ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಜಾತ್ಯಾತೀತ, ಧರ್ಮಾತೀತ ಮತ್ತು ಪಕ್ಷಾತೀತವಾಗಿ ಕಾಪು, ಕಾರ್ಕಳ ತಾಲೂಕಿನ ಸಹಸ್ರಾರು ಮಂದಿ ಭಾಗಿ
Team Udayavani, Sep 15, 2024, 3:03 PM IST
ಕಾಪು: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕಾಪು ತಾಲೂಕು ಆಡಳಿತದ ನೇತೃತ್ವದಲ್ಲಿ ಕಾಪು ಮತ್ತು ಕಾರ್ಕಳ ತಾಲೂಕಿನ ವಿವಿಧ ಗ್ರಾಮ ಪಂಚಾಯತ್, ಪುರಸಭೆ, ಶಾಲಾ ಕಾಲೇಜುಗಳು, ದ. ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಮತ್ತು ವಿವಿಧ ಸಂಘ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸೆ. 15ರಂದು ಹೆಜಮಾಡಿಯಿಂದ ಉದ್ಯಾವರದವರೆಗೆ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮಾನವ ಸರಪಳಿ ಕಾರ್ಯಕ್ರಮಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಮುಂಭಾಗದ ರಾ. ಹೆ. 66ರಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಭಾರತ ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಮುನ್ನಡೆಯುತ್ತಿರುವ ಮಹಾನ್ ದೇಶವಾಗಿದೆ. ದೇಶದ ಭದ್ರಭುನಾದಿಗೆ ಪ್ರಜಾಪ್ರಭುತ್ವವೇ ಪ್ರಮುಖ ಅಡಿಗಲ್ಲಾಗಿದೆ. ಜಾತ್ಯಾತೀತ, ಧರ್ಮಾತೀತ ಮತ್ತು ಪಕ್ಷಾತೀತಾಗಿರುವ ಪ್ರಜಾಪ್ರಭುತ್ವವನ್ನು ಮನನ ಮಾಡಿಕೊಳ್ಳುವ ದೃಷ್ಠಿಯಿಂದ ಈ ದಿನವನ್ನು ಆಚರಿಸಲಾಗುತ್ತದೆ. ಇದಕ್ಕೆ ಸಾಮೂಹಿಕ ಸಹಭಾಗಿತ್ವ ದೊರಕಿರುವುದು ಶ್ಲಾಘನೀಯ ಎಂದರು.
ಪ್ರಸ್ತಾವನೆಗೈದ ಕಾಪು ತಹಶೀಲ್ದಾರ್ ಡಾ| ಪ್ರತಿಭಾ ಆರ್. ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದಾಗಿ ನಾವೆಲ್ಲರೂ ಒಂದಾಗಿದ್ದೇವೆ, ಒಗ್ಗಟ್ಟಾಗಿದ್ದೇವೆ. ರಾಜ್ಯದಲ್ಲಿ ಬೀದರ್‌ನಿಂದ ಚಾಮರಾಜ ನಗರದವರೆಗಿನ ೨೫೦೦ ಕಿ. ಮೀ. ಉದ್ದದವರೆಗೆ ಬೃಹತ್ ಮಾನವ ಸರಪಳಿ ರಚಿಸಿ ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಕಾಪು ತಾಲೂಕಿನ ಉದ್ಯಾವರದಿಂದ ಹೆಜಮಾಡಿಯವರೆಗೆ ನಾವು ಜತೆಗೂಡಿದ್ದೇವೆ. ಈ ಕಾರ್ಯಕ್ರಮದ ಮೂಲಕವಾಗಿ ಭಾರತದಷ್ಟು ಅತ್ಯುತ್ತಮವಾದ ಪ್ರಜಾಪ್ರಭುತ್ವ ರಾಷ್ಟ್ರ ಮತ್ತೊಂದಿಲ್ಲ ಎನ್ನುವುದನ್ನು ವಿಶ್ವಕ್ಕೆ ಸಾರಿದಂತಾಗಿದೆ ಎಂದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಮಾನತೆಯನ್ನು ಎತ್ತಿ ತೋರಿಸುವ ಉದ್ದೇಶದೊಂದಿಗೆ ಪ್ರಜಾಪ್ರಭುತ್ವದ ದಿನಾಚರಣೆ ಪ್ರಯುಕ್ತ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ಮೆಲುಕು ಹಾಕಿಕೊಳ್ಳುವ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಪೂರಕವಾಗಿದೆ ಎಂದರು.
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ನೀಡುವುದು, ಸಂವಿಧಾನಕ್ಕೆ ಗೌರವ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂತಹ ಸಾಮೂಹಿಕ ಕಾರ್ಯಕ್ರಮಗಳು ನಮ್ಮ ದೇಶದ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸಹಕಾರ ನೀಡುತ್ತವೆ ಎಂದರು.
ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಬಡಾ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಮೆಂಡನ್, ಕಾಪು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿ. ಸಿಲ್ವ, ಕಾರ್ಕಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಂದ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೋಷನ್ ಕುಮಾರ್, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಕಾಪು ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಸಿ., ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಅರಣ್ಯ ಇಲಾಖೆ ಅಧಿಕಾರಿ ಜೀವನ್‌ದಾಸ್ ಶೆಟ್ಟಿ, ಕಾರ್ಕಳ ಅರಣ್ಯ ಇಲಾಖಾಧಿಕಾರಿ ಪ್ರಭಾಕರ ಕುಲಾಲ್, ಉಪ ತಹಶೀಲ್ದಾರ್‌ಗಳಾದ ಅಶೋಕ್ ಕೋಟೆಕಾರ್, ರವಿ ಕಿರಣ್, ದೇವಕಿ, ಮಂಜುನಾಥ ನಾಯಕ್, ಹರಿಪ್ರಸಾದ್ ಭಟ್, ಕಂದಾಯ ನಿರೀಕ್ಷಕ ಇಜಾಜ್ ಸಾಬೀರ್, ಶಿವ ಪ್ರಸಾದ್, ರಿಯಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಽಕಾರಿ ಮಮತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇನ್ನಂಜೆ ಗ್ರಾ.ಪಂ. ಕಾರ್ಯದರ್ಶಿ ಚಂದ್ರಶೇಖರ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಅಪರ ಜಿಲ್ಲಾಧಿಕಾರಿಯವರ ಆಪ್ತ ಸಹಾಯಕ ಯತೀಶ್ ಸಹಕರಿಸಿದರು.
ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಪಾಪನಾಶಿನಿ ನದಿ ಸೇತುವೆಯಿಂದ ಹೆಜಮಾಡಿ ಶಾಂಭವಿ ನದಿ ಸೇತುವೆಯರೆಗಿನ ಸುಮಾರು 24 ಕಿ.ಮೀ. ಉದ್ದದವರೆಗೂ ಮಾನವ ಸರಪಳಿ ಕಾರ್ಯಕ್ರಮ ನಡೆದಿದ್ದು ಶಾಲಾ ಬ್ಯಾಂಡ್, ಚೆಂಡೆ, ಗೊಂಬೆ, ಕಲಶ ಸಹಿತವಾಗಿ ಹೆದ್ದಾರಿಯುದ್ದಕ್ಕೂ ಸಾವಿರಾರು ಮಂದಿ ಮಾನವ ಸರಪಳಿಯಲ್ಲಿ ಪಾಲ್ಗೊಂಡರು. ಮಾನವ ಸರಪಳಿ ಪ್ರತಿಜ್ಣಾ ವಿಧಿ ಬಳಿಕ ಕಾರ್ಯಕ್ರಮದ ನೆನಪಿಗಾಗಿ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗದ ರಾ.ಹೆ. 66ರಲ್ಲಿ ದ. ಕ. ಮೊಗವೀರ ಮಹಾಜನ ಸಂಘ, ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸಹಕಾರ ಸಹಕಾರದೊಂದಿಗೆ ಗಿಡ ನೆಡಲಾಯಿತು. ಕಾರ್ಯಕ್ರಮ ಮುಗಿದ ಕೂಡಲೇ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.