Red Meat: ಮಧುಮೇಹ ಉಂಟಾಗುವ ಅಪಾಯ ಮತ್ತು ಕೆಂಪು ಮಾಂಸ ಸೇವನೆಗಿರುವ ಸಂಬಂಧ
Team Udayavani, Sep 15, 2024, 11:29 AM IST
ಮಧುಮೇಹ ಅಥವಾ ಡಯಾಬಿಟೀಸ್‌ನ ನಿರ್ವಹಣೆಯು ಸಮರ್ಪಕವಾದ ವ್ಯಾಯಾಮ, ಪಥ್ಯಾಹಾರ ಅನುಸರಣೆ ಮತ್ತು ಸರಿಯಾದ ಔಷಧೋಪಚಾರಗಳನ್ನು ಒಳಗೊಂಡಿರುತ್ತದೆ. ಮಧುಮೇಹವನ್ನು ತಡೆಯಲು ಅಥವಾ ಈಗಾಗಲೇ ಇರುವ ಮಧುಮೇಹವನ್ನು ಸರಿಯಾಗಿ ನಿಭಾಯಿಸಲು ನೀಡಲಾಗುವ ಪಥ್ಯಾಹಾರ ಶಿಫಾರಸುಗಳು ಪ್ರದೇಶದಿಂದ ಪ್ರದೇಶ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ.
ಕಳೆದ ಹಲವು ದಶಕಗಳ ಅವಧಿಯಲ್ಲಿ ಮಧುಮೇಹ ಮತ್ತು ಬೊಜ್ಜಿನ ನಿರ್ವಹಣೆಗಾಗಿ ಕಿಟೊ ಡಯಟ್ (ಕಡಿಮೆ ಕಾಬೊìಹೈಡ್ರೇಟ್, ಹೆಚ್ಚು ಕೊಬ್ಬು), ಪ್ಯಾಲಿಯೊ ಡಯಟ್, ಆಗಾಗ ಉಪವಾಸ ಇತ್ಯಾದಿ ಹಲವು ಬಗೆಯ ಪಥ್ಯಾಹಾರ ಮಾರ್ಗಸೂಚಿಗಳನ್ನು ಶಿಫಾರಸು ಮಾಡುತ್ತ ಬರಲಾಗಿದೆ. ಮಧುಮೇಹವನ್ನು ತಡೆಯಲು ಅಥವಾ ಈಗಾಗಲೇ ಇರುವ ಮಧುಮೇಹವನ್ನು ನಿಭಾಯಿಸಲು ನಾರಿನಂಶ ಹೆಚ್ಚಿರುವ ಮತ್ತು ಕಾಬೊìಹೈಡ್ರೇಟ್ ಕಡಿಮೆ ಇರುವ ಆಹಾರ ಕ್ರಮವನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ.
ಭಾರತೀಯರು ಮತ್ತು ಹೆಚ್ಚುತ್ತಿರುವ ಮಧುಮೇಹ
ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (ಐಡಿಎಫ್) ದ ಪ್ರಕಾರ, ಮುಂಬರುವ ವರ್ಷಗಳಲ್ಲಿ ಆಫ್ರೀಕಾ ಮತ್ತು ಏಶ್ಯಾ ಖಂಡದ ದೇಶಗಳಲ್ಲಿ ಮಧುಮೇಹಕ್ಕೆ ತುತ್ತಾಗಿರುವ ರೋಗಿಗಳ ಸಂಖ್ಯೆ ಹೆಚ್ಚಳ ಕಾಣಲಿದೆ. ಮಧುಮೇಹ ರೋಗದ ಹೊರೆ ಹೆಚ್ಚಳ ಕಾಣುವುದಕ್ಕೆ ತಜ್ಞರು ನೀಡುವ ಕಾರಣಗಳಲ್ಲಿ ಒಂದನ್ನು “ತ್ರಿಫ್ಟಿ ಜೀನ್ ಹೈಪೊಥೀಸಿಸ್’ ಅಥವಾ “ಮಿತವ್ಯಯ ವಂಶವಾಹಿ ಸಂಭವನೀಯತೆ’ ಆಗಿದೆ. ಇದೇನು ಎಂಬುದನ್ನು ಸ್ಥೂಲವಾಗಿ ವಿವರಿಸುವುದಾದರೆ, ಈ ಎರಡು ಖಂಡಗಳ ಸಂಪನ್ಮೂಲಗಳ ಕೊರತೆಯುಳ್ಳ ದೇಶಗಳ ಜನಸಮುದಾಯಗಳು ದೇಹದಲ್ಲಿ ಹೆಚ್ಚುವರಿ ಶಕ್ತಿಯನ್ನು ಶೇಖರಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಕ್ಷಾಮ, ಬರಗಾಲಗಳಂತಹ ಸಂದರ್ಭಗಳಲ್ಲಿ ಆ ಮೂಲಕ ಬದುಕುಳಿಯುವ ಜೀವ ವಿಕಾಸಕ್ಕೆ ಸಂಬಂಧಪಟ್ಟ ಅನುಕೂಲತೆಯನ್ನು ಹೊಂದಿರುತ್ತಾರೆ.
ಆದರೆ ಇದೇ ಜನರು ಕಾಲಕ್ರಮದಲ್ಲಿ ಆಗಿರುವ ಬದಲಾವಣೆಗಳಿಂದಾಗಿ ಹೆಚ್ಚು ಕ್ಯಾಲೊರಿ ಹೊಂದಿರುವ ಆಹಾರವಸ್ತುಗಳ ಸೇವನೆಗೆ ಬದಲಾದಾಗ ಮಧುಮೇಹ ಮತ್ತು ಬೊಜ್ಜಿಗೆ ತುತ್ತಾಗುವ ಅಪಾಯ ಇದೆ. ಅದರಲ್ಲೂ ಭಾರತೀಯರು ಅದೇ ದೇಹ ದ್ರವ್ಯರಾಶಿ (ಬಿಎಂಐ)ಗೆ ಹೋಲಿಸಿದರೆ ಶೇಕಡಾವಾರು ಹೆಚ್ಚು ದೈಹಿಕ ಕೊಬ್ಬು (ಡಿಎಕ್ಸ್‌ಎಯಿಂದ ಅಂದಾಜಿಸಲಾದಂತೆ) ಹೊಂದಿರುತ್ತಿದ್ದು, ಇದು ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಕೆಂಪು ಮಾಂಸ ಮತ್ತು ಮಧುಮೇಹ
ಕೆಂಪು ಮಾಂಸ ಸೇವನೆಯಿಂದ ಮಧುಮೇಹ ಉಂಟಾಗುವ ಅಪಾಯ ಹೆಚ್ಚುತ್ತದೆ ಎಂಬದಕ್ಕೆ ಸಾಕ್ಷ್ಯಾಧಾರ ಒದಗಿಸುವ ಹಲವು ಅಧ್ಯಯನಗಳನ್ನು ನಡೆಸಲಾಗಿದೆ. ಕೆಂಪು ಮಾಂಸವು ಅತ್ಯಧಿಕ ಪ್ರೊಟೀನ್ ಮತ್ತು ಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್ ಹೊಂದಿರುತ್ತದೆ. ಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್ ಹೆಚ್ಚು ಇರುವ ಆಹಾರ ಕ್ರಮದಿಂದ ಹೃದ್ರೋಗಗಳು (ಸಿವಿಡಿ- ಕಾರ್ಡಿಯೊವಾಸ್ಕಾಲರ್ ಡಿಸೀಸ್) ಉಂಟಾಗುವ ಅಪಾಯ ಹೆಚ್ಚುತ್ತದೆ. ಕೆಂಪು ಮಾಂಸ ಸೇವನೆಯಿಂದ ಬೀಟಾ ಕೋಶಗಳ ಕಾರ್ಯಕ್ಷಮತೆ (ಮೇದೊಜೀರಕ ಗ್ರಂಥಿ) ಕುಗ್ಗುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧ ಉಂಟಾಗುತ್ತದೆ ಎಂಬ ವಾದ ಇದೆಯಾದರೂ ಇದು ಪೂರ್ಣವಾಗಿ ಸಾಬೀತಾಗಿಲ್ಲ.
ಯುರೋಪಿಯನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್‌ನಲ್ಲಿ 2022ರಲ್ಲಿ ಪ್ರಕಟವಾದ, ಲಿಸಾ ಎಂ. ಸ್ಯಾಂಡರ್ಸ್ ಎಂಬವರು ನಡೆಸಿದ ಮೆಟಾ-ಅನಾಲಿಸಿಸ್ ಕೆಂಪು ಮಾಂಸ ಸೇವನೆ ಮತ್ತು ಮಧುಮೇ ಉಂಟಾಗುವುದರ ನಡುವಣ ಸಂಬಂಧವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ. ಕೆಂಪು ಮಾಂಸ ಸೇವನೆಯಿಂದ ಮಧುಮೇಹ ಉಂಟಾಗುತ್ತದೆ ಎಂಬುದನ್ನು ಹೇಳುವ, ಅದಕ್ಕೂ ಹಿಂದೆ ನಡೆಸಲಾದ ಅಧ್ಯಯನಗಳ ಫಲಿತಾಂಶಗಳನ್ನು ಪುನರಾವರ್ತಿಸುವಲ್ಲಿ ಅವರು ವಿಫಲರಾಗಿದ್ದರು. ಹಾಗೆ ಹೇಳುವುದಾದರೆ, ಕೆಂಪು ಮಾಂಸ ಸೇವಿಸಿದ ರೋಗಿಗಳಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಹೊರೆಯಿಂದಾಗಿ ಆಹಾರ ಸೇವನೆಯ ಬಳಿಕ ನಡೆಸಲಾದ ರಕ್ತ ಪರೀಕ್ಷೆಯ ವೇಳೆ ರಕ್ತದಲ್ಲಿ ಸಕ್ಕರೆಯಂಶ ಕಡಿಮೆ ಇರುವುದೇ ಕಂಡುಬಂದಿತ್ತು. ಆದರೆ 20 ದೇಶಗಳ (31 ಕೊಹೊರ್ಟ್‌ಗಳು) ದತ್ತಾಂಶಗಳನ್ನು ಒಟ್ಟುಗೂಡಿಸಿ ಕೇಂಬ್ರಿಜ್ ವಿಶ್ವವಿದ್ಯಾನಿಲಯಕ್ಕಾಗಿ ನಡೆಸಲಾದ ಇತ್ತೀಚೆಗಿನ ಇನ್ನೊಂದು ಮೆಟಾ-ಅನಾಲಿಸಿಸ್ ಇದಕ್ಕೆ ತದ್ವಿರುದ್ಧ ಫಲಿತಾಂಶವನ್ನು ನೀಡಿದೆ.
2024ರ ಲ್ಯಾನ್ಸೆಟ್ ನಿಯತಕಾಲಿಕದಲ್ಲಿ ಈ ಅಧ್ಯಯನದ ವಿವರಗಳು ಪ್ರಕಟಗೊಂಡಿವೆ. ಇದರಲ್ಲಿ 1.97 ದಶಲಕ್ಷ ವಯಸ್ಕರನ್ನು 10 ವರ್ಷಗಳ ಕಾಲ ಮಧುಮೇಹಕ್ಕೆ ತುತ್ತಾಗುವ ಅಪಾಯವನ್ನು ಪರಿಶೀಲಿಸುವುದಕ್ಕಾಗಿ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಫಾಲೊಅಪ್ ವೇಳೆ 1,07,271 ಮಧುಮೇಹ ಪ್ರಕರಣಗಳನ್ನು ಗುರುತಿಸಲಾಗಿದೆ. ಬಹುತೇಕ ಸರಿಹೊಂದಾಣಿಸಿದ ಮಾದರಿಗಳಲ್ಲಿ ಸಂಸ್ಕರಿಸದ ಕೆಂಪುಮಾಂಸ ಸೇವನೆಯು ಟೈಪ್ 2 ಮಧುಮೇಹ ಉಂಟಾಗುವುದರ ಜತೆಗೆ ಸಕಾರಾತ್ಮಕ ಸಂಬಂಧ ಹೊಂದಿರುವುದನ್ನು, ದಿನಕ್ಕೆ 100 ಗ್ರಾಂ ಕೆಂಪು ಮಾಂಸ ಸೇವನೆಗೆ 1.10 ಎಚ್‌ಆರ್ ಜತೆಗೆ ಗಮನಿಸಲಾಯಿತು. ಸಂಸ್ಕರಿತ ಮಾಂಸ ಸೇವನೆಯಿಂದ ಈ ಸಕಾರಾತ್ಮಕ ಸಂಬಂಧ ಇನ್ನಷ್ಟು ಹೆಚ್ಚು (ಎಚ್‌ಆರ್ 1.10) ಆಗಿತ್ತು. ಮಧುಮೇಹ ಹೆಚ್ಚಳದ ಅಪಾಯವು ಯುರೋಪ್‌ನಂತಹ ಪ್ರದೇಶಗಳಿಗೆ ಹೋಲಿಸಿದರೆ ಪಾಶ್ಚಾತ್ಯ ಜನಸಮುದಾಯಗಳಲ್ಲಿ ಇನ್ನಷ್ಟು ಹೆಚ್ಚು ಆಗಿತ್ತು.
ಸಂಸ್ಕರಿತ ಮಾಂಸ ಮತ್ತು ಸಂಸ್ಕರಿಸದ ಮಾಂಸ
50 ಗ್ರಾಂ ಸಂಸ್ಕರಿಸಿದ ಮಾಂಸದ ಬದಲು 100 ಗ್ರಾಂ ಸಂಸ್ಕರಿಸಿದ ಮಾಂಸ ಉಪಯೋಗದಿಂದ ಮಧುಮೇಹ ಉಂಟಾಗುವ ಅಪಾಯ ಶೇ. 7ರಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ.
ಕೋಳಿಮಾಂಸ ಸೇವನೆ
ಕೋಳಿಮಾಂಸ ಸೇವನೆ ಮತ್ತು ಮಧುಮೇಹ ಉಂಟಾಗುವುದರ ನಡುವೆ ಸಕಾರಾತ್ಮಕ ಸಂಬಂಧವು ಐರೋಪ್ಯ ಪ್ರದೇಶಗಳಲ್ಲಿ ಹೆಚ್ಚು ಗಮನಾರ್ಹವಾಗಿ ಕಂಡುಬಂದಿದೆ. ಇತರ ಪ್ರದೇಶಗಳಲ್ಲಿ ಈ ಸಂಬಂಧವಾದ ಫಲಿತಾಂಶಗಳು ಯಾವುದೇ ಶಿಫಾರಸು ಅಥವಾ ನಿರ್ಧಾರಗಳನ್ನು ಮಾಡುವುದಕ್ಕೆ ಪೂರಕವಾಗುವಷ್ಟು ಪ್ರಮಾಣದಲ್ಲಿಲ್ಲ.
ಮೆಟಾ ಅನಾಲಿಸಿಸ್ ದತ್ತಾಂಶಗಳ ಕೊರತೆಗಳು
ಬೇರೆ ಬೇರೆ ಅಧ್ಯಯನಗಳ ದತ್ತಾಂಶಗಳಲ್ಲಿ ಏಕರೂಪತೆಯ ಕೊರತೆ
ಮೆಟಾ ತಯಾರಿ ವಿಧಾನ ಮತ್ತು ಅದರ ಆಕರಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ
ಚರ್ಚೆ
ವಿವಿಧ ಜನಸಮುದಾಯಗಳಲ್ಲಿ ಕೆಂಪುಮಾಂಸ ಅದರಲ್ಲೂ ಸಂಸ್ಕರಿಸಿದ ಕೆಂಪು ಮಾಂಸ ಸೇವನೆಯು ಟೈಪ್ 2 ಮಧುಮೇಹ ಉಂಟಾಗುವುದಕ್ಕೆ ಒಂದು ಸಂಭಾವ್ಯ ಅಪಾಯ ಅಂಶವಾಗಿದೆ. ಮಧುಮೇಹಕ್ಕೆ ತುತ್ತಾಗುವ ಅಪಾಯ ಕಡಿಮೆಯಾಗಬೇಕಾದರೆ ಕೆಂಪು ಮಾಂಸ ಸೇವನೆಯನ್ನು ಕಡಿಮೆ ಮಾಡಬೇಕಾದ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ. ಆದರೆ ಕೋಳಿಮಾಂಸ ಸೇವನೆಗೂ ಟೈಪ್ 2 ಮಧುಮೇಹ ತಲೆದೋರುವುದಕ್ಕೂ ಇರುವ ಸಂಬಂಧ ಇನ್ನೂ ಖಚಿತವಾಗಿಲ್ಲ.
ನಾವು ತಿಳಿದುಕೊಳ್ಳಬೇಕಾದುದೇನು?
- ನೀವು ದಿನವೊಂದಕ್ಕೆ ಸೇವಿಸುವ ಕೆಂಪು ಮಾಂಸದ ಪ್ರಮಾಣವನ್ನು 70 ಗ್ರಾಂಗಳಿಗೆ ಮಿತಗೊಳಿಸಿ
- ದಿನವೊಂದಕ್ಕೆ 50 ಗ್ರಾಂ ಸಂಸ್ಕರಿಸಿದ ಮಾಂಸ ಸೇವನೆಯಿಂದ ಮಧುಮೇಹ ಉಂಟಾಗುವ ಅಪಾಯವು ಶೇ. 15ರಷ್ಟು ಹೆಚ್ಚುತ್ತದೆ.
- ದಿನವೊಂದಕ್ಕೆ 100 ಗ್ರಾಂ ಸಂಸ್ಕರಿಸದ ಮಾಂಸ ಸೇವನೆಯಿಂದ ಮಧುಮೇಹದ ಅಪಾಯ ಶೇ. 10ರಷ್ಟು ಹೆಚ್ಚುತ್ತದೆ.
- ಕೆಂಪು ಮಾಂಸ ಸೇವನೆಯಿಂದ ಉಂಟಾಗುವ ಈ ಮಧುಮೇಹ ಅಪಾಯಕ್ಕೂ ವಯಸ್ಸು, ಲಿಂಗ ಮತ್ತು ಬಿಎಂಐ (ಬಾಡಿ ಮಾಸ್ ಇಂಡೆಕ್ಸ್)ಗೂ ಸಂಬಂಧ ಇಲ್ಲ.
ಯಾವುದು ಕೆಂಪು ಮಾಂಸ?
ಸಾಮಾನ್ಯವಾಗಿ ಕೋಳಿ ಮತ್ತು ಕೋಳಿ ಜಾತಿಯದ್ದಲ್ಲದ್ದ ಪ್ರಾಣಿಗಳ ಅಂದರೆ, ಕುರಿ, ಮೇಕೆ, ಹಂದಿ, ಗೋಮಾಂಸಗಳನ್ನು ಕೆಂಪು ಮಾಂಸ ಎಂದು ಕರೆಯಲಾಗುತ್ತದೆ.
ಕೆಂಪು ಮಾಂಸ ಮತ್ತು ಮಧುಮೇಹಗಳ ನಡುವಣ ಸಂಬಂಧ
- ಸಂಸ್ಕರಿತ ಕೆಂಪು ಮಾಂಸದಲ್ಲಿ ಪೂರಕ ವಸ್ತುಗಳಾಗಿ ಉಪ್ಪು ಮತ್ತು ನೈಟ್ರೇಟ್ ಅಂಶ ಹೆಚ್ಚು ಪ್ರಮಾಣದಲ್ಲಿರುತ್ತದೆ. ಇವು ಕರುಳಿನ ಕ್ಯಾನ್ಸರ್ ಬೆಳವಣಿಗೆಯ ಜತೆಗೂ ಸಂಬಂಧ ಹೊಂದಿರುವುದಾಗಿ ಹೇಳಲಾಗುತ್ತದೆ (ಗ್ರೂಪ್ 1 ಕಾರ್ಸಿನೊಜೆನ್‌ಗಳು). ಇವುಗಳ ಜೀರ್ಣಕ್ರಿಯೆಯ ವೇಳೆ ಉತ್ಪಾದನೆಯಾಗುವ ಎನ್-ನೈಟ್ರೊಸೊ ರಾಸಾಯನಿಕಗಳು ಉರಿಯೂತ ಮತ್ತು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದಾಗಿದ್ದು, ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಳಕ್ಕೆ ದಾರಿ ಮಾಡಿಕೊಡಬಲ್ಲವು.
- ಹೆಚ್ಚು ಪ್ರಾಣಿಜನ್ಯ ಪ್ರೊಟೀನ್‌ಗಳು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸಬಲ್ಲವು ಮತ್ತು ಮಧುಮೇಹಕ್ಕೆ ಕಾರಣವಾಗಬಲ್ಲವು.
- ಮಾಂಸದಲ್ಲಿ ಸಮೃದ್ಧವಾಗಿರುವ ಕೊಲೈನ್ ಮತ್ತು ಎಲ್-ಕಾರ್ನಿಟಿನ್ ಕೆಂಪು ಮಾಂಸದಲ್ಲಿ ಹೇರಳವಾಗಿರುತ್ತವೆ. ಕರುಳಿನಲ್ಲಿರುವ ಸೂಕ್ಷ್ಮಜೀವಿಗಳು ಇವನ್ನು ಎನ್-ನೈಟ್ರೊಸೊ ಸಂಯುಕ್ತಗಳಾಗಿ ಪರಿವರ್ತಿಸುತ್ತವೆ; ಇದರಿಂದ ಮಧುಮೇಹ ಉಂಟಾಗುವ ಅಪಾಯ ಹೆಚ್ಚುತ್ತದೆ.
- ಕೆಂಪು ಮಾಂಸವನ್ನು ಹುರಿಯುವುದು ಅಥವಾ ಗ್ರಿಲ್ ಮಾಡುವುದರಿಂದ ಆಕ್ಸಿಡೇಟಿವ್ ಹೊರೆ ಹಾಗೂ ಉರಿಯೂತ ಪ್ರತಿಸ್ಪಂದನೆಗೆ ಪೂರಕ ಸ್ಥಿತಿ ಉಂಟಾಗುತ್ತದೆ; ಇದು ಕೂಡ ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು.
- ಮಾಂಸಾಹಾರದಲ್ಲಿ ಕಬ್ಬಿಣದಂಶ ಹೇರಳವಾಗಿರುತ್ತದೆ. ಇದು ಇನ್ಸುಲಿನ್ ಮತ್ತು ಜೀವಕೋಶಗಳ ನಡುವಣ ಕ್ರಿಯೆಯಗೆ ಅಡ್ಡಿಯಾಗುತ್ತದೆ- ಇದರಿಂದ ಇನ್ಸುಲಿನ್ ಪ್ರತಿರೋಧ ಮತ್ತು ಮಧುಮೇಹ ಉಂಟಾಗಬಹುದಾಗಿದೆ.
-ಡಾ| ಶ್ರೀನಾಥ್ ಪಿ. ಶೆಟ್ಟಿ
ಎಂಡೊಕ್ರೈನಾಲಜಿಸ್ಟ್
ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ,
ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಎಂಡೊಕ್ರೈನಾಲಜಿ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.