Kundapura: ಚರಂಡಿ ದುರಸ್ತಿಗಾಗಿ ಕಿತ್ತ ಸ್ಲ್ಯಾಬ್‌ಗಳೂ ಅಳವಡಿಕೆಯಾಗಿಲ್ಲ
Team Udayavani, Sep 29, 2024, 4:44 PM IST
ಕುಂದಾಪುರ: ಗೊತ್ತಿಧ್ದೋ ಗೊತ್ತಿಲ್ಲದೆಯೋ ಮಾಡಿದ ತಪ್ಪಿಗಾಗಿ ಇಲ್ಲಿನ ಪುರಸಭೆ ದಂಡ ತೆರಲೇಬೇಕು. ಪುರಸಭೆ ವ್ಯಾಪ್ತಿಯ ನಾಗರಿಕರು ಶಿಕ್ಷೆ ಅನುಭವಿಸಲೇ ಬೇಕು ಎಂಬಂತಾಗಿದೆ ಸ್ಥಿತಿ. ಕುಂದಾಪುರದ ರಸ್ತೆಗಳನ್ನು ಆಗಾಗ ದುರಸ್ತಿ ಮಾಡಿ ಸುಂದರಗೊಳಿಸಲಾಗುತ್ತದೆ. ಆದರೆ, ದುರಂತವೆಂದರೆ ಯಾವ್ಯಾವುದೋ ಯೋಜನೆ ನೆಪದಲ್ಲಿ ರಸ್ತೆಯನ್ನು ಆಗಾಗ ಅಗೆಯಲಾಗುತ್ತದೆ. ಬಳಿಕ ಅದನ್ನು ಸರಿ ಮಾಡುವುದೇ ಇಲ್ಲ!
ಪುರಸಭೆಯ ಎಲ್ಲ 23 ವಾರ್ಡ್‌ಗಳಲ್ಲೂ ರಸ್ತೆ ಸಮಸ್ಯೆ ಇದೆ. ಕಾಂಕ್ರಿಟ್ ರಸ್ತೆಗಳೂ ಹಾಳಾಗಿವೆ. ಕೋಡಿ ಸೋನ್ಸ್ ಶಾಲೆ ಬಳಿ, ಕುಂದೇಶ್ವರದ ಹಿಂದೆ ಬಾಳೆಹಿತ್ಲು, ಶೆರೋನ್ ಪಕ್ಕದ ಬಿವಿಎಸ್ ಫೈನಾನ್ಸ್ ಬಳಿ, ಬಿಟಿಆರ್ ರಸ್ತೆ ಮೊದಲಾದ ರಸ್ತೆಗಳು ಪ್ರಮುಖವಾಗಿ ಹಾಗೂ ತುರ್ತಾಗಿ ದುರಸ್ತಿಗಾಗಿ ಕಾಯುತ್ತಿರುವ ರಸ್ತೆಗಳಾಗಿವೆ.
ನಗರದಲ್ಲಿ ಅಲ್ಲಲ್ಲಿ ಇಂಟರ್‌ಲಾಕ್‌ಗಳು ಕಿತ್ತುಹೋಗಿವೆ. ಈ ಹಿಂದೆ ಇಂಟರ್‌ಲಾಕ್ ಅಳವಡಿಕೆಯಲ್ಲಿ ಲೋಪದೋಷವಾಗಿದೆ ಎಂಬ ಆರೋಪವಿದೆ. ಪುರಸಭೆ ವತಿಯಿಂದ ಇಂಟರ್‌ಲಾಕ್ ಹಾಕಿದ್ದರೂ ಕೆಲವು ಅಂಗಡಿಯವರು ತಾವೇ ಇಂಟರ್‌ಲಾಕ್ ಹಾಕಿದ್ದು ಎಂಬಂತೆ ಅಲ್ಲಿ ನೋ ಪಾರ್ಕಿಂಗ್ ಎಂಬ ಫಲಕ ಅಳವಡಿಸಿದ್ದಾರೆ!
ಕಿತ್ತು ತಿಂಗಳು ಮೂರಾಗುತ್ತಾ ಬಂತು
ಅಂಚೆ ಕಚೇರಿ ಬಳಿ ಬಿಎಸ್‌ಎನ್‌ಎಲ್ ಕಚೇರಿಗೆ ಹೋಗುವ ಸಂಪರ್ಕ ರಸ್ತೆ ಕಿತ್ತು ತಿಂಗಳು ಮೂರಾಗುತ್ತಾ ಬಂದರೂ ಸರಿಪಡಿಸಲಿಲ್ಲ. ಚರಂಡಿ ದುರಸ್ತಿಗಾಗಿ ಕಿತ್ತ ಸ್ಲ್ಯಾಬ್‌ಗಳನ್ನು ಅಳವಡಿಸಲಿಲ್ಲ. ಬಿಎಸ್‌ಎನ್‌ಎಲ್ ಬಳಿ ಹಣ ಇಲ್ಲ, ಪುರಸಭೆಗೆ ಮನಸಿಲ್ಲ. ಸಾರ್ವಜನಿಕರ ಗೋಳಿಗೆ ಬೆಲೆಯೇ ಇಲ್ಲ.
ಹಾಳು ಮಾಡುವವರೇ ಹೆಚ್ಚು!
ನಗರದಲ್ಲಿ ದೊಡ್ಡ ಯೋಜನೆ ಮಾಡುವಾಗ ಹೊಸದಾಗಿ ಮಾಡಿದ ಕಾಂಕ್ರಿಟ್ ರಸ್ತೆಗಳನ್ನೂ ಅಗೆದು ಗುಂಡಿ ಮಾಡಿ ಹಾಳು ಮಾಡಲಾಗುತ್ತದೆ. ಇದಕ್ಕೆ ಪುರಸಭೆ ಅನುಮತಿ ನೀಡುವ ಮುನ್ನ ಯೋಚಿಸಿದರೆ ಒಳ್ಳೆಯದು.
ಯುಜಿಡಿ ಪೈಪ್‌ಲೈನ್ ಹಾಕಲು, ಕುಡಿಯುವ ನೀರಿನ ಜಲಸಿರಿ ಪೈಪ್‌ಲೈನ್ ಹಾಕಲು ಎಂದು ಹೊಚ್ಚ ಹೊಸದಾಗಿ ಹಾಕಿದ್ದ ಕಾಂಕ್ರಿಟ್ ರಸ್ತೆಯನ್ನೇ ನಟ್ಟ ನಡುವಿನಲ್ಲಿ ಅಗೆಯಲಾಗಿತ್ತು.
ಅತ್ಯಂತ ಸುವ್ಯವಸ್ಥಿತವಾಗಿ ಇದ್ದ ಚಿಕ್ಕನ್‌ಸಾಲ್ ರಸ್ತೆ ಅತಿ ಹೆಚ್ಚು ಬಾರಿ ಅಗೆತಕ್ಕೆ ಒಳಗಾದ ರಸ್ತೆ ಎಂಬ ಹೆಸರು ಗಳಿಸಿದೆ.
ತಗೆದ ಹಂಪ್ ಮತ್ತೆ ಹಾಕಿಲ್ಲ!ನಗರದ ರಸ್ತೆಗಳಲ್ಲಿ ಅಳವಡಿಸಿದ್ದ ಹಂಪ್‌ಗ್ಳನ್ನು ಎಪ್ರಿಲ್ ತಿಂಗಳಿನಲ್ಲಿ ದೇವಸ್ಥಾನದ ರಥೋತ್ಸವಕ್ಕಾಗಿ ತೆಗೆಯಲಾಗಿತ್ತು. ಇದು ಅದೆಷ್ಟೋ ವರ್ಷಗಳಿಂದ ನಡೆದು ಬಂದ ಕ್ರಮ. ಇದನ್ನು ಮರಳಿ ಹಾಕಲು ಪುರಸಭೆಗೆ ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ ದ್ವಿಚಕ್ರ ವಾಹನ ಅಪಘಾತ ಹೆಚ್ಚಿದೆ.
ಸರ್ವಿಸ್ ರಸ್ತೆಗೂ ಪುರಸಭೆ ಹೊಣೆ
ಕುಂದಾಪುರ ನಗರದ ಮೂಲಕ ಹಾದು ಹೋಗುವ ಕಾರಣ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಗೋಳಿಗೂ ಪುರಸಭೆಯೇ ಕಿವಿಕೊಡಬೇಕಿದೆ. ಸರ್ವಿಸ್ ರಸ್ತೆಯಲ್ಲಿಯೇ ನೀರು ನಿಲ್ಲುತ್ತದೆ, ಚರಂಡಿ ವ್ಯವಸ್ಥೆ ಸರಿ ಇಲ್ಲ, ಸರ್ವಿಸ್ ರಸ್ತೆಯೇ ಇಲ್ಲ ಎಂಬಂತಹ ಸ್ಥಿತಿಯೆಲ್ಲ ಇದೆ. ಇದಕ್ಕೆ ಹೆದ್ದಾರಿ ಇಲಾಖೆ ಸ್ಪಂದಿಸುತ್ತಿಲ್ಲ. ಎಲ್ಲದಕ್ಕೂ ಪುರಸಭೆ ಉತ್ತರದಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.