Mysuru Dasara: ಎದೆ ಝಲ್ ಎನ್ನಿಸಿದ ಶಬ್ದಕ್ಕೂ ಜಗ್ಗದ ಗಜಪಡೆ
ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನಡೆದ ಮೊದಲ ತಾಲೀಮು ನಿರ್ವಿಘ್ನ, ಉಳಿದೆರಡು ಸುತ್ತು 29, ಅ.1ಕ್ಕೆ ನಡೆಸಲು ನಿರ್ಧಾರ
Team Udayavani, Sep 27, 2024, 2:02 AM IST
ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗಜಪಡೆ, ಅಶ್ವದಳಕ್ಕೆ ಭಾರೀ ಶಬ್ದದ ಪರಿಚಯ ಮಾಡಿಸುವ ಸಲುವಾಗಿ ಮೊದಲ ಸುತ್ತಿನ ಸಿಡಿಮದ್ದು ತಾಲೀಮು ಗುರುವಾರ ಯಶಸ್ವಿಯಾಗಿ ನಡೆಯಿತು.
ವಿಜಯದಶಮಿ ದಿನದಂದು ಅಂಬಾರಿ ಮೇಲೆ ವಿರಾಜಮಾನಳಾಗುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ವೇಳೆ 21 ಕುಶಾಲತೋಪು ಸಿಡಿಸುವ ಸಂಪ್ರದಾಯವಿದ್ದು, ಈ ವೇಳೆ ಭಾರೀ ಸದ್ದಿಗೆ ಗಜಪಡೆ, ಅಶ್ವದಳ ಬೆದರದಂತೆ ಅಭ್ಯಾಸ ಮಾಡಿಸುವ ಸಲುವಾಗಿ ದಸರಾ ವಸ್ತುಪ್ರದರ್ಶನ ಆವರಣದ ಪಾರ್ಕಿಂಗ್ ಜಾಗದಲ್ಲಿ ಮೊದಲ ಸುತ್ತಿನ ಫಿರಂಗಿ ತಾಲೀಮು ನಡೆಸಲಾಯಿತು.
ಅಂಬಾರಿ ಆನೆ ಅಭಿಮನ್ಯು ನೇತೃತ್ವದ 14 ಆನೆಗಳು, 35 ಆಶ್ವಗಳಿಗೆ 7 ಫಿರಂಗಿಗಳಲ್ಲಿ ಮೂರು ಸುತ್ತಿನಂತೆ ಒಟ್ಟು 21 ಕುಶಲತೋಪು ಸಿಡಿಸುವ ಮೂಲಕ ಭಾರಿ ಶಬ್ಧದ ಪರಿಚಯ ಮಾಡಿಸಲಾಯಿತು. ಈ ವೇಳೆ ಅಭಿಮನ್ಯು ಒಳಗೊಂಡಂತೆ 10 ಆನೆಗಳು ಧೈರ್ಯ ಪ್ರದರ್ಶಿಸಿದರೆ ರೋಹಿತ್, ಹಿರಣ್ಯ, ಧನಂಜಯ, ಪ್ರಶಾಂತ ಆನೆಗಳು ಬೆಚ್ಚಿದವು.
ಬೆಚ್ಚಿದ ರೋಹಿತ, ಹಿರಣ್ಯಾ:
ತಾಲೀಮಿನಲ್ಲಿ ಗಜಪಡೆಯ 13 ಆನೆಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ಗಜಪಡೆಯ ಹಿರಿಯ ಸದಸ್ಯೆ ವರಲಕ್ಷ್ಮೀಯನ್ನು ಆನೆಗಳ ಹಿಂದೆ ನಿಲ್ಲಿಸಲಾಗಿತ್ತು. ಅಶ್ವದಳದ 35 ಕುದುರೆಗಳನ್ನು ಮತ್ತೂಂದು ಬದಿಯಲ್ಲಿ ನಿಲ್ಲಿಸಲಾಗಿತ್ತು. ತಾಲೀಮಿಗೂ ಮುನ್ನ ಡಿಸಿಪಿ ಮುತ್ತುರಾಜ್ ಅವರಿಂದ ಕುಶಾಲತೋಪು ಸಿಡಿಸುವ ಕಾರ್ಯ ನಿರ್ವಹಿಸುವ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಅನುಮತಿ ಪಡೆದು, ವಿಷಲ್ ಊದಿದರು. ಅದರೊಂದಿಗೆ ಕುಶಾಲತೋಪು ತಾಲೀಮು ವಿಧ್ಯುಕ್ತವಾಗಿ ಆರಂಭವಾಯಿತು.
ಮೊದಲ ಸಿಡಿಮದ್ದು ಸಿಡಿಯುತ್ತಿದ್ದಂತೆ ಅಭಿಮನ್ಯು, ಸುಗ್ರೀವ, ವರಲಕ್ಷ್ಮೀ, ಭೀಮ, ಗೋಪಿ, ಕಂಜನ್, ಮಹೇಂದ್ರ, ಏಕಲವ್ಯ, ಲಕ್ಷ್ಮೀ, ದೊಡ್ಡಹರವೆ ಲಕ್ಷ್ಮೀ ಆನೆಗಳು ಫಿರಂಗಿಯಿಂದ ಹೊಮ್ಮಿದ ಭಾರೀ ಶಬ್ದಕ್ಕೆ ಕದಲದೆ ನಿಂತಿದ್ದವು. ಧನಂಜಯ, ಪ್ರಶಾಂತ ಆನೆಗಳು ಬೆಚ್ಚಿ ಅತ್ತಿತ್ತ ಅಲುಗಾಡಿ ಬಳಿಕ ಸಾವರಿಸಿಕೊಂಡವು. ಆದರೆ, ಹಿರಣ್ಯಾ, ರೋಹಿತ್ ಭಾರೀ ಶಬ್ದಕ್ಕೆ ಬೆದರಿ ಹಿಂದಡಿಯಿಟ್ಟು ವಿಚಲಿತಗೊಂಡವು.
ಈ ವೇಳೆ ಮಾವುತರು ಆನೆಗಳನ್ನು ಸಮಾಧಾನಿಸಿದರು. ಬಳಿಕ ಎರಡನೇ, ಮೂರನೇ ಸುತ್ತಿನಲ್ಲಿ ಅಷ್ಟಾಗಿ ಬೆದರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಅಭಿಮನ್ಯು, ಮಹೇಂದ್ರ, ಭೀಮ ಹೊರತು ಪಡಿಸಿ ಉಳಿದ ಎಲ್ಲ ಆನೆಗಳ ಕಾಲಿಗೆ ಸರಪಳಿ ಕಟ್ಟಲಾಗಿತ್ತು. ಭಾರೀ ಶಬ್ದಕ್ಕೆ ಬೆಚ್ಚಿದ ಕುದುರೆಗಳನ್ನು ಸವಾರರು ಹತೋಟಿಗೆ ತಂದರು.
ಬೆಚ್ಚದ ಏಕಲವ್ಯ, ಲಕ್ಷ್ಮೀ:
ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸಿರುವ ಏಕಲವ್ಯ, ದೊಡ್ಡಹರವೆ ಲಕ್ಷ್ಮೀ ಫಿರಂಗಿಯ ಭಾರೀ ಶಬ್ದಕ್ಕೆ ಬೆಚ್ಚದೆ ಅನುಭವಿ ಆನೆಗಳಂತೆ ಧೈರ್ಯ ಪ್ರದರ್ಶಿಸಿದವು. ಎಂದಿನಂತೆ ಈ ಬಾರಿಯೂ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಕೊಂಚವೂ ಬೆದರದೆ ಧೈರ್ಯ ಪ್ರದರ್ಶಿಸಿದ. ಸಿಡಿಮದ್ದು ಸಿಡಿಸುತ್ತಿದ್ದಂತೆ ಹೊಮ್ಮಿದ ಭಾರೀ ಶಬ್ದಕ್ಕೆ ಎದೆ ಝಲ್ ಎಂದರೂ ಬೆಚ್ಚಲಿಲ್ಲ.
ಬದಲಿಗೆ ಜಂಬೂ ಸವಾರಿಯಂದು ಸಿಡಿಮದ್ದು ಸಿಡಿಸುತ್ತಿದ್ದಂತೆ ಮುಂದಡಿಯಿಡುವ ಅಭ್ಯಾಸವಾಗಿ ಅಂತೆಯೇ ಮುಂದಕ್ಕೆ ಹೆಜ್ಜೆ ಹಾಕಿದ. ಸಿಡಿಮದ್ದು ತಾಲೀಮಿನಲ್ಲಿ 30 ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಭಾಗವಹಿಸಿದ್ದರು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಸಾರ್ವಜನಿಕರು ತಾಲೀಮಿನ್ನು ಕುತೂಹಲದಿಂದ ವೀಕ್ಷಿಸಿದರು. ಡಿಸಿಎಫ್ ಬಸವರಾಜು, ಆರ್‌ಎಫ್ಒ ಸಂತೋಷ್ ಹೂಗಾರ್, ಆನೆ ವೈದ್ಯ ಮುಜೀಬ್ ರೆಹಮಾನ್, ಎಸಿಪಿ ಶಾಂತಮಲ್ಲಪ್ಪ ಮತ್ತಿತರರು ಹಾಜರಿದ್ದರು.
ಪಕ್ಷಿಕ್ಕೆ ತಗುಲಿ ಕೆಳಕ್ಕೆ ಬಿದ್ದ ಡ್ರೋಣ್!
ದಸರಾ ಗಜಪಡೆ, ಅಶ್ವಾರೋಹಿ ದಳದ ಸಮ್ಮುಖದಲ್ಲಿ ಕುಶಾಲತೋಪು ಸಿಡಿಸುವ ಕಾರ್ಯವನ್ನು ಸಂಪೂರ್ಣವಾಗಿ ಸೆರೆಹಿಡಿದುಕೊಳ್ಳಲು ಅರಣ್ಯ ಇಲಾಖೆಯಿಂದ ಚಿತ್ರೀಕರಣ ಮಾಡಿಕೊಳ್ಳಲಾಗುತ್ತಿತ್ತು. ಇದಕ್ಕಾಗಿ ಸಣ್ಣ ಪ್ರಮಾಣದ ಡ್ರೋಣ್ ಕ್ಯಾಮೆರಾ ಹಾರಿ ಬಿಡಲಾಗಿತ್ತು. ಮೇಲೆ ಹಾರಡುತ್ತಿದ್ದ ಪಕ್ಷಿಗಳಿಗೆ ತಾಗಿ ಡ್ರೋಣ್ ಗಜಪಡೆ, ಫಿರಂಗಿಗಳ ನಡುವೆ ಮಧ್ಯದಲ್ಲಿ ನಿಂತಿದ್ದ ಜನಗಳ ಬಳಿ ಕೆಳಗೆ ಬಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಎತ್ತಿಕೊಂಡು ತಮ್ಮ ಬಳಿ ಇಟ್ಟುಕೊಂಡರು.
ಗಜಪಡೆಗೆ ವಿಶೇಷ ಪೂಜೆ
ಸಿಡಿಮದ್ದು ತಾಲೀಮಿಗೆ ಅರಮನೆ ಆವರಣದಿಂದ ದಸರಾ ವಸ್ತುಪ್ರದರ್ಶನದ ಮುಂಭಾಗಕ್ಕೆ ಬಂದ ಗಜಪಡೆಯನ್ನು ವೀರಗಾಸೆ, ಮಂಗಳವಾದ್ಯಗಳೊಂದಿಗೆ ಸ್ವಾಗತಿಸಲಾಯಿತು. ಈ ವೇಳೆ ಅರ್ಚಕ ಪ್ರಹ್ಲಾದ್ ರಾವ್ ಆನೆಗಳ ಪಾದ ತೊಳೆದು ಅರಿಶಿನ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದರು. ಬಳಿಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಪುಷ್ಪಾರ್ಚನೆ ಮಾಡಿ, ಬಾಳೆ ಹಣ್ಣು ತಿನ್ನಿಸಿದರು. ನಂತರ ಆನೆಗಳನ್ನು ವಸ್ತು ಪ್ರದರ್ಶನದ ಪಾರ್ಕಿಂಗ್ ಜಾಗಕ್ಕೆ ಕರೆದೊಯ್ಯಲಾಯಿತು. ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ರುದ್ರೇಶ್ ಸೇರಿದಂತೆ ಹಲವರು ಇದ್ದರು.
“ಗಜಪಡೆ ಹಾಗೂ ಅಶ್ವದಳಕ್ಕೆ ಭಾರೀ ಶಬ್ದದ ಪರಿಚಯ ಮಾಡಿಸಲು ಮೊದಲ ಸುತ್ತಿನ ಸಿಡಿಮದ್ದು ತಾಲೀಮು ನಡೆಸಲಾಗಿದೆ. ಎಲ್ಲಾ ಆನೆಗಳು ಧೈರ್ಯ ಪ್ರದರ್ಶಿಸಿವೆ. ಶಬ್ದಕ್ಕೆ ಕೊಂಚ ಬೆದರುವುದು ಸಹಜ. ಮೂರನೇ ಸುತ್ತಿನ ವೇಳೆಗೆ ಹೊಂದಿಕೊಳ್ಳುತ್ತವೆ. ಶ್ರೀರಂಗಪಟ್ಟಣ ದಸರಾಗೆ ಮಹೇಂದ್ರ, ಲಕ್ಷ್ಮೀ, ಹಿರಣ್ಯಾ ಆನೆಗಳನ್ನು ಆಯ್ಕೆ ಮಾಡಿ ಪ್ರಸ್ತಾವನೆ ಕಳುಹಿಸಲಾಗಿದೆ. ಜಂಬೂಸವಾರಿಗೆ ನಿಶಾನೆ, ನೌಫತ್ ಆನೆಯನ್ನು ಶೀಘ್ರದಲ್ಲೇ ಆಯ್ಕೆ ಮಾಡಲಾಗುವುದು.
–ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ಮೊದಲ ಸುತ್ತಿನ ಸಿಡಿಮದ್ದು ತಾಲೀಮು ನಡೆಸಿ ಆನೆಗಳು, ಅಶ್ವಗಳಿಗೆ ಭಾರೀ ಶಬ್ದದ ಪರಿಚಯ ಮಾಡಿಸಲಾಗಿದೆ. ಶಬ್ದಕ್ಕೆ ಬೆದರದೆ ಧೈರ್ಯ ಪ್ರದರ್ಶಿಸಿವೆ. ಸೆ.29, ಅ.1ರಂದು ಉಳಿದೆರಡು ತಾಲೀಮು ನಡೆಸಲಾಗುತ್ತದೆ.
–ಎಂ.ಮುತ್ತುರಾಜ್, ಡಿಸಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.