Bolar: ಬಿಹಾರದ ಮಕ್ಕಳಿಗೆ ಬೋಳಾರದಲ್ಲಿ ಕನ್ನಡ ಪಾಠ!
| ಬಂದ್ ಆಗಲಿದ್ದ ಸರಕಾರಿ ಶಾಲೆಗೆ ವಲಸೆ ಮಕ್ಕಳ ಕರೆ ತಂದ ಶಿಕ್ಷಕಿ | 5 ಮಕ್ಕ ಳೀಗ 53
Team Udayavani, Sep 24, 2024, 5:05 PM IST
ಬೋಳಾರ: ಮಕ್ಕಳಿಲ್ಲದೆ ಮುಚ್ಚುವ ಹಂತಕ್ಕೆ ಬಂದಿದ್ದ ಸರಕಾರಿ ಶಾಲೆಗೆ ಬಿಹಾರದ ವಲಸೆ ಕಾರ್ಮಿಕರ ಮಕ್ಕಳನ್ನು ದಾಖಲಾತಿ ಮಾಡಿಸಿ ಈಗ ಅವರಿಗೆ ಕನ್ನಡ ಪಾಠ ಬೋಧಿಸುವ ವಿನೂತನ ಪ್ರಯೋಗವೊಂದು ಮಂಗಳೂರಿನ ಬೋಳಾರದಲ್ಲಿ ನಡೆಯುತ್ತಿದೆ.
ಬೋಳಾರ ವೆಸ್ಟ್ ಉರ್ದು ಶಾಲೆಯಲ್ಲಿ ಆ. 31ರ ವರೆಗೆ ದಾಖಲಾಗಿದ್ದ ಮಕ್ಕಳ ಸಂಖ್ಯೆ ಕೇವಲ 9. ಇದರಲ್ಲಿ ಹಾಜರಾಗುತ್ತಿದ್ದವರು ಐದು ಅಥವಾ ಆರು ಮಾತ್ರ. ಕಳೆದ ವರ್ಷ ಇಲ್ಲಿದ್ದದ್ದು ಕೇವಲ ಐವರು ವಿದ್ಯಾರ್ಥಿಗಳು. ಹೀಗಾಗಿ ಶಾಲೆಯನ್ನು ಮುಚ್ಚುವ ಸ್ಥಿತಿಯೇ ಎದುರಾಗಿತ್ತು. ಆದರೆ ಸೆ. 1ರಂದು ಇಲ್ಲಿಗೆ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಆಗಮಿಸಿದ ಗೀತಾ ಜುಡಿತ್ ಸಲ್ಡಾನ್ಹ ಅವರು ಇಲ್ಲಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.
ಗೀತಾ ಅವರು ಈ ಶಾಲೆಗೆ ಬಂದಾಗ ಕೇವಲ ಐವರು ಮಕ್ಕಳಿದ್ದರು. ಇದಕ್ಕೆ ಏನಾದರೂ ಮಾಡಬೇಕು ಎಂಬ ಸಂಕಲ್ಪದಿಂದ ವಿವಿಧ ಕಡೆ ಸರ್ವೇ ನಡೆಸಿದರು. ಸ್ಟೇಟ್‌ಬ್ಯಾಂಕ್, ಬಂದರಿನ ಕೊಳೆಗೇರಿಗಳಲ್ಲಿ ಸುತ್ತಾಡಿದರು. ಈ ವೇಳೆ ಬಿಹಾರದ ವಲಸೆ ಕಾರ್ಮಿಕರು ಮೀನು ಕಾರ್ಖಾನೆಗಳಲ್ಲಿ ಮೀನು ಕಟ್ಟಿಂಗ್ ಕೆಲಸ ಮಾಡುತ್ತಿರುವ ಅಂಶ ತಿಳಿದುಬಂತು. ಇವರ ಮಕ್ಕಳು ಶಾಲೆಗೆ ಹೋಗದೆ ಅಲ್ಲಿಯೇ ಇರುತ್ತಿದ್ದರು. ಇದನ್ನು ನೋಡಿದ ಗೀತಾ ಅವರನ್ನು ಶಾಲೆಗೆ ಸೇರಿಸಲು ಮನೆಯವರ ಮನವೊಲಿಸಿದರು. ಪರಿಣಾಮ ಒಂದೇ ತಿಂಗಳಲ್ಲಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ 53ಕ್ಕೆ ಏರಿದೆ!
110 ವರ್ಷದ ಇತಿಹಾಸ ಇರುವ ಶಾಲೆ ಇದು. ಗೀತಾ ಜುಡಿತ್ ಸಲ್ಡಾನ್ಹಾ ಹಾಗೂ ಶಿಕ್ಷಕಿ ಸುಧಾ ಇಲ್ಲಿದ್ದಾರೆ. ಅಕ್ಷರದಾಸೋಹದಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿದೆ. ಸದ್ಯ ದಾನಿಗಳ ಸಹಕಾರ ದಿಂದ ಸ್ಲೇಟ್, ಕಡ್ಡಿ, ಸಮವಸ್ತ್ರ ಮಾತ್ರ ಲಭ್ಯವಾಗಿದೆ. ಆದರೆ ಶಾಲೆಯಲ್ಲಿ ಮೂಲ ಸೌಕರ್ಯದ ಕೊರತೆಯಿದ್ದು, ವಿದ್ಯಾರ್ಥಿಗಳಿಗೆ ಸಾಕಷ್ಟು ಸವಲತ್ತುಗಳ ಆವಶ್ಯಕತೆ ಇದೆ. ದಾನಿಗಳ ಸಹಕಾರದ ಅಗತ್ಯವೂ ಇದೆ.
ಹಾಜಬ್ಬರ ಶಾಲೆಯಲ್ಲಿದ್ದ ಟೀಚರ್!
1999ರಲ್ಲಿ ಸಕಲೇಶಪುರದಲ್ಲಿ ಶಿಕ್ಷಕಿಯಾಗಿ ಕರ್ತವ್ಯ ಆರಂಭಿಸಿದ್ದ ಗೀತಾ ಸಲ್ಡಾನ್ಹ ಮೂಲತಃ ಮಂಗಳೂರಿನವರು. 2003ರಲ್ಲಿ ಹರೇಕಳ ಹಾಜಬ್ಬರ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ 2008ರಲ್ಲಿ ಬಬ್ಬುಕಟ್ಟೆ ಸೇರಿ ವಿವಿಧ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. 2019ರಲ್ಲಿ ಉಳ್ಳಾಲ ಪೆರ್ಮನ್ನೂರು ಕ್ಲಸ್ಟರ್‌ನ ಸಿಆರ್‌ಯಾಗಿದ್ದರು. 2024 ಸೆ.1ಕ್ಕೆ ಬೋಳಾರ ಶಾಲೆಗೆ ಬಂದರು. 2009ರಲ್ಲಿ 54 ಗಂಟೆ ನಿರಂತರ ಗಾಯನದ ದಾಖಲೆ ಮಾಡಿದ ಮಾಂಡ್ ಸೋಭಾಣ್ ತಂಡದಲ್ಲಿ ಗೀತಾ ಕೂಡ ಇದ್ದರು.
ಹಿಂದಿ ಭಾಷಿಗರಿಗೆ ಕನ್ನಡ ಅಕ್ಷರ ಪಾಠ
91ರಿಂದ 7ನೇ ತರಗತಿವರೆಗೆ ಈಗ 53 ಮಕ್ಕಳಿದ್ದಾರೆ. ಇವರಲ್ಲಿ ಶೇ.95ರಷ್ಟು ಬಿಹಾರದವರು. ಹಿಂದಿ ಭಾಷಿಗರು. ಜಾಣ ಮಕ್ಕಳು. ಇಲ್ಲಿಯವರೆಗೆ ಶಾಲೆಯ ಮೆಟ್ಟಿಲು ಹತ್ತಿಲ್ಲದವರಲ್ಲ. ಅವರಿಗೆ ಕನ್ನಡದ ಅಕ್ಷರಮಾಲೆಯ ಪ್ರಾಥಮಿಕ ಪರಿಚಯ ಈಗ ಮಾಡಲಾಗುತ್ತಿದೆ. ಸೊನ್ನೆಯನ್ನು ಬರೆಯುವ ಮೂಲಕ ಅದರಲ್ಲಿ ಅಕ್ಷರಗಳನ್ನು ಹೇಗೆ ಬರೆಯುವುದು ಎಂಬುದನ್ನು ತಿಳಿಸಲಾಗುತ್ತಿದೆ. ಕಾಗದದಲ್ಲಿ “ಅ ಆ’ ಬರೆದು ಕಲಿಯುವುದು ಕಷ್ಟವಾಗಿರುವುದರಿಂದ ಮರಳಿನಲ್ಲಿ ಮಕ್ಕಳು ಬೆರಳಿನಿಂದ ಅಕ್ಷರ ಬರೆಯುವ ಪರಿಕಲ್ಪನೆ ಜಾರಿಗೆ ತರಲಾಗಿದೆ.
ಬಡತನದಲ್ಲಿ ಬೆಳೆದವಳು ನಾನು. ಬಡತನದ ಬಗ್ಗೆ ನನಗೆ ಅನುಭವವಿದೆ. ಬೇರೆ ರಾಜ್ಯದಿಂದ ಉದ್ಯೋಗ ಅರಸಿ ಮಂಗಳೂರಿಗೆ ಬಂದ ಅದೆಷ್ಟೋ ಜನರ ಮಕ್ಕಳಿಗೆ ಶಿಕ್ಷಣ ಸಿಗುವುದಿಲ್ಲ. ಹಾಗೂ ನಮ್ಮ ಸರಕಾರಿ ಶಾಲೆಗಳಿಗೆ ಮಕ್ಕಳು ಬರುವುದಿಲ್ಲ ಎಂಬ ದೂರು ಎಲ್ಲಾ ಕಡೆಯಲ್ಲಿ ಕೇಳಿ ಬರುತ್ತಿದೆ. ಇವೆರ ಡನ್ನೂ ದೂರ ಮಾಡುವ ಒಂದು ಅವಕಾಶ ನನಗೆ ದೊರಕಿತು. 5 ಮಕ್ಕಳು ಇದ್ದ ಶಾಲೆಗೆ ಇದೀಗ ಮಕ್ಕಳನ್ನು ಸೇರಿಸಿ ಅವರಿಗೆ ಶಿಕ್ಷಣ ನೀಡುವ ಕಾರ್ಯಕ್ಕೆ ಮುಂದಾಗಿದ್ದೇನೆ.
-ಗೀತಾ ಜುಡಿತ್ ಸಲ್ಡಾನ್ಹಾ, ಪ್ರಭಾರ ಮುಖ್ಯ ಶಿಕ್ಷಕಿ
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.