್ ಹಿಲ್ಕೋಡು, ಸ್ಥಳೀಯರು
ಹೆಚ್ಚಿನ ಅನುದಾನ ಅಗತ್ಯ
ಹಿಲ್ಕೋಡು ರಸ್ತೆಗೆ ಚುನಾವಣೆ ಸಂದರ್ಭದಲ್ಲಿ ಬಂದ ಬೇಡಿಕೆ ಗಳನ್ನು ಪಂಚಾಯತ್‌ನಿಂದ ಮೇಲಧಿಕಾರಿಗಳಿಗೆ ಕಳುಹಿಸಿದ್ದೇವೆ. ಇದಕ್ಕೆ ಸುಮಾರು 15 ಲಕ್ಷ ರೂ. ಅನುದಾನದ ಅಗತ್ಯವಿದೆ. ಕ್ರಿಯಾ ಯೋಜನೆ ಇನ್ನೂ ಆಗಿಲ್ಲ. ಸದಸ್ಯರು ಸೂಚಿಸಿದರೆ, ಮುಂದಿನ ಕ್ರಿಯಾ ಯೋಜನೆಯಲ್ಲಿ ಹಣ ಇಡಲು ಪ್ರಯತ್ನಿಸಲಾಗುವುದು. – ಗಣೇಶ್ ಹೆಬ್ಟಾರ್, ಕರ್ಕುಂಜೆ ಗ್ರಾ.ಪಂ. ಪಿಡಿಒ