![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Oct 4, 2024, 12:50 PM IST
ಬಂಟ್ವಾಳ: ಬಂಟ್ವಾಳದ ಕುಟುಂಬವೊಂದು ಕಳೆದ ಆರೇಳು ದಶಕಗಳಿಂದ ನವರಾತ್ರಿಯ ಸಂದರ್ಭದಲ್ಲಿ ಹುಲಿ ವೇಷದ ಸೇವೆ ನೀಡುತ್ತಾ ಬಂದಿದೆ. ಆ ಕುಟುಂಬದ ಹೆಚ್ಚಿನವರು ವೇಷ ಹಾಕುತ್ತಾರೆ, ಅದರಲ್ಲಿ ಆ ಯುವತಿ ಬ್ಲ್ಯಾಕ್ ಟೈಗರ್ ಆಗಿ ಎಲ್ಲರ ಮನ ಗೆದ್ದಿದ್ದಾರೆ.
ಇದು ಬಂಟ್ವಾಳದ ಭಂಡಾರಿಬೆಟ್ಟಿನ ರತ್ನಾಕರ ಸಾಲ್ಯಾನ್ ಅವರ ಕುಟುಂಬದ ಕಥೆ. ಬ್ಲ್ಯಾಕ್ ಟೈಗರ್ ಆಗಿ ಮಿಂಚುತ್ತಿರುವುದು ಅವರ ಪುತ್ರಿ 22 ವರ್ಷದ ಪೂಜಾ. ತನ್ನ 6ನೇ ವಯಸ್ಸಿನಲ್ಲೇ ಹುಲಿ ವೇಷ ಹಾಕಲು ಶುರು ಮಾಡಿದ ಪೂಜಾ ಈಗ ಹೊಸತನದಿಂದ ಸೈ ಅನಿಸಿಕೊಂಡಿದ್ದಾರೆ.
ಹುಲಿ ವೇಷದಲ್ಲಿ ತೊಡಗಿರುವ ಕುಟುಂಬ
ರತ್ನಾಕರ ಸಾಲ್ಯಾನ್ ಅವರ ತಂದೆ ಮಾಂಕು ಅವರ ಶಾರ್ದೂಲ ವೇಷ ಭಾರಿ ಪ್ರಸಿದ್ಧ. ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅವರು ಸೇವೆ ನೀಡುತ್ತಿದ್ದರು. ಅವರ ಬಳಿಕ ಪುತ್ರ ರತ್ನಾಕರ ಸಾಲ್ಯಾನ್ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಪ್ರಾರಂಭದ ಮೂರು ರತ್ನಾಕರ್ ತಂದೆಯ ಹೆಸರಿನಲ್ಲಿ ಶಾರ್ದೂಲ ವೇಷವನ್ನೇ ಇಳಿಸಿದ್ದರು. ಬಳಿಕ ಕಳೆದ 43 ವರ್ಷಗಳಿಂದ ಹುಲಿ ವೇಷದ ಸೇವೆ ನೀಡುತ್ತಿದ್ದಾರೆ.
ಈ ಸೇವೆಯಲ್ಲಿ ಅವರ ಕುಟುಂಬವಿಡೀ ಸೇರಿಕೊಳ್ಳುತ್ತಿದೆ. ರತ್ನಾಕರ್ ಅವರ ಅಣ್ಣ ಮತ್ತು ತಮ್ಮ ಹುಲಿ ವೇಷ ಹಾಕುತ್ತಾರೆ. ಹಿರಿಯ ಪುತ್ರಿ ಪೂರ್ಣಿಮಾ ಸಣ್ಣ ವಯಸ್ಸಿನಲ್ಲಿ ವೇಷ ಹಾಕಿದ್ದರು. ಈಗ 16 ವರ್ಷಗಳಿಂದ ಪೂಜಾ ಜತೆಯಲ್ಲಿದ್ದಾರೆ. ಅಣ್ಣನ ಮಗ ಧೀರಜ್, ತಮ್ಮನ ಮಕ್ಕಳಾದ ಅಖೀಲ್, ನಿಖೀಲ್ ಕೂಡಾ ವೇಷ ಹಾಕುತ್ತಾರೆ. ಪುತ್ರ ಪುನೀತ್ ಅವರದು ತಾಸೆಯ ಸಹಕಾರ. ಸಾಲ್ಯಾನ್ ಅವರು ಹುಲಿಯ ಮುಖದ ತಯಾರಿಯ ಕೆಲಸವನ್ನೂ ಮಾಡುತ್ತಾರೆ.
ತಾಸೆಯ ಪೆಟ್ಟಿಗೆ ಕುಣಿಯುವ ಹುಚ್ಚು
ಪ್ರಾರಂಭದಲ್ಲಿ ಮನೆಯವರು ವೇಷ ಹಾಕಿಸಿದ್ದು. ಬಳಿಕ ನನ್ನ ಆಸಕ್ತಿಯಿಂದಲೇ ಬೆಳೆದೆ. ಎಲ್ಲಾ ಕಡೆಯಲ್ಲೂ ಉತ್ತಮ ಗೌರವ ಸಿಗುತ್ತಿದ್ದು, ಈಗ ತಾಸೆಯ ಪೆಟ್ಟು ಕೇಳುವಾಗಲೇ ಕುಣಿಯಬೇಕು ಅನಿಸುವಷ್ಟು ಹುಚ್ಚು ಹಿಡಿಸಿದೆ.
-ಪೂಜಾ ಬ್ಲ್ಯಾಕ್ ಟೈಗರ್ ಖ್ಯಾತಿಯ ಯುವತಿ
ಯೋಗಪಟು, ನೃತ್ಯಗಾರ್ತಿ ಪೂಜಾ
ಪೂಜಾ 2ನೇ ಕ್ಲಾಸಿನಲ್ಲಿದ್ದಾಗ ಮೊದಲ ಬಾರಿ ಬಣ್ಣ ಹಚ್ಚಿದ್ದರು. ನವರಾತ್ರಿ ವೇಳೆ ತಂದೆಯ ತಂಡದಲ್ಲಿ ಕುಣಿಯುವ ಆಕೆ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿಯ ಸಂದರ್ಭ ಮಂಗಳೂರು, ಉಡುಪಿ, ಮೂಡುಬಿದಿರೆಯ ತಂಡಗಳಲ್ಲಿ ಪ್ರದ ರ್ಶನ ನೀಡುತ್ತಾರೆ. ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿರುವ ಆಕೆ ಯೋಗ, ನೃತ್ಯಾಭ್ಯಾಸವನ್ನೂ ಮಾಡಿದ್ದಾರೆ. ಬಂಟ್ವಾಳ ಎಸ್‌ವಿಎಸ್ ದೇವಳ ಶಾಲೆಯಲ್ಲಿ ಯೋಗ ತರಬೇತಿ ನೀಡುವ ಜತೆಗೆ ವಿವಿಧ ಶಾಲೆಗಳಿಗೆ ಕೊರಿಯೊಗ್ರಾಫರ್ ಆಗಿ ಹೋಗುತ್ತಾರೆ. ಈ ಬಾರಿ ಅ. 13ರಂದು ಊದು ಪೂಜೆ ನಡೆದು ಅ. 14ರಂದು ಹುಲಿವೇಷ ಹಾಕಲಿದ್ದಾರೆ.
-ಕಿರಣ್ ಸರಪಾಡಿ
You seem to have an Ad Blocker on.
To continue reading, please turn it off or whitelist Udayavani.